ಕಲಬುರಗಿ: ಪ್ರಿಯಾಂಕ್ ಖರ್ಗೆ ಅವರು ಅತ್ಯಂತ ಕ್ರಿಯಾಶೀಲ, ವಿಚಾರಶೀಲ ರಾಜಕಾರಣಿ ಎಂದರೆ ಅತಿಶಯೋಕ್ತಿಯಾಗಲಾರದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಪ್ರಜಾಧ್ವನಿ ಯಾತ್ರೆಯ ಅಂಗವಾಗಿ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಇಂದು ನಡೆದ ಬೈಕ್ ರ್ಯಾಲಿ ಹಾಗೂ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಿ ಮಾತಾಡಿದ ಅವರು, ನನ್ನ ಸರ್ಕಾರದಲ್ಲಿ ಐಟಿ, ಬಿಟಿ ಮತ್ತು ಪ್ರವಾಸೋದ್ಯಮ ಸಚಿವರಾಗಿ, ನಂತರ ಬಂದ ಸಮ್ಮಿಶ್ರ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ಪ್ರಾಮಾಣಿಕವಾಗಿ, ನಿಷ್ಠೆಯಿಂದ ಕೆಲಸ ಮಾಡಿದ ಮಂತ್ರಿಗಳಲ್ಲಿ ಇವರೂ ಒಬ್ಬರು ಎಂದು ಶ್ಲಾಘಿಸಿದರು.
ಪ್ರಿಯಾಂಕ್ ಅವರು ನಿಷ್ಠುರವಾಗಿ ಮಾತನಾಡುತ್ತಾರೆ, ಹೀಗೆ ನಿಷ್ಠುರವಾಗಿ, ಪ್ರಾಮಾಣಿಕವಾಗಿ ಮಾತನಾಡುವವರನ್ನು ಜನರು ಅಪ್ಪಿಕೊಳ್ಳುವುದು ಕಡಿಮೆ. ಈ ನೇರ ನಡೆಯ ಸ್ವಭಾವ ರಾಜಕೀಯದಲ್ಲಿ ತೊಂದರೆ ಉಂಟುಮಾಡುವುದೇ ಹೆಚ್ಚು. ಆದರೆ ಈ ಸ್ವಭಾವವನ್ನು ಬದಲಾವಣೆ ಮಾಡಿಕೊಳ್ಳದೆ ಜನರ ಪ್ರೀತಿ, ವಿಶ್ವಾಸ ಗಳಿಸುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಚಿತ್ತಾಪುರ ಕ್ಷೇತ್ರಕ್ಕೆ 3,500 ಕೋಟಿ ಅನುದಾನ ನೀಡಿದ್ದೆ, ಪ್ರಿಯಾಂಕ್ ಅವರ ಉಸ್ತುವಾರಿಯಲ್ಲಿ ಚಿತ್ತಾಪುರದ ಚಿತ್ರಣವೇ ಬದಲಾಗಿದೆ. ಇಂಥಾ ಶಾಸಕರು ಹೆಚ್ಚು ಹೆಚ್ಚು ವಿಧಾನಸಭೆಗೆ ಬಂದರೆ ರಾಜ್ಯದ ಅಭಿವೃದ್ಧಿಯ ವೇಗ ಹೆಚ್ಚಾಗಲಿದೆ. ಜೊತೆಗೆ ರಾಜಕೀಯ ರಂಗವೂ ಶುದ್ಧವಾಗಲಿದೆ ಎಂದರು.
ಪ್ರಿಯಾಂಕ್ ಖರ್ಗೆ ಅವರಿಗೆ ಉಜ್ವಲ ರಾಜಕೀಯ ಭವಿಷ್ಯವಿದೆ, ಓರ್ವ ಅತ್ಯುತ್ತಮ ಸಂಸದೀಯ ಪಟುವಾಗಿ ಇವರು ರೂಪುಗೊಳ್ಳುತ್ತಿದ್ದಾರೆ. ಜನರ ಸಮಸ್ಯೆಗಳನ್ನು ಸದನದಲ್ಲಿ ಸರ್ಕಾರದ ಮುಂದಿಡುವ ಕಲೆ ಇವರಲ್ಲಿ ಇದೆ. ಹೆಚ್ಚು ತಯಾರಿ ಮಾಡಿಕೊಂಡವರು, ಜನರ ಬಗ್ಗೆ ಕಾಳಜಿ ಇರುವವರು ಮಾತ್ರ ಈ ರೀತಿ ಮಾತನಾಡಲು ಸಾಧ್ಯ ಎಂದರು.
ಪ್ರಿಯಾಂಕ್ ಅವರು ಪಕ್ಷದ ಸಂವಹನ ವಿಭಾಗದ ಅಧ್ಯಕ್ಷರಾಗಿದ್ದಾರೆ, ಹೀಗಿದ್ದಾಗ ಇಲ್ಲಿಗೆ ಗಮನ ನೀಡುವುದಕ್ಕೆ ಹೆಚ್ಚು ಸಮಯ ಸಿಗುತ್ತಿಲ್ಲ. ಇಲ್ಲಿನ ಒಬ್ಬ ವ್ಯಕ್ತಿ ರಾಜ್ಯ ಮಟ್ಟದಲ್ಲಿ ಬೆಳೆಯುತ್ತಿರುವುದರಿಂದ ಕ್ಷೇತ್ರದ ಜನ ಸಹಕಾರ ನೀಡಬೇಕಾಗುತ್ತದೆ ಎಂದರು.




