ಈ ಸಿನಿಮಾವನ್ನು ಗೆಲ್ಲಿಸಬೇಕಾಗಿರುವುದು ಕನ್ನಡಿಗರಾದ ನಮ್ಮೆಲ್ಲರ ಜವಾಬ್ದಾರಿ

3 years ago

ಮಂಸೋರೆ ನಿರ್ದೇಶನದಲ್ಲಿ ಬಂತು ಕನ್ನಡದ ” ಜೈ ಭೀಮ್ ಅರ್ಥಾತ್ ಆಕ್ಟ್ 19, 20, 21″

“ಎಲ್ಲಿಯವರೆಗೆ ಸಮಾಜದಲ್ಲಿ ಸಮಾನತೆಯನ್ನು ಸಾಧಿಸಲು ಆಗುವುದಿಲ್ಲವೋ ಅಲ್ಲಿಯವರೆಗೆ ಸ್ವಾತಂತ್ರ್ಯ ಎಂಬ ಪದಕ್ಕೆ ಅರ್ಥವೇ ಇರುವುದಿಲ್ಲ” ಎಂದು ಡಾ. ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್‌ರವರು ಅಭಿಪ್ರಾಯಪಡುತ್ತಾರೆ.

ಸ್ವಾತಂತ್ರ್ಯ ದೊರೆತು 75 ವರ್ಷಗಳೇ ಕಳೆದುಹೋದರು ನಮ್ಮ ನಡುವಿನ ಅನೇಕ ಜನ ಸಮುದಾಯಗಳಿಗೆ ಅದರ ಫಲ ಇನ್ನೂ ಸಿಕ್ಕಿಲ್ಲ. ಇಂದಿಗೂ ಸಾವಿರಾರು ತಬ್ಬಲಿ ಆದಿವಾಸಿ ದಲಿತ ಸಮುದಾಯಗಳು ತಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯ, ದಬ್ಬಾಳಿಕೆಗಳನ್ನು ಎದುರಿಸುತ್ತಲೇ ಒಂದು ಘನತೆಯ ಬದುಕಿಗಾಗಿ ಹಂಬಲಿಸುತ್ತಿರುವ ಎಷ್ಟೋ ನಿದರ್ಶನಗಳು ನಮ್ಮ ಕಣ್ಣ ಮುಂದೆ ಇವೆ.

ಅಂತದ್ದೇ ಒಂದು ನಿಜ ಘಟನೆಯನ್ನು ಆಯ್ದುಕೊಂಡು ನಿರ್ದೇಶಕ ಮಂಸೋರೆ “ಆಕ್ಟ್ 19.20.21″ಎಂಬ ಸಿನಿಮಾ ಮಾಡಿದ್ದಾರೆ. ನಿನ್ನೆ ಬೆಳ್ಳಿ ಪರೆದೆಗೆ ಬಿಡುಗಡೆಯಾಗಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಸಿನಿಮಾದ ಕಥಾವಸ್ತು ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ಹಿಂದುಳಿದ ಬುಡಕಟ್ಟುಗಳಲ್ಲಿ ಒಂದಾದ ಮಲೆಕುಡಿಯ ಸಮುದಾಯದ ಓದು ಬರಹ ಬಲ್ಲ ಒಬ್ಬ ಯುವಕನ ಕಥೆ.

ತಮ್ಮ ಕೇರಿ, ಹಾಡಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕೆಂದು ಸರ್ಕಾರಕ್ಕೆ ಒತ್ತಾಯಪಡಿಸುವ ಯುವಕ, ಚುನಾವಣಾ ಸಂದರ್ಭದಲ್ಲಿ ಚುನಾವಣೆಯನ್ನು ಬಹಿಷ್ಕರಿಸಬೇಕು ಎಂಬ ಭಿತ್ತಿಪತ್ರವನ್ನು ಅಂಟಿಸಿ ಪ್ರತಿಭಟಿಸುತ್ತಾನೆ.

ಈ ಸಣ್ಣ ಕಾರಣಕ್ಕೆ ಆ ಮಲೆಕುಡಿಯ ಆದಿವಾಸಿ ಸಮುದಾಯದ ಮುಗ್ಧ ಯುವಕನ ಮೇಲೆ ನಕ್ಸಲ್ ಆರೋಪ ಹೊರಿಸಿ ದೇಶದ್ರೋಹಿ (ಯುಎಪಿಎ) ಕಾಯ್ದೆಯ ಅಡಿಯಲ್ಲಿ ಕೇಸು ದಾಖಲಿಸಿ ಒಂದು ದಶಕಕ್ಕೂ ಹೆಚ್ಚುಕಾಲ ಚಿತ್ರಹಿಂಸೆಯನ್ನು ಕೊಡುವ ಒಂದು ನಿಜ ಜೀವನದ ಕಥೆಯನ್ನು ಸಿನಿಮಾ ಒಳಗೊಂಡಿದೆ. ಇದರಿಂದ ಹೊರಬರಲು ನಗರಗಳನ್ನೇ ನೋಡಿರದ ಆತ ಹೇಗೆ ಪೊಲೀಸರು, ರಾಜಕೀಯ ವ್ಯವಸ್ಥೆಯಿಂದ ಚಿತ್ರಹಿಂಸೆ ಅನುಭವಿಸ್ತಾನೆ. ಹೇಗೆ ನ್ಯಾಯಾಲಯದಲ್ಲಿ ಹೋರಾಟ ಮಾಡಬೇಕಾಗುತ್ತದೆ. ಆ ಸುತ್ತ ಹೆಣೆದಿರುವ ಈ ಕಾನೂನು ಬಲೆಯಿಂದ ಆತ ಹೇಗೆ ಹೊರಗೆ ಬರ್ತಾನೆ ಎಂಬ ಅತ್ಯಂತ ಕುತೂಹಲಕಾರಿ ನೋವಿನ ಚಿತ್ರಣವಿದೆ.

ವಕೀಲರಾದ ಸುರೇಶ ಹೆಗಡೆ ತಂಡ ಕೊನೆಗೂ ನಿರಪರಾಧಿ ಆದಿವಾಸಿ ಮಂಜುಗೆ ನ್ಯಾಯ ಕೊಡಿಸುವಲ್ಲಿ ಗೆಲುವನ್ನು ಸಾಧಿಸುತ್ತಾರೆ. ಇದು ಒಟ್ಟಾರೆ ಕಥೆಯ ಸಂಕ್ಷಿಪ್ತ ವಿವರವಾದರು; ಸಿನಿಮಾ ನಿರೂಪಣೆಯ ದೃಷ್ಟಿಯಿಂದ ಎಲ್ಲಿಯೂ ಪ್ರೇಕ್ಷಕನಿಗೆ ಬೋರ್ ಆಗದಂತೆ ನಿರ್ದೇಶಕರು ಎಚ್ಚರ ವಹಿಸಿದ್ದಾರೆ.

ಸಾಮಾನ್ಯವಾಗಿ ಈ ರೀತಿಯ ಗಂಭೀರವಾದ ವಿಷಯಗಳನ್ನು ಸಿನಿಮಾ ತೆರೆಗೆ ತರುವುದು ಸವಾಲಿನ ಕೆಲಸ. ಅದರಲ್ಲಿ ಮಂಸೋರೆ ಗೆದ್ದಿದ್ದಾರೆ. ಜೊತೆಗೆ ಕರ್ನಾಟಕದ ಪಶ್ಚಿಮ ಘಟ್ಟಗಳ ಭವ್ಯ ಪರಿಸರದ ಸೌಂದರ್ಯವನ್ನು ಅಷ್ಟೇ ಅದ್ಭುತವಾಗಿ ತೋರಿಸಿರುವುದು ಸಿನಿಮಾದ ಮತ್ತೊಂದು ವಿಶೇಷ. ಬಹಳ ಮುಖ್ಯವಾಗಿ ಸಿನಿಮಾದಲ್ಲಿ ನಟಿಸಿರುವ ಬಹುತೇಕರು ರಂಗಭೂಮಿ ಹಿನ್ನೆಲೆಯವರು ಮತ್ತು ಪ್ರತಿಯೊಬ್ಬರೂ ಅದ್ಭುತವಾಗಿ ನಟಿಸಿದ್ದಾರೆ.

ನ್ಯಾಯವಾದಿಪಾತ್ರ ಮಾಡಿರುವ ಸುರೇಶ ಹೆಗಡೆ ಜೈ ಭೀಮ್ ಚಿತ್ರದ ಚಂದ್ರು ಅವರನ್ನು ನೆನಪಿಸುತ್ತಾರೆ. ಒಟ್ಟಾರೆಯಾಗಿ ತಮಿಳಿನ ಜೈ ಭೀಮ್ ಸಿನಿಮಾವನ್ನು ನೆನಪಿಸುವ ಈ ಸಿನಿಮಾ ಇಂದಿಗೂ ನಮ್ಮ ನಡುವಿನ ಆದಿವಾಸಿ ದಲಿತ ಸಮುದಾಯಗಳು ವ್ಯವಸ್ಥೆಯ ಕ್ರೌರ್ಯ ಹಾಗೂ ದಬ್ಬಾಳಿಕೆಗೆ ಒಳಗಾಗುತ್ತಿರುವ ಸಂಗತಿಗಳನ್ನು ಜನರ ಮುಂದೆ ತೆರೆದಿಟ್ಟಿದೆ. ಅದೇ ರೀತಿ ಅಂಬೇಡ್ಕರ್, ಭಗತ್ ಸಿಂಗ್, ಚೆಗುವರ ಚಿತ್ರಗಳು ಸಿನಿಮಾವನ್ನು ಶಕ್ತಿಯನ್ನು ಹೆಚ್ಚಿಸುತ್ತವೆ.

ಕೊನೆಯದಾಗಿ …..

ಎಲ್ಲರೂ ನೋಡಲೇಬೇಕಾದ ಸಿನಿಮಾ ಇದು. ಯಾಕೆಂದರೆ ನಮ್ಮ ನಡುವೆ ಇರುವ ನಮ್ಮ ಸೋದರ ಸಮುದಾಯಗಳ ಜಗತ್ತನ್ನು ಅರಿತುಕೊಳ್ಳಲು ಹಾಗೂ ಸಂವಿಧಾನ ನಮಗೆ ಕೊಟ್ಟಿರುವುದು ಏನು ಎಂದು ತಿಳಿಯಲು, ಸ್ವಾತಂತ್ರ್ಯ, ಸಮಾನತೆ, ಸಹಬಾಳ್ವೆಯ ಬದುಕನ್ನು ಬದುಕಬಯಸುವ ಪ್ರತಿಯೊಬ್ಬರೂ ತಪ್ಪದೆ ನೋಡಬೇಕಾದ ಚಿತ್ರವಿದು.

ವಿಶೇಷವೆಂದರೆ ಯಾವಾಗಲೂ ಇಂತಹ ಪ್ರಯೋಗಳು ಟಾಲಿವುಡ್, ಮಾಲಿವುಡ್‌ನಲ್ಲಿ ಮಾತ್ರ ಪ್ರಯೋಗವಾಗುತ್ತಿದ್ದವು. ಅವುಗಳನ್ನು ನೋಡಿ ಕನ್ನಡದಲ್ಲಿ ಯಾಕಿಂತ ಪ್ರಯೋಗ ನಡೆಯುತ್ತಿಲ್ಲ ಎನ್ನುತ್ತಿದ್ದ ಅನೇಕ ಕನ್ನಡ ಪ್ರೇಕ್ಷಕರಿಗೆ ಈ ಸಿನಿಮಾ ಒಂದು ಉತ್ತರವಾಗಿದೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಈ ಕಾರಣಕ್ಕೆ ಈ ಸಿನಿಮಾವನ್ನು ಗೆಲ್ಲಿಸಬೇಕಾಗಿರುವುದು ಕನ್ನಡಿಗರಾದ ನಮ್ಮೆಲ್ಲರ ಜವಾಬ್ದಾರಿ.

ಜೈ ಭೀಮ್.
– ನಾರಾಯಣ್ ಕ್ಯಾಸಂಬಳ್ಳಿ, ಅಧ್ಯಾಪಕರು

Leave a Reply