ತಮ್ಮ ವಿರುದ್ಧ ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ: ಎಚ್ ಡಿ ಕುಮಾರಸ್ವಾಮಿ

2 years ago

ಬೆಂಗಳೂರು: ಸಿಎಂ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಕೇಂದ್ರ ಉಕ್ಕು ಖಾತೆ ಸಚಿವ ಕುಮಾರಸ್ವಾಮಿ ನಡುವಿನ ಜಿದ್ದಾಜಿದ್ದಿ ರಾಜಕಾರಣ ತೀವ್ರ ಸ್ವರೂಪ ಪಡೆದುಕೊಂಡಿದೆ.

ಗಣಿ ಗುತ್ತಿಗೆ ಪ್ರಕರಣದಲ್ಲಿ ತಮ್ಮ ವಿರುದ್ಧ ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದರೆ, ಅಗತ್ಯ ಬಿದ್ದರೆ ಕುಮಾರಸ್ವಾಮಿ ಅವರನ್ನು ಬಂಧಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ವೇಳೆ ಅಸ್ತಿತ್ವದಲ್ಲಿಯೇ ಇಲ್ಲದ ಸಾಯಿ ವೆಂಕಟೇಶ್ವರ ಮಿನರಲ್ಸ್ ಎಂಬ ಸಂಸ್ಥೆಗೆ ಅಕ್ರಮವಾಗಿ ಗಣಿ ಗುತ್ತಿಗೆ ನೀಡಿದ್ದಾರೆ ಎಂಬ ಆರೋಪ ಪ್ರಕರಣದ ಬಗ್ಗೆ ತನಿಖೆಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಲೋಕಾಯುಕ್ತ ಎಸ್ಐಟಿ ಮನವಿ ಸಲ್ಲಿಸಿದೆ.

ನಿವೇಶನ ಹಂಚಿಕೆ ಅಕ್ರಮ ಆರೋಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿರುವ ಬೆನ್ನಲ್ಲೇ ಈ ಪ್ರಕರಣ ಸ್ವರೂಪ ಪಡೆದುಕೊಂಡಿದೆ.

ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಎಚ್ ಡಿ ಕುಮಾರಸ್ವಾಮಿ, ತಮ್ಮ ವಿರುದ್ಧ ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ತಾವು ಮುಖ್ಯಮಂತ್ರಿಯಾಗಿದ್ದ ವೇಳೆ ಸಾಯಿ ವೆಂಕಟೇಶ್ವರ ಮಿನರಲ್ಸ್ ಕಂಪನಿಗೆ ಗಣಿ ಗುತ್ತಿಗೆ ಮಂಜೂರು ಮಾಡಿರುವ ಆದೇಶ ನನ್ನ ಸ್ವಹಸ್ತಾಕ್ಷರವಲ್ಲ ಎಂದದರು.

ಆಡಳಿತ ವ್ಯವಸ್ಥೆಯಲ್ಲಿ ಕೆಳಹಂತದಿಂದ ಅಧಿಕಾರಿಗಳು ಕಡತ ತಯಾರಿಸಿ ಸಿದ್ದಪಡಿಸುತ್ತಾರೆ. ಮುಖ್ಯಮಂತ್ರಿ ಮುಂದೆ ನೂರಾರು ಕಡತ ಬರುತ್ತವೆ. ಇದು ಬಂದಿತ್ತೇ ಇಲ್ಲವೇ ಎಂಬುದು ಸಾಬೀತಾಗಬೇಕು. ಕಡತದಲ್ಲಿರುವುದು ನನ್ನ ಸ್ವಹಸ್ತಾಕ್ಷರವಲ್ಲ. ಈ ಬಗ್ಗೆ ಎಫ್‌ಎಸ್‌‍ಎಲ್‌ ತನಿಖೆ ಬೇಕಾದರೂ ನಡೆಯಲಿ ಎಂದು ಸವಾಲೆಸೆದರು.

ನಾನು ಮುಖ್ಯಮಂತ್ರಿಯಾಗಿದ್ದಾಗ ನನ್ನ ಬಳಿ ಆ ಕಂಪನಿಯ ಕಡತ ಬಂದಿದೆಯೇ ಎಂಬುದು ಸಾಬೀತಾಗಬೇಕು. ಆ ಕಂಪನಿ ವಂಚಕ ಕಂಪನಿ ಎಂಬ ಆರೋಪವಿದೆ. 2014ರಲ್ಲಿ ಸಾಯಿ ವೆಂಕಟೇಶ್ವರ ಪ್ರಕರಣಕ್ಕೆ ಸುಪ್ರೀಂಕೋರ್ಟ್‌ನ ಮೊರೆ ಹೋಗಿದ್ದೆ. ಆಗ ರಾಜ್ಯ ಸರ್ಕಾರ ಎಸ್‌‍ಐಟಿ ತನಿಖೆಗೆ ಅವಕಾಶವನ್ನು ಸುಪ್ರೀಂಕೋರ್ಟ್‌ನಲ್ಲಿ ಕೋರಿತ್ತು. ಅದರಂತೆ ಸುಪ್ರೀಂಕೋರ್ಟ್‌ ತನಿಖೆ ನಡೆಸಲು ಹೇಳಿತ್ತು. 2017ರಲ್ಲಿ ವಿಶೇಷ ತನಿಖಾ ತಂಡಕ್ಕೆ ತನಿಖೆ ನಡೆಸಿ ವರದಿ ಸಲ್ಲಿಸಲು ಹೇಳಲಾಗಿತ್ತು. ಇದುವರೆಗೂ ತನಿಖೆಯ ಪೂರ್ಣ ವರದಿಯನ್ನು ಎಸ್‌‍ಐಟಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಲಿಲ್ಲ. ಸುಪ್ರೀಂಕೋರ್ಟ್‌ ರಾಜ್ಯಪಾಲರ ಅನುಮತಿ ಕೋರಿ ಎಂದು ಹೇಳಿಲ್ಲ. ಬದಲಾಗಿ ತನಿಖೆಗೆ ಅನುಮತಿ ನೀಡಿತ್ತು ಎಂದರು.

2017ರಲ್ಲಿ ಎಸ್‌‍ಐಟಿ ರಚನೆಯಾಗಿ ನನಗೆ ನೋಟಿಸ್‌‍ ನೀಡಿ ಹೇಳಿಕೆಯನ್ನು ದಾಖಲಿಸಿಕೊಂಡರು. ಈಗ ತನಿಖಾ ಸಂಸ್ಥೆ ಸುಪ್ರೀಂ ಕೋರ್ಟಿಗೆ ವರದಿ ನೀಡಬೇಕಿದೆ. ಆದರೆ ಇದೀಗ ಏಕಾಏಕಿ ಬೇರೆ ಸ್ವರೂಪ ಪಡೆದುಕೊಂಡಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಕಳೆದ ವರ್ಷ ಮೇನಲ್ಲಿ  ರಚನೆಯಾಗಿದೆ. ನವೆಂಬರ್‌ನಲ್ಲಿ ನನ್ನ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯ ಪಾಲರ ಅನುಮತಿ ಕೋರಲಾಗಿದೆ. ಇದನ್ನು ಗಮನಿಸಿದಾಗ ಯಾವ ರೀತಿಯ ರಾಜಕಾರಣ ನಡೆಯುತ್ತಿದೆ ಎನ್ನುವುದು ಅರ್ಥವಾಗುತ್ತದೆ. ಆದರೆ ಯಾವುದಕ್ಕೂ ನಾನು ಜಗ್ಗುವುದಿಲ್ಲ ಎಂದರು.

ಈ ನಡುವೆ ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ಇದೊಂದು ಕಾನೂನಿನ ಪ್ರಕ್ರಿಯೆಯಾಗಿದೆ. ಇದರಲ್ಲಿ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡುತ್ತಿಲ್ಲ. ಅವಶ್ಯಕತೆ ಬಿದ್ದರೆ ತನಿಖಾ ತಂಡ ಕುಮಾರಸ್ವಾಮಿಯವರನ್ನು ಬಂಧಿಸಿ ವಿಚಾರಣೆ ನಡೆಸಬಹುದಾಗಿದೆ ಎಂದರು.

ಪ್ರಕರಣ ಸಂಬಂಧಪಟ್ಟಂತೆ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಬಹುದು ಎಂಬ ಭಯ ಅವರನ್ನು ಕಾಡುತ್ತಿದೆ. ಅವರ ವಿರುದ್ಧ ಲೋಕಾಯುಕ್ತ ಎಸ್ ಐ ಟಿಯವರು ತನಿಖಾ ವರದಿ ನೀಡಿ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿದ್ದಾಗ್ಯೂ, ರಾಜ್ಯಪಾಲರಿಂದ ಯಾವುದೇ ಕ್ರಮವಾಗದ ಕಾರಣ, ಎಸ್ ಐ ಟಿ ಮತ್ತೊಮ್ಮೆ ಅರ್ಜಿ ಸಲ್ಲಿಸಿದೆ. ನನಗನ್ನಿಸುವಂತೆ ಸದ್ಯಕ್ಕೆ ಈ ಪ್ರಕರಣದಲ್ಲಿ ಕುಮಾರಸ್ವಾಮಿ ಅವರ ಬಂಧನದ ಅಗತ್ಯವಿಲ್ಲ ಎಂದರು.

ಆದರೆ ರಾಜ್ಯಪಾಲರು ಕುಮಾರಸ್ವಾಮಿಯವರ ಪ್ರಕರಣದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದು ತನ್ನ ವಿರುದ್ಧ ಮಾತ್ರ ಯಾವುದೇ ತನಿಖಾ ವರದಿಯನ್ನು ಆಧರಿಸದೇ ಪ್ರಾಸಿಕ್ಯೂಷನ್‌ಗೆ ಅನುಮತಿ ಅನುಮತಿ ನೀಡಿದ್ದಾರೆ. ಇದು ತಾರತಮ್ಯವಲ್ಲವೇ ಎಂದು ಕೇಳಿದರು.

Leave a Reply