ಆಗಿರುವ ತಪ್ಪು ಸರಿ ಪಡಿಸಿಕೊಳ್ಳುತ್ತೇವೆ 10 ದಿನ ಸಮಯ ಅವಕಾಶ ಕೊಡಿ: ಬಿಗ್ ಬಾಸ್ ತಂಡ

8 months ago

ಬೆಂಗಳೂರು: ಕೆಟ್ಟ ಮೇಲೆ ಬುದ್ಧಿ ಬಂತು ಎಂಬಂತೆ ಇದೀಗ ಬಿಗ್ ಬಾಸ್ ರಿಯಾಲಿಟಿ ಶೋ ತಂಡ ರಾಮನಗರ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಆಗಿರುವ ತಪ್ಪು ಸರಿ ಪಡಿಸಿಕೊಳ್ಳುತ್ತೇವೆ 10 ದಿನ ಸಮಯ ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ.

ರಾಮನಗರ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರನ್ನು ಭೇಟಿ ಮಾಡಿದ ಬಾಲಿವುಡ್ ಸ್ಟುಡಿಯೋದ ವ್ಯವಸ್ಥಾಪಕ ಹಾಗೂ ಇತರರು ಹತ್ತು ದಿನದಲ್ಲಿ ಎಲ್ಲ ಲೋಪಗಳನ್ನು ಸರಿಪಡಿಸಿಕೊಳ್ಳುತ್ತೇವೆ ನಮ್ಮ ಲೋಪವನ್ನು ಮನ್ನಿಸಿ ಬಿಗ್ ಬಾಸ್ ರಿಯಾಲಿಟಿ ಶೋ ಚಿತ್ರೀಕರಣ ಮುಂದುವರೆಯಲು ಅವಕಾಶ ಮಾಡಿಕೊಡಿ ಎಂದು ಕೋರಿದ್ದಾರೆ.

ಸ್ಟುಡಿಯೋದಲ್ಲಿ 400ಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದಾರೆ. ಜನಪ್ರಿಯ ರಿಯಾಲಿಟಿ ಷೋ ಬಿಗ್ ಬಾಸ್ ಕೂಡ ನಡೆಯುತ್ತಿದೆ. ಸ್ಟುಡಿಯೊಗೆ ಬೀಗ ಹಾಕಿರುವುದರಿಂದ, ಅವರೆಲ್ಲರ ಕೆಲಸಕ್ಕೆ ತೊಂದರೆಯಾಗಲಿದೆ.‌ ಹಾಗಾಗಿ, ಷರತ್ತುಬದ್ದ ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ

ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶವನ್ನು ನಾವು ಪಾಲಿಸಿದ್ದೇವೆ. ಹಾಗಾಗಿ, ಮಂಡಳಿಗೆ ನೀವು ಮನವಿ ಮಾಡಿ. ಅವರು ‌ನೀಡುವ ಆದೇಶದಂತೆ ನಾವು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.

ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಉಲ್ಲಂಘಿಸಿರುವ ಆರೋಪದಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋಗೆ ರಾಮನಗರ ಜಿಲ್ಲಾ ಆಡಳಿತ ಬೀಗ ಮುದ್ರೆ ಹಾಕಿದೆ. ಬಿಗ್ ಬಾಸ್ ರಿಯಾಲಿಟಿ ಶೋ ಸ್ಪರ್ಧಿಗಳು ಸೇರಿದಂತೆ ಸ್ಟುಡಿಯೋದಲ್ಲಿ ಇದ್ದ ಎಲ್ಲಾ ತಂತ್ರಜ್ಞರು ಮತ್ತು ಸಿಬ್ಬಂದಿಯನ್ನು ಜಿಲ್ಲಾಡಳಿತ ಹೊರಹಾಕಿದೆ ಇದರಿಂದ ಕಷ್ಟಕ್ಕೆ ಸಿಲುಕಿರುವ ಕಾರ್ಯಕ್ರಮ ನಿರ್ಮಾಪಕರು ಮತ್ತು ಸ್ಟುಡಿಯೋ ವ್ಯವಸ್ಥಾಪಕರು ಸರ್ಕಾರದ ಮೊರೆ ಹೋಗಿದ್ದಾರೆ ಅಲ್ಲದೆ ಬಿಗ್ ಬಾಸ್ ಸ್ಪರ್ಧಿಗಳನ್ನು ಸಮೀಪದ ರೆಸಾರ್ಟ್ ನಲ್ಲಿ ಉಳಿಸಿದ್ದಾರೆ.

ರಾಜಕೀಯ ಜಟಾಪಟಿ ಸೃಷ್ಟಿಸಿದ ಘಟನೆ: ಇನ್ನು ಜಾಲಿವುಡ್ ಸ್ಟುಡಿಯೋ ಬಂದ್ ಮಾಡಿರುವ ವಿಚಾರ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ರಾಜಕೀಯ ಜಟಾಪಟಿಗೂ ಕಾರಣವಾಗಿದೆ. ಜನಪ್ರಿಯ ರಿಯಾಲಿಟಿ ಶೋ ರದ್ದಾಗುವಂತೆ ಮಾಡುವ ಮೂಲಕ ಉಪಮುಖ್ಯಮಂತ್ರಿಗಳು ತಮ್ಮ ಮಾತು ಕೇಳದವರ ನಟ್ಟು ಬೋಲ್ಟು ಟೈಟ್ ಮಾಡಿದ್ದಾರೆ ಎಂದು ಜೆಡಿಎಸ್ ಆಪಾದಿಸಿದೆ.

ಇದಕ್ಕೆ ತಿರುಗೇಟು ನೀಡಿರುವ ಡಿಸಿಎಂ ಡಿ ಕೆ ಶಿವಕುಮಾರ್, ತಾವು ಅಂತಹ ಸಣ್ಣತನದ ರಾಜಕಾರಣ ಮಾಡುವುದಿಲ್ಲ. ಜಾಲಿವುಡ್ ಸ್ಟುಡಿಯೋ ನಿಯಮ ಉಲ್ಲಂಘಿಸಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಕ್ರಮ ಕೈಗೊಂಡಿದೆ. ಅವರು ತಪ್ಪು ಸರಿಪಡಿಸಿಕೊಂಡು ಶೂಟಿಂಗ್ ಮುಂದುವರಿಸಲು ಅವಕಾಶವಿದೆ ಎಂದಿದ್ದಾರೆ.

ಮತ್ತೊಂದೆಡೆ ಸರ್ಕಾರದ ನಿಲುವನ್ನು ಸಮರ್ಪಿಸಿರುವ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ, ಇದರಲ್ಲಿ ಯಾವುದೇ ರೀತಿಯ ರಾಜಕೀಯ ಇಲ್ಲ. ನಿಯಮ ಉಲ್ಲಂಘಿಸಿರುವ ಕುರಿತಂತೆ ಮಂಡಳಿ ಹಲವಾರು ಬಾರಿ ಜಾಲಿವುಡ್ ಸ್ಟುಡಿಯೋಗೆ ನೋಟಿಸ್ ನೀಡಿದರು ಕೂಡ ಪ್ರತಿಕ್ರಿಯೆ ನೀಡಿಲ್ಲ ಹಾಗೂ ಅಗತ್ಯವಿರುವ ಅನುಮತಿಯನ್ನು ಪಡೆದುಕೊಂಡಿಲ್ಲ. ಹೀಗಾಗಿ ಮಂಡಳಿ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Leave a Reply