ಬೆಳಗಾವಿ, ಮೈಸೂರು, ಕಲಬುರ್ಗಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು

2 years ago

ಬೆಂಗಳೂರು: ಜನಸಾಮಾನ್ಯರಿಗೆ ಅತ್ಯಂತ ಸುಲಭವಾಗಿ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆಗಳು ಲಭ್ಯವಾಗಬೇಕೆನ್ನುವ ದೃಷ್ಟಿಯಿಂದ ರಾಜ್ಯ ಸರ್ಕಾರ ಬೆಳಗಾವಿ, ಮೈಸೂರು ಮತ್ತು ಕಲಬುರ್ಗಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುತ್ತಿದೆ. ಬೆಳಗಾವಿ ಆಸ್ಪತ್ರೆ ಮೂರು ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ.

ಈ ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರದ ಅವಧಿಯಲ್ಲಿ ಕೈಗೊಂಡ ತೀರ್ಮಾನದಂತೆ ಈ ಆಸ್ಪತ್ರೆಗಳ ನಿರ್ಮಾಣ ಆರಂಭವಾಯಿತು.ಆದರೆ ನಂತರ ಬಂದ ಬಿಜೆಪಿ ಸರ್ಕಾರದಲ್ಲಿ ಅದಕ್ಕೆ ಸಾಕಷ್ಟು ಪ್ರಾತಿನಿಧ್ಯ ಮತ್ತು ಕಾಮಗಾರಿಗೆ ವೇಗ ಸಿಗಲಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಆಪಾದಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಗ ಮತ್ತೆ ತಮ್ಮ ಸರ್ಕಾರ ಬಂದ ನಂತರ ಈ ಆಸ್ಪತ್ರೆ ನಿರ್ಮಾಣಕ್ಕೆ ವೇಗ ಬಂದಿದೆ ಕಾಮಗಾರಿ ಪೂರ್ಣಗೊಳಿಸಲು ಬೇಕಾದ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಬೆಳಗಾವಿಯ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ ಎಂದರು.

ಆಸ್ಪತ್ರೆಗೆ ಬೇಕಾದ ತಾಂತ್ರಿಕ ಉಪಕರಣಗಳ ಪೂರೈಕೆ ಮತ್ತು ಸಿಬ್ಬಂದಿ ನೇಮಕಾತಿಯನ್ನು ಸದ್ಯದಲ್ಲೇ ಆರಂಭಿಸಲಾಗುವುದು. ಕನಿಷ್ಠ ಮೂರು ತಿಂಗಳ ಅವಧಿಯಲ್ಲಿ ಈ ಆಸ್ಪತ್ರೆ ಕಾರ್ಯಾರಂಭ ಮಾಡುವ ನಿಟ್ಟಿನಲ್ಲಿ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದರು.

ಇತ್ತೀಚೆಗೆ ಕ್ಯಾನ್ಸರ್ ಪೀಡಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಕಿದ್ವಾಯಿ ಆಸ್ಪತ್ರೆ ಹೊರತುಪಡಿಸಿದರೆ ಸರ್ಕಾರದ ಯಾವುದೇ ಸುಸಜ್ಜಿತ ಕ್ಯಾನ್ಸರ್ ಆಸ್ಪತ್ರೆ ರಾಜ್ಯದ ಯಾವುದೇ ಭಾಗದಲ್ಲಿ ಇಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿರುವ ತಮ್ಮ ಸರ್ಕಾರ ಇದೀಗ ಹೊಸದಾಗಿ 5 ಕಿದ್ವಾಯಿ ಮಾದರಿಯ 5 ಆಸ್ಪತ್ರೆಗಳನ್ನು ನಿರ್ಮಿಸಲು ಮುಂದಾಗಿದೆ. ಕಲಬುರ್ಗಿ ಶಿವಮೊಗ್ಗ ಮೈಸೂರು, ತುಮಕೂರು ಮತ್ತು ಮಂಡ್ಯದಲ್ಲಿ ಈ ಆಸ್ಪತ್ರೆಗಳು ತಲೆಎತ್ತಲಿವೆ ಎಂದರು.

ಈ ವರ್ಷ ಹೊಸದಾಗಿ ಮೂರು ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲು ತೀರ್ಮಾನಿಸಿದ್ದು, ಈ ಸಂಬಂಧ ಪ್ರಸ್ತಾವನೆಯನ್ನು ಕೇಂದ್ರ ವೈದ್ಯಕೀಯ ಮಂಡಳಿಗೆ ರವಾನಿಸಲಾಗಿದೆ. ರಾಮನಗರ ನೂತನ ಜಿಲ್ಲೆ ವಿಜಯನಗರ ಮತ್ತು ಕನಕಪುರದಲ್ಲಿ ಈ ಆಸ್ಪತ್ರೆಗಳು ತಲೆ ಎತ್ತಲಿವೆ ಎಂದರು.

Leave a Reply