ಲೋಕಸಭಾ ಚುನಾವಣೆ: ರಾಜ್ಯ ಸ್ವೀಪ್ ನೋಡಲ್ ಅಧಿಕಾರಿಗಳ ಸಭೆ
ದಾವಣಗೆರೆ: ಪ್ರಸ್ತುತ 18ನೇ ಲೋಕಸಭೆಗೆ ಚುನಾವಣೆ ನಡೆಯುತ್ತಿದ್ದು ಈ ಚುನಾವಣೆಯಲ್ಲಿ ಶೇ 85 ಕ್ಕಿಂತಲೂ ಹೆಚ್ಚಿನ ಮತದಾನ ಮಾಡುವಂತೆ ನೋಡಿಕೊಂಡು ಹೊಸ ದಾಖಲೆ ಬರೆಯಬೇಕೆಂದು ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ್ ತಿಳಿಸಿದರು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಕೋರ್ ಕಮಿಟಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದಾವಣಗೆರೆ ಕ್ಷೇತ್ರದಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಶೇ 72.96 ರಷ್ಟು ಮತದಾನವಾಗಿತ್ತು. ಕಳೆದ ಚುನಾವಣೆಯಲ್ಲಿ ಯಾವ ಮತಗಟ್ಟೆಯಲ್ಲಿ ಕಡಿಮೆ ಮತದಾನವಾಗಿದೆ, ಅಂತಹ ಪ್ರದೇಶದಲ್ಲಿ ಹೆಚ್ಚಿನ ಮತದಾರರ ಜಾಗೃತಿ ಕಾರ್ಯಕ್ರಮದ ಜೊತೆಗೆ ಅವರಿಗಾಗಿರುವ ಅನಾನುಕೂಲಗಳ ಬಗ್ಗೆಯೂ ಪರಿಶೀಲನೆ ನಡೆಸಿ ಕಡಿಮೆ ಮತದಾನವಾಗಲು ಯಾವ ಯಾವ ಅಂಶಗಳು ಕಾರಣವಾಗಿವೆ ಎಂಬುದನ್ನು ಮನಗಂಡು ಇದಕ್ಕೆ ಪರಿಹಾರೋಪಾಯಗಳನ್ನು ಕಂಡುಕೊಂಡು ಈ ವರ್ಷ ಮತದಾನ ಹೆಚ್ಚಳಕ್ಕೆ ಮುಂದಾಗಬೇಕಾಗಿದೆ ಎಂದರು.
ಗ್ರಾಮಾಂತರ ಪ್ರದೇಶದಲ್ಲಿ ಮತದಾನ ಹೆಚ್ಚಿರುತ್ತದೆ, ಆದರೆ ನಗರ, ಪಟ್ಟಣ ಪ್ರದೇಶದ ಕೆಲವು ಪ್ರದೇಶಗಳು ಅಂದರೆ ಶಿಕ್ಷಣವಂತರೇ ಮತದಾನದಿಂದ ದೂರ ಇರುತ್ತಾರೆ. ಚುನಾವಣಾ ಫಲಿತಾಂಶದಲ್ಲಿ ಒಂದು ಮತದಾನದಿಂದ ವಿಜೇತರಾದವರು ಮತ್ತು ಒಂದು ಮತ ಕಡಿಮೆಯಾಗಿದ್ದರಿಂದ ಸರ್ಕಾರ ಅವಿಶ್ವಾಸ ಕಳೆದುಕೊಂಡು ಸರ್ಕಾರ ಪತನಕ್ಕೆ ಕಾರಣವಾಗಿರುವುದನ್ನು ಕಾಣುತ್ತೇವೆ. ಆದ್ದರಿಂದ ಪ್ರತಿಯೊಬ್ಬರ ಮತವು ಬಹಳ ಪ್ರಾಮುಖ್ಯವಾಗಿದ್ದು ಎಲ್ಲರೂ ಚುನಾವಣಾ ಹಬ್ಬದಲ್ಲಿ ಭಾಗವಹಿಸುವಂತೆ ಪ್ರೆರೇಪಿಸಬೇಕಾಗಿದೆ ಎಂದರು.
ಮತಗಟ್ಟೆ ಸೌಲಭ್ಯಗಳ ಕಡೆಗೂ ಗಮನಹರಿಸಿ: ಮತಗಟ್ಟೆಗೆ ಜನರು ಖುಷಿಯಿಂದ ಬಂದು ಮತದಾನ ಮಾಡುವಂತಹ ವಾತಾವರಣ ಕಲ್ಪಿಸಬೇಕು. ಮತಗಟ್ಟೆಗಳಲ್ಲಿ ಜನರಿಗೆ ಕನಿಷ್ಠ ಸೌಲಭ್ಯಗಳು ಇರುವಂತೆ ನೋಡಿಕೊಳ್ಳಬೇಕು. ದಾವಣಗೆರೆ ನಗರದ ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಮತ್ತು ಮತಗಟ್ಟೆ ಅಧಿಕಾರಿಯವರು ಸಹ ಎಲ್ಲಾ ಮತದಾರರ ವಿವರ ಸಂಗ್ರಹ ಮಾಡಿಕೊಂಡಿರುವುದನ್ನು ಗಮನಿಸಲಾಗಿದೆ. ಇದಕ್ಕಾಗಿಯೇ ಪ್ರತ್ಯೇಕ ವಹಿ ನಿರ್ವಹಿಸುವ ಮೂಲಕ ಎಲ್ಲಾ ಮಾಹಿತಿ ಸಂಗ್ರಹ ಮಾಡಿ ಮತದಾರರೊಂದಿಗೆ ಸಂಪರ್ಕವನ್ನಿಟ್ಟುಕೊಂಡಿದ್ದು ಇದು ಸಹ ಮತದಾನ ಹೆಚ್ಚಳಕ್ಕೆ ಪೂರಕವಾದ ಅಂಶವಾಗಿದೆ ಎಂದರು.
ಇಲಾಖಾವಾರು ಮತದಾರರ ಜಾಗೃತಿ ಕಾರ್ಯಕ್ರಮ: ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಹಲವು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ವಿಶೇಷವಾಗಿ ಮೂರು ತಲೆಮಾರಿನ ಮತದಾರರಿಂದ ಮತದಾನ, ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ಸೇರಿದಂತೆ ಮತದಾರರ ಜಾಗೃತಿಗೆ ವಿನೂತನ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದು ಉಪನಿರ್ದೇಶಕರು ಮಾಹಿತಿ ನೀಡಿದರು.
ಜಂಟಿ ಕೃಷಿ ನಿರ್ದೇಶಕರು ಮತದಾರರ ಜಾಗೃತಿಗೆ ಇಲಾಖೆಯಿಂದ ಕಾರ್ಯಕ್ರಮ ರೂಪಿಸಲಾಗಿದೆ ಮತ್ತು ಆರೋಗ್ಯ ಇಲಾಖೆಯಿಂದ ಮೇ 7 ರಂದು ಮತದಾನ ಮಾಡಲು ಚಿಕಿತ್ಸೆ, ತಪಾಸಣೆಗೆ ಆಗಮಿಸುವ ಎಲ್ಲ ರೋಗಿಗಳು, ಜೊತೆಯಲ್ಲಿ ಬರುವವರಿಗೂ ಮತದಾನ ಜಾಗೃತಿ ಮೂಡಿಸಲಾಗುತ್ತದೆ. ಮತ್ತು ಹಾಸ್ಟೆಲ್ನಲ್ಲಿ ಇರುವ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿಗಳಿಂದ ಮತದಾನ ಜಾಗೃತಿ ಕಾರ್ಯಕ್ರಮ ರೂಪಿಸಲಾಗುತ್ತದೆ ಎಂದು ಅಧಿಕಾರಿಗಳು ಕಾರ್ಯಕ್ರಮಗಳ ರೂಪುರೇಷೆ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಸುರೇಶ್ ಬಿ.ಇಟ್ನಾಳ್ ಮಾತನಾಡಿ, 2023ರ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದೆ. ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಶೇ 85ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಲು ಅಗತ್ಯವಿರುವ ಎಲ್ಲಾ ಜಾಗೃತಿ ಕಾರ್ಯಕ್ರಮ ರೂಪಿಸಲಾಗಿದೆ. 18 ವರ್ಷ ತುಂಬಿರುವ ಯುವ ಮತದಾರರು ಯಾರು ಬಿಟ್ಟು ಹೋಗಬಾರದೆಂದು ಕಾಲೇಜುಗಳಲ್ಲಿ ಸ್ವೀಪ್ ಕಾರ್ಯಕ್ರಮ ರೂಪಿಸುವ ಮೂಲಕ ಮತ್ತು ಸಂವಾದ ನಡೆಸುವ ಮೂಲಕ 36 ಸಾವಿರಕ್ಕಿಂತ ಹೆಚ್ಚು ಹೊಸ ಮತದಾರರನ್ನು ನೊಂದಣಿ ಮಾಡಿಸಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕೃಷ್ಣನಾಯ್ಕ, ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ್, ಪಾಲಿಕೆ ಆಯುಕ್ತರಾದ ರೇಣುಕಾ, ನಗರಾಭಿವೃದ್ದಿ ಕೋಶ ಯೋಜನಾ ನಿರ್ದೇಶಕ ಮಹಂತೇಶ್ ಹಾಗೂ ಸಮಿತಿ ಸದಸ್ಯರಾದ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.




