ಸರ್ಕಾರದ ಪ್ರತೀ ಹಂತದಲ್ಲಿಯೂ ಕಮೀಶನ್ ಹಾವಳಿ: ಎಚ್ ಡಿ ಕುಮಾರಸ್ವಾಮಿ

10 months ago

ಬೆಂಗಳೂರು: ಸರ್ಕಾರದ ಪ್ರತೀ ಹಂತದಲ್ಲಿಯೂ ಕಮೀಶನ್ ಹಾವಳಿಯಿದ್ದು ಭ್ರಷ್ಟಾಚಾರ ಮಿತಿಮೀರಿದೆ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರದಲ್ಲಿ ಏನು ನಡೆಯುತ್ತಿದೆ ಎಂಬುದಕ್ಕೆ ಮುಖ್ಯಮಂತ್ರಿ ಸಲಹೆಗಾರ ಬಿ.ಆರ್. ಪಾಟೀಲ್ ಅವರು ಹೇಳಿರುವ ಮಾತುಗಳೇ ಸಾಕ್ಷಿ. ಅವರು ಹೇಳಿರುವ ಮಾತುಗಳು ಮಾಧ್ಯಮಗಳಲ್ಲಿ ವರದಿಯಾಗಿವೆ. ವಸತಿ ಇಲಾಖೆಯಲ್ಲಿ ಕಮಿಷನ್ ಹಾವಳಿ ಎಷ್ಟಿದೆ ಎಂಬ ವಿಚಾರವಾಗಿ ಆಡಿಯೋ ವೈರಲ್ ಆಗಿದೆ. ಇದರಿಂದ ನನಗೆ ಯಾವುದೇ ಆಶ್ಚರ್ಯ ಆಗಿಲ್ಲ ಎಂದರು.

ಕಮೀಷನ್ ನಿರಂತರವಾಗಿ ನಡೆಯುತ್ತಿದೆ. ವಸತಿ ಇಲಾಖೆಯಲ್ಲಿ ಸೈಟ್ ಕೊಡಬೇಕಾದರೆ ಕಮಿಷನ್ ನಡೆಯುತ್ತಿದೆ. ಸರ್ಕಾರದ ಎಲ್ಲ ಇಲಾಖೆಗಳಲ್ಲಿಯೂ ಇದು ನಡೆಯುತ್ತಿದೆ ಎಂದರು.

ಬಿ.ಆರ್.ಪಾಟೀಲ್ ಹೇಳಿರುವುದು ನಿಜ. ವಸತಿ ಇಲಾಖೆಯಲ್ಲಿ ಹಣ ಕೊಟ್ಟರೆ ಮಾತ್ರ ಅನುದಾನ ಬಿಡುಗಡೆ ಆಗುತ್ತಿದೆ ಎಂದು ಅವರು ಹೇಳಿದ್ದಾರೆ. ಇದನ್ನು ನಾನಾಗಲಿ, ವಿರೋಧ ಪಕ್ಷವಾಗಲಿ ಹೇಳುತ್ತಿಲ್ಲ. ಸಾಕ್ಷಾತ್ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರು, ಮುಖ್ಯಮಂತ್ರಿಗಳ ಸಲಹೆಗಾರರೇ ಹೇಳಿದ್ದಾರೆ. ಈಗ ಚೆನ್ನಾಗಿ ಹಣ ಲೂಟಿ ಹೊಡೆದರೆ ಮುಂದೆ ಚುನಾವಣೆ ನಡೆಸಬಹುದು ಎಂಬುದು ಇವರ ಉದ್ದೇಶ ಎಂದರು.

ಕಂದಾಯ ಸಚಿವ ಕೃಷ್ಣ ಬೇರೇಗೌಡ ಏನು ಹೇಳಿದ್ದಾರೆ ಎಂಬುದನ್ನು ನಾನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಯಾವ ಯಾವುದಕ್ಕೆ ಎಷ್ಟೆಷ್ಟು ರೇಟ್ ಫಿಕ್ಸ್ ಮಾಡಿದ್ದಾರೆ ಎಂದು ಅವರು ನೇರವಾಗಿ ಹೇಳಿದ್ದಾರೆ. ತಮ್ಮ ಇಲ್ಲಾಖೆಗಳಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುದು ಆಯಾ ಇಲಾಖೆಯ ಮಂತ್ರಿಗಳಿಗೆ ಗೊತ್ತಿದೆ. ಕೃಷ್ಣಭೈರೇಗೌಡರ ಇಲಾಖೆಯಲ್ಲಿ ಯಾವ ರೀತಿ ಕೆಲಸ ನಡೆಯುತ್ತಿದೆ ಎಂದು ಅವರೇ ಹೇಳಿದ್ದಾರೆ. ಈ ಸರ್ಕಾರ ಯಾವ ರೀತಿ ನಡೆಯುತ್ತಿದೆ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕೆ ಎಂದರು.

ಕೇತಗಾನಹಳ್ಳಿ ಭೂಮಿ ವಿಷಯಕ್ಕೆ ಸಂಬಂಧಿಸಿ ನಾನು ಕಾನೂನು ಹೋರಾಟ ಮಾಡುತ್ತಿದ್ದೇನೆ. ಕಾನೂನು ವ್ಯಾಪ್ತಿಯಲ್ಲಿ ನಾನು ಮೊದಲೇ ಹೇಳಿದ್ದೇನೆ. ರಾಜ್ಯ ಸರ್ಕಾರ ರಾಜಕೀಯ ದುರುದ್ದೇಶದಿಂದ ಕಿರುಕುಳ ನೀಡುತ್ತಿದೆ ಎಂದರು. 

ಭೂಮಿ ತೆರವಿಗೆ ರಚಿಸಿಲಾಗಿರುವ ಎಸ್ಐಟಿಗೆ  ಹೈಕೋರ್ಟ್ ತಡೆ ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದು 40 ವರ್ಷಗಳ ಹಿಂದೆ ಖರೀದಿ ಮಾಡಿದ ಭೂಮಿ. ಅಲ್ಲಿ ಯಾವುದೇ ರೀತಿಯ ಒತ್ತುವರಿ ಆಗಿಲ್ಲ. ಸರ್ಕಾರ ರಾಜಕೀಯ ದ್ವೇಷ ಮಾಡಿಕೊಂಡು ಹೊರಟಿದೆ. ಅದು ಕಾನೂನು ವ್ಯಾಪ್ತಿಯಲ್ಲಿ ನ್ಯಾಯಾಲಯದಲ್ಲಿ ತೀರ್ಮಾನ ಆಗುತ್ತದೆ ಎಂದರು.

ರಾಜಕೀಯ ದ್ವೇಷ ಮಾಡುತ್ತಿದೆ ಎಂದು ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಿದೆ. ಆದರೆ ಇವರು ಮಾಡುತ್ತಿರುವುದು ಏನು? ರಾಜ್ಯ ಸರ್ಕಾರದ ಅಧಿಕಾರಿಗಳನ್ನು ಇಟ್ಟುಕೊಂಡು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಇದಕ್ಕೆಲ್ಲ ಕಾಲವೇ ಉತ್ತರ ನೀಡುತ್ತದೆ ಎಂದರು.

Leave a Reply