ಸಾಮಾಜಿಕ ಭದ್ರತಾ ಪಿಂಚಣಿ ಆದಾಯ ಮಿತಿ ₹1.20 ಲಕ್ಷಕ್ಕೆ ಹೆಚ್ಚಳ ಸ್ವಾಗತಾರ್ಹ: ಎಸ್‌ಡಿಪಿಐ

1 day ago

ಬೇಡಿಕೆಗೆ ಸರ್ಕಾರದ ಸ್ಪಂದನೆ ಸ್ವಾಗತಾರ್ಹ: ಅಫ್ಸರ್ ಕೊಡ್ಲಿಪೇಟೆ

ದಾವಣಗೆರೆ: ಸಾಮಾಜಿಕ ಭದ್ರತಾ ಪಿಂಚಣಿಗೆ ಸಂಬಂಧಿಸಿದಂತೆ ಎಸ್‌ಡಿಪಿಐ ಕರ್ನಾಟಕ ಸರ್ಕಾರದ ಮುಂದೆ ನಿರಂತರವಾಗಿ ಒತ್ತಾಯಿಸುತ್ತಿದ್ದ ಪ್ರಮುಖ ಬೇಡಿಕೆಯನ್ನು ಸರ್ಕಾರ ಪರಿಗಣಿಸಿರುವುದು ಸ್ವಾಗತಾರ್ಹವಾಗಿದೆ ಎಂದು ಎಸ್‌ಡಿಪಿಐ ಕರ್ನಾಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಪರಾಜಿತ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ತಿಳಿಸಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಧ್ಯಾ ಸುರಕ್ಷಾ, ವಿಧವಾ ವೇತನ, ವಿಕಲಚೇತನರ ಪಿಂಚಣಿ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಿಗೆ ಈ ಹಿಂದೆ ಇದ್ದ ವಾರ್ಷಿಕ ಆದಾಯ ಮಿತಿಯನ್ನು ₹32,000ದಿಂದ ₹1.20 ಲಕ್ಷಕ್ಕೆ ಹೆಚ್ಚಿಸಿರುವುದು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿದೆ. ಇದರಿಂದ ಕಡಿಮೆ ಆದಾಯ ಮಿತಿಯ ಕಾರಣದಿಂದ ಪಿಂಚಣಿ ಸೌಲಭ್ಯದಿಂದ ವಂಚಿತರಾಗಿದ್ದ ಸರಿ ಸುಮಾರು 2 ಲಕ್ಷಕ್ಕೂ ಹೆಚ್ಚು ಹಿರಿಯ ನಾಗರಿಕರು, ವಿಧವೆಯರು, ವಿಕಲಚೇತನರು ಹಾಗೂ ಇತರ ದುರ್ಬಲ ವರ್ಗಗಳಿಗೆ ಅನುಕೂಲವಾಗುವ ನಿರೀಕ್ಷೆಯಿದೆ ಎಂದರು.

ಇತ್ತೀಚೆಗೆ ಎಸ್‌ಡಿಪಿಐ ಕರ್ನಾಟಕ ಕೇವಲ ₹32,000 ವಾರ್ಷಿಕ ಆದಾಯ ಮಿತಿ ಇಂದಿನ ಜೀವನ ವೆಚ್ಚಕ್ಕೆ ಯಾವುದೇ ರೀತಿಯಲ್ಲೂ ಹೊಂದಿಕೆಯಾಗುವುದಿಲ್ಲ ಎಂದು ಸರ್ಕಾರದ ಗಮನಕ್ಕೆ ತಂದಿತ್ತು. ದಿನಗೂಲಿ ಕಾರ್ಮಿಕರು ಸೇರಿದಂತೆ ಬಡ ಮತ್ತು ದುರ್ಬಲ ವರ್ಗದ ಅನೇಕ ಕುಟುಂಬಗಳು ಈ ಕಾರಣದಿಂದ ಸಾಮಾಜಿಕ ಭದ್ರತಾ ಪಿಂಚಣಿಯಿಂದ ಹೊರಗುಳಿಯುತ್ತಿದ್ದರು. ಈ ಹಿನ್ನೆಲೆಯಲ್ಲಿ ಆದಾಯ ಮಿತಿಯನ್ನು ಹೆಚ್ಚಿಸುವಂತೆ ಎಸ್‌ಡಿಪಿಐ ಬಲವಾಗಿ ಆಗ್ರಹಿಸಿತ್ತು. ಇದೀಗ ಸರ್ಕಾರ ಈ ಜನಪರ ಬೇಡಿಕೆಗೆ ಸ್ಪಂದಿಸಿರುವುದು ಸ್ವಾಗತಾರ್ಹ ಎಂದರು.

ಸಾಮಾಜಿಕ ಭದ್ರತಾ ಪಿಂಚಣಿಗೆ ಬಿಪಿಎಲ್ ಮಾನದಂಡ ಅನ್ವಯಿಸಬೇಕು: ಸರ್ಕಾರ ಆದಾಯ ಮಿತಿಯನ್ನು ₹1.20 ಲಕ್ಷಕ್ಕೆ ಹೆಚ್ಚಿಸಿರುವುದನ್ನು ಸ್ವಾಗತಿಸುತ್ತೇವೆ. ಆದರೆ ಸಾಮಾಜಿಕ ಭದ್ರತಾ ಪಿಂಚಣಿಗೆ ಪ್ರತ್ಯೇಕ ಆದಾಯ ಮಿತಿಯನ್ನು ನಿಗದಿಪಡಿಸುವ ಬದಲು ಬಿಪಿಎಲ್ ಕಾರ್ಡ್ ಅಥವಾ ಆರ್ಥಿಕವಾಗಿ ದುರ್ಬಲ ಕುಟುಂಬ ಎಂಬ ಮಾನದಂಡವನ್ನೇ ಅರ್ಹತೆಯ ಆಧಾರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಅನೇಕ ರಾಜ್ಯಗಳಲ್ಲಿ ಸಾಮಾಜಿಕ ಭದ್ರತಾ ಪಿಂಚಣಿಗೆ BPL ಕಾರ್ಡ್, ಕುಟುಂಬದ ಆರ್ಥಿಕ ಸ್ಥಿತಿ ಅಥವಾ Family ID ಆಧಾರಿತ ಮಾನದಂಡಗಳನ್ನು ಬಳಸಲಾಗುತ್ತಿದೆ. ಕರ್ನಾಟಕ ಸರ್ಕಾರವೂ ಇದೇ ಮಾದರಿಯನ್ನು ಅಳವಡಿಸಿಕೊಂಡು, ಪ್ರತ್ಯೇಕ ಆದಾಯ ಪ್ರಮಾಣಪತ್ರದ ಅವಶ್ಯಕತೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ಅದೇ ರೀತಿ, ಬಿಪಿಎಲ್ ಕಾರ್ಡ್‌ಗೆ ಪ್ರಸ್ತುತ ಇರುವ ₹1.20 ಲಕ್ಷ ವಾರ್ಷಿಕ ಆದಾಯ ಮಿತಿಯನ್ನು ₹3 ಲಕ್ಷಕ್ಕೆ ಹೆಚ್ಚಿಸುವಂತೆ ಆಡಳಿತ ಸುಧಾರಣಾ ಆಯೋಗ ಶಿಫಾರಸು ಮಾಡಿದ್ದು, ರಾಜ್ಯ ಸರ್ಕಾರವೂ ಈ ಮಿತಿಯನ್ನು ₹3 ಲಕ್ಷಕ್ಕೆ ಹೆಚ್ಚಿಸುವ ಬಗ್ಗೆ ಕ್ರಮ ಕೈಗೊಳ್ಳುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಅವರು ತಿಳಿಸಿದ್ದರು. ಆದ್ದರಿಂದ ಬಿಪಿಎಲ್ ಕಾರ್ಡ್‌ಗೆ ₹3 ಲಕ್ಷ ಆದಾಯ ಮಿತಿ ನಿಗದಿಪಡಿಸುವುದರ ಜೊತೆಗೆ, ಅದೇ ಮಾನದಂಡವನ್ನು ಸಾಮಾಜಿಕ ಭದ್ರತಾ ಪಿಂಚಣಿಗೂ ಅನ್ವಯಿಸಬೇಕು ಎಂದು ಒತ್ತಾಯಿಸಿದರು.

ಇದರಿಂದ ಪ್ರತಿ ಯೋಜನೆಗೂ ಪ್ರತ್ಯೇಕ ಆದಾಯ ಪ್ರಮಾಣಪತ್ರ ಹಾಗೂ ದಾಖಲೆಗಳನ್ನು ಸಲ್ಲಿಸುವ ಅನಗತ್ಯ ಪ್ರಕ್ರಿಯೆ ತಪ್ಪುತ್ತದೆ. ವಿವಿಧ ಸರ್ಕಾರಿ ಇಲಾಖೆಗಳಲ್ಲಿರುವ ಫಲಾನುಭವಿಗಳ ದಾಖಲೆಗಳನ್ನು ಪರಸ್ಪರ ಸಂಯೋಜಿಸಿ “No Re-documentation” ವ್ಯವಸ್ಥೆ ಜಾರಿಗೆ ತರಬೇಕು. ಅರ್ಹ ಫಲಾನುಭವಿಗಳು ಸರ್ಕಾರಿ ಕಚೇರಿಗಳಿಗೆ ಪದೇಪದೇ ಅಲೆದಾಡುವ ಪರಿಸ್ಥಿತಿಯನ್ನು ಕೊನೆಗೊಳಿಸಬೇಕು ಎಂದರು.

ಇತ್ತೀಚಿನ ಪರಿಶೀಲನಾ ಪ್ರಕ್ರಿಯೆಯಿಂದ ಪಿಂಚಣಿ ಸ್ಥಗಿತಗೊಂಡಿರುವ ಅರ್ಹ ಫಲಾನುಭವಿಗಳ ಸಮಸ್ಯೆಯನ್ನೂ ಸರ್ಕಾರ ತುರ್ತಾಗಿ ಪರಿಹರಿಸಬೇಕು. ಯಾವುದೇ ಅರ್ಹ ವೃದ್ಧರು, ವಿಧವೆಯರು, ವಿಕಲಚೇತನರು ಅಥವಾ ಇತರ ದುರ್ಬಲ ವರ್ಗದವರು ತಾಂತ್ರಿಕ ಸಮಸ್ಯೆ, ಅನಗತ್ಯ ದಾಖಲೆಗಳ ತೊಂದರೆ ಅಥವಾ ಆಡಳಿತಾತ್ಮಕ ವಿಳಂಬದಿಂದ ಪಿಂಚಣಿ ಸೌಲಭ್ಯದಿಂದ ವಂಚಿತರಾಗದಂತೆ ವಿಶೇಷ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಸಾಮಾಜಿಕ ಭದ್ರತೆ ದಾನವಲ್ಲ; ಅದು ದುರ್ಬಲ ಮತ್ತು ಅಸಹಾಯಕ ನಾಗರಿಕರ ಹಕ್ಕು. ಬಡವರ ಹಕ್ಕಿನ ಸಾಮಾಜಿಕ ಭದ್ರತೆ ದಾಖಲೆಗಳ ಭಾರವಾಗಬಾರದು; ಅದು ಸರ್ಕಾರದ ಜವಾಬ್ದಾರಿಯಾಗಬೇಕು. ಜನರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವುದು ಮತ್ತು ಅವರ ಹಕ್ಕುಗಳಿಗಾಗಿ ಧ್ವನಿ ಎತ್ತುವುದು ಎಸ್‌ಡಿಪಿಐನ ರಾಜಕೀಯ ಬದ್ಧತೆಯಾಗಿದೆ. ಜನಪರ ಬೇಡಿಕೆಗಳನ್ನು ಪರಿಗಣಿಸಿ ಸರ್ಕಾರ ಕೈಗೊಳ್ಳುವ ಸಕಾರಾತ್ಮಕ ನಿರ್ಧಾರಗಳನ್ನು ನಾವು ಸ್ವಾಗತಿಸುತ್ತೇವೆ. ಅದೇ ವೇಳೆ, ಜನರ ಹಕ್ಕುಗಳಿಗೆ ಧಕ್ಕೆಯಾಗುವ ಯಾವುದೇ ಕ್ರಮದ ವಿರುದ್ಧ ಎಸ್‌ಡಿಪಿಐ ತನ್ನ ಹೋರಾಟವನ್ನು ಮುಂದುವರಿಸಲಿದೆ ಎಂದರು. ಪತ್ರಿಕಾ ಗೋಷ್ಠಿಯಲ್ಲಿ ದಾವಣಗೆರೆ ಜಿಲ್ಲಾಧ್ಯಕ್ಷ, ಎ. ಆರ್. ತಾಹೀರ್, ಜಿಲ್ಲಾ ಉಪಾಧ್ಯಕ್ಷ ರಿಯಾಜ್ ರಿಜ್ವಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್, ಜಿಲ್ಲಾ ಸಮಿತಿ ಸದಸ್ಯ ನವೀದ್ ಅಹ್ಮದ್, ಜಿಲ್ಲಾ ಕಾರ್ಯದರ್ಶಿ ಅಮೀರ್, ವಿಧಾನಸಭೆ ಕ್ಷೇತ್ರ ಸಮಿತಿ ಅಧ್ಯಕ್ಷ ಖುಬೈಬ್, ಜಿಲ್ಲಾ ಸಮಿತಿ ಸದಸ್ಯ ಯಾಹಿಯಾ ಮೊದಲಾದವರು ಹಾಜರಿದ್ದರು.

Leave a Reply