SKM ಕರೆ ನೀಡಿದ್ದ ಗಣರಾಜ್ಯೋತ್ಸವ ರಾಷ್ಟ್ರೀಯ ಟ್ರಾಕ್ಟರ್ ಪೆರೇಡ್ ಯಶಸ್ವಿ

3 years ago

ಸಂಯುಕ್ತ ಕಿಸಾನ್ ಮೋರ್ಚಾ SKM ಕರೆ ನಿಡಿದ್ದ ಜನವರಿ 26 ರ ಗಣರಾಜ್ಯೋತ್ಸವ ರಾಷ್ಟ್ರೀಯ ಟ್ರಾಕ್ಟರ್ ಪೆರೇಡ್ (ಪ್ರತಿಭಟನೆ) ಪಂಜಾಬ್, ಹರಿಯಾಣ, ಪಶ್ಚಿಮ ಬಂಗಾಳ, ಛತ್ತೀಸಗಡ,ಇತರೆ ಹಲವು ರಾಜ್ಯಗಳಲ್ಲಿ ಯಶಸ್ವಿಯಾಗಿದೆ. ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿ ರಾಷ್ಟ್ರೀಯ ಕರೆಗೆ ಬೆಂಬಲ ವ್ಯಕ್ತವಾಗಿದೆ.

ಸಿಂಧನೂರಲ್ಲಿ ರೈತ ವಿರೋಧಿ ಕೃಷಿ ಕಾಯ್ದೆ ರದ್ದತಿ ಹೋರಾಟ ಸಮಿತಿ, ಕೊಪ್ಪಳದಲ್ಲಿ ಸಂಯುಕ್ತ ಹೋರಾಟ- ಕರ್ನಾಟಕ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ.

ಕೊಪ್ಪಳದ ಜಿಲ್ಲಾ ಉಸ್ತುವಾರಿ ಮಂತ್ರಿ ಆನಂದ ಸಿಂಗ್ ಇವರಿಗೆ ಮನವಿ ಕೊಟ್ಟು ಚರ್ಚೆ ನಡೆಸಲಾಯಿತು. ರಾಜ್ಯ ಸರ್ಕಾರ ಜಾರಿಗೊಳಿಸಿದ ಮೂರು ಕೃಷಿ ಕಾಯ್ದೆಗಳ ಕುರಿತು ವಿಧಾನಸಭೆ ಅಧಿವೇಶನದಲ್ಲಿ ಧ್ವನಿ ಎತ್ತುವ ಭರವಸೆ ಕೊಟ್ಟರು.

ಸರ್ಕಾರಿ ಅರಣ್ಯ ಭೂಮಿಯನ್ನು , ಭೂ ಮಾಫಿಯಗಳಿಗೆ ಮತ್ತು ಕಂಪನಿ ಕಾರ್ಪೋರೇಟರಿಗೆ ಗುತ್ತಿಗೆ ಕೊಡುವ ತೀರ್ಮಾನ ಕೈ ಬಿಡಲು ಒತ್ತಾಯಿಸಲಾಯಿತು.

ರಾಷ್ಟ್ರೀಯ ಬೇಡಿಕೆಗಳು:

01.ಎಂ.ಎಸ್ ಸ್ವಾಮಿನಾಥನ್ ಆಯೋಗದ ಶಿಪಾರಸ್ಸಿನಂತೆ C2+50% ಸೂತ್ರದ ಪ್ರಕಾರ
ಕನಿಷ್ಠ ಬೆಂಬಲ ಬೆಲೆ (MSP) ಖಾತರಿಪಡಿಸುವ ಕಾನೂನು ಅಂಗೀಕರಿಸಬೇಕು. ಎಂಎಸ್‌ಪಿ ಕುರಿತಂತೆ ಕೇಂದ್ರ ಸರ್ಕಾರ ರಚಿಸಿರುವ ಸಮಿತಿ ಮತ್ತು ಅದರ ಹೇಳಿಕೆಯ ಕಾರ್ಯಸೂಚಿಯು ರೈತರ ಆಗ್ರಹಗಳಿಗೆ ವಿರುದ್ಧವಾಗಿದೆ.ಅದ್ದರಿಂದ ಈ ಸಮಿತಿಯನ್ನು ವಜಾಗೊಳಿಸಬೇಕು ಮತ್ತು ಎಂ.ಎಸ್.ಪಿ ಕಾನೂನು ಖಾತರಿಗಾಗಿ ಕೇಂದ್ರ ಸರ್ಕಾರದ ಭರವಸೆಯಂತೆ ಸಂಯುಕ್ತ ಕಿಸಾನ್ ಮೋರ್ಚಾದ ಪ್ರತಿನಿಧಿಗಳನ್ನು ಸೇರಿಸುವ ಮೂಲಕ ರೈತರಿಗೆ ಆಗ್ರಹಗಳಿಗೆ ಸರಿ ಹೊಂದುವ ಹೊಸ ಸಮಿತಿಯನ್ನು ರಚನೆ ಮಾಡಬೇಕು.

2. ಕೃಷಿಯಲ್ಲಿ ಹೆಚ್ಚುತ್ತಿರುವ ದುಬಾರಿ ವೆಚ್ಚಗಳು ಮತ್ತು ಬೆಳೆಗಳಿಗೆ ಲಾಭದಾಯಕ ಬೆಲೆಗಳು ಸಿಗದ ಕಾರಣ ಶೇಕಡಾ 80 ಹೆಚ್ಚು ರೈತರು ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆಗೆ ಒಳಗಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲ ರೈತರ ಎಲ್ಲಾ ರೀತಿಯ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು.

3. ವಿದ್ಯುತ್ ತಿದ್ದುಪಡಿ ಮಸೂದೆ, 2022 ಸಂಸತ್ತಿನಿಂದ ಹಿಂಪಡೆಯಬೇಕು. 9 ಡಿಸೆಂಬರ್ 2021 ರಂದು ಸಂಯುಕ್ತ ಕಿಸಾನ್ ಮೋರ್ಚಾಗೆ ಬರೆದ ಪತ್ರದಲ್ಲಿ, ಕೇಂದ್ರ ಸರ್ಕಾರವು “ಎಸ್ ಕೆ ಎಂ ನೊಂದಿಗೆ ಚರ್ಚಿಸಿದ ನಂತರವೇ ಈ ವಿಷಯದಲ್ಲಿ ಮುಂದುವರೆಯಲಾಗುವುದು ” ಎಂದು ಲಿಖಿತ ಭರವಸೆ ನೀಡಿತ್ತು. ಆದರೆ ಕೇಂದ್ರ ಸರ್ಕಾರ ಯಾವುದೇ ಚರ್ಚೆಯಿಲ್ಲದೆ ಈ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದೆ.

4 (i) ಲಖಿಂಪುರ ಖೇರಿ ಜಿಲ್ಲೆಯ ಟಿಕೋನಿಯಾದಲ್ಲಿ ನಾಲ್ವರು ರೈತರು ಮತ್ತು ಪತ್ರಕರ್ತರ ಹತ್ಯೆಯ ಪ್ರಮುಖ ಸಂಚುಕೋರ, ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ತೇನಿ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಮತ್ತು ಬಂಧಿಸಿ ಜೈಲಿಗೆ ಕಳುಹಿಸಬೇಕು.
(ii) ಲಖೀಂಪುರ ಖೇರಿ ಹತ್ಯಾಕಾಂಡದಲ್ಲಿ ಬಂಧಿಯಾಗಿರುವ ಅಮಾಯಕ ರೈತರನ್ನು ಕೂಡಲೇ ಬಿಡುಗಡೆ ಮಾಡಬೇಕು ಮತ್ತು ಅವರ ವಿರುದ್ಧ ದಾಖಲಿಸಿರುವ ಸುಳ್ಳು ಪ್ರಕರಣಗಳನ್ನು ಕೂಡಲೇ ಹಿಂಪಡೆಯಬೇಕು. ಹುತಾತ್ಮ ರೈತರ ಕುಟುಂಬಗಳಿಗೆ ಹಾಗೂ ಗಾಯಗೊಂಡ ರೈತರಿಗೆ ಪರಿಹಾರ ನೀಡುವ ಭರವಸೆಯನ್ನು ಸರಕಾರ ಈಡೇರಿಸಬೇಕು.

5. ಅನಾವೃಷ್ಟಿ, ಅತಿವೃಷ್ಟಿ, ಬೆಳೆ ರೋಗಗಳು ಇತ್ಯಾದಿಗಳಿಂದಾದ ನಷ್ಟವನ್ನು ಸರಿದೂಗಿಸಲು ಸರ್ಕಾರವು ಎಲ್ಲಾ ಬೆಳೆಗಳಿಗೆ ಸಮಗ್ರ ಮತ್ತು ಪರಿಣಾಮಕಾರಿ ಬೆಳೆ ವಿಮೆಯನ್ನು ಜಾರಿಗೊಳಿಸಬೇಕು.
6. ಎಲ್ಲಾ ಮಧ್ಯಮ, ಸಣ್ಣ ಮತ್ತು ಅತಿ ಸಣ್ಣ ರೈತರು ಮತ್ತು ಕೃಷಿ ಕಾರ್ಮಿಕರಿಗೆ ಮಾಸಿಕ ₹ 5,000 ರ ರೈತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು.
7. ರೈತ ಚಳವಳಿಯ ಸಂದರ್ಭದಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳು ಮತ್ತು ಇತರ ರಾಜ್ಯಗಳಲ್ಲಿ ರೈತರ ಮೇಲೆ ದಾಖಲಾಗಿರುವ ಸುಳ್ಳು ಪ್ರಕರಣಗಳನ್ನು ತಕ್ಷಣವೇ ಹಿಂಪಡೆಯಬೇಕು.
8. ರೈತ ಚಳವಳಿಯಲ್ಲಿ ಹುತಾತ್ಮರಾದ ಎಲ್ಲಾ ರೈತರ ಕುಟುಂಬಗಳಿಗೆ ಪರಿಹಾರ ನೀಡಬೇಕು ಮತ್ತು ಹುತಾತ್ಮರ ಕುಟುಂಬದ ಪುನರುಜ್ಜೀವನಕ್ಕೆ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಸಿಂಘು ಗಡಿಯಲ್ಲಿ ಹುತಾತ್ಮ ರೈತರ ಸ್ಮಾರಕ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡಬೇಕು.

Leave a Reply