ಗ್ರಾ.ಪಂ.ನಿಂದ ಕೇಂದ್ರ ಸರಕಾರದವರೆಗೂ ಅಧಿಕಾರ ನೀಡಿದರೂ ಈ ಜಿಲ್ಲೆಗೆ ಬಿಜೆಪಿ ಪಕ್ಷದ ಕೊಡುಗೆ ಯಾವುದೂ ಇಲ್ಲ: ಸುನೀಲ್ ಕುಮಾರ್ ಬಜಾಲ್

3 years ago

#BJP #nocontributed #anything #district #power #GramPanchayat #Central #Govt #modi #SunilKumarBajal

ಮಂಗಳೂರು: ಈ ದೇಶದ ಆಡಳಿತ ಚುಕ್ಕಾಣಿಯನ್ನು ಹಿಡಿದ ನರೇಂದ್ರಮೋದಿ ನೇತೃತ್ವದ ಬಿಜೆಪಿ ಸರಕಾರ ಜನತೆಯ ಮುಂದಿಟ್ಟ ಯಾವೊಂದು ಭರವಸೆಗಳನ್ನು ಈಡೇರಿಸಲೇ ಇಲ್ಲ, ಬದಲಾಗಿ ಸಾರ್ವಜನಿಕ ಸಂಪತ್ತನ್ನೆಲ್ಲ ಕೊಳ್ಳೆಹೊಡೆಯುವ ಕಾರ್ಪೊರೇಟ್ ಕಂಪೆನಿಗಳ ಕೈಗೊಂಬೆಯಾಗಿದೆ ಎಂದು ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನೀಲ್ ಕುಮಾರ್ ಬಜಾಲ್ ಆರೋಪಿಸಿದರು.

ನಗರದ ಕ್ಲಾಕ್ ಟವರ್ ಬಳಿ ಸಿಪಿಐಎಂ ಮಂಗಳೂರು ನಗರ ದಕ್ಷಿಣ ಸಮಿತಿ ನೇತ್ರತ್ವದಲ್ಲಿ ಕೇಂದ್ರ ಸರಕಾರದ ಪ್ರಜಾಪ್ರಭುತ್ವ, ಜನವಿರೋಧಿ ನೀತಿಗಳ ವಿರುದ್ಧ, ಬೆಲೆಏರಿಕೆ, ನಿರುದ್ಯೋಗ, ವಿದ್ಯುತ್ ಖಾಸಗೀಕರಣದ ವಿರುದ್ಧ, ದ.ಕ ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜ್ ಹಾಗೂ ಸರಕಾರಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆಗೆ ಒತ್ತಾಯಿಸಿ ನಡೆದ ಪ್ರತಿಭಟನಾ ವಾರಾಚರಣೆಯ ಅಂಗವಾಗಿ ನಡೆದ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾ ಖಾವುಂಗ ನಾ ಖಾನೆದೂಂಗ ಎಂದು ಬೊಬ್ಬಿಟ್ಟ ನರೇಂದ್ರಮೋದಿ ಆಡಳಿತದಲ್ಲಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಸಾಧ್ಯವಾಗಿಲ್ಲ. ಬದಲಾಗಿ ಹಿಂದೆಂದೂ ಕಂಡರಿಯದ ಭ್ರಷ್ಟಾಚಾರ ಬಿಜೆಪಿ ಪಕ್ಷದ ಆಡಳಿತಾವಧಿಯಲ್ಲಿ ನಡೆದಿದೆ. ರೈಲ್ವೆ ಇಲಾಖೆ, ಹೆದ್ದಾರಿ ಇಲಾಖೆ, ಪ್ರವಾಸೋದ್ಯಮ ಇಲಾಖೆ , ಪಿಂಚಣಿ ಯೋಜನೆ, ಆಯುಷ್ಮಾನ್ ಯೋಜನೆಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂದು ಸಿಎಜಿ ವರದಿ ಬಹಿರಂಗ ಪಡಿಸಿದೆ ಎಂದು ಹೇಳಿದರು.

ಪಾರ್ಲಿಮೆಂಟ್ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಬಿಜೆಪಿ ಪಕ್ಷಕ್ಕೆ ಅವಕಾಶವನ್ನು ನೀಡುತ್ತಾ ಬಂದಿದ್ದಾರೆ. ಗ್ರಾಮ ಪಂಚಾಯತ್ ನಿಂದ ಹಿಡಿದು, ಕೇಂದ್ರ ಸರಕಾರದವರೆಗೂ ಅಧಿಕಾರ ನೀಡಿದರೂ ಈ ಜಿಲ್ಲೆಗೆ ಬಿಜೆಪಿ ಪಕ್ಷದ ಕೊಡುಗೆ ಯಾವುದೂ ಇಲ್ಲ. ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜನ್ನು ಈವರೆಗೂ ಸ್ಥಾಪಿಸಲು ಸಾಧ್ಯವಾಗಿಲ್ಲ. ಚಿಕಿತ್ಸೆ ಹೆಸರಲ್ಲಿ ಖಾಸಗೀ ಆಸ್ಪತ್ರೆಯ ಲೂಟಿಯಿಂದ ಜನಸಾಮಾನ್ಯರು ತತ್ತರಿಸಿದ್ದಾರೆ. ಕ್ಯಾನ್ಸರ್ ರೋಗಿಗಳನ್ನಂತು ಚಿಕಿತ್ಸೆಯ ಹೆಸರಲ್ಲಿ ಲಕ್ಷ ಲಕ್ಷ ಖರ್ಚು ಮಾಡಿ ಮನೆ ಮಠವನ್ನು ಕಳೆದುಕೊಂಡು ಬೀದಿಗೆ ಬರುವ ಬದಲಾಗಿ ಕನಿಷ್ಠ ಕಿದ್ವಾಯಿಯಂತಹ ಸರಕಾರಿ ಕ್ಯಾನ್ಸರ್ ಆಸ್ಪತ್ರೆಗಳನ್ನು ಈ ಜಿಲ್ಲೆಯಲ್ಲಿ ಸ್ಥಾಪಿಸಲು ಯಾಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು.

ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಜೆ ಬಾಲಕೃಷ್ಣ ಶೆಟ್ಟಿ, ಸಿಪಿಐಎಂ ನಗರ ದಕ್ಷಿಣ ಕಾರ್ಯದರ್ಶಿ ಸಂತೋಷ್ ಬಜಾಲ್  ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಸಿಪಿಐಎಂ ಪಕ್ಷದ ನಗರ ದಕ್ಷಿಣ ಸದಸ್ಯರಾದ ಯೋಗೀಶ್ ಜಪ್ಪಿನಮೊಗರು, ಲೋಕೇಶ್ ಎಮ್, ಜಯಂತಿ ಬಿ ಶೆಟ್ಟಿ, ಪ್ರದೀಪ್ ಉರ್ವಸ್ಟೋರ್, ಭಾರತೀ ಬೋಳಾರ ಮುಂತಾದವರು ಉಪಸ್ಥಿತರಿದ್ದರು.

Leave a Reply