ತಂಗಳಾನ್: ನಿಜದ ನೆಲಮಾನವರ ಭೂಸ್ವತ್ತಿನ ಸಂಕಥನ

2 years ago

ನೆಲ ಎಂದಾಗ ಇಡೀ ಭೂಮಂಡಲದ ಕಲ್ಪನೆ ಮಾಡಿಕೊಳ್ಳಬೇಕಿಲ್ಲ. ಉಪಖಂಡದ ಸಾಕ್ಷಿಪ್ರಜ್ಞೆಯಂತಿರುವ ಕವಿ ಫೈಜ್ ಅಹ್ಮದ್ ಫೈಜ್ ಕಾವ್ಯ ಕೇಳುವ ಹಾಗೆ “ನಾವು ಬೆವರನು ಸುರಿಸಿ ದುಡಿಯುವ ಜನ, ನಮ್ಮ ಬೆವರಿನ ಪಾಲನು ಕೇಳುವೆವು, ತುಂಡು ಭೂಮಿ ಅಲ್ಲ ಒಂದು ದೇಶವಲ್ಲ ಇಡೀ ಭೂಗೋಳವನೇ ಕೇಳುವೆವು..” ಎನ್ನುವ ಶ್ರಮಜೀವಿಗಳ ನೆಲದ ಹಕ್ಕು ದೊಡ್ಡದು. ಅನುಮಾನವೇ ಇಲ್ಲ. ನೆಲದ ಮಕ್ಕಳಿಗೊ ಕನಿಷ್ಠ ಒಂದಷ್ಟು ಭೂಭಾಗವಾದರೂ ಆದೀತು ಎನ್ನುವ ಪ್ರಾಕ್ಟಿಕಲ್ ಬೇಡಿಕೆ. ನೆಲದ ಮಕ್ಕಳಿಗೆ ಪುಟ್ಟ ಪುಟ್ಟ ಒಡಲುಗಳು ಕೂಡ ಇವೆೆ, ಅವಕ್ಕೆ ಹಸಿವಿದೆ. ಅವಕ್ಕೊಂಚೂರು ಆಹಾರವಾದರೂ ಬೇಕಲ್ಲ?.. ಅಷ್ಟಕ್ಕಾಗಿ ಖಂಡಿತ ಭೂಮಿಯ ಒಡಲನ್ನೇ ಬಗೆಯಬೇಕಿಲ್ಲ ಎನ್ನುವ ವಿವೇಕ ನೆಲದ ಮಕ್ಕಳಿಗಿದೆ. ಇದರಾಚೆಗೆ ಏನಿಲ್ಲ. ಸ್ವಾಭಿಮಾನ, ಸ್ವಂತಿಕೆಯ ಹೊರತಾಗಿ. ಆದರೆ ಇಷ್ಟಕ್ಕೇ ದೊಡ್ಡ ಕಷ್ಟ, ಹಿಂಸೆ. ಆಳುವ ವರ್ಗಗಳ ದೌರ್ಜನ್ಯ ಅನಾದಿ ಕಾಲದಿಂದ ಅದೆಷ್ಟಿತ್ತು! ಮತ್ತು ಈಗಲೂ ಇದೆಯಲ್ಲ.

ನೆಲದ ನಂಬಿಕೆಗಳಲ್ಲಿ ದೈವಗಳು, ಭೂತ ಚೇಷ್ಟೆಗಳೂ ಇವೆ. ಅದರ ಸತ್ಯಾಸತ್ಯತೆಗಳ ಬಗ್ಗೆ ಜರಡಿ ಹಿಡಿದು ನಿಲ್ಲಬೇಕಿಲ್ಲ. ಅರಿವಿನಾಚೆಗಿನ ಅರಿವಿಗಾಗಿ ದೈವ, ದೈವಿಕ ರೂಪ, ಅರೂಪಗಳ ಅನೂಹ್ಯ, ಅಗೋಚರ, ಅಗಮ್ಯ ವಿಚಾರಗಳಲ್ಲಿಯೂ ಬೀಳಬೇಕಿಲ್ಲ. ಅನುಭವಕ್ಕೆ ದಕ್ಕಿದ್ದಷ್ಟೇ ನಾವು ಕಂಡುಕೊಂಡ ದರ್ಶನ ಎನ್ನುವ ಸಮಾಧಾನ, ಸ್ವಸಾಂತ್ವಾನದ ಅನುಭಾವ ಜಗತ್ತು ನೆಲದ ಮಕ್ಕಳದ್ದು. ಕಾಲಾನುಕ್ರಮದಲ್ಲಿ ಮಾನವ ಸಂತತಿಯಲ್ಲಿ ಕೆಲವರು ತಾವಿರುವ ಸಮಾಜೊ-ಆರ್ಥಿಕ ಸ್ಥಿತಿಗೆ ಒಂದು ದೊಡ್ಡ ಗತಿ ಕೊಡುವ ಭರಾಟೆಯಲ್ಲಿ ಸಂಪತ್ತಿನ ಆಸೆ ಹುಟ್ಟಿಸಿಕೊಂಡರು. ಈ ‘ಆಸೆಯೇ ದುಃಖದ ಮೂಲ ಕಾರಣ’ ಎಂಬ ಬುದ್ಧನಿಗೆ ದಕ್ಕಿದ ದರ್ಶನ ಕಾಲದ ಅರಿವಾಗಿ ಹಬ್ಬಿತು. ಅದು ಸದಾ ಉರಿವ ದೊಂದಿ. ಅದರ ಬೆಳಕಲ್ಲಿ ಭೂಮಿಯ ಒಂದು ಹಾದಿ ಶತಮಾನಗಳಿಂದ ಬೆಳಗುತ್ತಲೇ ಇದೆ. ಈ ಭೂಮಿಯ ತುಂಬ ಜೀಸಸ್, ಪೈಗಂಬರ್ ಮೊಹಮ್ಮದ್, ನಾನಕ, ಕಬೀರ, ಬಸವಣ್ಣ, ಪೆರಿಯಾರ್, ಅಂಬೇಡ್ಕರ್.. ಮತ್ತಷ್ಟು ಮಹಾಮಹೀಮರು ದರ್ಶಿಸಿದ ಮಹಾ ಹಾದಿಗಳು ಕೂಡ ಶತಮಾನಗಳಿಂದ ಬೆಳಗುತ್ತಲೇ ಇವೆ. ಎಲ್ಲ ಹಾದಿಗಳು ಅಂತಿಮವಾಗಿ ಮಾನವನ ಸಾರ್ಥಕತೆಯ ಸಂಪತ್ತಿನ ಕಡೆಗೇ ತೆರೆದುಕೊಂಡಿವೆ.

ಯಾವ ದೈವದ ಹಾದಿ ಯಾರನ್ನು ಎಂಥ ಸಾರ್ಥಕತೆಯೆಡೆಗೆ ಕರೆದೊಯ್ಯುವುದೊ ಅವರವರ ನಂಬಿಕೆ, ಪರಿಶ್ರಮ ಮತ್ತು ಬೆವರಿನ ಮೇಲೆ ನಿರ್ಧಾರ ಆಗುವುದೇನೊ..? ಗೊತ್ತಿಲ್ಲ.
ಪುರಾಣ, ಪಾರಮಾರ್ಥಿಕ, ಅಧ್ಯಾತ್ಮ, ರಿಲಿಜನ್, ಜನಾಂಗಿಕ ವಾದ.. ಈ ಎಲ್ಲ ಪರಿಕಲ್ಪನೆಗಳು ವಾಸ್ತವ ಮತ್ತು ನಮ್ಮ ಸ್ಮೃತಿಗಳ ನಡುವಣ ಅನುಸಂಧಾನದಲ್ಲಿ ಅರ್ಥವಾಗುವಂಥದು. ಇದರಿಂದ ಕಂಡುಕೊಳ್ಳುವ ಅರಿವು ಸಮಕಾಲೀನ ಬದುಕಿನ ರಾಜಕೀಯದ ಮೂಲ ದ್ರವ್ಯವಾಗಬೇಕಾದ ಅಗತ್ಯವಿದೆ. ಅದರಿಂದಲೇ ಸಾಮಾಜಿಕ ಬದುಕು ಪ್ರಜ್ಞಾವಂತಿಕೆ, ವಿವೇಚನಾಪೂರ್ವಕವಾಗಿ ಮತ್ತು ಕ್ರಾಂತಿಕಾರಕವಾಗಿ ಹದಗೊಳ್ಳಬಲ್ಲುದು. ಬುದ್ಧನ ಬೆಳಕಲ್ಲಿ ಮತ್ತು ಏಸು, ಮೊಹಮ್ಮದ್ ಪೈಗಂಬರರ ಸ್ಪಷ್ಟ ನಿಲುವುಗಳಿಂದ, ಮಹಾವೀರ, ನಾನಕ, ಕಬೀರರ ದರ್ಶನಗಳಿಂದ ಪ್ರಭಾವಿತ ಸರ್ವಜನರ ಒಳಿತಿನ ಸಂವಿಧಾನ ನಮ್ಮ ಸಮಕಾಲೀನ ಇಂಡಿಯಾ ಜಗತ್ತನ್ನು ಚಲನಶೀಲವಾಗಿಸಿದೆ. ಈ ಪಾತಳಿಯಿಂದ ‘ತಂಗಳಾನ್’ ಸಿನಿಮಾ ಗ್ರಹಿಸಲು ಪ್ರಯತ್ನಿಸಿದೆ. ತಂಗಳಾನ್ ನನ್ನೊಳಕ್ಕೆ ತುಂಬ ಅರ್ಥಛಾಯೆಗಳನ್ನು ಸೂಸಿದೆ. ನೆಲದ ನಿಜ ಅಸ್ಮಿತೆ ಕಂಡುಕೊಳ್ಳುವ ಮತ್ತು ಅದರಿಂದ ಗುರುತಿಸಿಕೊಳ್ಳುವ ಬಗೆ ಹೇಗೆ ಎನ್ನುವುದು ನನ್ನನ್ನು ಈಗಲೂ ಕಾಡುವ ಪ್ರಶ್ನೆ.

ತಂಗಳಾನ್ ಚಿತ್ರದ ಸೂಕ್ಷ್ಮತೆಗಳಿವೆಯಲ್ಲ ಇವು ಒಟ್ಟಾರೆ ಅಪ್ಪಟ ನೆಲಜನರ ಸಂವೇದನೆಗಳು. ಇದನ್ನು ದಲಿತ ಸಂವೇದನೆ ಎಂದಷ್ಟೇ ಪ್ರತ್ಯೇಕವಾಗಿ ಭಾವಿಸಬೇಕಿಲ್ಲ. ಹಾಗೆ ಲೇಬಲ್ ಅಂಟಿಸುವುದು ಸಣ್ಣ ಪಾಲಿಟಿಕ್ಸ್, ಚಿತ್ರದ ಹರವನ್ನು ತಗ್ಗಿಸುವ ಯತ್ನವೂ ಆಗಬಹುದು ಎನ್ನುವ ನಿಲುವು ನನ್ನದು. ಆದರೆ ಒಬ್ಬ ದಲಿತ ಪ್ರತಿಭೆ ಪ್ರಸ್ತುತ ಇಂಡಿಯಾಕ್ಕೆ ಹೊಸ ಪ್ರಜ್ಞೆ ಕಟ್ಟಿಕೊಡುತ್ತಿದ್ದಾನಲ್ಲ ಅದನ್ನು ತಿಕ ಮುಚ್ಕೊಂಡು ಒಪ್ಪಿಕೋಬೇಕು ಎನ್ನುವಂತಿದೆ ತಂಗಳಾನ್ ಆರ್ಭಟ.

ಸಿನಿಮಾದಲ್ಲಿರುವ ಮುಖ್ಯ ಪ್ರಶ್ನೆ ಭೂಸ್ವತ್ತಿಗೆ ಸಂಬಂಧಿಸಿದ್ದು. ಈಗಿನ ಅಗ್ರೇರಿಯನ್ ಸೊಸೈಟಿಯಲ್ಲಿ ಇದಿನ್ನೂ ದೊಡ್ಡ ಪ್ರಶ್ನೆಯೇ. ಮಧ್ಯಯುಗೀನ ಕಾಲದ ಇತಿಹಾಸದಂತೆ ಈ ಉಪಖಂಡದ ಉತ್ತರದಲ್ಲಿ ಮೊಘಲರು ಮತ್ತು ದಕ್ಷಿಣದಲ್ಲಿ ಹೈದರ್, ಟಿಪ್ಪು ಮತ್ತು ಬಹಮನಿಗಳು ಬರುವುದಕ್ಕಿಂತ ಮುಂಚೆ ಇಲ್ಲಿ ಊಳಿಗಮಾನ್ಯ ವ್ಯವಸ್ಥೆಯ ಅಟ್ಟಹಾಸ ಮುಂದುವರಿದುಕೊಂಡೇ ಬಂದಿತ್ತು.

ಪ್ರಾಚೀನ ದಾಖಲೆಗಳ ಪ್ರಕಾರ, ಶಾತವಾಹನರ ಕಾಲದಲ್ಲಿ ಊಳಿಗಮಾನ್ಯ ಪದ್ಧತಿ ಪ್ರಾರಂಭವಾಯಿತು. ಗುಪ್ತರ ಕಾಲದಲ್ಲಿ ಊಳಿಗಮಾನ್ಯ ಪ್ರಭುಗಳು ಅತ್ಯಂತ ಹೆಚ್ಚಿನ ಸ್ವಾತಂತ್ರ‍್ಯ ಹೊಂದಿದ್ದರು. ಗುಪ್ತರ ಕಾಲವನ್ನು “ಸ್ವರ್ಣ ಯುಗ” ಎಂದು ಬಣ್ಣಿಸಿದ್ದರ ಹಿಂದೆ ಈ ಊಳಿಗಮಾನ್ಯ ವ್ಯವಸ್ಥೆಯ ಸಮರ್ಥನೆ ಇದೆ. ಗುಪ್ತರ ಯುಗದಲ್ಲಿ ಸಾಮಂತರು ಸಂಪೂರ್ಣ ಸ್ವತಂತ್ರ ಆಡಳಿತಗಾರರಾಗಿದ್ದರು. ಕ್ರಿ.ಶ. 2ನೇ ಶತಮಾನದಲ್ಲಿ ಊಳಿಗಮಾನ್ಯ ನೀತಿಗಳಿಂದಾಗಿ ಆನುವಂಶಿಕ ಹಕ್ಕುಗಳು ಮತ್ತು ನ್ಯಾಯ ಅಧಿಕಾರಗಳನ್ನು ಊಳಿಗಮಾನ್ಯ ಅಧಿಪತಿಗಳಿಗೆ ನೀಡಲಾಗಿತ್ತು. ಇದರ ಪರಿಣಾಮವಾಗಿ ನಿರಂಕುಶ ಪ್ರಭುತ್ವದ ಊಳಿಗಮಾನ್ಯರ ಸ್ಥಾಪನೆಯಾಯಿತು. ದೇಶದ ಸಮಕಾಲೀನ ರಾಜಕೀಯ ಸಾಮಾಜಿಕ ಬೆಳವಣಿಗೆಯ ಸಂದರ್ಭವನ್ನು ಅವಲೋಕಿಸಿದರೆ ನಿರಂಕುಶ ಪ್ರಭುತ್ವದ ಊಳಿಗಮಾನ್ಯರ ಪುನರುತ್ಥಾನದ ಪ್ರಯತ್ನ ಎದ್ದು ಕಾಣಿಸುವಂತಿದೆ.

ಮೌರ್ಯರ ನಂತರದ ಊಳಿಗಮಾನ್ಯ ಪದ್ಧತಿಯು ಸಮಾಜವನ್ನು ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು ಮತ್ತು ಶೂದ್ರರು ಎಂದು ಜಾತಿ ವ್ಯವಸ್ಥೆಯ ಮೇಲೆ ನಾಲ್ಕು ಗುಂಪುಗಳಾಗಿ ಪ್ರತ್ಯೇಕಿಸಿತು. ಆದರೆ ಯುರೋಪಿಯನ್ ಊಳಿಗಮಾನ್ಯ ವ್ಯವಸ್ಥೆ ಸಮಾಜವನ್ನು ಚರ್ಚ್, ಶ್ರೀಮಂತರು ಮತ್ತು ಸಾಮಾನ್ಯರು ಎಂದು ಮೂರು ಗುಂಪುಗಳಾಗಿ ವಿಂಗಡಿಸಿತು.

ತಂಗಳಾನ್ ಚಿತ್ರದ ಪ್ಲಾಟ್ ನಲ್ಲಿ ಯುರೋಪಿಯನ್ ಊಳಿಗಮಾನ್ಯ ವ್ಯವಸ್ಥೆ ಇಂಡಿಯಾದ ಪ್ರಾಚೀನ ಮತ್ತು ಮೌರ್ಯ ಸಾಮ್ರಾಜ್ಯ ಮತ್ತು ಆನಂತರದ ಊಳಿಗಮಾನ್ಯ ವ್ಯವಸ್ಥೆಯ ಪುನರುತ್ಥಾನದ ಮಾದರಿಯಂತೆ ಗೋಚರಿಸುತ್ತದೆ. ಇಲ್ಲಿ ಅಗ್ರೇರಿಯನ್ ಸೊಸೈಟಿಯ ಕೃಷಿ ಚಟುವಟಿಕೆ ನಡುವೆ ಬ್ರಿಟಿಷ್ ಸಾಮ್ರಾಜ್ಯದ ಎಂಟ್ರಿ ಚಿತ್ರದ ಮುಖ್ಯ ವಸ್ತುವಿನ ಕಾಲವನ್ನು ಸ್ಪಷ್ಟಪಡಿಸುತ್ತದೆ. ಇದಕ್ಕೂ ಸ್ವಲ್ಪ ಮುಂಚಿನ ಕಾಲದಲ್ಲಿ ಮೊಘಲರು ಮತ್ತು ಹೈದರ್ ಅಲೀ, ಟಿಪ್ಪು ಸುಲ್ತಾನ್ ಅವರಂಥ ಆಡಳಿತಗಾರರು ಭೂಸ್ವತ್ತಿನ ಅಧಿಕಾರವನ್ನು ಬಡವರು ಮತ್ತು ಆದಿವಾಸಿ ದಲಿತರಿಗೆ ನೀಡಿ ಭೂಸುಧಾರಣೆಯ ಅಸಲಿ ಬೀಜಗಳನ್ನು ಬಿತ್ತಿದರು. ಬ್ರಿಟಿಷ್ ಸಾಮ್ರಾಜ್ಯದ ಎಂಟ್ರಿ ಯಿಂದ ಮೈಸೂರಿನಂಥ ಸಂಸ್ಥಾನಗಳು ಸಾಮಂತ ಅಧಿಕಾರವನ್ನು ಪುನರುಜ್ಜೀವನ ಗೊಳಿಸಿಕೊಂಡವು. ಬಡವರ ಮತ್ತು ನ್ಯಾಯ, ನೀತಿ, ಧರ್ಮಪರ ನಿಂತ ಟಿಪ್ಪು ಸುಲ್ತಾನ್ ಈ ಪುನರುತ್ಥಾನದ ವ್ಯೂಹದಲ್ಲಿ ಬಲಿಪಶುವಾಗಬೇಕಾಯಿತು. ಹೀಗಾಗಿ ಯುರೋಪಿಯನ್ ಊಳಿಗಮಾನ್ಯ ಮತ್ತು ಜೊತೆಜೊತೆಯಲ್ಲಿ ನವ ಉದಾರೀಕರಣದ ಹುಸಿ ಸಂಸ್ಕೃತಿ ಅತ್ಯಂತ ಸಲೀಸಾಗಿ ಇಲ್ಲಿ ಚಾಲನೆಗೆ ಬಂದಿತು. ತಂಗಳಾನ್ ಚಿತ್ರದಲ್ಲಿ ಚರ್ಚ್ ಅಧಿಕಾರ ಸಾಂಕೇತಿಸುವ ಬ್ರಿಟಿಷ್ ಲಾರ್ಡ್ ಸಹಚರನ ಪಾತ್ರ (ಕೈಯಲ್ಲಿ ಯಾವತ್ತೂ ಬೈಬಲ್ ಹಿಡಿದುಕೊಂಡು ಬಹುತೇಕ ಜೀಸಸ್ ಜೀಸಸ್ ಎಂದೇ ಬಡಬಡಿಸುವ ಒಂದು ಪಾತ್ರ), ಬ್ರಿಟಿಷರ ಜೊತೆ ಕೈಜೋಡಿಸಿದ ಸಾಮಂತರು, ಭೂಮಾಲೀಕನ ಪಾತ್ರ, ಮೈಸೂರು ಸಂಸ್ಥಾನದ ಸೈನಿಕರು ಮತ್ತು ದಿವಾನ್ ಪೂರ್ಣಯ್ಯ ನೆನಪಿಸುವ ಒಂದು ಇಮೇಜ್ ಕಟ್ಟಿಕೊಟ್ಟಿದ್ದು ಇಲ್ಲಿ ಅತ್ಯಂತ ಮಹತ್ವದ್ದಾಗಿದೆ. ಇದು ದೇಶದ ಪ್ರಸ್ತುತ ಆಡಳಿತ ಮಾದರಿಯತ್ತ ಬೆರಳು ತೋರಿಸುವಂತಿದೆ.
ತಂಗಳಾನ್ ಚಿತ್ರದಲ್ಲಿ ಆದಿವಾಸಿ ನಾಯಕ ತನ್ನ ಜನರ ರಕ್ಷಣೆಗೆ ಬ್ಲ್ಯಾಕ್ ಪ್ಯಾಂಥರ್ ಅನ್ನು ಸೀಳಿಹಾಕುವ ಚಿತ್ರಣ ಬರುತ್ತದೆ. ಇದು ನಾಡಿನ ಜನರ ರಕ್ಷಣೆಗೆ ಎಂಥ ಸಾಹಸಕ್ಕೂ ಮುಂದಾಗುತ್ತಿದ್ದ ‘ಮೈಸೂರು ಹುಲಿ ಟಿಪ್ಪೂ ಸುಲ್ತಾನ್’ ಇಮೇಜ್ ಅನ್ನು ಕಟ್ಟಿಕೊಡುತ್ತದೆ. ಬ್ರಿಟಿಷ್ ಜೊತೆ ಬರುವ ಬ್ರಾಹ್ಮಣ ಪಾತ್ರ ದಿವಾನ್ ಪೂರ್ಣಯ್ಯ ಇಮೇಜ್ ಅನ್ನು ಕಟ್ಟಿಕೊಡುತ್ತದೆ. ಬ್ರಿಟಿಷ್ ಅಧಿಕಾರಿ ಪಾತ್ರ ಸಮಕಾಲೀನ ಸಂದರ್ಭದಲ್ಲಿ ಸಾಮಂತವಾದ ಪರ ಆಳುವವನ ಇಮೇಜ್ ಅನ್ನು ಕಟ್ಟಿಕೊಡುತ್ತದೆ. ಇದಕ್ಕೂ ಮುಖ್ಯವಾಗಿ ಚಿತ್ರದಲ್ಲಿ ಚಿನ್ನದ ಆಸೆಗೆ ನಡೆಯುವ ಹುಡುಕಾಟ (ಟಿಪ್ಪು ಕೂಡ ಚಿನ್ನದ ನಿಕ್ಷೇಪಕ್ಕೆ ಹುಡುಕಾಟ ನಡೆಸಿದ್ದನ್ನು ಚಿತ್ರ ಉಲ್ಲೇಖಿಸುತ್ತದೆ ಕೂಡ) ಸಂಘರ್ಷ, ರಕ್ತಪಾತ ಕೋಲಾರ ಚಿನ್ನದ ಗಣಿಯ ಸುತ್ತಲಿನ ಇತಿಹಾಸವನ್ನು ಕೆಣಕುತ್ತದೆ. ಚೋಳರ ಕಾಲವನ್ನು ಕಟು ವಿಮರ್ಶೆಗೊಳಪಡಿಸಿದಂತಿದೆ ಚಿತ್ರದ ಟ್ರೀಟಮೆಂಟ್. ಇದರ ನಡುವೆ ಆಗಾಗ ಸಾಮಾನ್ಯರ ಅಸಹಾಯಕ ಸ್ಥಿತಿಗೆ ದೂರದಿಂದಲೇ ಕೈ ಎತ್ತಿ ‘ಶಾಂತಿ ಶಾಂತಿ, ಆಸೆಯೇ ದುಃಖಕ್ಕೆ ಮೂಲ ಕಾರಣ’ ಎನ್ನುವ ಬುದ್ಧನಂತೆ ಧ್ವನಿಸುವ ಆ ಪ್ರತಿಮೆ, ಅದರ ರುಂಡ ಹಾರಿಸುವ ಚಿತ್ರಣ ಮತ್ತು ಚಿತ್ರದ ಕೊನೆ ಕೊನೆಯಲ್ಲಿ ಆ ರುಂಡದ ದಡ ಮತ್ತು ತೋರುಬೆರಳು ಕಾಣಿಸುವಂತೆ ಮಣ್ಣಲ್ಲಿ ಹೂತು ಹೋಗಿರುವ ಹಾಗೂ ಅದರ ಮುಂದೆ ಆದಿವಾಸಿ ಯುವಕ ರೋಧಿಸುತ್ತ ಕುಳಿತ ಸನ್ನಿವೇಶ ಪ್ರಾಗೈತಿಹಾಸಿಕ ವಿವಿಧ ಅಸ್ಮಿತೆಗಳ ಕಟ್ಟಡಗಳು, ಪ್ರತಿಮೆಗಳ ಧ್ವಂಸವನ್ನು ನೆನಪಿಸುವುದೆಲ್ಲ ಒಂದು ಅದ್ಭುತ ಮೆಟಫರ್! ಪಾಲಿಟಿಕಲ್ ಸ್ಟೇಟಮೆಂಟ್.

ತಂಗಳಾನ್ ಚಿತ್ರದ ಪ್ಲಾಟ್ ತುಂಬ ಗಾಢವಾದದ್ದು. ಕಥಾ ಹಂದರ ಇಷ್ಟೇ- 1850ರಲ್ಲಿ ಅರ್ಕಾಟ್‌ನ ಒಂದು ಪ್ರದೇಶದಲ್ಲಿ ಬ್ರಿಟಿಷ್ ಅಧಿಕಾರಿ ಲಾರ್ಡ್ ಲಿಂಗ್ಟನ್ ಚಿನ್ನದ ಹುಡುಕಾಟದಲ್ಲಿರುತ್ತಾನೆ. ಅಲ್ಲಿನ ಫ್ಯೂಡಲ್ ವ್ಯವಸ್ಥೆಯ ನಡುವೆ ಸಂಘರ್ಷದಲ್ಲಿರುವ ಆದಿವಾಸಿ ಜನಾಂಗದ ನಾಯಕ ತಂಗಳಾನ್ ಮೇಲೆ ಇವನ ಕಣ್ಣು ಬೀಳುತ್ತದೆ. ತಂಗಳಾನ್ ತನ್ನ ಜನರ ಜೊತೆ ಚಿನ್ನದ ನಿಕ್ಷೇಪ ತಲಾಶ್ ಮಾಡಿ ಅಲ್ಲಿಂದ ಚಿನ್ನ ಅಗೆದು ತರುವಂತೆ ಬ್ರಿಟಿಷ್ ಅಧಿಕಾರಿ ಲಾರ್ಡ್ ಲಿಂಗ್ಟನ್ ಆಜ್ಞೆ ನೀಡುತ್ತಾನೆ. ಚಿನ್ನವನ್ನು ಸಮನಾಗಿ ಹಂಚಿಕೊಳ್ಳುವ ಭಾಷೆ ನೀಡಿ ಲಿಂಗ್ಟನ್ ಆದಿವಾಸಿ ನಾಯಕ ತಂಗಳನ್ ಮತ್ತು ಆತನ ಸಹಚರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾನೆ. ಚಿನ್ನದ ಹುಡುಕಾಟದ ದಾರಿಯಲ್ಲಿ ತಂಗಳಾನ್ ಮಾಯಾವಿ ಆರತಿಯನ್ನು ಎದುರಿಸುತ್ತಾನೆ. ಅತಿಮಾನುಷ ಕಲ್ಪನೆಯ ಒಂದು ಚಿತ್ರಣ ಈ ಮಾಯಾವಿ ಆರತಿ. ಇವಳ ಹೊಟ್ಟೆ ಬಗೆದರೆ ರಕ್ತದ ಭೋರ್ಗರೆತ ಒಂದು ಜಲಪಾತದಂತೆ! ಇದೊಂದು ಸ್ಥಳೀಯ ದೈವ ನಂಬಿಕೆಯಲ್ಲಿ ರೂಪುಗೊಳಿಸಿದ ಪಾತ್ರ. ಸಂಪತ್ತು ಇರುವಲ್ಲಿ ಕಾವಲಿಗೆ ನಿಸರ್ಗದ ಒಂದು ವ್ಯವಸ್ಥೆ ಇದ್ದೇ ಇರುತ್ತದೆ ಎನ್ನುತ್ತಾರಲ್ಲ ಆ ಕಾರಣಕ್ಕೆ. ಇದನ್ನು ಯಕ್ಷಿಣಿ, ಮಾಯಾವಿ ಇಲ್ಲವೇ ಸರ್ಪಗಾವಲು (ಚಿತ್ರದಲ್ಲಿ ಚಿನ್ನದ ನಿಕ್ಷೇಪಕ್ಕೆ ಹತ್ತಿರದಲ್ಲಿ ಸರ್ಪಗಳು ಹರಿದಾಡುವ ಚಿತ್ರಣವೂ ಇದೆ) ಎನ್ನಿ ಅಥವಾ ಭೂತಾರಾಧನೆಯ ಕಲ್ಪನೆ ಎನ್ನಿ, ತಂಗಳಾನ್ ಮತ್ತು ಅಂಥದೊಂದು ಸರ್ಪಗಾವಲು ಮತ್ತು ಯಕ್ಷಿಣಿ ಅಥವಾ ಮಾಯಾವಿ ನಡುವಣ ಪ್ರೀತಿ, ಅವಿನಾಭಾವ ಸಂಬಂಧದ ಮತ್ತು ಕೊನೆಗೆ ಹಸಿವಿನ ತಾಪಕ್ಕೆ ಅವಳೊಂದಿಗೆ ನಡೆಸುವ ಸಂಘರ್ಷ, ಮಾಯಾವಿ ಹೊಟ್ಟೆ ಬಗೆಯುರ್ವಥ ದೃಶ್ಯಗಳು ಒಂದು ರೋಚಕ ಕಥನವಾಗಿ ಗಮನ ಸೆಳೆಯುವಂಥ ವಿಭಿನ್ನ ಪ್ಲಾಟ್ ಈ ಚಿತ್ರದ್ದು.

ಇಲ್ಲಿರುವ ಪ್ಲೇ ಇಷ್ಟೇ- ಚಿನ್ನದ ನಿಕ್ಷೇಪಕ್ಕೆ ತಲುಪದಂತೆ ಮಾಯಾವಿ ಆರತಿ ಎಲ್ಲರನ್ನು ತಡೆಯುವ ಪ್ರಯತ್ನ ನಡೆಸುತ್ತಾಳೆ. ಮಾಯಾವಿ ಮತ್ತು ನಿಸರ್ಗದ ಇತರ ರಹಸ್ಯಗಳನ್ನು ಭೇದಿಸುತ್ತ, ತನ್ನ ಪೂರ್ವಜರ ಕಥನಗಳಲ್ಲಿ ಕೇಳಿದ ರೋಚಕ ಕಥೆಗಳಿಂದ ಪಡೆದ ಸ್ಮೃತಿಯೊಂದಿಗೆ ಚಿನ್ನದ ಹುಡುಕಾಟವನ್ನು ಸಮೀಕರಿಸಿ ತಂಗಳಾನ್ ಮುನ್ನುಗ್ಗುತ್ತಾನೆ. ತನ್ನ ಜನಾಂಗದ ಹೊಟ್ಟೆ ಹಸಿವು ನೀಗಿಸಲು ಪಾಳೆಯಗಾರಿಕೆ ಮತ್ತು ಬ್ರಿಟಷ್ ಸಾಮ್ರಾಜ್ಯಷಾಹಿತ್ವ ನಿರ್ವಹಿಸಿದ ಕೆಲಸ ಮಾಡಲೇಬೇಕಾದ ಅನಿವಾರ್ಯತೆಯಲ್ಲಿ ತಂಗಳಾನ್ ಮತ್ತು ಆತನ ಹಾಡಿಯ ಆದಿವಾಸಿಗಳಿದ್ದಾರೆ. ಕಡೆಗೂ ಅಲ್ಲಿಗೆ ತಲುಪುತ್ತಾರೆ.  ಬ್ರಿಟಿಷ್ ಅಧಿಕಾರಿ ಚಿನ್ನ ಸಿಕ್ಕ ಮೇಲೆ ಹಂಚಿಕೊಳ್ಳುವ ಭಾಷೆ ಉಲ್ಲಂಘಿಸಲು ನೋಡುತ್ತಾನೆ. ಜೊತೆಯಲ್ಲಿದ್ದ ಬ್ರಾಹ್ಮಣ ಮತ್ತು ಸೈನಿಕರು ಬ್ರಟಿಷ್ ಅಧಿಕಾರಿ ಪರವಹಿಸುತ್ತಾರೆ. ಚಿನ್ನಕ್ಕೆ ಮತ್ತೆ ಸಂಘರ್ಷ ನಡೆಯುತ್ತದೆ.
ಇಂಟರ್‌ಕಟ್‌ನಲ್ಲಿ ಎಲ್ಲಿಯತನಕ ಈ ಸಂಘರ್ಷ ಎನ್ನುವ ಪ್ರಶ್ನೆಯನ್ನು ತಂಗಳಾನ್ ತನ್ನ ಸ್ಮೃತಿಗಳೆದುರು ಇಟ್ಟುಕೊಂಡೇ ಸಾಗುತ್ತಾನೆ. ಸೆಣಸುತ್ತಲೇ ಇರುತ್ತಾನೆ. ವಾಸ್ತವ, ಜನಪದ ಕಥನಗಳ ಕಲ್ಪನೆ, ಆದಿವಾಸಿ ಸಂಸ್ಕೃತಿ, ನಂಬಿಕೆಗಳು, ಫ್ಯುಡಲ್ ಮತ್ತು ಸಾಮ್ರಾಜ್ಯಷಾಹಿ ಶಕ್ತಿಗಳ ಅಟ್ಟಹಾಸದ ನಡುವೆ ಒಮ್ಮೆ ಚರಿತ್ರೆಗೆ, ಗತಕಾಲಕ್ಕೆ, ವಾಸ್ತವ ಜಗತ್ತಿಗೆ ಮತ್ತು ಆಕ್ಷಣಕ್ಕೆ ತೀವ್ರ ಸಂವಾದಿಯಾಗುತ್ತಲೇ ಸಾಗುವ ಈ ವಿಭಿನ್ನ ಕಥನ ಇತಿಹಾಸದ ಮತ್ತು ಪುರಾಣಗಳ ಹಲವು ರಹಸ್ಯಗಳನ್ನು, ಮತ್ತವುಗಳ ಮಿಥ್ ಭೇದಿಸುತ್ತದೆ. ಹಲವು ಇಮೇಜ್‌ಗಳ ಮೂಲಕ ವಾಸ್ತವಕ್ಕೆ ಕನ್ನಡಿ ಹಿಡಿಯುವ ಚಿತ್ರದ ನಿರೂಪಣೆಯಲ್ಲಿ ಉದ್ದಕ್ಕೂ ವಿಭಿನ್ನವಾದ ಅಂತಃಸಂಬಂಧಿ ಇಮೇಜ್‌ಗಳು ಬಂದುಹೋಗುತ್ತವೆ. ಪ್ರತಿಯೊಂದು ಇಮೇಜ್ ಇತಿಹಾಸದ ನಮ್ಮ ಗೊಂದಲಗಳು, ಅಸ್ಪಷ್ಟತೆ ಅಥವಾ ಸ್ಪಷ್ಟತೆ ಎಲ್ಲವನ್ನು ಕೆಣಕುತ್ತ, ಕೆದಕುತ್ತ ಹೋಗುತ್ತದೆ. ಕೊನೆಗೆ ಒಟ್ಟಾರೆ ಚಿನ್ನ ಎನ್ನುವುದೇ ಒಂದು ಮೆಟಫರ್ ಆಗಿ ಕಾಣಿಸುತ್ತದೆ. ಅದು ಆಯಾ ಜನರು ವಾಸಿಸುವ ಅವರದೇ ನೆಲ ಸಂಪತ್ತು. ಅದು ಅವರಿಗೇ ಸಲ್ಲುವಂಥದ್ದು ಎನ್ನುವುದನ್ನು ಅದು ಧ್ವನಿಸುತ್ತದೆ. ಅದನ್ನು ತಲುಪಲು ಮತ್ತು ಪಡೆಯಲು ತಂಗಳಾನ್ ಹಾಗೂ ಆದಿವಾಸಿ ಹಾಡಿ ಜನ ಹರಿಸುವ ಬೆವರಿನ ಮಿಂಚು ಮತ್ತು ಚಿನ್ನದ ಹೊಳಪು ಎರಡೂ ಒಂದರ್ಥದಲ್ಲಿ ಅಭಿನ್ನ. ಬೆವರಿನ ಫಲವೇ ಸಂಪತ್ತು ಬೇರೇನೂ ಅಲ್ಲ. ಅದು ಬೆವರಿಗೇ ಸಲ್ಲಬೇಕು. ನಿಕ್ಷೇಪದ ಚಿನ್ನ ಮತ್ತು ತಂಗಳಾನ್ ಬೆವರು ಎರಡರ ಸಾಮ್ಯತೆಯೇ ಅದ್ಭುತ ಮೆಟಫರ್ ಎನ್ನುವಂಥ ನಿರೂಪಣೆ ಚಿತ್ರದ್ದು.

ಪ್ರಸಕ್ತ ರಾಜಕೀಯ ಸಂದರ್ಭದಲ್ಲಿ ನವಪಾಳೆಯಗಾರಿಕೆ ಮತ್ತು ಸಾಮಂತವಾದ ಸಂಸ್ಕೃತಿಯ ಪುನರುತ್ಥಾನದ ಹವಣಿಕೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ಸ್ಥಿತಿಯನ್ನು ತಂಗಳಾನ್ ನಾಯಕತ್ವ ಪರಿಕಲ್ಪನೆಯಲ್ಲಿ ದಿಟ್ಟವಾಗಿ ಎದುರಿಸುವ ಸಾಂಘಿಕ ಯತ್ನದ ಪರಿಹಾರ ಸೂಚಿಸುವ ಪ್ರಯತ್ನ ಚಿತ್ರದ್ದು.

ಮೇಕಿಂಗ್ ಬಗ್ಗೆ ಹೇಳುವುದಾದರೆ ಅದ್ಭುತ ಕಲಾನಿರ್ದೇಶನ, ಡಿಒಪಿ, ಲೈಟಿಂಗ್, ಕಲರ್ ಟೋನ್, ವಿನ್ಯಾಸ, ವಸ್ತ್ರವಿನ್ಯಾಸ, ಪರಿಕರಗಳು, ಸೌಂಡ್  ಎಂಜಿನಿಯರಿಂಗ್, ಸಂಗೀತ, ಸಂಭಾಷಣೆ, ವಿಕ್ರಂ ಅವರಂಥ ನಟರ ಪಫಾರ‍್ಮೆನ್ಸ್ ಎಲ್ಲ ವಿಭಾಗಗಳನ್ನು ಪೂರಕವಾಗಿಟ್ಟುಕೊಂಡು ಒಬ್ಬ ಫೈನ್ ಆರ್ಟ್ಸ್ ಓದಿದ ನಿರ್ದೇಶಕ ಬೆಳ್ಳಿ ಪರದೆಯ ಮೇಲೆ ತಾನು ಆಯ್ದುಕೊಂಡ ವಸ್ತುವಿನ ಎಲ್ಲ ಪಲಕುಗಳನ್ನು ಸೆನ್ಸಿಬಲ್ ಆಗಿ, ಕಲಾತ್ಮಕ ಸ್ಪರ್ಶದೊಂದಿಗೆ ಕಾಲದ ತುರ್ತು, ಅಗತ್ಯವನ್ನು ತರ್ಕಬದ್ಧವಾಗಿ ದೃಶ್ಯರೂಪದಲ್ಲಿ ಸಮೀಕರಿಸಿ, ಡಿಫೈನ್ ಮಾಡಿ, ಗಾಢ ಅನುಭವವಾಗಿಸಿ ಒಂದು ಇಂಟಲೆಕ್ಚುವಲ್  ಅಬ್ಸರ್ವೇಷನ್ ಅನ್ನು ಎಷ್ಟು ಸಮರ್ಥವಾಗಿ ಪ್ರಸ್ತುತಪಡಿಸಬಲ್ಲ ಎನ್ನುವುದಕ್ಕೆ ತಂಗಳಾನ್ ಚಿತ್ರದ  ಮೇಕಿಂಗ್ ಒಂದು ನಿದರ್ಶನ. ನಿರ್ದೇಶಕ ಪಾ ರಂಜಿತ್ ಈ ಕಾಲಕ್ಕೆ ಹೊಸ ಸಿನಿಮಾವನ್ನು ಹೊಸ ಸಿನೆಮಿಕ್ ಭಾಷೆಯಲ್ಲಿ (ಎ ನ್ಯೂ ವಿಶ್ಯುಯಲ್ ಲ್ಯಾಂಗ್ವೇಜ್) ಬೆಳ್ಳಿಪರದೆಯ ಮೇಲೆ ಸೋಪಜ್ಞ ನೀಲಿ ಶಾಹಿ ಮೂಲಕ ಚಿತ್ರಮಹಾಕಾವ್ಯ ಬರೆಯುವ ಪ್ರಯತ್ನ ಮಾಡಿದ್ದಾರೆ. ಬುದ್ಧನ ಅರಿವು, ಟಿಪ್ಪೂವಿನ ಕೆಚ್ಚೆದೆ ಮತ್ತು ಅಂಬೇಡ್ಕರ್ ಸ್ಪಷ್ಟತೆಯನ್ನು ಒಟ್ಟೊಟ್ಟಿಗೆ ಬದುಕುತ್ತಿರುವಂತೆ ಕಾಣುವ ಪಾ ರಂಜಿತ್ ಸಧ್ಯ ನಮ್ಮ ನಡುವೆ ಹೊಳೆಯುವ ‘ನೀಲಿ ವಜ್ರ’.

– ದಿಲಾವರ್ ರಾಮದುರ್ಗ, ಹಿರಿಯ ಪತ್ರಕರ್ತರು

Leave a Reply