ತಿಳಿಯದೋ ನಿನ್ನಾಟ ಪಿಚ್ಚಳ್ಳೇಶ…!

2 years ago

“ಗುರುವೇ ನಿನ್ನಾಟ ಬಲ್ಲವರು ಯಾರ್ಯಾರೋ..
ಶಿವನೇ ನಿನ್ನಾಟ ಬಲ್ಲವರಾರ್ಯಾರೋ… ?”
ಎಂಬ ಜಾನಪದೀಯ ಅನುಭಾವಿಕ ತತ್ವಪದವನ್ನು ಮೊದಲಿಗೆ ಹಾಡಿ ಜನಪ್ರಿಯಗೊಳಿಸಿದ ಕೀರ್ತಿ ರಾಜ್ಯೋತ್ಸವ ಪ್ರಶಸ್ತಿ ಒಳಗೊಂಡಂತೆ ಹಲವಾರು ಪ್ರಶಸ್ತಿ ಬಿರುದು ಸಮ್ಮಾನಗಳಿಂದ ಪುರಸ್ಕೃತರಾದ ಮಂಡ್ಯ ತಾಲೂಕು ಬಸರಾಳು ಗ್ರಾಮದ  ತಂಬೂರಿ ಜವರಯ್ಯ ಮತ್ತು ಅವರ ಮಡದಿ ಶ್ರೀಮತಿ ಭೋರಮ್ಮ  ಅವರಿಗೆ ಸಲ್ಲುತ್ತದೆ.

ಅವರು ಹಾಡುತ್ತಿದ್ದ ಈ ತತ್ವಪದದಲ್ಲಿ ಕುಂಬಾರ ಗುಂಡಯ್ಯ, ಕುರುಬರ ಬೀರಯ್ಯ, ಒಕ್ಕಲಿಗರ ಮುದ್ದಣ್ಣ, ಮಾದಾರ ಚೆನ್ನಯ್ಯ, ಸಮಗಾರ ಹರಳಯ್ಯ, ಮಡಿವಾಳ ಮಾಚಯ್ಯ, ಹೊಲೆಯರ ಹೊನ್ನಯ್ಯ ಇನ್ನೂ ಮುಂತಾದ ಶರಣರ ಹೆಸರುಗಳು ಕಡ್ಡಾಯವಾಗಿ ಉಲ್ಲೇಖವಾಗುತ್ತಿದ್ದವು. ಆದರೆ ಈಗಿನ ಕೆಲವು ಗಾಯಕರು ತಮಗೆ ಮನಬಂದ ಹೆಸರುಗಳನ್ನು ಸೇರಿಸಿ ಅಥವಾ ಕೈಬಿಟ್ಟು ಹಾಡುವ ವಿದ್ಯಮಾನಗಳನ್ನು ನಾನು ಗಮನಿಸುತ್ತಿದ್ದೇನೆ. ಕೆಲವು ಗಾಯಕರಂತೂ ಮೂಲ ಜಾನಪದ ಸಂಗೀತದ ಮಟ್ಟುಗಳಿಗೆ ವಿರುದ್ಧವಾಗಿ ಈ ತತ್ವಪದವನ್ನು ‘ಜಿಂಗ್ ಚಕ್ಕಾ ಜಿಂಗ್’ ಕುಣಿತದ ವಿಕೃತ ಧಾಟಿಗೆ ಹೊಯ್ದು‌ ಮುಟ್ಟಿಸಿ ಹಾಡುತ್ತಿದ್ದಾರೆ.

ತಂಬೂರಿ ಜವರಯ್ಯ, ಭೋರಮ್ಮ

ಇಲ್ಲಿ ನಾನು ಪ್ರಸ್ತಾಪಿಸಲು ಬಯಸುವ ವಿಷಯವೇನೆಂದರೆ, ಸರ್ಕಾರ ಮತ್ತು ಸಂಘಸಂಸ್ಥೆಗಳಿಂದ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ  ಸಾವಿರಾರು ಜನರೆದುರು, ಪಿಚ್ಚಳ್ಳಿ ಶ್ರೀನಿವಾಸ್ ಅವರು “ಗುರುವೇ ನಿನ್ನಾಟ ಬಲ್ಲವರ್ ಯಾರ್ಯಾರೋ” ಮತ್ತು “ಭಿನ್ನ ಭೇದವ ಮಾಡಬ್ಯಾಡಿರಿ” ಎಂಬ ಪದಗಳನ್ನು ಹಾಡುತ್ತಾ ಬಂದಿದ್ದಾರೆ. ಅತ್ಯಂತ ಉತ್ಸಾಹದಿಂದ, ಜಾತ್ಯತೀತ ಸಂವೇದನೆಯನ್ನು ಪ್ರಚೋದಿಸುವ ಉತ್ಕರ್ಷ ಭಾವದಲ್ಲಿ ಹಾಡುತ್ತಾ ಬಂದಿರುವ “ಗುರುವೇ ನಿನ್ನಾಟ ಬಲ್ಲವರಾರ್ಯಾರೋ…”, “ಭಿನ್ನ ಭೇದವ ಮಾಡಬ್ಯಾಡಿರಿ” ಈ ಪದಗಳಲ್ಲಿ , ಮಾದಾರ ಚೆನ್ನಯ್ಯನ ಮನೆಯಲ್ಲಿ ಶಿವ ಅಂಬಲಿ ಕುಡಿದ ಹಾಗೂ ಮಾದಿಗರ ಮನೆಯಲ್ಲಿ ಬೆಕ್ಕು ಬಾಡು ತಿನ್ನುವ ವಾಕ್ಯಗಳನ್ನು ಹಾಡದೇ, ಈ ಪದಗಳ ಉಳಿದ ಭಾಗಗಳನ್ನು ಪಿಚ್ಚಳ್ಳಿ ಶ್ರೀನಿವಾಸ್ ಅತ್ಯಂತ ಸೊಗಸಾಗಿ ಪ್ರಸ್ತುತಪಡಿಸುತ್ತಾ ಬಂದಿದ್ದಾರೆ. ಇಂತಹ ಸಾಂಸ್ಕೃತಿಕ ಪ್ರಮಾದ ಸಲ್ಲದೆಂದು ಪಿಚ್ಚಳ್ಳಿ ಶ್ರೀನಿವಾಸ  ಅವರಿಗೆ ನಾನು ಹಿಂದೆಯೇ ಎರಡು ಬಾರಿ ಮನವರಿಕೆ ಮಾಡಿಕೊಟ್ಟಿದ್ದೇನೆ. ಹರಿಹರ ಕವಿಯ “ಮಾದಾರ ಚೆನ್ನಯ್ಯನ ರಗಳೆ”ಯ ಆಶಯವನ್ನು ಕೂಡಾ ವಿವರಿಸಿ ಹೇಳಿದ್ದೇನೆ. ಇಷ್ಟಾದರೂ ಪಿಚ್ಚಳ್ಳಿ ಶ್ರೀನಿವಾಸ ಹೀಗೇಕೆ ಪದೇ ಪದೇ ತಪ್ಪು ಎಸಗುತ್ತಿರುವರೋ…ತಿಳಿಯದೋ ನಿನ್ನಾಟ ಪಿಚ್ಚಳ್ಳೇಶ !

ಪಿಚ್ಚಳ್ಳಿ ಶ್ರೀನಿವಾಸ್

ಹರಿಹರ ಕವಿಯ ‘ಮಾದಾರ ಚೆನ್ನಯ್ಯನ ರಗಳೆ’ ಕಾವ್ಯವು ಅನೇಕ ಜಾನಪದ ರಚನೆಗಳಿಗೂ ಜೀವದ್ರವ್ಯವನ್ನೆರೆದಿದೆ. ಚೋಳ ದೇಶದ ಕರಿಕಾಳ ಚೋಳ ರಾಜ ಅನನ್ಯ ಶಿವಭಕ್ತ. ಶಿವನಿಗೆ ಮೃಷ್ಟಾನ್ನ ಭೋಜನವನ್ನೇ  ನೈವೇದ್ಯಕ್ಕೆ ಇಡುತ್ತಿದ್ದನು. ಅವನ ಕುದುರೆಗೆ ಜೀನನ್ನು ಹೊಲಿದು ಮೇವನ್ನು ತಂದು ಹಾಕುತ್ತಿದ್ದ ಮಾದಾರ ಚೆನ್ನಯ್ಯ ಶಿವನ ಗುಪ್ತಭಕ್ತನಾಗಿದ್ದ. ಒಂದು ದಿನ ಶಿವನು ಪಾರ್ವತಿ ಸಮೇತನಾಗಿ ಚೆನ್ನಯ್ಯನ ಮನೆಗೆ ಆಗಮಿಸಿ ಸವಿಯಾದ ಅಂಬಲಿಯನ್ನು ಸವಿದ. ಚೋಳರಾಜನ ನೈವೇದ್ಯವನ್ನು ಆ ದಿನ ಶಿವನು ಸ್ವೀಕರಿಸದಿದ್ದಾಗ ರಾಜ ಕತ್ತಿಯಲ್ಲಿ ತನ್ನ ಕತ್ತು ಕೊಯ್ದುಕೊಳ್ಳಲು ಸಿದ್ಧನಾದ. ಆಗ ಪ್ರತ್ಯಕ್ಷನಾದ ಶಿವನು, ‘ನಾನು ಚೆನ್ನಯ್ಯನ ಮನೆಯಲ್ಲಿ ಅಂಬಲಿ ಸವಿದಿರುವುದೇ, ನಿನ್ನ ಮನೆಯಲ್ಲಿ ನೈವೇದ್ಯ  ಸ್ವೀಕರಿಸದಿರಲು  ಕಾರಣ” ಎಂದು ಹೇಳಿ, ಚೆನ್ನಯ್ಯನ  ಗುಪ್ತಭಕ್ತಿಯನ್ನು ಪ್ರಚುರಪಡಿಸುತ್ತಾನೆ.

ಮಾದಾರ ಚನ್ನಯ್ಯ

ಶಿವನಿಗೆ ಅಂಬಲಿ ಉಣಬಡಿಸಿ ತೃಪ್ತಿಪಡಿಸಿದ ಚೆನ್ನಯ್ಯನನ್ನು ನೋಡಲೆಂದು ಚೋಳ ರಾಜನು ಸೇವಕರೊಂದಿಗೆ ಚೆನ್ನಯ್ಯನ ಮನೆಯನ್ನು ಹುಡುಕುತ್ತಾ ಚೆನ್ನಯ್ಯನ ಮನೆಗೆ ಬರುತ್ತಾನೆ. ಮೊದಲಿಗೆ ರಾಜನೇ ಚೆನ್ನಯ್ಯನಿಗೆ ಹಣೆಮಣಿದು ನಮಸ್ಕರಿಸುತ್ತಾನೆ. ತನಗೆ ನಮಸ್ಕರಿಸಿದ ರಾಜನನ್ನು ಕಂಡು ಬೆಕ್ಕಸಬೆರಗಾದ ಚೆನ್ನಯ್ಯನು, ನೀವು ನನಗೆ ನಮಸ್ಕರಿಸುವುದು ತರವೇ?ಎಂದು ಪ್ರಶ್ನಿಸುತ್ತಾನೆ. ಆಗ ರಾಜನು ಚೆನ್ನಯ್ಯನಿಗೆ, “ನಿಮ್ಮ ಕೆರವಿಂಗೆ ಯನ್ನ ಶಿರ ಸರಿಯೆ?”(ನಿನ್ನ ಚಪ್ಪಲಿಗೂ ನನ್ನ ಶಿರ ಸರಿಯಾಗಬಲ್ಲದೇ?) ಎಂದು ಕೇಳಿ, ಚೆನ್ನಯ್ಯನ  ಶಿವಭಕ್ತಿಗೆ ಮನಸೋತು ವಂದಿಸಿ ನಿಲ್ಲುತ್ತಾನೆ.

ಕರಿಕಾಳ ಚೋಳ

ಬಸರಾಳು ತಂಬೂರಿ ಜವರಯ್ಯ ಮತ್ತು ಭೋರಮ್ಮ ಎಂಬ ದಂಪತಿಗಳಿಬ್ಬರೂ ಅನೇಕ ವರ್ಷಗಳ ಕಾಲ ಜೊತೆ ಜೊತೆಯಾಗಿ ಊರೂರು ಕೇರಿಕೇರಿ ತಿರುಗುತ್ತಾ ಹಲವಾರು ತತ್ವಪದಗಳೊಂದಿಗೆ “ಶಿವನೇ ನಿನ್ನಾಟ ಬಲ್ಲವರ್ ಯಾರ್ಯಾರೋ..” ಪದವನ್ನು ಹಾಡಿಯೇ ಜೀವನಯಾಪನೆ ಮಾಡಿದವರು. ಅವರಿಂದ ಪದಗಳನ್ನು ಕಲಿತವರು ಅವರ ಎದೆಯ ಸೊಲ್ಲುಗಳಿಗೆ ಮತ್ತು “ಮಾದಾರ ಚೆನ್ನಯ್ಯನ ರಗಳೆ” ಬರೆದಿರುವ ಹರಿಹರ ಕವಿಯ ಆಶಯಕ್ಕೆ ಹೀಗೆ ವಂಚನೆ ಮಾಡಿಕೊಂಡು ಪಿಚ್ಚಳ್ಳಿ ಶ್ರೀನಿವಾಸ ಜನಪದ ಗಾಯಕ ಅಥವಾ ಇನ್ನಾರೇ ಗಾಯಕರು ಹಾಡುವುದು ಎಷ್ಟು ಸರಿ ?

-ಡಾ.ವಡ್ಡಗೆರೆ ನಾಗರಾಜಯ್ಯ, ಹಿರಿಯ ಸಂಶೋಧಕರು
    

Leave a Reply