ಯಾವುದೇ ಕಾರಣಕ್ಕೂ ನಾನು ಕ್ಷಮೆ ಕೇಳುವುದಿಲ್ಲ: ಕಮಲ್ ಹಾಸನ್

11 months ago

ಬೆಂಗಳೂರು: ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದೆ ಎಂದು ಹೇಳಿ ಕನ್ನಡಿಗರಿಂದ ಹಾಗೂ ಹಲವು ಭಾಷಾ ತಜ್ಞರಿಂದ ಛೀಮಾರಿಗೆ ಒಳಗಾಗಿರುವ ನಟ ಕಮಲ್ ಹಾಸನ್ ಯಾವುದೇ ಕಾರಣಕ್ಕೂ ನಾನು ಕ್ಷಮೆ ಕೇಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ, ಹಾಗಾಗಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

‘ನನ್ನಿಂದ ತಪ್ಪು ಆಗಿದ್ದರೆ ಮಾತ್ರ ಕ್ಷಮೆಯಾಚಿಸುವೆ, ನನ್ನಿಂದ ತಪ್ಪು ಆಗಿಲ್ಲ, ಹಾಗಾಗಿ ನಾನು ಕ್ಷಮೆ ಕೇಳಲ್ಲ, ಯಾವುದೇ ಬೆದರಿಕೆ, ಎಚ್ಚರಿಕೆಗೆ ನಾನು ಹೆದರುವುದಿಲ್ಲ, ನಾನು ಕಾನೂನು ಮತ್ತು ನ್ಯಾಯದ ಮೇಲೆ ನಂಬಿಕೆ ಇಟ್ಟಿದ್ದೇನೆ’ ಎಂದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ನಾನು ತಪ್ಪು ಮಾಡಿದ್ದರೆ, ನಾನು ಕ್ಷಮೆಯಾಚಿಸುತ್ತೇನೆ. ನಾನು ತಪ್ಪಿಲ್ಲದಿದ್ದರೆ ನಾನು ಕ್ಷಮೆ ಕೇಳುವುದಿಲ್ಲ. ಇದು ನನ್ನ ಜೀವನಶೈಲಿ, ದಯವಿಟ್ಟು ಅದನ್ನು ಹಾಳು ಮಾಡಬೇಡಿ. ನಾನು ಹೇಳಿದ್ದು ಸರಿ ಅಲ್ಲ ಎಂದು ಸಾಬೀತಾಗುವವರೆಗೂ ನಾನು ಯಾರ ಕ್ಷಮೆ ಕೇಳುವುದಿಲ್ಲ ಎಂದಿದ್ದಾರೆ.

ಭಾರತ ಪ್ರಜಾಪ್ರಭುತ್ವ ರಾಷ್ಟ್ರ, ನಾನು ಕಾನೂನು ಮತ್ತು ನ್ಯಾಯವನ್ನು ನಂಬುತ್ತೇನೆ. ಇದು ಪ್ರಜಾಪ್ರಭುತ್ವ. ನಾನು ಸಂವಿಧಾನ ಮತ್ತು ಕಾನೂನಿನಲ್ಲಿ ನಂಬಿಕೆಯುಳ್ಳವನು. ನನ್ನ ಪ್ರೀತಿ ಕರ್ನಾಟಕಕ್ಕೆ, ಕನ್ನಡಕ್ಕೆ, ತೆಲುಗು, ಮಲಯಾಳಂಗೆ ಇದ್ದೇ ಇದೆ. ಅಜೆಂಡಾ ಇಟ್ಟು ರಾಜಕಾರಣ ಮಾಡುವವರನ್ನು ಹೊರತುಪಡಿಸಿ ಯಾರೂ ಇದನ್ನು ಅಲ್ಲಗಳೆಯುವುದಿಲ್ಲ ಎಂದರು.

ನಟ ಕಮಲ ಹಾಸನ್ ಅವರ ಹೇಳಿಕೆ ಹೊರ ಬಿದ್ದ ಬೆನ್ನಲ್ಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಕಮಲಹಾಸನ್ ಅವರು ಅಭಿನಯಿಸಿದ ಸಿನಿಮಾಗಳ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ನರಸಿಂಹಲು, ಕನ್ನಡ ಭಾಷೆಗೆ ಅಪಮಾನ ಮಾಡಿರುವ ನಟ ಕಮಲ ಹಾಸನ್ ಅವರು ಈ ವೇಳೆಗಾಗಲೇ ಕ್ಷಮೆಯಾಚನೆ ಮಾಡಬೇಕಿತ್ತು. ಅದನ್ನು ಮಾಡದೆ ಈಗಲೂ ಕ್ಷಮೆ ಯಾಚಿಸುವುದಿಲ್ಲ ಎಂದು ಉದ್ಧಟತನ ತೋರುತ್ತಿದ್ದಾರೆ ಎಂದರು.

ಈ ನಡುವೆ ಕಮಲ್ ಹಾಸನ್ ಅವರ ಉದ್ಧಟತನದ ಹೇಳಿಕೆಯನ್ನು ಖಂಡಿಸಿ ನಡೆಸುತ್ತಿರುವ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ.

ಕನ್ನಡಕ್ಕಿಂತ ಯಾರೂ ದೊಡ್ಡವರಲ್ಲ. ಕನ್ನಡದ ವಿರುದ್ಧ ಕನ್ನಡಿಗರೇ ಮಾತನಾಡಿದರೂ ವೇದಿಕೆ ಕಾರ್ಯಕರ್ತರು ಸುಮ್ಮನಿರುವುದಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ನಟ ಕಮಲ್ ಹಾಸನ್ ವಿರುದ್ಧ ಚಳವಳಿ ತೀವ್ರಗೊಂಡಿರುವ ಬೆನ್ನಲ್ಲೇ ನಮ್ಮ ನೆಲದ ನಟ ಡಾ.ಶಿವರಾಜ್ ಕುಮಾರ್ ಅವರು ಕಮಲ್ ಹಾಸನ್ ಅವರನ್ನು ಪರೋಕ್ಷವಾಗಿ ಸಮರ್ಥಿಸಿಕೊಳ್ಳುವ ಹೇಳಿಕೆ ನೀಡಿರುವುದು ಸರಿಯಲ್ಲ ಎಂದರು.

ಕನ್ನಡ ಭಾಷೆ, ಸಾಹಿತ್ಯದ ಸಾವಿರಾರು ವರ್ಷಗಳ ಇತಿಹಾಸ ತಿಳಿಯದೇ ನಟ ಕಮಲ್ ಹಾಸನ್ ಅವರ ಉದ್ಧಟತನದ ಹೇಳಿಕೆ ನೀಡಿದ್ದಾರೆ. ಕನ್ನಡ ನಾಡಿನಾದ್ಯಂತ ಹೋರಾಟ ತೀವ್ರಗೊಂಡು,ಇಡೀ ರಾಜ್ಯವಲ್ಲದೇ ನಾಡಿನ ಎಲ್ಲಾ ಸಾಹಿತಿಗಳು ಲೇಖಕರು ಖಂಡಿಸಿರುವಾಗ ಕಮಲ್ ಹಾಸನ್ ತಮ್ಮ ಹೇಳಿಕೆ ಸಂಬಂಧ ಕ್ಷಮೆಯಾಚಿಸದಿರುವುದು  ಉದ್ಧಟತನವಾಗಿದೆ ಎಂದರು.

ಸಂಸದ ಯದುವೀರ ಒಡೆಯರ್ ಕನ್ನಡ ಸಂಸ್ಕೃತ, ಪ್ರಾಕೃತಗಳಿಂದ ಹುಟ್ಟಿದೆ ಎಂಬ ಸುಳ್ಳು, ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ ಎಂದು ನಾರಾಯಣಗೌಡ ಖಂಡಿಸಿದರು.

Leave a Reply