ಮಾಹಿತಿ ತಂತ್ರಜ್ಞಾನ ಸಚಿವರಾದ ಮಾನ್ಯ ಶ್ರೀ. ಪ್ರಿಯಾಂಕ ಖರ್ಗೆ Priyank Kharge ಅವರಿಗೆ ನಮಸ್ಕಾರ.
ಮಾನ್ಯರೆ, ಮಂಗಳೂರಿನಲ್ಲಿ ನಿನ್ನೆ “ಟೆಕ್ನೊವಾಂಝಾ 2025” ಕಾರ್ಯಕ್ರಮದಲ್ಲಿ ತಾವು ಪಾಲ್ಗೊಂಡಿದ್ದೀರಿ ಮತ್ತು ಕರಾವಳಿಯನ್ನು ಭಾರತದ ಸಿಲಿಕಾನ್ ಬೀಚ್ ಆಗಿಸುವ ನಿಟ್ಟಿನಲ್ಲಿ ಇಲ್ಲಿಗೆ ಟೆಕ್ನಾಲಜಿ ಪಾರ್ಕ್, ಗ್ಲೋಬಲ್ ಕೆಪಾಸಿಟಿ ಸೆಂಟರ್ (GCC)ಗಳನ್ನು ತೆರೆಯಲು ಪ್ರೋತ್ಸಾಹ ನೀಡುವುದಾಗಿ ಹೇಳಿರುವುದು ಪತ್ರಿಕೆಗಳಲ್ಲಿ ವರದಿ ಆಗಿದೆ. ಇದನ್ನು ನಾನು ಕರಾವಳಿಯ ನಾಗರಿಕನಾಗಿ ಸ್ವಾಗತಿಸುತ್ತೇನೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಕರಾವಳಿಯಲ್ಲಿ ಬಹುತೇಕ ಮನೆಗೊಬ್ಬರಂತೆ ಜಗತ್ತಿನಾದ್ಯಂತ ಐಟಿ ಸೇವಾಕ್ಷೇತ್ರದಲ್ಲಿ ದುಡಿಯುತ್ತಿದ್ದು, ಕರಾವಳಿಯ (ದೇಶದ) ಆರ್ಥಿಕತೆಯ ಊರುಗೋಲಾಗಿದ್ದಾರೆ. ಈಗ ಅಮೆರಿಕದ ಅಧ್ಯಕ್ಷರು ತನ್ನ ಮತದಾರರ ಅಭೀಷ್ಠಗಳನ್ನು ಪೂರೈಸಲು ಭಾರತದ ಮೇಲೆ ದಂಡನಾತೆರಿಗೆಯ ಹೊರೆ, H1-B ವಿಸಾಕ್ಕೆ ದುಬಾರಿ ಶುಲ್ಕದ ಮೂಲಕ ಪ್ರೋತ್ಸಾಹ ನಿರಾಕರಣೆ ಮಾಡುತ್ತಿರುವ ಈ ಹಂತದಲ್ಲಿ, ಕರಾವಳಿಯ ಪ್ರತಿಭಾವಂತ ಯುವಶಕ್ತಿ, ಇಲ್ಲಿಗೆ ಹಿಂದಿರುಗಿ, ತಮ್ಮ ಕುಟುಂಬಗಳ ಆರೈಕೆ ಮತ್ತು ಉದ್ಯೋಗ ಎರಡನ್ನೂ ಸಂತುಲಿತವಾಗಿ ಮಾಡಲು ಸಾಧ್ಯವಾಗುವಂತೆ ಮಾಡುವ ಯಾವುದೇ ಏರ್ಪಾಡುಗಳನ್ನು ನಾನು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತೇನೆ.
ಆದರೆ ಒಂದು ವಿಚಾರದ ಬಗ್ಗೆ ನನಗೆ ತಕರಾರು ಇದೆ. ಆ ಹಿನ್ನೆಲೆಯಲ್ಲಿ, ಅದನ್ನು ತಮ್ಮ ಗಮನಕ್ಕೆ ತರುವ ಉದ್ದೇಶದಿಂದ ಈ ಪತ್ರ ಬರೆಯುತ್ತಿದ್ದೇನೆ.
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ನ CEO ಅವರು ಕಾರ್ಯಕ್ರಮದ ಕರ್ಟೇನ್ ರೈಸರ್ ರೂಪದಲ್ಲಿ ಪತ್ರಿಕೆಗಳೊಂದಿಗೆ ಮಾತನಾಡುತ್ತಾ, ಕರಾವಳಿಯನ್ನು “ಡೇಟಾ ಸೆಂಟರ್ ಹಬ್” ಆಗಿ ರೂಪಿಸುವ ಉದ್ದೇಶ ಇರುವುದನ್ನು ಬಹಿರಂಗಪಡಿಸಿದ್ದು ಕೇಳಿ ನನಗೆ ಆಘಾತವಾಗಿದೆ. ದೇಶಕ್ಕೆ ಅಗತ್ಯ ಇರುವ 17-20GW ಸಾಮರ್ಥ್ಯದ ಡೇಟಾ ಸೆಂಟರ್‌ಗಳಲ್ಲಿ 20% ಕರಾವಳಿಯಲ್ಲೇ ಆಗಬೇಕೆಂಬ ಬಯಕೆ ವ್ಯಕ್ತವಾಗಿರುವುದು ನಿಜಕ್ಕೂ ಆಘಾತಕಾರಿ.
ಡೇಟಾಸೆಂಟರ್‌ಗಳನ್ನು ಅಮೆರಿಕದಲ್ಲಿ ಜನವಸತಿ ಇಲ್ಲದ ಪ್ರದೇಶಗಳನ್ನು ಆಯ್ದು ಸ್ಥಾಪಿಸಲಾಗುತ್ತದೆ. ಯಾಕೆಂದರೆ, ಅವು ಅಪಾರ ನೆಲವನ್ನು ಬೇಡುವುದಲ್ಲದೇ ಪರಿಸರಕ್ಕೆ ಶಾಖವನ್ನು ದೊಡ್ಡ ಪ್ರಮಾಣದಲ್ಲಿ ಬಿಡುಗಡೆ ಮಾಡುತ್ತವೆ. ಈ ಶಾಖವನ್ನು ನಿರ್ವಹಿಸಲು ನೀರಿನ ಆವಶ್ಯಕತೆಯೂ ಇದೆ. ಕರಾವಳಿಯಲ್ಲಿ ನೀರಿನ ಸಮಸ್ಯೆ ಎಷ್ಟಿದೆ ಎಂಬುದು ತಮ್ಮ ಗಮನದಲ್ಲಿದೆ ಎಂದುಕೊಂಡಿದ್ದೇನೆ. ಇದಲ್ಲದೇ ಈ ಡೇಟಾ ಸೆಂಟರ್‌ಗಳು (ಅದರ ಫ್ಯಾನ್‌ಗಳು) ದೊಡ್ಡ ಪ್ರಮಾಣದಲ್ಲಿ ಶಬ್ಧಮಾಲಿನ್ಯವನ್ನೂ ಮಾಡುತ್ತವೆ. ಇನ್ನು ಇವು ನುಂಗಲಿರುವ ವಿದ್ಯುತ್, ಆ ವಿದ್ಯುತ್ತಿಗಾಗಿ ಹೆಚ್ಚುವರಿಯಾಗಿ ಉತ್ಪಾದಿಸಬೇಕಾದ ವಿದ್ಯುತ್, ಅದು ಉಂಟುಮಾಡಲಿರುವ ಪರಿಸರ ಹಾನಿ… ಇವೆಲ್ಲ ಊಹಿಸಲೂ ಸಾಧ್ಯವಿಲ್ಲ.
ಕಳೆದ 30-35 ವರ್ಷಗಳಲ್ಲಿ, ಬಿಜೆಪಿಯವರು, ಕರಾವಳಿಯ ಎಲ್ಲರೂ ತಮ್ಮ ಮತದಾರರು-ಜನಪ್ರತಿನಿಧಿಗಳು. ಹಾಗಾಗಿ ಯಾರೂ ಮಾತನಾಡುವುದಿಲ್ಲ ಎಂಬ ಕಾರಣಕ್ಕೆ ಮತ್ತು ಕಾಂಗ್ರೆಸ್ಸಿನವರು, ಹೇಗೂ ನಮ್ಮ ಮತದಾರರಲ್ಲ. ಹಾಗಾಗಿ ತೊಂದರೆ ಇಲ್ಲ ಎಂಬ ಕಾರಣಕ್ಕೆ (ಇದು ನನ್ನ ಊಹೆ!) ಇಲ್ಲಿಗೆ ತಂದುಹಾಕಿರುವ ಪರಿಸರ ಮಾಲಿನ್ಯಕಾರಕ, ಅಪಾಯಕಾರಿ ಕೈಗಾರಿಕೆ-ಯೋಜನೆಗಳನ್ನು ಒಮ್ಮೆ ಗಮನಿಸಿ. MRPL ಮತ್ತದರ ಉಪ ಉತ್ಪನ್ನ ಕೈಗಾರಿಕೆಗಳು, ಅದಾನಿ UPCL ಮತ್ತದರ ವಿಸ್ತರಣಾ ಯೋಜನೆಗಳು, ಪಾದೂರಿನ ಬೃಹತ್ ತೈಲ ಸಂಗ್ರಹಾಗಾರ, ಕರಾವಳಿಯ ಉದ್ದಕ್ಕೂ ಇರುವ ಮೀನು ಸಂಸ್ಕರಣಾ ಘಟಕಗಳು- ಇವೆಲ್ಲ ಉಂಟುಮಾಡಿರುವ ಪರಿಸರ ಹಾನಿ, ಜನಸಾಮಾನ್ಯರ ಆರೋಗ್ಯಹಾನಿ ಊಹಿಸಲಿಕ್ಕೂ ಅಸಾಧ್ಯ ಪ್ರಮಾಣದ್ದು. ಇದು ನ್ಯಾಯಾಲಯದಲ್ಲೂ ಸಾಬೀತಾಗಿದೆ ಎಂಬುದು ತಮ್ಮ ಗಮನಕ್ಕೆ ಬಂದಿದೆ ಎಂದುಕೊಂಡಿದ್ದೇನೆ.
ಕಳೆದ 15 ವರ್ಷಗಳಲ್ಲಿ ಇಲ್ಲಿ ಹೆಚ್ಚಿರುವ ಕ್ಯಾನ್ಸರ್, ಶ್ವಾಸಕೋಶದ ಕಾಯಿಲೆಗಳು, ಚರ್ಮದ ಕಾಯಿಲೆಗಳು, ಅಲರ್ಜಿ ಇತ್ಯಾದಿಗಳು ತುರ್ತಾಗಿ ಅಧ್ಯಯನ ಆಗಬೇಕಿದೆ. ಹಿಂದೆ ಕರಾವಳಿಯ-ಪಶ್ಚಿಮ ಘಟ್ಟಗಳ ಧಾರಣ ಸಾಮರ್ಥ್ಯ ಅಧ್ಯಯನದ ಚರ್ಚೆ ನಡೆದಿತ್ತು. ಈಗ ಯಾವುದೇ ಮುಲಾಜಿಲ್ಲದೇ ಇಲ್ಲಿನ ಜನನಿಬಿಡ ಜಾಗಗಳಲ್ಲಿ ಮಾಲಿನ್ಯಕಾರಕ ಕೈಗಾರಿಕೆಗಳನ್ನು ಹೇರಲಾಗುತ್ತಿದೆ. ಇಮ್ತಹ ಸನ್ನಿವೇಶದಲ್ಲಿ ಡೇಟಾಸೆಂಟರ್‌ಗಳನ್ನು ಕರಾವಳಿಗೆ ಮಂಜೂರು ಮಾಡುವ ಮುನ್ನ, ಸಮಗ್ರ ಅಧ್ಯಯನ ನಡೆಸಿ, ಸಾಧಕ-ಬಾಧಕಗಳನ್ನು ಪರಿಶೀಲಿಸಿ, ಆ ಬಳಿಕ ಮಾಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ. ಕರಾವಳಿಯಲ್ಲಿ ಡೇಟಾಸೆಂಟರ್ ಸ್ಥಾಪನೆಗೆ ನನ್ನ ಸ್ಪಷ್ಟ ವಿರೋಧ ಇದೆ. ಇಲ್ಲಿ ಟೆಕ್‌ಪಾರ್ಕ್, GCC ಸ್ಥಾಪನೆಗೆ ನನ್ನ ವಿರೋಧ ಇಲ್ಲ ಎಂಬುದನ್ನು ಗಮನಿಸಿ.
ಕರಾವಳಿ ಅಭಿವೃದ್ಧಿಗೆ ಏನು ಬೇಕು ಎಂಬುದನ್ನು ಕರಾವಳಿಗರೇ ನಿರ್ಧರಿಸಲು ಅವಕಾಶ ಮಾಡಿಕೊಡಿ. ಕರಾವಳಿಯ ಬದುಕನ್ನು ಇನ್ನಷ್ಟು ಅಸಹನೀಯ ಮಾಡಬೇಡಿ ಎಂದು ತಮ್ಮಲ್ಲಿ ಕೈಮುಗಿದು ಕೇಳಿಕೊಳ್ಳುತ್ತಿದ್ದೇನೆ.
ತಮ್ಮ ವಿಶ್ವಾಸಿ,
ರಾಜಾರಾಂ ತಲ್ಲೂರು (ಮಾಜೀ ಪತ್ರಕರ್ತ)




