NRI ಮತದಾರರ ಪರ ಕುಟುಂಬ ಸದಸ್ಯರಿಗೆ SIR ವಿಚಾರಣೆಯಲ್ಲಿ ಹಾಜರಾಗಲು ಅವಕಾಶ ನೀಡಿ

9 hours ago

ಅಪ್ಸರ್ ಕೊಡ್ಲಿಪೇಟೆ ಆಗ್ರಹ

ಬೆಂಗಳೂರು: SIR (Special Intensive Revision) ಪ್ರಕ್ರಿಯೆಯಲ್ಲಿ ತಾರ್ಕಿಕ ವ್ಯತ್ಯಾಸಗಳು, ಲಿಂಕ್/ಮ್ಯಾಪಿಂಗ್ ಆಗದಿರುವುದು ಹಾಗೂ ಇತರ ಪರಿಶೀಲನಾ ಸಮಸ್ಯೆಗಳಿಗೆ ಸಂಬಂಧಿಸಿದಂತೆ ನೋಟಿಸ್‌ಗಳನ್ನು ಸ್ವೀಕರಿಸಿರುವ ವಿದೇಶದಲ್ಲಿರುವ (NRI) ಮತದಾರರು ಎದುರಿಸುತ್ತಿರುವ ತೊಂದರೆಗಳನ್ನು ಪರಿಗಣಿಸಿ, ಅವರ ಪರವಾಗಿ ತಕ್ಷಣದ ಕುಟುಂಬ ಸದಸ್ಯರು ಅಥವಾ ಅಧಿಕೃತ ಪ್ರತಿನಿಧಿಗಳು ERO/AEROಗಳ ಮುಂದೆ ಹಾಜರಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ರಾಜ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಕರ್ನಾಟಕದ ಅನೇಕ ಅರ್ಹ ಮತದಾರರು ಪ್ರಸ್ತುತ ಗಲ್ಫ್ ರಾಷ್ಟ್ರಗಳು, ಅಮೆರಿಕ, ಯುನೈಟೆಡ್ ಕಿಂಗ್‌ಡಮ್ ಸೇರಿದಂತೆ ವಿವಿಧ ದೇಶಗಳಲ್ಲಿ ವಾಸಿಸುತ್ತಿದ್ದಾರೆ. SIR ವಿಚಾರಣೆಗೆ ವೈಯಕ್ತಿಕವಾಗಿ ಹಾಜರಾಗಲು ಅಲ್ಪಾವಧಿಯೊಳಗೆ ಭಾರತಕ್ಕೆ ಪ್ರಯಾಣಿಸುವುದು ಅವರ ಪಾಲಿಗೆ ಪ್ರಾಯೋಗಿಕವಾಗಿ ಕಷ್ಟಕರವಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಕೇವಲ ವಿದೇಶದಲ್ಲಿ ವಾಸಿಸುತ್ತಿದ್ದಾರೆ ಎಂಬ ಕಾರಣಕ್ಕೆ ಅರ್ಹ ಮತದಾರರು ತಮ್ಮ ಮತದಾರರ ಪಟ್ಟಿಯಲ್ಲಿನ ಅರ್ಹತೆಯನ್ನು ಸಾಬೀತುಪಡಿಸುವ ಅವಕಾಶದಿಂದ ವಂಚಿತರಾಗಬಾರದು ಎಂದು ಅವರು ಹೇಳಿದ್ದಾರೆ.

NRI ಮತದಾರರ ತಕ್ಷಣದ ಕುಟುಂಬ ಸದಸ್ಯರು ಅಥವಾ duly authorised (ಅಧಿಕೃತವಾಗಿ ಅಧಿಕಾರ ನೀಡಲಾದ) ಪ್ರತಿನಿಧಿಗಳು ಅವರ ಪರವಾಗಿ ERO/AEROಗಳ ಮುಂದೆ ಹಾಜರಾಗಲು ಅವಕಾಶ ನೀಡಬೇಕು. ಪ್ರತಿನಿಧಿಗಳಿಗೆ SIR ನೋಟಿಸ್‌ಗೆ ಸಂಬಂಧಿಸಿದ ಅಗತ್ಯ ದಾಖಲೆಗಳು, ಘೋಷಣೆಗಳು ಹಾಗೂ ಸ್ಪಷ್ಟೀಕರಣಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ಅಪ್ಸರ್ ಕೊಡ್ಲಿಪೇಟೆ ಮನವಿ ಮಾಡಿದ್ದಾರೆ.

ಅಗತ್ಯವಿರುವ ಸಂದರ್ಭಗಳಲ್ಲಿ NRI ಮತದಾರರಿಗೆ ಆನ್‌ಲೈನ್ ಅಥವಾ ವೀಡಿಯೋ ಮೂಲಕ ಪರಿಶೀಲನೆ ನಡೆಸಲು ಅವಕಾಶ ನೀಡಬೇಕು. ಅಲ್ಲದೆ, ವಿದೇಶದಲ್ಲಿ ವಾಸಿಸುತ್ತಿರುವ ಕಾರಣ ವೈಯಕ್ತಿಕವಾಗಿ ವಿಚಾರಣೆಗೆ ಹಾಜರಾಗಲು ಸಾಧ್ಯವಾಗದಿರುವುದನ್ನು ಮಾತ್ರ ಆಧಾರವಾಗಿ ತೆಗೆದುಕೊಂಡು ಯಾವುದೇ ನೈಜ ಹಾಗೂ ಅರ್ಹ ಮತದಾರರ ವಿರುದ್ಧ ಪ್ರತಿಕೂಲ ಕ್ರಮ ಕೈಗೊಳ್ಳಬಾರದು ಎಂದು ಅವರು ಆಗ್ರಹಿಸಿದ್ದಾರೆ.

ಪಶ್ಚಿಮ ಬಂಗಾಳ, ತೆಲಂಗಾಣದ ಮಾದರಿಯಲ್ಲಿ ಅವಕಾಶ ನೀಡಿ: SIR ಪ್ರಕ್ರಿಯೆಯಲ್ಲಿ ಇತರ ರಾಜ್ಯಗಳಲ್ಲಿ ಅನುಸರಿಸಲಾದ ವ್ಯವಸ್ಥೆಗಳನ್ನು ಕರ್ನಾಟಕದಲ್ಲಿಯೂ ಪರಿಗಣಿಸಬೇಕು ಎಂದು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ SIR ಪ್ರಕ್ರಿಯೆಯ ಸಂದರ್ಭದಲ್ಲಿ, ರಾಜ್ಯದ ಹೊರಗೆ ವಾಸಿಸುತ್ತಿರುವ NRI ಮತದಾರರು ಹಾಗೂ ಇತರ ಮತದಾರರ ಪರವಾಗಿ ಅವರ ಸಂಬಂಧಿಕರು ವಿಚಾರಣೆಯಲ್ಲಿ ಹಾಜರಾಗಲು ಅವಕಾಶ ನೀಡಲಾಗಿತ್ತು. ಸಂಬಂಧದ ಪುರಾವೆ ಹಾಗೂ ಅಗತ್ಯ ದಾಖಲೆಗಳ ಸಲ್ಲಿಕೆಗೆ ಒಳಪಟ್ಟು ಈ ಅವಕಾಶ ಕಲ್ಪಿಸಲಾಗಿತ್ತು. ಅದೇ ರೀತಿ, ತೆಲಂಗಾಣದಲ್ಲಿಯೂ ವಿದೇಶದಲ್ಲಿ ಉದ್ಯೋಗದಲ್ಲಿರುವ ಮತದಾರರು ವೈಯಕ್ತಿಕವಾಗಿ ಭಾಗವಹಿಸಲು ಸಾಧ್ಯವಾಗದ ಸಂದರ್ಭಗಳಲ್ಲಿ ಕುಟುಂಬ ಸದಸ್ಯರ ಮೂಲಕ SIR ಸಂಬಂಧಿತ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅನುಕೂಲ ಕಲ್ಪಿಸುವ ಮಾರ್ಗಸೂಚಿಗಳನ್ನು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ, ಕರ್ನಾಟಕದಲ್ಲಿಯೂ ಇದೇ ರೀತಿಯ ವ್ಯವಸ್ಥೆಯನ್ನು ಜಾರಿಗೆ ತಂದು, ಎಲ್ಲಾ ಜಿಲ್ಲೆಗಳ ಸಂಬಂಧಿತ ERO/AEROಗಳಿಗೆ ಏಕರೂಪದ ಸ್ಪಷ್ಟ ನಿರ್ದೇಶನಗಳನ್ನು ನೀಡಬೇಕು ಎಂದು ಅಪ್ಸರ್ ಕೊಡ್ಲಿಪೇಟೆ ರಾಜ್ಯ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.

“ವಿದೇಶದಲ್ಲಿ ವಾಸಿಸುತ್ತಿರುವುದು ಯಾವುದೇ ಅರ್ಹ ಮತದಾರನ ತಪ್ಪಲ್ಲ. ಕೇವಲ ಅವರ ನಿವಾಸದ ಕಾರಣದಿಂದ ಮತದಾನದ ಹಕ್ಕು ಹಾಗೂ ತಮ್ಮ ಅರ್ಹತೆಯನ್ನು ಸಾಬೀತುಪಡಿಸುವ ಅವಕಾಶಕ್ಕೆ ಧಕ್ಕೆಯಾಗಬಾರದು. SIR ಪ್ರಕ್ರಿಯೆಯು ನ್ಯಾಯಸಮ್ಮತ, ಪಾರದರ್ಶಕ ಹಾಗೂ ಎಲ್ಲರಿಗೂ ಸುಲಭವಾಗಿ ಲಭ್ಯವಾಗುವ ರೀತಿಯಲ್ಲಿ ನಡೆಯಬೇಕು. ಆದ್ದರಿಂದ NRI ಮತದಾರರ ಹಿತದೃಷ್ಟಿಯಿಂದ ರಾಜ್ಯ ಚುನಾವಣಾ ಆಯೋಗವು ತಕ್ಷಣ ಸೂಕ್ತ ನಿರ್ದೇಶನಗಳನ್ನು ನೀಡಬೇಕು” ಎಂದು ಅವರು ಹೇಳಿದ್ದಾರೆ.

Leave a Reply