ಕಮಲ್ ಹಾಸನ್ ಕ್ಷಮೆ ಕೇಳುವವರೆಗೆ ಸಿನಿಮಾ ಬಿಡುಗಡೆಗೆ ಅವಕಾಶ ನೀಡಬಾರದು: ಶಿವರಾಜ್ ತಂಗಡಗಿ

11 months ago

ಬೆಂಗಳೂರು: ಕನ್ನಡ ಭಾಷೆ ಕುರಿತಂತೆ ಆಕ್ಷೇಪಾರ್ಹ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿರುವ ತಮಿಳು ನಟ ಕಮಲ್ ಹಾಸನ್ ಕನ್ನಡಿಗರ ಕ್ಷಮೆ ಕೇಳುವವರೆಗೆ ಕರ್ನಾಟಕದಲ್ಲಿ ಅವರ ಸಿನಿಮಾಗಳ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ರಾಜ್ಯ ಸರ್ಕಾರ ಹೇಳಿದೆ. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಈ ಸಂಬಂಧ ಪತ್ರವೊಂದನ್ನು ಬರೆದಿದ್ದು, ಕಮಲ ಹಾಸನ್ ಅವರ ಹೇಳಿಕೆ ಒಪ್ಪಲು ಸಾಧ್ಯವಿಲ್ಲ. ಜೊತೆಗೆ ಇದಕ್ಕಾಗಿ ಅವರು ಕ್ಷಮೆ ಯಾಚಿಸುವುದಿಲ್ಲ ಎಂದು ಉದ್ಧಟತನ ತೋರಿದ್ದಾರೆ. ಇದನ್ನು ಸಹಿಸುವುದಿಲ್ಲ ಎಂದಿದ್ದಾರೆ.

ಬಹುಭಾಷೆಯ ನಟರಾಗಿರುವ ಕಮಲಹಾಸನ್ ಅವರು ತಮ್ಮ ಅನುಭವ ಮತ್ತು ಹಿರಿತನಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು. ತಕ್ಷಣವೇ ಕನ್ನಡಿಗರ ಕ್ಷಮೆ ಯಾಚಿಸುವ ಮೂಲಕ ಸೌಹಾರ್ದಯುತ ವಾತಾವರಣ ನೆಲೆಸುವಂತೆ ಮಾಡಬೇಕು. ಇಲ್ಲದೆ ಹೋದಲ್ಲಿ ಕರ್ನಾಟಕದಲ್ಲಿ ಅವರ ಸಿನಿಮಾ ಬಿಡುಗಡೆ ಮಾಡಲು ಅವಕಾಶ ನೀಡುವುದಿಲ್ಲ. ಅದನ್ನು ಕಮಲ್ ಹಾಸನ್ ಅವರಿಗೆ ತಿಳಿಸುವಂತೆ ಚಲನಚಿತ್ರ ಮಂಡಳಿಗೆ ಸಲಹೆ ನೀಡಿದ್ದಾರೆ. 

ಜೊತೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಪ್ರತ್ಯೇಕ ಪತ್ರವನ್ನು ಬರೆದಿರುವ ತಂಗಡಗಿ, ಕಮಲ್ ಹಾಸನ್ ರವರು ಇಂತಹ ಹೇಳಿಕೆ ನೀಡಿದ ಸಮಯದಲ್ಲಿ ಅವರ ಪಕ್ಕದಲ್ಲಿ ನೀವು ಕುಳಿತಿದ್ದೀರಿ. ಅಲ್ಲಿಯೇ ನೀವು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರೆ ಉತ್ತಮವಾಗಿತ್ತು. ಆದರೆ ಈಗಲೂ ಕಾಲ ಮಿಂಚಿಲ್ಲ. ತಾವು ಅವರಿಗೆ ವಸ್ತು ಸ್ಥಿತಿಯ ಮನವರಿಕೆ ಮಾಡಿ ಕನ್ನಡಿಗರ ಕ್ಷಮೆಯಾಚಿಸಲು ಸಲಹೆ ಮಾಡಬೇಕು ಎಂದಿದ್ದಾರೆ.

ತಾವು ಪತ್ರ ಬರೆದಿರುವ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಜ್ ತಂಗಡಗಿ, ಭಾಷೆ ವಿಚಾರದಲ್ಲಿ ಯಾರೇ ದೊಡ್ಡ ವ್ಯಕ್ತಿಯಾಗಿದ್ದರೂ ರಾಜಿಯಾಗುವ ಪ್ರಶ್ನೆ ಇಲ್ಲ. ನಮ್ಮ ಭಾಷೆ ಬಗ್ಗೆ ಹಗುರವಾಗಿ ಮಾತನಾಡಿದರೆ ಅದನ್ನು ಸಹಿಸಲು ಸಾಧ್ಯವಿಲ್ಲ. ಅಂತ ವಿಚಾರವನ್ನು ನಾವು ಪ್ರಶ್ನೆ ಮಾಡದೆ ಹಾಗೆಯೇ ಬಿಟ್ಟರೆ ನಮಗೆ ನಾವೇ ಮೋಸ ಮಾಡಿಕೊಂಡಂತೆ ಎಂದರು.

ಶಿವರಾಜ್ ಕುಮಾ‌ರ್ ಚಲನಚಿತ್ರದ ದೊಡ್ಡ ಅಣ್ಣನಿದ್ದಂತೆ. ಕರ್ನಾಟಕಕ್ಕೆ ಅವರ ಕುಟುಂಬದ ಕೊಡುಗೆ ದೊಡ್ಡದಿದೆ. ಶಿವರಾಜ್ ಕುಮಾರ್ ಬಗ್ಗೆ ನಮಗೆ ಅಪಾರವಾದಂತ ವಿಶೇಷ ಗೌರವವಿದೆ. ಕಾಲೇಜು ದಿನಗಳಲ್ಲಿ ಅವರ ಚಿತ್ರಗಳನ್ನು ನೋಡಿ ಅಭಿಮಾನಿಯಾಗಿದ್ದೇನೆ ಎಂದರು. 

ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ಈಗಾಗಲೇ ನಾನು ಪತ್ರ ಬರೆದು, ಕಮಲ್ ಹಾಸನ್ ಅವರ ಚಿತ್ರವನ್ನ ಬಿಡುಗಡೆ ಮಾಡದಂತೆ ನಿಷೇಧ ಹೇರಲು ಮನವಿ ಮಾಡಿಕೊಂಡಿದ್ದೇನೆ. ಶಿವರಾಜ್ ಕುಮಾರ್ ಅವರು ಅದೇ ಮಾದರಿಯಲ್ಲಿ ಹೆಜ್ಜೆ ಇಡಬೇಕು. ಈ ಬಗ್ಗೆ ಧ್ವನಿ ಎತ್ತಬೇಕು ಎಂದರು.

Leave a Reply