ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ವಿಷಯವಾಗಿ ಬಿಜೆಪಿಯಲ್ಲಿ ಉಂಟಾಗಿರುವ ಗೊಂದಲ ಮತ್ತು ಬಿಕ್ಕಟ್ಟು ಇನ್ನೂ ಬಗೆ ಹರಿದಿಲ್ಲ.
ಕೊಪ್ಪಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನನಗೇ ನೀಡಬೇಕು ಎಂದು ಪಟ್ಟು ಹಿಡಿದಿರುವ ಸಂಸದ ಸಂಗಣ್ಣ ಕರಡಿ ಇದಕ್ಕಾಗಿ ಹೈಕಮಾಂಡ್ ಒಂದು ದಿನದ ಗಡುವು ನೀಡಿದ್ದಾರೆ.
ಕೊಪ್ಪಳದಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರ ಸಭೆ ನಡೆಸಿದ, ಸಂಗಣ್ಣ ಕರಡಿ ಟಿಕೆಟ್ ಗಾಗಿ ಇವತ್ತು ಒಂದು ದಿನ ಕಾದು ಮುಂದಿನ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದ್ದಾರೆ.
ಬಿಜೆಪಿ ಟಿಕೆಟ್ ನೀಡದಿದ್ದರೆ ಪಕ್ಷೇತರ ಅಥವಾ ಜೆಡಿಎಸ್‌ನಿಂದ ಸ್ಪರ್ಧೆ ಮಾಡಬೇಕು ಎಂದು ಅವರ ಬೆಂಬಲಿಗರು ಹಾಗೂ ಹಿತೈಷಿಗಳು ಸಭೆಯಲ್ಲಿ ಒಕ್ಕೊರಲಿನಿಂದ ಆಗ್ರಹಿಸಿದರು. ಇದಕ್ಕೆ ಸಹಮತ ವ್ಯಕ್ತಪಡಿಸಿದ ಅವರು ಟಿಕೆಟ್ ವಿಚಾರದಲ್ಲಿ ಬಿಜೆಪಿ ಏನು ತೀರ್ಮಾನ ಕೈಗೊಳ್ಳುತ್ತದೆ ಎನ್ನುವುದನ್ನು ನೋಡಿಕೊಂಡು ಮುಂದಿನ ನಡೆ ನಿರ್ಧಾರ ಮಾಡುತ್ತೇನೆ ಎಂದು ಘೋಷಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಫೋನ್ ಕರೆ ಮಾಡಿ ಆತುರದ ತೀರ್ಮಾನ ಕೈಗೊಳ್ಳಬೇಡಿ ಎಂದು ಹೇಳಿದರು. ಹೀಗಾಗಿ ಅವರ ಮಾತಿಗೆ ಮನ್ನಣೆ ನೀಡಿ ಒಂದು ದಿನ ಕಾದು ನೋಡಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.
ಪಕ್ಷದ ನಾಯಕರ ಮೇಲೆ ಭರವಸೆಯಿಟ್ಟು ಟಿಕೆಟ್ ನನಗೇ ಸಿಗುತ್ತದೆ ಎಂದು ಗಟ್ಟಿಯಾಗಿ ನಂಬಿಕೊಂಡಿದ್ದೇನೆ. ಒಂದು ವೇಳೆ ಪಕ್ಷ ನನ್ನ ಆಸೆಗೆ ವಿರುದ್ಧವಾಗಿ ನಡೆದುಕೊಂಡರೆ ಕಾರ್ಯಕರ್ತರ ಜೊತೆ ತೀರ್ಮಾನಿಸಿದಂತೆ ಪಕ್ಷೇತರ ಆಥವಾ ಯಾವುದಾದರೂ ಪಕ್ಷದಿಂದ ಸ್ಪರ್ಧೆ ಮಾಡುತ್ತೇನೆ. ಸ್ಪರ್ಧೆಯಂತೂ ನಿಶ್ಚಿತ ಎಂದು ಸ್ಪಷ್ಟಪಡಿಸಿದರು.
ನನಗೆ ಟಿಕೆಟ್ ನೀಡಿದರೆ ಪಕ್ಷ ಗೆಲುವು ಸಾಧಿಸುತ್ತದೆ. ಪಕ್ಷದ ಬಲವರ್ಧನೆಯೂ ಆಗುತ್ತದೆ ಎನ್ನುವುದನ್ನು ವರಿಷ್ಠರಿಗೆ ತಿಳಿಸಿದ್ದೆ. ಆದ್ದರಿಂದ ನನಗೆ, ಸಂಸದರಾದ ಪಿ.ಸಿ. ಮೋಹನ್ ಮತ್ತು ರಮೇಶ ಜಿಗಜಿಣಗಿ ಅವರಿಗೆ ಟಿಕೆಟ್ ನೀಡಲು ನಿರ್ಧಾರವಾಗಿತ್ತು. ಬಳಿಕ ನಿರ್ಧಾರ ಬದಲಿಸಿದ ವರಿಷ್ಠರು ಸಂಸದರು ಹಾಗೂ ಅವರ ಕುಟುಂಬದವರಿಗೆ ಟಿಕೆಟ್ ನೀಡುವುದಿಲ್ಲ ಎಂದರು. ಆದ್ದರಿಂದ ಬೇಸರವಾಗಿದೆ ಎಂದು ನೋವು ತೋಡಿಕೊಂಡರು.
ಪಂಚಮಸಾಲಿ ಸಮುದಾಯದ ವ್ಯಕ್ತಿಗೆ ಟಿಕೆಟ್ ನೀಡುತ್ತೇವೆ ಎಂದು ವರಿಷ್ಠರು ಹೇಳಿದಾಗ ಖುಷಿಯಾಯಿತು. ಆದರೆ, ಆ ಸಮಾಜದ ವ್ಯಕ್ತಿಯನ್ನು ಸೂಚಿಸಿ ಎಂದು ನನ್ನನ್ನು ಕೇಳಲಿಲ್ಲ. ಪಂಚಮಸಾಲಿ ಸಮುದಾಯದ ನಾಯಕನಾದ ನನಗೆ ಸಮಾಜದಿಂದ ಅಭ್ಯರ್ಥಿ ಹೆಸರು ಹೇಳು ಎಂದಿದ್ದರೆ ನಾನೇ ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಿ ತಿಳಿಸುತ್ತಿದ್ದೆ. ನನಗೆ ಗೊತ್ತಿಲ್ಲದೆ ಪಕ್ಷದ ಹಲವರು ನಮ್ಮ ಸಮಾಜದದ ಪ್ರಮುಖರನ್ನು ಸಂಪರ್ಕಿಸಿದ್ದು ಬೇಸರ ಮೂಡಿಸಿದೆ ಎಂದರು.
‘ಇನ್ನೊಬ್ಬ ಟಿಕೆಟ್ ಆಕಾಂಕ್ಷಿಯಾದ ಸಿ.ವಿ. ಚಂದ್ರಶೇಖರ್ ನನಗೆ ಫೋನ್ ಕರೆ ಮಾಡಿ ನೀವು ನನ್ನ ಹೆಸರು ಸೂಚಿಸಿದರೆ ಪಕ್ಷ ಟಿಕೆಟ್ ಕೊಡುತ್ತದೆ ಎಂದರು. ಆದರೆ, ಪಕ್ಷ ಈಗಾಗಲೇ ಪಂಚಮಸಾಲಿ ಸಮುದಾಯದ ವ್ಯಕ್ತಿಗೇ ಟಿಕೆಟ್ ನೀಡಲು ನಿರ್ಧರಿಸಿದೆ. ಈ ವೇಳೆಯಲ್ಲಿ ನಿಮ್ಮ ಹೆಸರು ಹೇಳಿದರೆ ನನ್ನ ಸಮಾಜದ ಜನ ತಿರುಗಿ ಬೀಳುತ್ತಾರೆ. ಯಾವುದೇ ಕಾರಣಕ್ಕೂ ನಿಮ್ಮ ಹೆಸರು ಹೇಳುವುದಿಲ್ಲ ಎಂದು ಉತ್ತರಿಸಿದ್ದೇನೆ’ ಎಂದರು.




