ದುನಿಯಾ ವಿಜಿ ನಟಿಸಿ, ನಿರ್ದೇಶನ ಮಾಡಿದ “ಭೀಮ” ಸಿನಿಮಾ ಒರಿಯನ್ ಪಿವಿಆರ್ ನಲ್ಲಿ ಸಿನಿಮಾ ನಟ, ನಿರ್ಮಾಪಕ ಅಶು ಬೆದ್ರ ಅವರ ಜೊತೆ ವೀಕ್ಷಿಸಿದೆ.
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
ಬೆಂಗಳೂರು ಶಹರಿನಲ್ಲಿ ಹದಿ ಹರೆಯದ ಹುಡುಗರ ಗಾಂಜಾ ಗುಂಗು, ಅದರ ಮಾರಾಟ ಜಾಲ, ಮಾಫಿಯಾ ಲೋಕದ ಕರಾಳ ಚಿತ್ರಣ ಕಟ್ಟಿಕೊಡುವ ಪ್ರಯತ್ನ ಭೀಮ ಚಿತ್ರದ್ದು. ಹಿಂಸೆ ಕೊಂಚ ಅತಿ ಅನಿಸಿದರೂ ಮೆಸೇಜ್ ಕಾಳಜಿಪೂರ್ಣ ಆಗಿದೆ. ಸಲಗದ ಒನ್ ಮ್ಯಾನ್ ಆರ್ಮಿ ಇಲ್ಲಿಯೂ ಅಬ್ಬರಿಸಿದೆ. ಫ್ರೆಶ್ ಫೇಸ್ ಗಳನ್ನು ಇಟ್ಟುಕೊಂಡು ಇಡೀ ಚಿತ್ರವನ್ನು ಹೆಗಲ ಮೇಲಿಟ್ಟುಕೊಂಡು ಸಾಗದೆ ಕೊಂಚ ಮಿಕ್ಕ ಪಾತ್ರಗಳ ಇಂಪಾರ್ಟೆನ್ಸ್ ತೂಗಿಸಿಕೊಂಡು ಹೋಗಿದ್ದಾರೆ ವಿಜಿ.
ಒಂದು ಅಂತರರಾಷ್ಟ್ರೀಯ ಶಹರಿನ ಒಡಲಿಗೆ ಎಲ್ಲೆಲ್ಲಿಂದಲೋ, ಯಾರೆಲ್ಲ, ಏನೇನೆಲ್ಲ ಸಹಜವಾಗಿ ಸೇರಿಕೊಳ್ಳುತ್ತಲೇ ಇರುತ್ತದೆ. ಹಾಗೆ ಡ್ರಗ್ಸ್ ದಂಧೆ ಕೂಡ ಸೇರಿಕೊಂಡಿದೆ. ವ್ಯಾಪಾರ, ವಹಿವಾಟು, ಹಣ ಯಥೇಚ್ಛವಾಗಿ ಇರುವ ಜಾಗಕ್ಕೆ ಯಾವ ಯಾವುದೋ ಅಮಲು ಒಂದು ತಲುಬು ಆಗಿ ಹಬ್ಬಲು ಹೆಚ್ಚು ಸಮಯ ಹಿಡಿಯುವುದಿಲ್ಲ. ಬೆಂಗಳೂರು ಶಹರಿನಲ್ಲಿ ಗಾಂಜಾ ಈಗ ಸೊಪ್ಪು, ತರಕಾರಿ ಅಷ್ಟೇ ಸಲೀಸಾಗಿ ಸರಬರಾಜು ಆಗುತ್ತಿದೆ. “ಸೊಪ್ಪು” ಎಂದೇ ಇದನ್ನು ಕರೆಯುವಷ್ಟು ಇದರ ಬಗ್ಗೆ ಸಲಿಗೆ ಬೆಳೆದಿದೆ. ಇದರ ತಲಬು ಈಗ ಹದಿ ಹರೆಯದ ಹುಡುಗರ ಎದೆಗೂಡು ಟೊಳ್ಳಾಗಿಸುತ್ತಿರುವುದು ಕಳವಳಕಾರಿ ವಿದ್ಯಮಾನ. ವ್ಯವಸ್ಥೆಯ ಬಹುದೊಡ್ಡ ಲಾಬಿ ಇದರ ಭಾಗವಾಗುತ್ತಿರುವುದು ಇನ್ನೂ ದೊಡ್ಡ ಕಳವಳಕಾರಿ ವಿದ್ಯಮಾನ ಎನ್ನುವುದು ದುನಿಯಾ ವಿಜಿ ಅವರ “ಭೀಮ” ದನಿ!
ಒಬ್ಬ ಭೀಮ ಎಷ್ಟು ಅಂತ ಇದರ ನಿರ್ಮೂಲನೆಗೆ ಹೆಣಗಲು ಸಾಧ್ಯ? ಇದು ಚಿತ್ರ ನೋಡಿದ ಮೇಲೆ ಉಳಿದುಬಿಡುವ ದೊಡ್ಡ ಪ್ರಶ್ನೆ.
ಡ್ರಗ್ಸ್, ಗಾಂಜಾ, ಸೆಕ್ಸ್ ಹೆಚ್ಚು ಹೆಚ್ಚು ವರ್ಣರಂಜಿತವಾಗಿ ಪ್ರಸ್ತಾಪಿಸಿ ಕಡೆಯಲ್ಲಿ ಅದರ ಕೆಟ್ಟ ಪರಿಣಾಮದ ಬಗ್ಗೆ ಸಂದೇಶ ನೀಡುವುದು ಬಹುತೇಕ ಇಂಥ ಸಿನೆಮಾಗಳ ಜಾಯಮಾನ. ಆದರೆ ವಿಜಿ ಒಟ್ಟು ಸಮಾಜದ ಮೇಲೆ ಇದರ ಪರಿಣಾಮಕ್ಕೆ ಲಾ ಅಂಡ್ ಆರ್ಡರ್ ಮಾತ್ರ ತಡೆ ಒಡ್ಡಬಹುದು ಎಂದು ಸೂಚ್ಯವಾಗಿ ಹೇಳಲು ಪ್ರಯತ್ನಿಸಿದ್ದಾರೆ. ಹೀರೋಯಿಸಂ ಮಾತ್ರದಿಂದ ಇಂಥ ವಾಸ್ತವ ಜಗತ್ತನ್ನು ಎದುರಿಸುವುದು ಸಾಧ್ಯವಾಗುವುದಿಲ್ಲ. ಇಡೀ ಸಮಾಜವೇ ಜೊತೆಯಾಗಿ ನಿಲ್ಲಬೇಕಾಗುತ್ತದೆ ಎನ್ನುವ ವಾಸ್ತವಾಂಶವನ್ನು ಮನದಟ್ಟು ಮಾಡಲು ಪ್ರಯತ್ನಿಸಿದ್ದಾರೆ.
ಶಾರ್ಪ್ ಎಡಿಟಿಂಗ್ ಕಥೆಯ ಬಹುಪಾಲು ಭಾಗವನ್ನು ತೂಗಿಸಿದ್ದು ಸೊಗಸಾಗಿದೆ. ಹೇಳಬೇಕಾದ್ದನ್ನು ಸೂಕ್ತ, ಪೂರಕ ಫ್ರೇಮ್ ನಲ್ಲಿ ಹೇಳುವ ಶೈಲಿ ಚೆನ್ನಾಗಿದೆ. ಇಲ್ಲಿ ವಿಜಿ ನಟನೆಯ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ಕೂಡ ಅತ್ಯಂತ ಸಮರ್ಥವಾಗಿ ನಿರ್ವಹಿಸಿದ್ದಾರೆ.
ನಟನಾಗಿ ವಿಜಿ ತಮ್ಮ ಲುಕ್ ತುಂಬ ಜತನದಿಂದ ಕಾಪಾಡಿಕೊಂಡಿದ್ದಾರೆ. ಒಂದಷ್ಟು ಫ್ರೇಮ್ ಗಳಲ್ಲಿ ದಕ್ಷಿಣದ ಶಾರೂಖ್ ಖಾನ್ ಅನ್ನಿಸುತ್ತಾರೆ. ಲೇಡಿ ಪೊಲೀಸ್ ಆಫೀಸರ್ ಖದರು ಮಾತ್ರ ಅಬ್ಬಾ, ಶಹಬ್ಬಾಸ್ ಎನ್ನುವ ಹಾಗಿದೆ ಆ ಅಭಿನೇತ್ರಿಯ ಪಾತ್ರ ನಿರ್ವಹಣೆ. ತಾಯಿ ಪಾತ್ರ ಕೂಡ ಅಷ್ಟೇ ಧ್ವನಿಪೂರ್ಣವಾಗಿದೆ. ವಿಜಿ ತಮ್ಮ ಹೀರೋಯಿಸಂ ಗೆ ಸಮನಾಗಿಯೇ ಲೇಡಿ ಪೊಲೀಸ್ ಆಫೀಸರ್ ಪಾತ್ರಕ್ಕೂ ಫೋಕಸ್ ನೀಡಿರುವುದು ನಿರ್ದೇಶಕರ ಸಮಾನತೆಯ ಬದ್ಧತೆಯನ್ನು ಧ್ವನಿಸುತ್ತದೆ.
ಕ್ಲೈಮ್ಯಾಕ್ಸ್ ಕೊಂಚ ಡ್ರಾಮ್ಯಾಟಿಕ್ ಅನಿಸಿತು.
ಫ್ಲೈಟ್, ಸಂಗೀತ, ಕ್ಯಾಮರಾ ಮತ್ತು ಮುಖ್ಯವಾಗಿ ಸಂಭಾಷಣೆ ಅತ್ಯಂತ ಸಮರ್ಪಕ ಸಾಥ್ ನೀಡಿವೆ. ಸಲಗ ನಂತರ ಮತ್ತೊಂದು ಮಾಸ್ ಹಿಟ್ ನೀಡಿದ ದುನಿಯಾ ವಿಜಿ ಅವರಿಂದ ಮತ್ತಷ್ಟು ಇಂಥ ಗ್ರೇ ಏರಿಯಾ ಕಥನಗಳು ತೆರೆಗೆ ಬರುವಂತಾಗಲಿ. ಈ ಜಗತ್ತಿನಲ್ಲಿ ಎಷ್ಟೋ ಇತರ ಜಗತ್ತುಗಳಿವೆ. ಅವುಗಳ ಕತ್ತಲ ಕಥೆಗಳಿವೆ, ವ್ಯಥೆಗಳಿವೆ. ಅವರದೇ ಆದ ಕಲರಫುಲ್ ಜಿಂದಗಿ ಕೂಡ ಇದೆ, ಹಾಗೆಯೇ ದುರಂತವಿದೆ. ವಿಜಿ ಇಂಥ ಝಾನರ್ ನಲ್ಲಿ ಹೆಚ್ಚು ಅರ್ಥಪೂರ್ಣ ಸಿನಿಮಾ ನೀಡಬಲ್ಲರು. ಮಚ್ಚು, ಲಾಂಗ್, ಅತಿ ಹಿಂಸೆಯ ಆಚೆಗೂ ಇಂಥ ಕಥನಗಳನ್ನು ಬೇರೆಯದೇ ಟ್ರೀಟ್ಮೆಂಟ್ ಜೊತೆ ವಿಭಿನ್ನವಾಗಿ ಕಟ್ಟಿಕೊಡುವ ಸಾಧ್ಯತೆಗಳ ಬಗ್ಗೆಯೂ ಯೋಚಿಸಲಿ. ಭೀಮ ಪಕ್ಕಾ ಮಾಸ್ ಚಿತ್ರ. ಹದಿ ಹರೆಯದ ಮಕ್ಕಳು ಚಿತ್ರದಲ್ಲಿನ ಗಾಂಜಾ ಕಿಕ್, ವ್ಹೀಲಿಂಗ್ ಮೋಹಕ್ಕೆ ಒಳಗಾಗದಿರಲಿ. ಎ ಸರ್ಟಿಫಿಕೇಟ್ ಇದ್ದರೂ ನೋಡಬಹುದಾದ ಚಿತ್ರ.
– ದಿಲಾವರ್ ರಾಮದುರ್ಗ, ಹಿರಿಯ ಪತ್ರಕರ್ತರು



