ನಮಸ್ತೆ ವೃಷಭಾವತಿ, ನಮಸ್ತೆ ಗಟಾರ. ಪೂಜೆಗಳು ಮಾತ್ರ ಬಾಕಿ ಇವೆ.
ಕರ್ನಾಟಕದ ಹದಿನೇಳು ನದಿಗಳ ನೀರು ಕುಡಿಯುವುದಕ್ಕೆ ಯೋಗ್ಯವಲ್ಲ ಎಂಬ ವರದಿ ಪ್ರಕಟವಾಗಿದೆ. ನಮ್ಮನ್ನಾಳುವ ಅಯೋಗ್ಯರು ಇವರು ಜನಪತ್ರಿನಿಧಿಗಳಾ? ಅಥವಾ ರಾಕ್ಷಸರಾ ಎಂದು ನಡುರಸ್ತೆಯಲ್ಲಿ ಕುತ್ತಿಗೆ ಪಟ್ಟಿ ಹಿಡಿದುಕೊಂಡು ನಾವು ಕೇಳಬೇಕಾಗಿದೆ.
ಈ ದೇಶದ, ಈ ನಾಡಿನ ಶೇಕಡ ತೊಂಬತ್ತರಷ್ಟು ಜನ ಕುಡಿಯುವ ನೀರಿಗೆ ನದಿಗಳನ್ನು ಆಶ್ರಯಿಸಿರುವಾಗ ಅವರ ಪರಿಸ್ಥಿತಿ ಏನಾಗಬೇಕು? ಇದನ್ನು ಪ್ರಶ್ನಿಸುವವರು ಯಾರು?
ನದಿ ಹಾಗೂ ಪರಿಸರದ ಕ್ಷಮತೆಯನ್ನು ಕಾಪಾಡಿಕೊಳ್ಳುವಲ್ಲಿ ವಿಫಲವಾಗಿರುವ ಭಾರತಜಗತ್ತಿನ 180 ರಾಷ್ಟ್ರಗಳಲ್ಲಿ ಕೊನೆಯ ಸ್ಥಾನದಲ್ಲಿದೆ. ನಾಚಿಕೆಯಾಗಬೇಕು ಈ ಸರ್ಕಾರಗಳಿಗೆ ಮತ್ತು ಆಳುವ ನಾಯಕರಿಗೆ.
ಈಗ ಕರ್ನಾಟಕದ ಗುಲಾಮರು ವಾರಣಾಸಿಯಲ್ಲಿ ಕಾಶಿ ವಿಶ್ವನಾಥನ ದೇಗುಲದ ಬಳಿ ಇರುವ ನಮಸ್ತೆ ಗಂಗಾ ಆರತಿ ಪೂಜೆಯನ್ನು ನಾಡಿಗೆ ಪರಿಚಯಿಸುತ್ತಿದ್ದಾರೆ. ನಮಸ್ತೆ ಕಾವೇರಿ, ನಮಸ್ತೆ ತುಂಗಾ, ನಮಸ್ತೆ ಕಪಿಲಾ, ನಮಸ್ತೆ ಹೇಮಾವತಿ ಹೆಸರಿನಲ್ಲಿ ಎಂಜಲು ಸಂಸ್ಕೃತಿಯನ್ನು ಆಚರಣೆಗೆ ತಂದ ಹಾಗೂ ತರುತ್ತಿರುವ ಈ ಹಲಾಲುಕೋರರಿಗೆ ಇದೇ ನದಿಗಳಲ್ಲಿ ಮುಳುಗಿಸಿ, ನಾಲ್ಕು ಬೊಗಸೆ ನೀರನ್ನು ನಾವು ಕುಡಿಸಬೇಕಿದೆ.
ನಾಳೆ ಇವರು ನಮಸ್ತೆ ವೃಷಭಾವತಿ ಹೆಸರಿನಲ್ಲಿ ಬೆಂಗಳೂರು ಕೆಂಗೇರಿಯ ಗಟಾರದ ಕೊಳಚೆ ನೀರಿಗೂ ಪೂಜೆ ಮಾಡಲು ಹೇಸುವುದಿಲ್ಲ.
ಮೂರು ದಶಕದ ಹಿಂದೆ ಡೌನ್ ಟು ಅರ್ಥ್ ಪಾಕ್ಷಿಕ ಪತ್ರಿಕೆಯ ಸಂಸ್ಥಾಪಕ ಅನಿಲ್ ಅಗರವಾಲ್ ಹಾಗೂ ಡಾ.ವಂದನಾಶಿವ ಮೊದಲಾದವರು ಮುಂದಿನ ದಶಕಗಳಲ್ಲಿ ಯುದ್ಧ ನಡೆಯುವುದಾದರೆ ಅದು ನೀರಿಗಾಗಿ ಮಾತ್ರ ಎಂದು ಭವಿಷ್ಯ ನುಡಿದಿದ್ದರು. ಅವರ ಮಾತು ಈಗ ಸತ್ಯವಾಗಿದೆ.
ಕುಡಿಯುವ ನೀರು ಮತ್ತು ಉಸಿರಾಡುವ ಗಾಳಿ ಕೂಡಾ ಈ ಭೂಮಿಯ ಮೇಲಿನ ಮನುಷ್ಯನಿಗೆ ದಕ್ಕಲಾರವು ಎಂದ ಮೇಲೆ ಈ ಸರ್ಕಾರಗಳು, ಜನಪ್ರತಿಗಳು ಏಕೆ ಬೇಕು?
ಈ ಪ್ರಶ್ನೆಗಳನ್ನು ಎತ್ತಬೇಕಾದ ಮಾಧ್ಯಮಗಳು ಉಳ್ಳವರ ಬೂಟುಗಾಲಿನಡಿ ಮಲಗಿ ಬೂಟು ನೆಕ್ಕುತ್ತಿರುವಾಗ ಈ ವಾಸ್ತವವನ್ನು ಜನರ ಮುಂದೆ ಇಡುವವರು ಯಾರು?
– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು



