ರಾಯಚೂರು: ಕರ್ನಾಟಕ ರೈತ ಸಂಘ (AIKKS)ದ ನೇತೃತ್ವದಲ್ಲಿ ದಿನಾಂಕ 30-08-2023 ರಿಂದ ಸಿಂಧನೂರ ತಾಲೂಕಿನ ಸಾಲಗುಂದ ಹೊಬಳಿಯ ಸೋಮಲಾಪುರ ಗ್ರಾಮದ (ಬೂದಿವಾಳ ಕ್ಯಾಂಪ್) ಸಂ.ನಂ.71/*/ಹಿಸ್ಸಾ 3 ಸರ್ಕಾರಿ ಭೂಮಿಯಲ್ಲಿ ಬಡವರಿಗೆ ನಿವೇಶನ ಹಂಚಿಕೆಗೆ ಒತ್ತಾಯಿಸಿ ಆರಂಭವಾಗಿರುವ ಧರಣಿ ಸತ್ಯಾಗ್ರಹ 6ನೇ ದಿನಗಳಲ್ಲಿ ಮುಂದುವರೆದಿದೆ.
ಸತತ ಎರಡು ದಿನ ಹೋರಾಟದ ಸ್ಥಳಕ್ಕೆ ಬಂದಿದ್ದ ತಹಶೀಲ್ದಾರ್ ಅರುಣ್ ಕುಮಾರ್ ದೇಸಾಯಿ, ಡಿ.ವೈ.ಎಸ್.ಪಿ ಬಿ.ಎಸ್ ತಳವಾರ್, ಸರ್ಕಲ್ ಇನ್ಸಪೆಕ್ಟರ್ ರವಿಕುಮಾರ್ ಕಪ್ಪತ್ತನವರ, ಪಿಎಸ್ಐ ಭರತ ಪ್ರಕಾಶ್ ಇವರು ಮಾತಕತೆ ನಡೆಸಿದರು. ಎರಡು ದಿನಗಳ ನಂತರ ಭೂ ಪ್ರಕರಣದ ಕುರಿತು ಸಭೆ ನಡೆಸಿ ನಿವೇಶನ ಹಂಚಿಕೆಯ ಬೇಡಿಕೆಯನ್ನು ಪರಿಹರಿಸುವುದಾಗಿ ಹೇಳಿದರು. ಆದರೆ ಪಟ್ಟು ಬಿಡದ ನಿರಾಶ್ರಿತ ಮಹಿಳೆಯರು ಮತ್ತು ಸಂಘಟನೆಯ ಮುಂಚೂಣಿ ಸಂಗಾತಿಗಳು ಜಿಲ್ಲಾಧಿಕಾರಿಗಳು ಬರುವವರಿಗೆ ಧರಣಿ ಮುಂದುವರಿಯುತ್ತದೆ ಎಂದು ಪಟ್ಟು ಹಿಡಿದಿದ್ದಾರೆ. ಜನರು ಗುಡಿಸಲು ಹಾಕುವುದನ್ನು ತಡೆಯಲು ಬಂದ ಪೋಲೀಸ್ ಅಧಿಕಾರಿಗಳು ಮತ್ತು ಜನರ ಮಧ್ಯ ಮಾತಿನ ಚಕಮಕಿ ಕೂಡ ನಡೆದಿದೆ.




