ಬಜಾಲ್ ಜಲ್ಲಿಗುಡ್ಡೆಯಲ್ಲಿ ಸಿಐಟಿಯು ಶ್ರಮಶಕ್ತಿ ಕೇಂದ್ರ ಉದ್ಘಾಟನೆ
ಮಂಗಳೂರು: ದೇಶದಾದ್ಯಂತ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಸಿಐಟಿಯು ಬಂಡವಾಳಶಾಹಿಗಳ ಶೋಷಣೆ ವಿರುದ್ಧ ಹಲವು ರಾಜಿರಹಿತ ಹೋರಾಟಗಳನ್ನು ನಡೆಸುವ ಮೂಲಕ ಕಾರ್ಮಿಕ ವರ್ಗಕ್ಕೆ ಅವರ ಶ್ರಮದ ಹಕ್ಕನ್ನು ಪಡೆದುಕೊಳ್ಳುವಲ್ಲಿ ಸಫಲವಾಗಿದೆ ಎಂದು ಕಟ್ಟಡ ಕಾರ್ಮಿಕರ ಸಂಘಟನೆಯ ಮುಖಂಡ ದಿನೇಶ್ ಶೆಟ್ಟಿ ಹೇಳಿದರು.
ಬಜಾಲ್ ಜಲ್ಲಿಗುಡ್ಡೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರಮಶಕ್ತಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರಕಾರಗಳಿಂದ ಹಲವು ಸವಲತ್ತುಗಳನ್ನು ತೆಗೆಸಿಕೊಡುವಲ್ಲಿ ಮಹತ್ತರ ಪಾತ್ರವಹಿಸಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ಹಲವು ದಶಕಗಳಿಂದಲೂ ಜಿಲ್ಲೆಯಲ್ಲಿ ನಡೆದ ಕಾರ್ಮಿಕರ ಚಳುವಳಿಗೆ ಬಜಾಲ್ ಗ್ರಾಮದ ಕಾರ್ಮಿಕ ಮುಖಂಡರು ನೀಡಿದ ಕೊಡುಗೆ ಅಪಾರ. ಆ ಕೊಡುಗೆ ಭಾಗವಾಗಿ ಈ ಬಜಾಲ್ ಗ್ರಾಮದಲ್ಲಿ ಪಂಚಾಯತ್ ಕಾಲದಿಂದ ಮಾತ್ರವಲ್ಲದೆ ಪಾಲಿಕೆ ಅವಧಿಯಲ್ಲಿಯೂ ಈ ಗ್ರಾಮದ ಜನ ನಮ್ಮ ಸಂಘಟನೆಯನ್ನು ಪ್ರತಿನಿಧಿಸಿದ ಜನಪ್ರತಿನಿಧಿಗಳನ್ನು ಆರಿಸಿ ಕಳುಹಿಸಿದ ಕೀರ್ತಿ ಬಜಾಲ್ ಗ್ರಾಮದ ಜನತೆಗಿದೆ. ಈ ಭಾಗದ ಕಾರ್ಮಿಕರ ಸವಲತ್ತುಗಳನ್ನು ಒದಗಿಸಿಕೊಡಲು ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕೇಂದ್ರವಾಗಿ ಈ ಕಚೇರಿ ಕಾರ್ಯಚರಣೆ ನಡೆಸಲಿದೆ ಎಂದರು.
ವೇದಿಕೆಯಲ್ಲಿ ಸಿಐಟಿಯು ರಾಜ್ಯ ಮುಖಂಡ ಜೆ ಬಾಲಕೃಷ್ಣ ಶೆಟ್ಟಿ, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಡಿವೈಎಫ್ಐ ಮುಖಂಡ ದೀಪಕ್ ಬಜಾಲ್, ಡಿವೈಎಫ್ಐ ನಗರ ಅಧ್ಯಕ್ಷ ಜಗದೀಶ್ ಬಜಾಲ್, ಬಜಾಲ್ ಕಾರ್ಮಿಕ ಸಂಘಟನೆಯ ಮುಖಂಡ ಮೋಹನ್ ಜಲ್ಲಿಗುಡ್ಡೆ, ಜಯಪ್ರಕಾಶ್ ಜಲ್ಲಿಗುಡ್ಡೆ, ರೋಹಿಣಿ ಜಲ್ಲಿಗುಡ್ಡೆ, ಗೀತಾ ಜಲ್ಲಿಗುಡ್ಡೆ, ಮಮತಾ ಜಲ್ಲಿಗುಡ್ಡೆ, ಕೇಶವ ಭಂಡಾರಿ, ಅಶೋಕ್ ಸಾಲ್ಯಾನ್ , ಲತೀಫ್ ಜಲ್ಲಿಗುಡ್ಡೆ, ಇಕ್ಬಾಲ್, ಸದಾಶಿವ ನಾಯಕ್, ದೀಕ್ಷಿತಾ ಜಲ್ಲಿಗುಡ್ಡೆ ಮುಂತಾದವರು ಉಪಸ್ಥಿತರಿದ್ದರು.




