ಬೆಂಗಳೂರು: ಕೃಷಿ ಸಾಲಗಳಿಗಾಗಿ ಕೇಂದ್ರ ಸರ್ಕಾರದಿಂದ ನಬಾರ್ಡ್ ಮೂಲಕ ರಾಜ್ಯ ಸರ್ಕಾರಕ್ಕೆ ನೀಡಲಾಗುವ ಆರ್ಥಿಕ ಸಾಲ ಸೌಲಭ್ಯ ಕಡಿತ ಮಾಡಲಾಗಿದೆ ಎಂದು ಆರೋಪಿಸಿರುವ ಸಹಕಾರ ಸಚಿವ ಕೆ ಎನ್ ರಾಜಣ್ಣ ಕೇಂದ್ರದ ನಿರ್ಧಾರದ ವಿರುದ್ಧ ರಾಜಕೀಯ ಮತ್ತು ಕಾನೂನು ಹೋರಾಟ ನಡೆಸುವುದಾಗಿ ಘೋಷಿಸಿದ್ದಾರೆ.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿ ಮತ್ತು ರೈತರ ವಿಷಯದಲ್ಲಿ ಯಾವುದೇ ಪಕ್ಷವಾದರೂ ರಾಜಕಾರಣ ಮಾಡಬಾರದು. ಆದರೆ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಇದನ್ನು ಮರೆತು ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.
ಕೃಷಿ ಸಚಿವ ಚಲುವರಾಯಸ್ವಾಮಿ ಅವರೊಂದಿಗೆ ನಬಾರ್ಡ್ ಆರ್ಥಿಕ ನೆರವು ಕಡಿತ ಮಾಡಿರುವುದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಎಳೆ ಎಳೆಯಾಗಿ ವಿವರಿಸಿದ ಅವರು ಹಾಸನ ಮತ್ತು ತುಮಕೂರಿನಲ್ಲಿ ಬೃಹತ್ ಸಮಾವೇಶ ನಡೆಸುವ ಮೂಲಕ ಇದರ ವಿರುದ್ಧ ಜನಾಂದೋಲನ ಮಾಡುವುದಾಗಿ ಘೋಷಿಸಿದರು.
ನಿಗದಿಯಾಗಿರುವಂತೆ ನಬಾರ್ಡ್ ರಾಜ್ಯಕ್ಕೆ ಆರ್ಥಿಕ ನೆರವು ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಹೀಗಾಗಿ ರಾಜ್ಯಪಾಲರನ್ನು ಭೇಟಿ ಮಾಡಿ ಕೇಂದ್ರದ ನಿಲುವಿನ ಬಗ್ಗೆ ವಿವರಿಸಿ ಮಧ್ಯ ಪ್ರವೇಶಕ್ಕೆ ಮನವಿ ಮಾಡಲಾಗುವುದು ಎಂದರು.
ಕಳೆದ ಬಾರಿ 5,600 ಕೋಟಿ ರೂ. ಕೃಷಿ ಕ್ಷೇತ್ರಕ್ಕೆ ಸಾಲ ನೀಡಲಾಗಿತ್ತು. ಈ ಬಾರಿ 2,340 ಕೋಟಿ ರೂ.ಗಳನ್ನು ಮಾತ್ರ ಒದಗಿಸಲಾಗಿದೆ. ಶೇ.58 ರಷ್ಟು ಕೃಷಿ ಸಾಲದ ಪ್ರಮಾಣವನ್ನು ಕಡಿತ ಮಾಡಲಾಗಿದೆ ಎಂದರು.
ಗ್ರಾಮೀಣ ಭಾಗದಲ್ಲಿ ರೈತರು ಆರ್ಥಿಕವಾಗಿ ಮುಂದುವರೆಯಬೇಕು ಎಂಬ ಕಾರಣಕ್ಕಾಗಿ ಪ್ರತಿ ವರ್ಷ ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ರಿಯಾಯಿತಿ ಬಡ್ಡಿದರದ ಸಾಲಸೌಲಭ್ಯ ನೀಡಲಾಗುತ್ತಿದೆ. ಇದಕ್ಕಾಗಿ ನಬಾರ್ಡ್ ರಾಜ್ಯಸರ್ಕಾರಕ್ಕೆ ಶೇ.4.5ರ ಬಡ್ಡಿದರದಲ್ಲಿ ಸಾಲ ರೂಪದ ಆರ್ಥಿಕ ನೆರವು ನೀಡುತ್ತಿತ್ತು. ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಮತ್ತು ರಿಯಾಯಿತಿ ಬಡ್ಡಿದರದಲ್ಲಿ ಸಾಲ ನೀಡಿ ಕೃಷಿ ಚಟುವಟಿಕೆಗಳನ್ನು ಬಲವರ್ಧನೆಗೊಳಿಸಲಾಗುತ್ತಿತ್ತು ಎಂದರು.
ರಾಜ್ಯಸರ್ಕಾರ ಮನವಿ ಸಲ್ಲಿಸಿದ ಹೊರತಾಗಿಯೂ ಸಾಲದ ಪ್ರಮಾಣವನ್ನು ಕಡಿತ ಮಾಡಲಾಗಿದೆ. ರೈತರ ನೆರವಿಗೆ ಧಾವಿಸುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದೇವೆ. ಅಲ್ಲಿಂದ ಉತ್ತರ ಬಂದಿದ್ದು, ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಲಾಗಿದೆ. ರಾಜ್ಯದ ಸಂಸದರು ಈ ಬಗ್ಗೆ ದನಿ ಎತ್ತಬೇಕು ಎಂದು ನಾವು ಮನವಿ ಮಾಡಿದ್ದೇವೆ. ಸಿಎಂ ಸಿದ್ದರಾಮಯ್ಯ ಕೂಡ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಆದರೆ ಅಲ್ಲಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ ಎಂದರು.
ರಾಷ್ಟ್ರೀಯ ಪ್ರಕೃತಿ ವಿಕೋಪ ನಿರ್ವಹಣೆ ನಿಧಿಯಡಿ ನೀಡುವ ನೆರವನ್ನೂ ಕಡಿತ ಮಾಡಲಾಗಿದೆ. ಬರ ಹಾಗೂ ನೆರೆ ಪರಿಸ್ಥಿತಿಯಿಂದ ಸಂಕಷ್ಟದಲ್ಲಿರುವ ರೈತರು ಸಾಲಮನ್ನಾ ಮಾಡಿ ಎಂದು ಒತ್ತಡ ಹೇರುತ್ತಿದ್ದಾರೆ. ಆದರೆ ಕೇಂದ್ರದ ಅಸಹಕಾರದಿಂದ ಸಾಲ ನೀಡುವುದೇ ಕಷ್ಟವಾಗುತ್ತಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.




