ಎರಡು ಘಟನೆಗಳು – ಜಾತಿ, ಜಾತಿ ಮತ್ತು ಜಾತಿ….

2 years ago

ಘಟನೆ 1: 2020ರ ಸಂದರ್ಭ. ಹರಿಹರದಲ್ಲಿ ಹರಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ಭಾಗಿಯಾಗಿದ್ದರು. ವೇದಿಕೆ ಮೇಲೆ ಅವರ ಜೊತೆಗೆ ಒಂದಷ್ಟು ಸ್ವಾಮೀಜಿಗಳೂ ಆಸೀನರಾಗಿದ್ದರು. ಅವರ ಪೈಕಿ ಲಿಂಗಾಯತ ಪಂಚಮಸಾಲಿ ಸಮುದಾಯದ ವಚನಾನಂದ ಸ್ವಾಮೀಜಿ ತಮ್ಮ ಭಾಷಣದ ನಡುವೆ “ಪಂಚಮಸಾಲಿ ಸಮುದಾಯಕ್ಕೆ ನಿಮ್ಮ ಸಂಪುಟದಲ್ಲಿ ಮೂರು ಸಚಿವ ಸ್ಥಾನ ಕೊಡದೇ ಇದ್ದರೆ ಸಮುದಾಯದವರು ನಿಮಗೆ ನೀಡಿರುವ ಬೆಂಬಲವನ್ನು ಹಿಂಪಡೆಯುತ್ತೇವೆ, ರಾಜಕೀಯವಾಗಿ ನಿಮ್ಮ ಕೈಬಿಡುತ್ತೇವೆ” ಎಂದು ಅಕ್ಷರಶಃ ಬೆದರಿಕೆ ರೂಪದ ಮನವಿ ಮುಂದಿಟ್ಟರು. ಕೂಡಲೇ ಯಡಿಯೂರಪ್ಪ, ತಮ್ಮ ಸ್ಥಿಮಿತ ಕಳೆದುಕೊಂಡು ಕುರ್ಚಿಯಿಂದ ಎದ್ದು ನಿಂತು, ಜನರೆದುರೇ ಆ ಸ್ವಾಮಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. “ಒಬ್ಬ ಸ್ವಾಮೀಜಿಯಾಗಿ ನೀವು ಹೀಗೆಲ್ಲ ರಾಜಕಾರಣವನ್ನು ಬೆದರಿಕೆಯ ರೂಪದಲ್ಲಿ ಮಾತಾಡಬಾರದು” ಎಂದು ಸಿಟ್ಟಿನಲ್ಲೇ ರೇಗಿದರು.

ಘಟನೆ 2: 2024 ಜೂನ್ 27. ಕೆಂಪೇಗೌಡ ಜಯಂತಿಯ ಸಾರ್ವಜನಿಕ ಕಾರ್ಯಕ್ರಮ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಾಗಿಯಾಗಿದ್ದರು. ಒಕ್ಕಲಿಗ ಸಮುದಾಯದ ಮುಖಂಡರು, ಮಠಾಧೀಶರೂ ಉಪಸ್ಥಿತರಿದ್ದರು. ಅವರ ಪೈಕಿ ಒಕ್ಕಲಿಗ ಪೀಠದ ಚಂದ್ರಶೇಖರ ಸ್ವಾಮಿಗಳು ಸಿದ್ದರಾಮಯ್ಯನವರನ್ನು ಉದ್ದೇಶಿಸಿ, “ನೀವು ನಿಮ್ಮ ಸಿಎಂ ಸ್ಥಾನವನ್ನು ನಮ್ಮ ಡಿ ಕೆ ಶಿವಕುಮಾರರಿಗೆ ಬಿಟ್ಟುಕೊಟ್ಟು ಆಶೀರ್ವಾದ ಮಾಡಬೇಕು” ಎಂಬ ಮನವಿ ರೂಪದ ಹಕ್ಕೊತ್ತಾಯವನ್ನು ಮುಂದಿಟ್ಟರು. ಇದಕ್ಕೆ ಯಾವುದೇ ತೀಕ್ಷ್ಣ ಪ್ರತಿಕ್ರಿಯೆ ಕೊಡದೆ “ಎಲ್ಲ ವಿಚಾರಗಳ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ. ಆ ತೀರ್ಮಾನದಂತೆ ನಾವು ನಡೆದುಕೊಳ್ಳುತ್ತೇವೆ” ಎಂದು ಸಿದ್ದರಾಮಯ್ಯನವರು ಸೌಮ್ಯವಾಗಿ ಸ್ಪಂದಿಸಿದರು.

*******

ಹೆಚ್ಚೂಕಮ್ಮಿ ಈ ಎರಡೂ ಘಟನೆಗಳಲ್ಲಿ ಬಹಳಷ್ಟು ಸಾಮ್ಯತೆಗಳಿವೆ. ಒಬ್ಬ ರಾಜಕಾರಣಿ, ಒಬ್ಬ ಸ್ವಾಮೀಜಿ, ಒಂದು ನಿರ್ದಿಷ್ಟ ಜಾತಿಯ ಪ್ರಭಾವ ಹಾಗೂ ಅಧಿಕಾರಕ್ಕಾಗಿ ಸಾರ್ವಜನಿಕ ಹಕ್ಕುಮಂಡಣೆ… ಇವು ಈ ಘಟನೆಗಳ ಕಾಮನ್ ಫ್ಯಾಕ್ಟರ್ ಗಳು. ಆದರೆ ಅನ್-ಕಾಮನ್ ಫ್ಯಾಕ್ಟರ್ ಎಂದರೆ ಇಂತಹ ಪರಿಸ್ಥಿತಿಗೆ ಆ ಇಬ್ಬರು ಮುಖ್ಯಮಂತ್ರಿಗಳು ಪ್ರತಿಕ್ರಿಯಿಸಿದ ರೀತಿ! ಯಡಿಯೂರಪ್ಪ ಸಿಡಿಮಿಡಿಗೊಂಡರು. ಸಿದ್ದರಾಮಯ್ಯನವರು ಸೌಮ್ಯವಾಗಿ ಪ್ರತಿಕ್ರಿಯಿಸಿದರು. ಯಡಿಯೂರಪ್ಪನವರ ಪ್ರತಿಕ್ರಿಯೆ ಅವರದೇ ಆಯ್ಕೆಯಾಗಿತ್ತು. ಆದರೆ ಸಿದ್ದರಾಮಯ್ಯನವರ ಪ್ರತಿಕ್ರಿಯೆ ಅವರ ಆಯ್ಕೆಯಾಗಿರಲಿಲ್ಲ; ಬದಲಿಗೆ, ಜಾತಿ ಎಂಬ ವಿಷಕಾರಿ ವ್ಯವಸ್ಥೆ ಒಬ್ಬ ಸ್ವಾಭಿಮಾನಿ ವ್ಯಕ್ತಿಯ ವರ್ತನೆಯ ಮೇಲೆ ಹೇರಿದ ಅನಿವಾರ್ಯತೆಯಾಗಿತ್ತು.

ಯೋಚಿಸಿ ನೋಡಿ, ಯಡಿಯೂರಪ್ಪನವರಂತೆ ಸಿದ್ದರಾಮಯ್ಯನವರು ಕೂಡಾ ವೇದಿಕೆಯಲ್ಲೆ ಎದ್ದು ನಿಂತು ಅಂತಹ ಅಸಂಬದ್ಧ ಮಾತಾಡಿದ ಸ್ವಾಮೀಜಿಯನ್ನು ತರಾಟೆಗೆ ತೆಗೆದುಕೊಂಡಿದ್ದರೆ ಏನಾಗುತ್ತಿತ್ತು?

ಯಡಿಯೂರಪ್ಪನವರು ತಮ್ಮ ವರ್ತನೆಯನ್ನು ನಿಭಾಯಿಸಿಕೊಂಡಷ್ಟು ಸಲೀಸಾಗಿ ಸಿದ್ದರಾಮಯ್ಯನವರು ನಿಭಾಯಿಸಿಕೊಳ್ಳಲು ಸಾಧ್ಯವಿತ್ತೇ? ಖಂಡಿತ ಇಲ್ಲ, ಯಾಕೆಂದರೆ ಯಡಿಯೂರಪ್ಪನವರ ಬೆನ್ನಿಗೆ ದೊಡ್ಡ ಜಾತಿಯ ಬೆಂಬಲವಿದೆ. ಆದರೆ ಸಿದ್ದರಾಮಯ್ಯನವರು ಹಿಂದುಳಿದ ಜಾತಿಯವರು.

ಸಿದ್ದರಾಮಯ್ಯನವರ ನಿಷ್ಠುರ ವರ್ತನೆಯನ್ನು ಹತ್ತಿರದಿಂದ ಬಲ್ಲ ಎಂತವರಿಗೇ ಆದರೂ, ಅವರು ಇಂತಹ ಅಸಂಬದ್ಧಕಾರಿ ಪ್ರಲಾಪಗಳಿಗೆ ಎಷ್ಟು ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತಾರೆ ಅನ್ನೋದು ಚೆನ್ನಾಗಿ ಗೊತ್ತು. ಒಬ್ಬ ಸ್ವಾಭಿಮಾನಿಯಾದವನಿಗೆ ಅಷ್ಟು ಮಾತ್ರ ಸಿಟ್ಟು ನೆತ್ತಿಗೇರಿಯೇ ತೀರುತ್ತೆ. ವ್ಯಕ್ತಿತ್ವ ಮತ್ತು ಬದ್ಧತೆಯ ಆಯಾಮದಿಂದ ನೋಡಿದಾಗ, ಹಾಗೆ ಮಾತಾಡಿದ ಸ್ವಾಮೀಜಿಯ ವಿರುದ್ಧ ವೇದಿಕೆಯಲ್ಲೆ ತರಾಟೆಗೆ ತೆಗೆದುಕೊಳ್ಳುವ ಎಲ್ಲಾ ಅರ್ಹತೆಗಳು ಸಿದ್ದರಾಮಯ್ಯನವರ ಬಳಿ ಇದ್ದವು. ಆದರೆ ಅವರ ಅಂತಹ ಸಹಜ ವರ್ತನೆಯ ಮೇಲೆ ತಡೆ ಹೇರಿದ್ದು ಜಾತಿ! ಅಂತಹ ತಡೆ ಯಡಿಯೂರಪ್ಪನವರ ಮೇಲೆ ಇರಲಿಲ್ಲ, ಹಾಗಾಗಿ ಅವರು ಸಲೀಸಾಗಿ ಸ್ವಾಮೀಜಿಯನ್ನು ತರಾಟೆಗೆ ತೆಗೆದುಕೊಂಡರು.

ಸಮಾನತೆ ಆಶಯದ ಸಂವಿಧಾನ ಅನುಷ್ಠಾನಗೊಂಡು ಎಪ್ಪತ್ನಾಲ್ಕು ವರ್ಷಗಳು ಕಳೆದರೂ, ಈಗಲೂ ಫ್ಯೂಡಲ್ ಮನಸ್ಥಿತಿಯ ಮೇಲ್ಜಾತಿಗಳು ಹಿಂದುಳಿದ, ದಲಿತ ಸಮುದಾಯದವರ ವ್ಯಕ್ತಿತ್ವನ್ನು ಹೇಗೆ ಪರೋಕ್ಷವಾಗಿ ನಿಯಂತ್ರಿಸುತ್ತಿವೆ ಅನ್ನೋದಕ್ಕೆ ಸಿದ್ದರಾಮಯ್ಯನವರ ಆ ತಣ್ಣನೆಯ ವರ್ತನೆಯೇ ಸಾಕ್ಷಿ. ಮುಖ್ಯಮಂತ್ರಿ ಸ್ಥಾನದಲ್ಲಿ ಕೂತಿರುವ ಸಿದ್ದರಾಮಯ್ಯನವರಂತಹ ವ್ಯಕ್ತಿಯನ್ನೇ ಹೀಗೆ ಅಸಹಾಯಕಗೊಳಿಸುವ ತಾಕತ್ತು ಮೇಲ್ಜಾತಿಗಳಿಗೆ ಇವತ್ತಿಗೂ ಉಳಿದುಕೊಂಡಿದೆಯೆಂದರೆ, ಧ್ವನಿಯೇ ಇಲ್ಲದ ಸಣ್ಣಪುಟ್ಟ ಜಾತಿಗಳ ಸಾಮಾನ್ಯ ವ್ಯಕ್ತಿಗಳ ಕಥೆಯೇನು?

‘ಈಗಿನ ಕಾಲದಲ್ಲಿ ಎಲ್ಲಿದೇರಿ ಜಾತಿ?’ ಎನ್ನುವ ಸಿನಿಕ ಮಹಾಶಯರಿಗೆ ಇದೆಲ್ಲ ಅರ್ಥವಾಗುವುದಿಲ್ಲ ಬಿಡಿ…

– ಮಾಚಯ್ಯ ಎಂ ಹಿಪ್ಪರಗಿ, ರಾಜಕೀಯ ವಿಶ್ಲೇಷಕರು

Leave a Reply