ಸೋನಮ್ ವಾಂಗ್‌ಛುಕ್ ಕೂಡಲೇ ಬಿಡುಗಡೆಯಾಗಲಿ

9 months ago

ಸೋನಮ್ ವಾಂಗ್‌ಛುಕ್ ಕೂಡಲೇ ಬಿಡುಗಡೆಯಾಗಲಿ

ಲಢಾಖ್ ಪ್ರಾಂತದಲ್ಲಿ ಪ್ರಜಾಪ್ರಭುತ್ವ ಉಳಿಯಲಿ

ಭಾರತದ ಉತ್ತರದ ತುತ್ತ ತುದಿಯಲ್ಲಿರುವ ಲಢಾಖ್ ಪ್ರಾಂತದಲ್ಲಿ ಪರಿಸರವನ್ನು ರಕ್ಷಿಸುವ ಧೀರೋದಾತ್ತ ಕಾರ್ಯಕ್ಕೆ ತಮ್ಮನ್ನು ಅರ್ಪಿಸಿಕೊಂಡಿರುವ ಸೋನಮ್ ವಾಂಗ್‌ಛುಕ್ ಅವರು ಅನೇಕ ತಿಂಗಳುಗಳಿಂದ ಸತ್ಯಾಗ್ರಹವನ್ನು ನಡೆಸಿಕೊಂಡು ಬಂದರು. ಕಡೆಯಲ್ಲಿ ಅವರು ಆಮರಣ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ಇದಕ್ಕೆ ದೇಶದ ಅನೇಕ ಮೂಲೆಗಳಿಂದ ಭರಪೂರ ಬೆಂಬಲ ದೊರಕಿತು. ಭಾರತ ಸರ್ಕಾರದ ದುಷ್ಟ ನೀತಿಯು ಜಗಜ್ಜಾಹೀರಾಯಿತು. ಆದರೂ, ಕೇಂದ್ರ ಸರ್ಕಾರ ಸೋನಮ್ ವಾಂಗ್‌ಛುಕ್ ಅವರ ಸತ್ಯಾಗ್ರಹವನ್ನು ಅರ್ಥಮಾಡಿಕೊಳ್ಳದೆ, ಅಧಿಕಾರದ ದರ್ಪವನ್ನೇ ಮೆರೆಯಿತು.

ಪರಿಸರ ರಕ್ಷಣೆಗೆ ಮತ್ತು ಪ್ರಜಾಪ್ರಭುತ್ವದ ಉಳಿವಿಗೆ ತಮ್ಮ ದಿಟ್ಟ ಹೋರಾಟವನ್ನು ಮುಂದುವರೆಸಿದ ಸೋನಮ್ ವಾಂಗ್‌ಛುಕ್ ಅವರ ಮೇಲೆ ಎನ್.ಎಸ್.ಎ. ಕಾಯ್ದೆಯನ್ನು ಜಾರಿ ಮಾಡಿದ ಕೇಂದ್ರ ಸರ್ಕಾರ, ‘ಸೋನಮ್ ವಾಂಗ್‌ಛುಕ್ ಅವರಿಂದ ದೇಶದ ಭದ್ರತೆಗೆ ಅಪಾಯ ಒದಗಿದೆ’ ಎಂಬ ಹಸಿಸುಳ್ಳನ್ನು ಮುಂದಿಟ್ಟು, ಅವರನ್ನು ಬಂಧಿಸಿತು. ಕೇಂದ್ರ ಸರ್ಕಾರದ ಈ ಘಾತುಕ ನಡೆಯನ್ನು ಪ್ರಜ್ಞಾವಂತರು ಖಂಡಿಸಿದ್ದಾರೆ. ಸೋನಮ್ ವಾಂಗ್‌ಛುಕ್ ಅವರನ್ನು ಕೂಡಲೇ ಬೇಷರತ್ ಬಿಡುಗಡೆ ಮಾಡಬೇಕು ಮತ್ತು ಲಢಾಖ್ ಪ್ರಾಂತದಲ್ಲಿ ಪೂರ್ಣ ರೂಪದಲ್ಲಿ ಪ್ರಜಾಪ್ರಭುತ್ವ ಉಳಿಯುವಂಥ ವಾತಾವರಣವನ್ನು ಕೇಂದ್ರ ಸರ್ಕಾರ ನಿರ್ಮಿಸಬೇಕು ಎಂದು ಒತ್ತಾಯಿಸಲಾಗುತ್ತಿದೆ.

ದೇಶದ ಪ್ರಜ್ಞಾವಂತರ ಧ್ವನಿಗೆ ಕರ್ನಾಟಕದ ವಿಚಾರವಂತರೂ, ಸಾಮಾಜಿಕ ಕಾರ್ಯಕರ್ತರು, ಸಮಾಜವಾದಿಗಳು, ಲೇಖಕರು, ಪ್ರಗತಿಪರರು ಒಕ್ಕೊರಲಿನಿಂದ ಸೋನಮ್ ವಾಂಗ್‌ಛುಕ್ ಅವರ ಹೋರಾಟಕ್ಕೆ ಬೆಂಬಲ ನೀಡುತ್ತಾ, ಅವರನ್ನು ಸುಳ್ಳಿನ ಆಧಾರದಲ್ಲಿ ಬಂಧಿಸಿರುವುದನ್ನು ಖಂಡಿಸಿದ್ದಾರೆ. ‘ಪ್ರಜಾಪ್ರಭುತ್ವಕ್ಕಾಗಿ ಜನಧ್ವನಿ’ ಎಂಬ ವಿಶಾಲ ವೇದಿಕೆಯ ಈ ಹೇಳಿಕೆಗೆ ನನ್ನ ಬೆಂಬಲ ಇದೆ.

– ಪ್ರಜಾಪ್ರಭುತ್ವಕ್ಕಾಗಿ ಜನದನಿ, ಬೆಂಗಳೂರು – 560098

– ಮಂಗ್ಳೂರು ವಿಜಯ
ಡಾ.ಪ್ರದೀಪ್ ಮಾಲ್ಗುಡಿ

Leave a Reply