ಭರವಸೆ ಬೇಡ, ಅಧಿಸೂಚನೆ ಬೇಕು

2 months ago

ಉರ್ದು ಶಿಕ್ಷಕರ ನೇಮಕಾತಿ: ಭರವಸೆ ಬೇಡ, ಅಧಿಸೂಚನೆ ಬೇಕು

ಅಧಿಕೃತ ನೇಮಕಾತಿ ಅಧಿಸೂಚನೆ ಹೊರಡಿಸುವವರೆಗೆ ಹೋರಾಟ

ಬೆಂಗಳೂರು: ಕರ್ನಾಟಕದ ಉರ್ದು ಮಾಧ್ಯಮ ಶಾಲೆಗಳಲ್ಲಿ ವರ್ಷಗಳಿಂದ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವಂತೆ ನಡೆಯುತ್ತಿರುವ ನಿರಂತರ ಹೋರಾಟ ಇದೀಗ ಮತ್ತೊಂದು ಮಹತ್ವದ ಹಂತ ತಲುಪಿದೆ ಎಂದು ಎಸ್ಡಿಪಿಐ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ತಿಳಿಸಿದ್ದಾರೆ.

ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉರ್ದು ಶಿಕ್ಷಕರ ನೇಮಕಾತಿಗಾಗಿ ನಡೆಯುತ್ತಿರುವ ಸಂಘಟಿತ ಹೋರಾಟ ಮತ್ತು ನಿರಂತರ ಒತ್ತಡದ ಫಲವಾಗಿ 800 ಉರ್ದು ಹಾಗೂ 200 ಮರಾಠಿ ಶಿಕ್ಷಕರ ಹುದ್ದೆಗಳಿಗೆ ಸರ್ಕಾರ ಅನುಮೋದನೆ ನೀಡಿರುವುದು ಸ್ವಾಗತಾರ್ಹ ಬೆಳವಣಿಗೆ. ಆದರೆ ಕೇವಲ ಹುದ್ದೆಗಳಿಗೆ ಅನುಮೋದನೆ ನೀಡುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಸರ್ಕಾರ ತಕ್ಷಣವೇ ಅಧಿಕೃತ ನೇಮಕಾತಿ ಅಧಿಸೂಚನೆ ಹೊರಡಿಸಿ, ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಬೇಕು ಎಂದು ಅವರು ಆಗ್ರಹಿಸಿದರು.

ಸರ್ಕಾರದಿಂದ ಭರವಸೆಗಳು ಸಾಕಷ್ಟು ಸಿಕ್ಕಿವೆ. ಇದೀಗ ನಮಗೆ ಬೇಕಾಗಿರುವುದು ಮತ್ತೊಂದು ಭರವಸೆ ಅಲ್ಲ; ಅಧಿಕೃತ ನೇಮಕಾತಿ ಅಧಿಸೂಚನೆ. ಅಧಿಸೂಚನೆ ಹೊರಡಿಸಿ ನೇಮಕಾತಿ ಪ್ರಕ್ರಿಯೆ ಆರಂಭಿಸುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಉರ್ದು ಮಾಧ್ಯಮ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದಾಗಿ ಸಾವಿರಾರು ವಿದ್ಯಾರ್ಥಿಗಳ ಶೈಕ್ಷಣಿಕ ಹಕ್ಕು ಮತ್ತು ಗುಣಮಟ್ಟದ ಶಿಕ್ಷಣದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಮತ್ತೊಂದೆಡೆ, ವರ್ಷಗಳಿಂದ ನೇಮಕಾತಿಗಾಗಿ ಕಾಯುತ್ತಿರುವ ಸಾವಿರಾರು ಅರ್ಹ ಅಭ್ಯರ್ಥಿಗಳ ಭವಿಷ್ಯವೂ ಅನಿಶ್ಚಿತತೆಯಲ್ಲಿದೆ. ಆದ್ದರಿಂದ ಸರ್ಕಾರ ಈ ವಿಚಾರವನ್ನು ಮತ್ತಷ್ಟು ವಿಳಂಬ ಮಾಡದೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಹೋರಾಟ ಕೇವಲ ಉದ್ಯೋಗಕ್ಕಾಗಿ ನಡೆಯುತ್ತಿರುವ ಹೋರಾಟವಲ್ಲ. ಇದು ಉರ್ದು ಮಾಧ್ಯಮ ವಿದ್ಯಾರ್ಥಿಗಳ ಶೈಕ್ಷಣಿಕ ಹಕ್ಕು, ಗುಣಮಟ್ಟದ ಶಿಕ್ಷಣ ಮತ್ತು ಸಾವಿರಾರು ಅರ್ಹ ಅಭ್ಯರ್ಥಿಗಳ ಭವಿಷ್ಯಕ್ಕಾಗಿ ನಡೆಯುತ್ತಿರುವ ನ್ಯಾಯಯುತ ಹೋರಾಟ. ಸರ್ಕಾರ ನೀಡಿರುವ ಭರವಸೆ ಕಾರ್ಯರೂಪಕ್ಕೆ ಬಂದು, ಅಧಿಕೃತ ನೇಮಕಾತಿ ಅಧಿಸೂಚನೆ ಹೊರಬರುವವರೆಗೆ ಹೋರಾಟ ಮುಂದುವರಿಯಲಿದೆ ಎಂದರು.

“ಭರವಸೆ ಬೇಡ — ಅಧಿಸೂಚನೆ ಬೇಕು” ಎಂಬುದು ನಮ್ಮ ಸ್ಪಷ್ಟ ಬೇಡಿಕೆಯಾಗಿದೆ. ಸರ್ಕಾರ ಕೂಡಲೇ ಅಧಿಸೂಚನೆ ಹೊರಡಿಸಿ, ಉರ್ದು ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಆರಂಭಿಸಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು.

ಈ ಸಂಧರ್ಭದಲ್ಲಿ ಉಮ್ಮತಿ ಫೌಂಡೇಶನ್ ನ ಜಮೀರ್ ಅಹ್ಮದ್, ಉದ್ಯೋಗ ಆಕಾಂಕ್ಷಿಗಳಾದ ಮೊಹಿಸಿನಾ ಬೇಗಂ, ನೂರ್ ಜಹಾನ್ ಕಚ್ಚಿ, ಮಹಮ್ಮದ್ ನಾಸಿರ್ ಗುಡಿ ಬಂಡಿ, ಹರ್ಷ ಕುಮಾರ್ ಕುಗ್ವೇ, ಸಿಪಿಎಂ ಮುಖಂಡರು, ಶೋಲಾ ಫೌಂಡೇಷನ್ ನ ಸೈಯದ್ ಮಿಸ್ಹಬುರ್ ರೆಹಮಾನ್, ಶಾಹಿಸ್ತಾ ಬಾಗವಾನ್, ಸಲೀಂ ಅಹಮದ್, ನೂರ್ ಜಹರಾ ಸೇರಿದಂತೆ ವಿವಿಧ ಹೋರಾಟಗಾರರು ಮತ್ತು ಉದ್ಯೋಗ ಆಕಾಂಕ್ಷಿಗಳು ಹಾಜರಿದ್ದರು.

Leave a Reply