ಬಹುಶಃ ಇದು 2011-12ನೇ ಸಾಲಿನಲ್ಲಿ ನಡೆದ ಘಟನೆ. ನಾನು ಗೌರಿ ಲಂಕೇಶ್ ಪತ್ರಿಕೆಯಲ್ಲಿ ಕೆಲಸ ಆರಂಭಿಸಿದ್ದ ಕಾಲ. ಸಾಂಸ್ಕೃತಿಕ ಲೋಕದಲ್ಲಿ ವಿವಾದವೊಂದು ಭುಗಿಲೆದ್ದಿತ್ತು. ಕಥೆಗಾರ್ತಿ ಎಚ್ ನಾಗವೇಣಿಯವರ `ಗಾಂಧಿ ಬಂದ’ ಕೃತಿಯನ್ನು ನಿಷೇಧ ಮಾಡಬೇಕೆಂದು ಒಂದಷ್ಟು ಪುರೋಹಿತಶಾಹಿ ಜಾತಿಗ್ರಸ್ಥ ಮನಸ್ಸುಗಳು ಯೂನಿವರ್ಸಿಟಿ ಮಟ್ಟದಲ್ಲಿ ಗದ್ದಲ ಎಬ್ಬಿಸಿದ್ದರು. ದಮನಕಾರಿ ಮತ್ತು ಕೋಮುವಿಚ್ಛಿಧ್ರಕ ಕೂಟಗಳನ್ನು ತನ್ನ ಕೊನೆಯ ಉಸಿರಿನವರೆಗೆ ಎದುರಿಸುತ್ತಲೇ ಬಂದ ಗೌರಿ ಲಂಕೇಶ್ ಮೇಡಂ ಯಥಾ ಪ್ರಕಾರ ನಾಗವೇಣಿಯವರ ಪರವಾಗಿ ನಿಂತಿದ್ದರು.
ಆಗ, ನಾಗವೇಣಿಯವರ ಸಂದರ್ಶನ ಮಾಡಿ, ಬೇರೆಬೇರೆ ಸಾಹಿತಿಗಳಿಂದ ವಿವಾದಕ್ಕೆ ಸಂಬಂಧಿಸಿದ ಹೇಳಿಕೆ ಸಂಗ್ರಹಿಸಿ ಪುಟ್ಟದೊಂದು ವರದಿ ಮಾಡುವ ಹೊಣೆ ನನ್ನ ಹೆಗಲಿಗೇರಿತ್ತು. ಆ ಕೆಲಸವನ್ನು ನನ್ನ ಮಿತಿಯಮಟ್ಟಿಗೆ ಸಾಧ್ಯವಾದಷ್ಟು ಅಚ್ಚುಕಟ್ಟಾಗಿ ಮಾಡಿ ಮುಗಿಸಿದ್ದೆ. ಪತ್ರಿಕೆ ಮುದ್ರಣವಾಗಿ, ಪ್ರಕಟಿತ ಸಂದರ್ಶನ ಮತ್ತು ವರದಿಯನ್ನು ಓದಿದ ನಂತರ ನಾಗವೇಣಿಯವರು ನನಗೆ ಫೋನ್ ಮಾಡಿ ಧನ್ಯವಾದ ತಿಳಿಸಿದರು. ಜೊತೆಗೆ, “ನಿಮ್ಮ ನಿರೂಪಣಾ ಶೈಲಿ ಮತ್ತು ವಿಚಾರವನ್ನು ಎಲ್ಲೂ ಗೊಂದಲಗೊಳಿಸದೆ, ಎಷ್ಟು ಬೇಕೊ ಅಷ್ಟಕ್ಕೆ ಒತ್ತು ನೀಡಿ ಆಯ್ಕೆ ಮಾಡಿಕೊಂಡ ವಿಧಾನ ತುಂಬಾ ಇಷ್ಟವಾಯ್ತು ಗಿರೀಶ್. ನಿಮ್ಮ ಬರವಣಿಗೆ ನೋಡ್ತಾ ಇದ್ದರೆ, ನೀವು ಮುಂದೆ ಒಳ್ಳೆಯ ಪತ್ರಕರ್ತ ಆಗ್ತೀರಿ ಅನ್ನಿಸ್ತಿದೆ” ಎಂಬ ತಮ್ಮ ಪ್ರಶಂಸೆಯನ್ನೂ ವ್ಯಕ್ತಪಡಿಸಿದ್ದರು. ಯಾವುದೇ ಕ್ಷೇತ್ರಕ್ಕಾಗಲಿ, ಮೊದಲ ಹೆಜ್ಜೆಯಿಟ್ಟ ಆರಂಭದಲ್ಲೇ ಇಂಥಾ ಹೊಗಳಿಕೆ ಎದುರಾದರೆ, ಖುಷಿಯಾಗದೆ ಇರಲು ಸಾಧ್ಯವೇ? ನಾನು ಹಿರಿಹಿರಿ ಹಿಗ್ಗಿಹೋದೆ.
ಇದನ್ನು ಗೌರಿ ಮೇಡಂ ಮುಂದೆ ಹೇಳಿಕೊಂಡು ಅವರಿಂದಲೂ ಶಬ್ಬಾಶ್ ಗಿರಿ ಗಿಟ್ಟಿಸಿಕೊಳ್ಳಬೇಕೆಂಬ ಆತುರ. ಅವತ್ತು ಸಂಜೆ ಮನೆಗೆ ಹೋಗುವ ಸಮಯದಲ್ಲಿ, ಮೇಡಂ ಒಬ್ಬರೇ ತಮ್ಮ ಕೋಣೆಯಲ್ಲಿ ಬರವಣಿಗೆಯಲ್ಲಿ ಮಗ್ನರಾಗಿದ್ದ ಸಂದರ್ಭ ನೋಡಿಕೊಂಡು ಒಳಹೋಗಿ, ನಾಗವೇಣಿಯವರು ನನ್ನ ವರದಿಗಾರಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದನ್ನೂ ‘ಮುಂದೆ ಒಳ್ಳೆಯ ಪತ್ರಕರ್ತರಾಗ್ತೀರಿ’ ಅಂತ ನುಡಿದ ಭವಿಷ್ಯವಾಣಿಯನ್ನೂ ಹೇಳಿ, ಎದೆಯುಬ್ಬಿಸಿ ನಿಂತೆ.
ನನ್ನ ಕಡೆ ನೋಡಿ ಮುಗುಳ್ನಕ್ಕ ಗೌರಿ ಮೇಡಂ, ‘ವೆರಿ ಗುಡ್ ಕಣ್ರೀ… ಕೀಪ್ ಇಟ್ ಅಪ್’ ಅಂದ್ರು. ಒಂದು ಕ್ಷಣ ಯೋಚಿಸಿದವರು, “ನಾವು ಒಳ್ಳೆ ಪತ್ರಕರ್ತ ಆಗ್ಬೇಕು ಅಂದ್ರೆ ನಮ್ಮ ದೇಹದಲ್ಲಿ ಯಾವ ಅಂಗಗಳು ಪ್ರಧಾನ ಪಾತ್ರ ವಹಿಸ್ತಾವೆ ಹೇಳ್ರಿ” ಅಂದ್ರು. ಆ ಪ್ರಶ್ನೆ ಕೇಳಿ ಕ್ಷಣಕಾಲ ತಬ್ಬಿಬ್ಬಾದೆ. ಒಳ್ಳೆಯ ಪತ್ರಕರ್ತನ ಕ್ವಾಲಿಟೀಸ್ ಏನು ಅಂತ ಕೇಳಿದ್ದರೆ…. ಸಮಾಜಮುಖಿಯಾಗಿರಬೇಕು, ಪ್ರಾಮಾಣಿಕನಾಗಿರಬೇಕು, ಸತ್ಯಪರ ಆಗಿರಬೇಕು, ನೊಂದವರ-ಶೋಷಿತರ ಪರವಾಗಿರಬೇಕು, ಅನ್ಯಾಯವನ್ನು ಧೈರ್ಯವಾಗಿ ಪ್ರತಿರೋಧಿಸಬೇಕು ಅಂತ ಏನೇನೊ ಬುರುಡೆ ಪುರಾಣ ಹೊಡೆದು ನನ್ನ ಉತ್ತರಕ್ಕೆ ನಾನೇ ತಲೆದೂಗಬಹುದಿತ್ತು. ಆದ್ರೆ ದೇಹದ ಅಂಗವನ್ನು ಒಳ್ಳೆಯ ಪತ್ರಕರ್ತನಿಗೆ ಲಿಂಕ್ ಮಾಡಿ ಮೇಡಂ ಕೇಳಿದ ಪ್ರಶ್ನೆ ತುಸು ಗಲಿಬಿಲಿಗೆ ಕಾರಣವಾಯ್ತು. ಸಾವರಿಸಿಕೊಂಡು ಅವನ ಮೆದುಳು ಶುದ್ಧವಾಗಿರಬೇಕು, ಮಾತನಾಡಲು ಬಾಯಿ ಇರಬೇಕು, ಬರವಣಿಗೆಗೆ ಕೈ ಬೇಕು ಅಂತ ಏನೇನೊ ಉತ್ತರ ಹೇಳಿದೆ.
ಕೇಳಿಸಿಕೊಂಡು, ಮತ್ತೆ ಮುಗುಳ್ನಕ್ಕು “ನೀವು ಹೇಳಿದ ಎಲ್ಲಾ ಅಂಗಗಳೂ ಓಕೆ, ಆದ್ರೆ ಒಬ್ಬ ಒಳ್ಳೆಯ ಪತ್ರಕರ್ತ ಆಗಬೇಕು ಅಂದ್ರೆ ತಾಳ್ಮೆಯಿಂದ ಕೇಳಿಸಿಕೊಳ್ಳುವ ಕಿವಿ, ವ್ಯವಧಾನದಿಂದ ಕಾಣುವ ಕಣ್ಣು ತುಂಬಾ ಮುಖ್ಯ. ಪತ್ರಕರ್ತನಾಗಿ ನಿಮ್ಮ ಕೈ (ಬರವಣಿಗೆ) ಬಾಯಿಗೆ (ಮಾತುಗಾರಿಕೆ) ಸರಕು ಸಿಗುವುದೇ ಕಿವಿ ಮತ್ತು ಕಣ್ಣುಗಳಿಂದ. ಹಾಗಾಗಿ ನಿಮ್ಮ ಮುಂದೆ ಏನು ನಡೆಯುತ್ತಿದೆ ಅನ್ನೋದನ್ನು ಕೂಲಂಕಷವಾಗಿ ಕಾಣುವ ಕಣ್ಣು (ಅವರ ಮಾತಿನ ಅರ್ಥದಲ್ಲಿ ಕಣ್ಣು ಎಂದರೆ ಗ್ರಹಿಸುವ ದೃಷ್ಟಿ) ಮತ್ತು ಎದುರಿನವರು ಏನು ಹೇಳುತ್ತಿದ್ದಾರೆ ಅನ್ನೋದನ್ನು ತಾಳ್ಮೆಯಿಂದ ಕೇಳಿಸಿಕೊಳ್ಳುವ ಕಿವಿ ತುಂಬಾ ಮುಖ್ಯವಾಗ್ತವೆ. ನೀವು ಒಳ್ಳೆ ಪತ್ರಕರ್ತ ಆಗ್ಬೇಕು ಅಂದ್ರೆ ಕೈ ಮತ್ತು ಬಾಯಿಗಿಂತ ನಿಮ್ಮ ಕಣ್ಣು, ಕಿವಿಗಳನ್ನು ಹೆಚ್ಚಾಗಿ ಬಳಸಿ. ಆಗಲೇ ನಿಮ್ಮೊಳಗೆ ಸ್ಪಷ್ಟ ಅಭಿಪ್ರಾಯ ರೂಪುಗೊಳ್ಳೋದು; ನೀವು ಬರೆದುದನ್ನು ಅಥವಾ ಮಾತನಾಡಿದ್ದನ್ನು ಜನ ಗಂಭೀರವಾಗಿ ಸ್ವೀಕರಿಸೋದು” ಎಂದು ಕಿವಿಮಾತು ಹೇಳಿದರು.
ನಾಸೀರ್ ಹುಸೇನ್ ಪ್ರಕರಣದಲ್ಲಿ ಅವರ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿದ್ದಾರೆ ಅಂತ ಮೀಡಿಯಾಗಳು ಏಕಾಏಕಿ ತೀರ್ಪು ಕೊಟ್ಟು, ದಾಳಿ ನಡೆಸಿದ ಆತುರವನ್ನು ಕಂಡಾಗ ಗೌರಿ ಮೇಡಂ ಹೇಳಿದ ಮಾತು ಎಷ್ಟು ಸತ್ಯವಲ್ಲವೇ ಅನ್ನಿಸುತ್ತೆ. `ಹುಸೇನ್ ಸಾಬ್ ಜಿಂದಾಬಾದ್’ ಎಂದು ಕೂಗಿದ ಘೋಷಣೆಯನ್ನು ಕೇಳಿಸಿಕೊಳ್ಳುವ ಕಿವಿ ಅಲ್ಲಿದ್ದ ಟೀವಿ ಪತ್ರಕರ್ತರಿಗೆ ಇರಲಿಲ್ಲ. ಹಾಗಾಗಿ ಅವರಿಗದು ಪಾಕಿಸ್ತಾನ್ ಜಿಂದಾಬಾದ್ ಘೋಷಣೆಯಾಗಿ ಕೇಳಿಸಿತು. ಯಾಕೆಂದರೆ ಅಂತಹ ಘೋಷಣೆ, ಅಂತಹ ವಿವಾದಕ್ಕಾಗಿಯೇ ಅವರ ಮನಸ್ಸು ಹಪಾಹಪಿಸುತ್ತಿತ್ತು. ಒಳ್ಳೆಯ ಪತ್ರಕರ್ತರಾಗುವ ಕ್ವಾಲಿಟಿ ಒಂದು ಕಡೆಗಿರಲಿ, ಒಳ್ಳೆಯ ಮನುಷ್ಯರಾಗುವ ಯಾವ ಯೋಗ್ಯತೆಗಳೂ ಇಲ್ಲದವರು ಪತ್ರಕರ್ತರೆಂದು ತಮ್ಮನ್ನು ತಾವು ಕರೆದುಕೊಳ್ಳುತ್ತಿರುವಾಗ, ಇಂತಹ ಬೆಂಕಿ ಹಚ್ಚುವ ಕೆಲಸ ಮಾಡುತ್ತಿರುವಾಗ ನನ್ನನ್ನು ನಾನು ಪತ್ರಕರ್ತ ಎಂದು ಹೇಳಿಕೊಳ್ಳಲು ಮುಜುಗರವಾಗುತ್ತಿದೆ.
– ಗಿರೀಶ್ ತಾಳಿಕಟ್ಟೆ, ಪತ್ರಕರ್ತರು


