ರೈತರಲ್ಲಿ ನಿಮ್ಮ ಕಷ್ಟಗಳಿಗೆ ಸ್ಪಂದಿಸಲಿದೆ ಎಂಬ ಭರವಸೆಯನ್ನು ಮೂಡಿಸಬೇಕು: ದಿವ್ಯ ಪ್ರಭು

2 years ago

ಧಾರವಾಡ: ಬರಗಾಲದಲ್ಲಿ ಬಸವಳೆದಿರುವ ರೈತರಿಗೆ ಮಾಹಿತಿಯುಕ್ತ ಆಸರೆ ಆಗಲು ಜಿಲ್ಲಾಡಳಿತ ಆರಂಭಿಸಿರುವ ರೈತರೊಂದಿಗೆ ನಾವಿದ್ದೇವೆ ಅಭಿಯಾನವನ್ನು ಪ್ರತಿ ತಾಲ್ಲೂಕಿನಲ್ಲಿರುವ ಜಾನುವಾರು ಮಾರುಕಟ್ಟೆ, ದನಗಳ ಸಂತೆಯಲ್ಲಿ ಆಯೋಜಿಸಿ, ಜಿಲ್ಲಾಡಳಿತ, ತಾಲ್ಲೂಕು ಆಡಳಿತ ನಿಮ್ಮೊಂದಿಗೆ ಇದ್ದು, ನಿಮ್ಮ ಕಷ್ಟಗಳಿಗೆ ಸ್ಪಂದಿಸಲಿದೆ ಎಂಬ ಭರವಸೆಯನ್ನು ರೈತರಲ್ಲಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಜರುಗಿಸಿ, ಕುಡಿಯುವ ನೀರು, ಜಾನುವಾರು ಮೇವು, ನರೇಗಾ ಉದ್ಯೋಗ ನೀಡುತ್ತಿರುವ ಬಗ್ಗೆ ಪ್ರಗತಿ ಪರಿಶೀಲಿಸಿ ಮಾತನಾಡಿದರು.

ಧಾರವಾಡ ಜಿಲ್ಲಾಡಳಿತದಿಂದ ಜೂನ್ ತಿಂಗಳವರೆಗೆ ಬರಬಹುದಾದ ಕುಡಿಯುವ ನೀರಿನ ಸಮಸ್ಯೆ, ಜಾನುವಾರು ಮೇವು ಕೊರತೆ ಅಂದಾಜಿಸಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ರೈತರಿಗೆ, ಸಾರ್ವಜನಿಕರಿಗೆ ಸಮಸ್ಯೆಗಳಿದ್ದಲ್ಲಿ ಸಂಪರ್ಕಿಸಲು ಜಿಲ್ಲಾಧಿಕಾರಿಗಳ ಕಚೇರಿ, ತಹಶೀಲ್ದಾರ ಕಚೇರಿ ಮತ್ತು ತಾಲ್ಲೂಕು ಪಂಚಾಯತಗಳಲ್ಲಿ ಸಹಾಯವಾಣಿ ಆರಂಭಿಸಲಾಗಿದೆ. ಮೇವು ಬ್ಯಾಂಕ್ ತೆರೆದು, ಮೇವು ಪೂರೈಸಲಾಗುತ್ತಿದೆ. ಈ ಎಲ್ಲಾ ಮಾಹಿತಿ ಜಿಲ್ಲೆಯ ಪ್ರತಿ ಗ್ರಾಮಗಳಿಗೆ ತಲುಪಬೇಕು ಎಂದರು.

ಪ್ರತಿ ಗ್ರಾಮಪಂಚಾಯತಿಯಿಂದ ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ಬರ ನಿರ್ವಹಣೆಯಲ್ಲಿ ಕೈಗೊಂಡಿರುವ ಕ್ರಮಗಳು, ಮೇವು ಲಭ್ಯತೆ, ಕುಡಿಯವ ನೀರು, ಸಹಾಯವಾಣಿಗಳ ಬಗ್ಗೆ ಡಂಗುರ ಸಾರುವ, ಟಂ, ಟಂ ಹೊಡೆದು ಹೇಳುವ ಮತ್ತು ಕಸದ ವಾಹನಗಳಲ್ಲಿ ಜಿಂಗಲ್, ಧ್ವನಿವರ್ಧಕ ಬಳಸಿ ಸಾರ್ವಜನಿಕರಿಗೆ ಮಾಹಿತಿ ತಲುಪಿಸಬೇಕು. ಜನರಿಗೆ ಮಾಹಿತಿ ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿಗಳಿಗೆ ನಿರ್ದೇಶಿಸಿದರು.

ತಹಶೀಲ್ದಾರರು ಮತ್ತು ಪಶುಪಾಲನೆ ಅಧಿಕಾರಿಗಳು ಪ್ರತಿ ಜಾನುವಾರು ಮಾರುಕಟ್ಟೆಯಲ್ಲಿ ಅಭಿಯಾನ ಕುರಿತು ಹೆಚ್ಚು ಪ್ರಚಾರ ಮಾಡಬೇಕು. ಮಾರುಕಟ್ಟೆಗೆ ಬಂದಿರುವ ರೈತರನ್ನು ಮಾತನಾಡಿಸಿ, ಅವರಿಗೆ ಮಾಹಿತಿ ನೀಡಬೇಕು. ಧ್ವನಿವರ್ಧಕ ಬಳಸಿ ಮುಂಜಾಗ್ರತಾ ಕ್ರಮಗಳ ಬಗ್ಗೆ ವ್ಯಾಪಕ ಪ್ರಚಾರ ನೀಡಿ, ತಮ್ಮ ತಾಲ್ಲೂಕಿನಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ನಿಗಾ ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ವಿಜಯಕುಮಾರ ಆಜೂರ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಪಶುಪಾಲನೆ ಇಲಾಖೆಯ ನಿರ್ದೇಶಕ ಡಾ. ರವಿ ನಿಲಿಗೌಡರ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಕಿರಣಕುಮಾರ, ಮಹಾನಗರ ಪಾಲಿಕೆಯ ಅಧೀಕ್ಷಕ ಅಭಿಯಂತರ ತಿಮ್ಮಪ್ಪ, ಭೂದಾಖಲೆಗಳ ಉಪನಿರ್ದೇಶಕ ಮೋಹನ ಶಿವಣ್ಣವರ ಸೇರಿದಂತೆ ಎಲ್ಲಾ ತಾಲ್ಲೂಕುಗಳ ತಹಶೀಲ್ದಾರರು, ತಾ.ಪಂ ಇ.ಓ ಗಳು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

Leave a Reply