ಹುಲಿ ಉಗುರು ಪ್ರಕರಣ: ಹಲವರ ವಿರುದ್ಧ ದೂರು

3 years ago

#Tiger #claw #case #Complaint #Darshan #jaggesh #RocklineVenkatesh #VinayGuruji #santhoshvartur

ಬೆಂಗಳೂರು: ಹುಲಿ ಉಗುರು ಪ್ರಕರಣದಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಸ್ಪರ್ಧಿ ಸಂತೋಷ್ ಬಂಧನದ ಬೆನ್ನಲ್ಲೇ ಶೋಕಿ, ಪ್ರತಿಷ್ಟೆ, ಅದೃಷ್ಟ ಮೊದಲಾದ ಕಾರಣಗಳಿಂದ ಹುಲಿ ಉಗುರಿನ ಸರ ಧರಿಸಿದವರ ಎದೆಯಲ್ಲಿ ಅವಲಕ್ಕಿ ಕುಟ್ಟಿದ ಅನುಭವವಾಗುತ್ತಿದೆ.

ಸಂತೋಷ್ ಬಂಧನದ ಬೆನ್ನಲ್ಲೇ ಹುಲಿ ಉಗುರು ಧರಿಸಿದವರ ಕುರಿತು ಪೊಲೀಸರು ಮತ್ತು ಅರಣ್ಯ ವಿಚಕ್ಷಣ ದಳಕ್ಕೆ ಮಾಹಿತಿಯ ಸರಮಾಲೆ ಹರಿದು ಬರುತ್ತಿದ್ದು, ಅದನ್ನು ಆಧರಿಸಿ ಇದೀಗ ಪೊಲೀಸರು ಹುಲಿ ಉಗುರು ಧರಿಸಿದವರ ಬೆನ್ನು ಹತ್ತಿದ್ದಾರೆ.

ಇದರ ನಡುವೆ ವಿನಯ್ ಗುರೂಜಿ ಹುಲಿ ಚರ್ಮದ ಮೇಲೆ ಕುಳಿತಿರುವ ಚಿತ್ರಗಳು ವೈರಲ್ ಆಗಿದ್ದು, ಅದರ ಪರಿಶೀಲನೆಯಲ್ಲಿ ಪೊಲೀಸ್ ತಂಡ ನಿರತವಾಗಿದೆ. ಒಂದು ವೇಳೆ ಅದು ನಿಜವಾದ ಹುಲಿ ಚರ್ಮವಾಗಿದ್ದರೆ ವಿನಯ್ ಗುರೂಜಿ ಬಂಧನ ಖಚಿತ ಎನ್ನಲಾಗುತ್ತಿದೆ.

ಮತ್ತೊಂದೆಡೆ, ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಜ್ಯಸಭಾ ಸದಸ್ಯ ಹಾಗೂ ನಟ ಜಗ್ಗೇಶ್, ಕೋಮಲ್, ರಾಕಲೈನ್ ವೆಂಕಟೇಶ್ ಮೊದಲಾದ ಖ್ಯಾತನಾಮರು ಹುಲಿ ಉಗುರು ಧರಿಸಿರುವ ಕುರಿತಂತೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದ್ದು, ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲು ಕಾನೂನು ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಜೊತೆ ಚರ್ಚೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಬಿದನಗೆರೆಯ ಶನಿಮಹಾತ್ಮ ದೇವಾಲಯದ ಅರ್ಚಕ ಧನಂಜಯ ಗುರೂಜಿಗೆ ಸಂಕಷ್ಟ ಎದುರಾಗಿದೆ.

ಸ್ವಾಮೀಜಿ ಹುಲಿ ಉಗುರಿನ ಚೈನ್ ಹಾಕಿಕೊಂಡ ಪೋಟೋ ವೈರಲ್ ಆದ ಬಳಿಕ ಕುಣಿಗಲ್ ವಲಯ ಅರಣ್ಯಾಧಿಕಾರಿ ಜಗದೀಶ್ ಅವರು ಧನಂಜಯ ಸ್ವಾಮಿಯ ಚಿನ್ನದ ಚೈನ್ ಗಳನ್ನ ಪರಿಶೀಲನೆ ನಡೆಸಿದ್ದಾರೆ. ಆದರೆ ಅದು ಆರ್ಟಿಫಿಷಿಯಲ್ ಹುಲಿ ಉಗುರು. ಅದು ಕಪ್ಪು ಬಣ್ಣಕ್ಕೆ ತಿರುಗಿದ್ದರಿಂದ ಅದನ್ನು ಎಸೆದಿದ್ದೇನೆ ಎಂದು ಸ್ವಾಮೀಜಿ ಅರಣ್ಯಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ.

ಆದರೆ ಅದನ್ನು ಅಧಿಕಾರಿಗಳು ನಂಬುತ್ತಿಲ್ಲ. ಏಕೆಂದರೆ ಮೈತುಂಬಾ ಒಡವೆ ಹಾಕಿಕೊಳ್ಳುವ ಸ್ವಾಮೀಜಿ ಆರ್ಟಿಫಿಷಿಯಲ್ ಹುಲಿ ಉಗುರನ್ನು ಹೇಗೆ ಹಾಕಿಕೊಳ್ಳಲು ಸಾಧ್ಯ ಎಂದು ಅದನ್ನು ಪರೀಕ್ಷೆ ಮಾಡಲು ಹುಡುಕುತ್ತಿದ್ದಾರೆ.

ಖ್ಯಾತ ನಟ ದರ್ಶನ್ ಹುಲಿ ಉಗುರಿನ ಲಾಕೆಟ್ ಧರಿಸಿದ್ದಾರೆ ಎಂಬ ಆರೋಪ ಬಂದಿದ್ದು, ಜೊತೆಗೆ ವಿನಯ್ ಗುರೂಜಿ ಹುಲಿಯ ಚರ್ಮದ ಮೇಲೆ ಕೂತಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಸರ್ವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ್ ಅವರು ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಬಿಗ್‌ ಬಾಸ್‌ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಿಗ್‌ ಬಾಸ್‌ಮನೆಯಿಂದ ಓರ್ವ ಆಟಗಾರನನ್ನು ಬಂಧಿಸಿರುವ ಘಟನೆ ನಡೆದಿದೆ. ಬಿಗ್ಬಾಸ್ ಮನೆಯಿಂದಲೇ  ಸ್ಪರ್ಧಿ ವರ್ತೂರು ಸಂತೋಷ್ ಬಂಧಿತರಾಗಿದ್ದಾರೆ .

ವರ್ತೂರು ಸಂತೋಷ್ ವಿರುದ್ಧ ಹುಲಿ ಉಗುರು ಧರಿಸಿರುವ ಆರೋಪವಿದ್ದು ಅವರ ವಿರುದ್ಧ ಅರಣ್ಯ ಅಧಿಕಾರಿಗಳು ಎಫ್ಐಆರ್ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಅರಣ್ಯ ಅಧಿಕಾರಿಗಳು ಅವರನ್ನು ಬಿಗ್‌ ಬಾಸ್‌ ಮನೆಯಿಂದಲೇ ಬಂಧಿಸಿ ನ್ಯಾಯಾಲಯದ ಆದೇಶದಂತೆ ವರ್ತೂರು ಸಂತೋಷ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ತಾನು ವ್ಯಕ್ತಿಯೋರ್ವನಿಂದ ಹುಲಿ ಉಗುರು ಖರೀದಿಸಿದ್ದೇನೆ ಎಂದು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ ಎನ್ನಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಅಡಿಯಲ್ಲಿ ಇವರ ಬಂಧನ ಆಗಿದೆ. ಆರೋಪ ಸಾಬೀತಾದರೆ 3 ರಿಂದ 7 ವರ್ಷಗಳವರೆಗೆ ಶಿಕ್ಷೆ ಆಗುತ್ತದೆ. 10 ರಿಂದ 25 ಸಾವಿರದವರೆಗೆ ದಂಡ ವಿಧಿಸುವ ಸಾಧ್ಯತೆ ಇದೆ.

Leave a Reply