ಪ್ರತಿಷ್ಠಿತ ಶಾಲೆಗಳಲ್ಲಿ ಶಿಕ್ಷಣ ಕೊಡಿಸಿದರೆ ಮಾತ್ರ ವಿದ್ಯಾವಂತರಾಗುತ್ತಾರೆ. ಸಾಧಾರಣ ಶಾಲೆಗಳಲ್ಲಿ ಶಿಕ್ಷಣ ಕೊಡಿಸಿದರೆ ಸಾಧಕರಾಗುವುದಿಲ್ಲ ಎಂಬ ಕಲ್ಪನೆಯಲ್ಲಿದ್ದೇವೆ ಕಲಿಸುವವರಲ್ಲಿ ಬದ್ಧತೆ, ಕಲಿಯುವರಲ್ಲಿ ಶ್ರದ್ಧೆ ಇದ್ದಲ್ಲಿ ಶಾಲೆ ಯಾವುದಾದರೂ ಸಾಧನೆ ಮಾಡಲು ಸಾಧ್ಯ.
ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೆ ಮಾತ್ರವೇ ರೋಗಗಳು ಗುಣವಾಗುವುದು, ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾದರೆ ಜೀವಕ್ಕೆ ಅಪಾಯವೆಂಬ ಅರ್ಥವಿಲ್ಲದ ಆಲೋಚನೆಗಳ ನಡುವೆ ಬಹಳಷ್ಟು ಮಂದಿ ಇದ್ದಾರೆ. ಚಿಕಿತ್ಸೆ ನೀಡುವ ವೈದ್ಯರಲ್ಲಿ ಸೇವಾ ಮನೋಭಾವ ಮತ್ತು ರೋಗಿಗಳಲ್ಲಿ ವಿಶ್ವಾಸವಿದ್ದಲ್ಲಿ ಯಾವ ಆಸ್ಪತ್ರೆಯಾದರೇನು ಕಾಯಿಲೆಗಳಿಂದ ಗುಣಮುಖರಾಗಲು ಸಾಧ್ಯ.
ಅದ್ದೂರಿಯ ಆಡಂಬರದ ನಡುವೆ ವಿಜೃಂಭಣೆಯಿಂದ ಮದುವೆಗಳ ಮಾಡಿದರೆ ಮಾತ್ರವೇ ಸಾರ್ಥಕತೆ ಎಂಬ ಭ್ರಮೆಯ ನಡುವೆ ಸಾಧಾರಣವಾದ ವ್ಯವಸ್ಥೆಯಲ್ಲಿಯೂ ಮದುವೆಗಳು ನಡೆಯುತ್ತವೆ. ಸಂಸಾರಗಳು ಸಾಗಲು ಬೇಕಿರುವುದು ಪರಸ್ಪರ ವಿಶ್ವಾಸ ನಂಬಿಕೆ ಮತ್ತು ಅರ್ಥ ಮಾಡಿಕೊಂಡು ಬದುಕುವ ಮನಸ್ಸುಗಳು. ಇವುಗಳು ಇದ್ದಲ್ಲಿ ಮದುವೆಯೆಲ್ಲಾದರೇನು?
ಸುಖದ ಸಂಸಾರಕ್ಕೆ ಶ್ರೀಮಂತರ, ದೊಡ್ಡ ದೊಡ್ಡ ಜನರ ಸಹವಾಸದಲ್ಲಿದ್ದರೆ ಬದುಕು ಸಾಗುತ್ತದೆ ಎಂಬ ಭ್ರಮೆಯಲ್ಲಿ ತಮ್ಮ ನಡುವೆ ಇರುವ ಸಾಮಾನ್ಯರನ್ನು ಕಡೆಗಣಿಸಿ ಕನಸು ಕಾಣುವ ಮಂದಿಗೇನು ಕೊರತೆ ಇಲ್ಲ. ಬದುಕು ಸಾಗಿಸಲು ಬೇಕಿರುವುದು ಶ್ರೀಮಂತ ಗೆಳೆಯರು ಅಲ್ಲ ದೊಡ್ಡವರು ಅಲ್ಲ. ಶ್ರಮ ಮತ್ತು ಗುರಿ ಸ್ಪಷ್ಟವಾಗಿದ್ದರೆ ಬದುಕು ಸದೃಢವಾಗುತ್ತದೆ.
- ಕೆ ಎಸ್ ನಾಗರಾಜ್, ಬೆಂಗಳೂರು




