ಆರ್‌ಎಸ್‌ಎಸ್ ಭಾರತದ ಜನರಿಗೆ ಜವಾಬ್ದಾರನಾಗಿರಬೇಕೇ?

5 hours ago

ಆರ್‌ಎಸ್‌ಎಸ್ ಭಾರತದ ಜನರಿಗೆ ಜವಾಬ್ದಾರನಾಗಿರಬೇಕೇ?
ಇಂಗ್ಲಿಷ್‌ ಮೂಲ: ರಾಮ್ ಪುನಿಯಾನಿ
ಕನ್ನಡಕ್ಕೆ: ಡಾ.ಪ್ರದೀಪ್‌ ಮಾಲ್ಗುಡಿ
ಆರ್‌ಎಸ್‌ಎಸ್‌ನಿಂದ (ರಾಷ್ಟ್ರೀಯ ಸ್ವಯಂಸೇವಕ ಸಂಘ) ತರಬೇತಿ ಪಡೆದ ಪ್ರಚಾರಕ ನಾಥೂರಾಮ್ ಗೋಡ್ಸೆ, “ದೇಶ ಎಲ್ಲ ಧರ್ಮಗಳ ಜನರಿಗೆ ಸೇರಿದೆ” ಎಂದು ಮಹಾತ್ಮ ಗಾಂಧೀಜಿಯವರು ನಂಬಿದ್ದರು ಎಂಬ ಒಂದೇ ಕಾರಣಕ್ಕಾಗಿ ಅವರ ಎದೆಗೆ ಮೂರು ಗುಂಡುಗಳನ್ನು ಹಾರಿಸಿ ಹತ್ಯೆಗೈದ. ಆದರೆ ಗೋಡ್ಸೆ ಮತ್ತು ಆರ್‌ಎಸ್‌ಎಸ್ – ಹಿಂದೂ ಮಹಾಸಭಾದಂತಹ ಅದರ ಮಾತೃಸಂಸ್ಥೆಗಳ ನಂಬಿಕೆಯ ಪ್ರಕಾರ ದೇಶ ಕೇವಲ ಹಿಂದೂಗಳಿಗೆ ಮಾತ್ರ ಸೇರಿದ್ದಾಗಿದೆ. ಗಾಂಧೀಜಿ ಮತ್ತು ಭಾರತೀಯ ರಾಷ್ಟ್ರೀಯ ಚಳುವಳಿಯ ವಿರುದ್ಧ ದ್ವೇಷವನ್ನು ಹರಡಲಾಯಿತು, ಪರಿಣಾಮವಾಗಿ ಅತ್ಯಂತ ಹತ್ತಿರದಿಂದ ಗುಂಡು ಹಾರಿಸಿ ಗಾಂಧೀಜಿಯನ್ನು ಹತ್ಯಯಗೈಯಲಾಯಿತು. ಈ ಅಪರಾಧಕ್ಕಾಗಿ ಭಾರತದ ಅಂದಿನ ಉಪಪ್ರಧಾನಿ ಮತ್ತು ಗೃಹ ಸಚಿವ ಸರ್ದಾರ್ ಪಟೇಲ್ ಅವರು 1948ರಲ್ಲಿ ಆರ್‌ಎಸ್‌ಎಸ್ ಮೇಲೆ ನಿಷೇಧ ಹೇರಿ ಆದೇಶಿಸಿದರು. ಈ ಕುರಿತು ಪ್ರತಿಕ್ರಿಯಿಸಿದ್ದ ಅವರು, “ಅವರ (ಆರ್‌ ಎಸ್‌ ಎಸ್) ಎಲ್ಲಾ ಭಾಷಣಗಳು ದ್ವೇಷಪೂರಿತವಾಗಿರುತ್ತಿದ್ದವು. ಈ ವಿಷದ ಅಂತಿಮ ಪರಿಣಾಮವಾಗಿ ದೇಶ ಗಾಂಧೀಜಿಯವರ ಅಮೂಲ್ಯ ಪ್ರಾಣದ ಬಲಿದಾನವನ್ನು ನೀಡಬೇಕಾಯಿತು” ಎಂದು ಬರೆದಿದ್ದರು. ಸಂಘ ತನಗೆ ಲಿಖಿತ ಸಂವಿಧಾನವಿರುತ್ತದೆ ಮತ್ತು ತಾನು ಕೇವಲ ಸಾಂಸ್ಕೃತಿಕ ಸಂಘಟನೆಯಾಗಿ ಮಾತ್ರ ಕಾರ್ಯನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದ ನಂತರ ಈ ನಿಷೇಧವನ್ನು ಹಿಂಪಡೆಯಲಾಯಿತು.

ಆದರೆ ವಾಸ್ತವವೆಂದರೆ ಆರ್‌ಎಸ್‌ಎಸ್ ಸಾಂಸ್ಕೃತಿಕ ಸಂಘಟನೆಯ ಮುಖವಾಡ ಧರಿಸಿರುವ ರಾಜಕೀಯ ಸಂಘಟನೆ. ಅದು ಮೊದಲು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಅನ್ನು ಸ್ಥಾಪಿಸಿತು ಮತ್ತು ನಂತರ ಬಿಜೆಪಿಯ ಪೂರ್ವಾಶ್ರಮದ ಸಂಘಟನೆಯಾದ ಭಾರತೀಯ ಜನಸಂಘದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿತು. ಇದರ ಹೊಸ ರೂಪವೇ ಇಂದಿನ ಬಿಜೆಪಿ, ಇದು ಪ್ರಸ್ತುತ ಕೇಂದ್ರದಲ್ಲಿ ಮತ್ತು ಹಲವು ರಾಜ್ಯಗಳಲ್ಲಿ ಸರ್ಕಾರ ನಡೆಸುತ್ತಿದೆ. ಸಂಘ ತನ್ನ ಖರ್ಚುವೆಚ್ಚಗಳು ದಸರಾ ಹಬ್ಬದಂದು ಸಿಗುವ ಗುರುದಕ್ಷಿಣೆಯ ಹಣದಿಂದ ನಡೆಯುತ್ತದೆ ಎಂದು ಹೇಳಿಕೊಳ್ಳುತ್ತದೆ. ಆದಾಯ ತೆರಿಗೆ ನ್ಯಾಯಮಂಡಳಿ ಯಾವ ಕಾರಣಕ್ಕೋ ಆದಾಯದ ಈ ಮೂಲವನ್ನು ತೆರಿಗೆ ಮುಕ್ತವೆಂದು ಘೋಷಿಸಿದೆ. ಅದು ತನ್ನ ಕಾರ್ಯಕ್ರಮಗಳನ್ನು ಮತ್ತು ಶಾಖೆಗಳ ನಿರ್ವಹಣೆಯನ್ನು (ಸರ್ಕಾರಿ ಭೂಮಿಯ ಮೇಲೂ ನಡೆಸಲಾಗುತ್ತದೆ) ಅತಿ ಹೆಚ್ಚು ಹಣ ಖರ್ಚು ಮಾಡಿ ನಡೆಸುತ್ತಿದೆ. ಅದರ ಪಥಸಂಚಲನಗಳಲ್ಲಿ ಎಷ್ಟು ಹಣ ಖರ್ಚಾಗುತ್ತದೆ ಎಂಬುದನ್ನು ಗೌಪ್ಯವಾಗಿಡಲಾಗುತ್ತದೆ. ಆರ್‌ಎಸ್‌ಎಸ್‌ನ ದೆಹಲಿ ಕಚೇರಿ ನಿರ್ಮಾಣಕ್ಕೆ 100 ಕೋಟಿ ರೂ.ಗಳಿಗೂ ಹೆಚ್ಚು ಖರ್ಚಾಗಿದೆ ಎಂದು ಹೇಳಲಾಗುತ್ತದೆ. ಈ ಎಲ್ಲಾ ಭಾರಿ ಮೊತ್ತದ ಖರ್ಚುಗಳು ಸರ್ಕಾರದ ತನಿಖೆಗೆ ಸಿಗದಂತೆ ದೂರವಿವೆ.

ಸಾಂಸ್ಕೃತಿಕ ಸಂಘಟನೆ ಎಂಬ ಈ ವಾದವನ್ನು ಸರ್ಕಾರ ಮತ್ತು ಬಹುಪಾಲು ಜನ ನಂಬಿದರು. ಈಗ ಸಂಘ ವೇಗವಾಗಿ ವಿಸ್ತರಣೆಗೊಂಡು ಲಕ್ಷಾಂತರ ಶಾಖೆಗಳನ್ನು ಸ್ಥಾಪಿಸಿದೆ ಮತ್ತು ಲಕ್ಷಾಂತರ ಸ್ವಯಂಸೇವಕರು ಅದರೊಂದಿಗೆ ಗುರುತಿಸಿಕೊಂಡಿದ್ದಾರೆ. ನೆಹರೂರವರಿಗೆ ಸಂಘದ ನೈಜ ಸ್ವರೂಪ ಏನೆಂಬುದು ಬಹಳ ಬೇಗನೆ ತಿಳಿದುಬಂದಿತ್ತು. ಆದರೆ ಕೆಲವು ವರ್ಷಗಳ ಹಿಂದೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದಂತೆ ಯಾವುದೇ ರಾಜಕೀಯ ಪಕ್ಷಗಳು ಈ ವಿಷಯಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿರಲಿಲ್ಲ. ಇದರಿಂದಾಗಿ ಈ ಸಂಘಟನೆ ಕಾನೂನು ನಿಯಮಗಳನ್ನು ಹಾಗೂ ನೈತಿಕ ಮೌಲ್ಯಗಳನ್ನು ಗಾಳಿಗೆ ತೂರಿ ಮನಬಂದಂತೆ ವರ್ತನೆ ಮಾಡುತ್ತಿದೆ. ಕಾಂಗ್ರೆಸ್ ಕಳೆದ ಕೆಲವು ವರ್ಷಗಳಲ್ಲಿ ತನ್ನ ಈ ತಪ್ಪನ್ನು ತಿದ್ದಿಕೊಂಡಿದೆ. ವಿಶೇಷವಾಗಿ ರಾಹುಲ್ ಗಾಂಧಿಯವರು ಆರ್‌ಎಸ್‌ಎಸ್ ಕುರಿತು ತಾರ್ಕಿಕ ಮತ್ತು ಕಾನೂನುಬದ್ಧ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಗಾಂಧೀಜಿಯವರ ಹತ್ಯೆಗೆ ಆರ್‌ಎಸ್‌ಎಸ್‌ನೊಂದಿಗೆ ನಂಟಿರುವವರೇ ಜವಾಬ್ದಾರರು ಎಂದು ಅವರು ಹೇಳಿದ್ದರು, ಇದನ್ನು ವಿರೋಧಿಸಿ ಅವರ ಮೇಲೆ ಮೊಕದ್ದಮೆ ಹೂಡಲಾಯಿತು. ಆರ್‌ಎಸ್‌ಎಸ್ ಅನ್ನು ಎದುರಿಸುವ ಈ ನೀತಿಯ ಭಾಗವಾಗಿ, ಈಗ ಕರ್ನಾಟಕದ ಗೃಹ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ತನ್ನ ನೋಂದಣಿ ಮಾಡಿಸಿಕೊಳ್ಳಬೇಕು ಮತ್ತು ಭಾರತಕ್ಕೆ ಜವಾಬ್ದಾರನಾಗಿರಬೇಕು ಎಂದು ಆಗ್ರಹಿಸಿದ್ದಾರೆ.

ಅವರು ಜೂನ್ 13ರಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದು, ಸಂಘದ ಕಾನೂನುಬದ್ಧ ಸ್ಥಿತಿ, ಹಣಕಾಸು ವ್ಯವಸ್ಥೆ, ಪದಾಧಿಕಾರಿಗಳು, ತೆರಿಗೆ ನಿಯಮಗಳ ಪಾಲನೆ ಹಾಗೂ ಅದರ ಚಟುವಟಿಕೆಗಳ ಕುರಿತ ವಿವರವಾದ ಮಾಹಿತಿಗಳನ್ನು ಕೇಳಿದ್ದಾರೆ. ಆರ್‌ಎಸ್‌ಎಸ್ ಅಧಿಕೃತವಾಗಿ ದೇಶದೊಳಗೆ ಮತ್ತು ಹೊರಗೆ 60 ಸಾವಿರ ಶಾಖೆಗಳಿವೆ ಹಾಗೂ ಕೋಟ್ಯಂತರ ಸ್ವಯಂಸೇವಕರಿದ್ದಾರೆ ಎಂದು ಹೇಳಿಕೊಳ್ಳುತ್ತದೆ. ಖರ್ಗೆ ಅವರು ಸಾರ್ವಜನಿಕವಾಗಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಇದು ಕೇವಲ ಕಾನೂನಿನ ಅವಶ್ಯಕತೆಯಷ್ಟೇ ಅಲ್ಲ, ಇದರ ನೈತಿಕತೆಯೂ ಇದೆ ಎಂದು ತಿಳಿಸಿದ್ದಾರೆ. ಅವರು, “ಅದರ (ಆರ್‌ ಎಸ್‌ ಎಸ್) ಚಟುವಟಿಕೆಗಳು ನಡೆಯುವ ವ್ಯಾಪ್ತಿ ಹಾಗೂ ಅದರ ಪ್ರಭಾವವನ್ನು ಗಮನಿಸಿದರೆ, ಆರ್‌ಎಸ್‌ಎಸ್‌ನಿಂದ ಅತ್ಯುನ್ನತ ಮಟ್ಟದ ಪಾರದರ್ಶಕತೆ, ಜವಾಬ್ದಾರಿ ಮತ್ತು ಸಂವಿಧಾನಿಕ ನಿಯಮಗಳ ಪಾಲನೆಯನ್ನು ಕಡ್ಡಾಯವಾಗಿ ಮಾಡಿಸಲೇಬೇಕು” ಎಂದು ಉಲ್ಲೇಖಿಸಿದ್ದಾರೆ. ಈ ಪತ್ರವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಆರ್‌ಎಸ್‌ಎಸ್ ಸರಸಂಘಚಾಲಕ ಡಾ.ಮೋಹನ್ ಭಾಗವತ್, ತಾನು ಈ ಪತ್ರವನ್ನು ನಿರ್ಲಕ್ಷಿಸುತ್ತೇನೆ ಮತ್ತು ಇದಕ್ಕೆ ಉತ್ತರಿಸುವುದಿಲ್ಲ ಎಂದರು. ಈ ಪ್ರತಿಕ್ರಿಯೆಯಿಂದ ಭಾಗವತ್ ಅವರು ತಮ್ಮನ್ನು ಮತ್ತು ತಮ್ಮ ಸಂಘಟನೆಯನ್ನು ಕಾನೂನು ಹಾಗೂ ಭಾರತೀಯ ಸಂವಿಧಾನಕ್ಕಿಂತ ಮೇಲೆ ಎಂದು ಪರಿಗಣಿಸಿದ್ದಾರೆ ಎಂಬ ಭಾವನೆ ಮೂಡಿದೆ. ಹೇಗಾದರೂ, ಆರ್‌ಎಸ್‌ಎಸ್ ಭಾರತೀಯ ಸಂವಿಧಾನದಲ್ಲಿ ನಂಬಿಕೆ ಇಟ್ಟಿಲ್ಲ. ಭಾರತೀಯ ಸಂವಿಧಾನ ಜಾರಿಗೆ ಬಂದ ಮೂರು ದಿನಗಳ ನಂತರ ಆರ್‌ಎಸ್‌ಎಸ್ ಮುಖವಾಣಿ ‘ಆರ್ಗನೈಸರ್’ ತನ್ನ ಸಂಪಾದಕೀಯದಲ್ಲಿ, “ಡಾ. ಅಂಬೇಡ್ಕರ್ ಅವರಿಂದ ರೂಪುಗೊಂಡು ಸಂವಿಧಾನ ಸಭೆಯಿಂದ ಅನುಮೋದಿಸಲ್ಪಟ್ಟಿರುವ ಈ ಸಂವಿಧಾನ ನಮ್ಮ ದೇಶಕ್ಕೆ ಸೂಕ್ತವಲ್ಲ, ಏಕೆಂದರೆ ಇದರಲ್ಲಿ ನಮ್ಮ ಪವಿತ್ರ ಗ್ರಂಥಗಳ ಯಶಸ್ವಿ ಮೌಲ್ಯಗಳನ್ನು ಸೇರಿಸಲಾಗಿಲ್ಲ” ಎಂದು ಬರೆದುಕೊಂಡಿತ್ತು. ಆರ್‌ಎಸ್‌ಎಸ್‌ನ ಮಾಜಿ ಮುಖ್ಯಸ್ಥ ರಾಜೇಂದ್ರ ಸಿಂಗ್ ಅವರು ಸಂವಿಧಾನವನ್ನು ತಿರಸ್ಕರಿಸಬೇಕು ಎಂದು ಹೇಳಿಕೆ ನೀಡಿದ್ದರು. ಮತ್ತೊಬ್ಬ ಮುಖ್ಯಸ್ಥ ಕೆ.ಸುದರ್ಶನ್ ಅವರು ಸಂವಿಧಾನ ಪಶ್ಚಿಮ ದೇಶಗಳ ಮೌಲ್ಯಗಳ ಆಧಾರದ ಮೇಲೆ ರೂಪುಗೊಂಡಿದೆ, ಆದ್ದರಿಂದ ಪವಿತ್ರ ಭಾರತೀಯ ಗ್ರಂಥಗಳ ಆಧಾರದ ಮೇಲೆ ಹೊಸ ಸಂವಿಧಾನವನ್ನು ತರಬೇಕು ಎಂದು ಪ್ರತಿಪಾದಿಸಿದ್ದರು. 2024ರಲ್ಲಿ ನೀಡಲಾದ ‘400 ಪಾರ್’ (400ಕ್ಕೂ ಹೆಚ್ಚು ಲೋಕಸಭಾ ಸ್ಥಾನ) ಎನ್ನುವ ಘೋಷಣೆಯ ಹಿಂದಿನ ಒಂದು ಪ್ರಮುಖ ಉದ್ದೇಶ ಲೋಕಸಭೆಯಲ್ಲಿ ಸಂವಿಧಾನವನ್ನು ಬದಲಾಯಿಸಲು ಅಗತ್ಯವಿರುವ ಬಹುಮತ ಪಡೆಯುವುದಾಗಿತ್ತು.

ತಮ್ಮ ಸಂಘಟನೆಯನ್ನು ಸಂವಿಧಾನಕ್ಕಿಂತ ದೊಡ್ಡದೆಂದು ಭಾಗವತ್ ಭಾವಿಸಲು ಮತ್ತೊಂದು ಕಾರಣವೆಂದರೆ, ಅವರಿಗೆ ಭಾರತ ಸರ್ಕಾರದ ಯಾವುದೇ ಅಧಿಕೃತ ಹುದ್ದೆ ಇಲ್ಲದಿದ್ದರೂ ಸಹ ಪ್ರಧಾನಿಯ ಮಟ್ಟದ ಭದ್ರತೆ ನೀಡಲಾಗಿದೆ. ಪ್ರಿಯಾಂಕ್ ಖರ್ಗೆ ಅವರ ಮಾತುಗಳಿಗೆ ಪ್ರತಿಕ್ರಿಯಿಸುತ್ತಾ ಭಾಗವತ್, “ನಾವು ಯಾವುದೇ ಗೌಪ್ಯತೆ ಕಾಯ್ದುಕೊಳ್ಳುತ್ತಿಲ್ಲ. ನಮ್ಮ ಕೆಲಸಗಳು ಬಹಿರಂಗ ಮೈದಾನದಲ್ಲಿ ನಡೆಯುತ್ತವೆ. ನಾವು ಜನರನ್ನು ಆಹ್ವಾನಿಸಿ ನಮ್ಮ ಬಗ್ಗೆ ತಿಳಿಸುತ್ತಿದ್ದೇವೆ. ಈ ಎಲ್ಲಾ ಆರೋಪಗಳು ಕೇವಲ ರಾಜಕೀಯ ಪ್ರೇರಿತ ಮತ್ತು ವಿವಿಧ ತಂತ್ರಗಳನ್ನು ಹೆಣೆಯಲಾಗುತ್ತಿದೆ… ಹಿಂದೂ ಧರ್ಮ ನೋಂದಾಯಿಸಲ್ಪಟ್ಟಿಲ್ಲ, ಮತ್ತು ಇತರ ಅನೇಕ ಸಂಸ್ಥೆಗಳು ಸಹ ನೋಂದಾಯಿಸಲ್ಪಟ್ಟಿಲ್ಲ” ಎಂದಿದ್ದಾರೆ. ಹಾಗಾದರೆ ಬಾಬ್ರಿ ಮಸೀದಿ ಧ್ವಂಸದ ಯೋಜನೆಯ ಬಗ್ಗೆ ಈ ಜನ ಸಾರ್ವಜನಿಕವಾಗಿ ಚರ್ಚೆ ನಡೆಸಿದ್ದರೇ ಎಂಬ ಪ್ರಶ್ನೆ ಇಲ್ಲಿ ಏಳುತ್ತದೆ.

ಇಲ್ಲಿ ಮತ್ತೊಂದು ಸಂಗತಿಯನ್ನು ಸ್ಮರಿಸಬಹುದು; ಅಮೆರಿಕದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ (USCIRF) ಇತ್ತೀಚೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮೇಲೆ ನಿರ್ದಿಷ್ಟ ನಿರ್ಬಂಧಗಳನ್ನು ವಿಧಿಸಬೇಕು ಎಂದು ಅಮೆರಿಕ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಸಂಘಟನೆಯ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕುವುದು ಮತ್ತು ಅದರ ಸದಸ್ಯರಿಗೆ ವೀಸಾ ನೀಡದಿರುವುದು ಈ ಪ್ರಸ್ತಾವಿತ ಕ್ರಮಗಳಲ್ಲಿ ಸೇರಿವೆ.

ಸಂಘದ ನೋಂದಣಿ ಮಾಡಿಸದೇ ಇರುವ ಬಗ್ಗೆ ಭಾಗವತ್ ನೀಡಿದ ವಾದವೆಂದರೆ, ಹಿಂದೂ ಧರ್ಮ ಕೂಡ ನೋಂದಾಯಿಸಲ್ಪಟ್ಟಿಲ್ಲ! ಎಂಬುದಾಗಿತ್ತು. ಹಿಂದೂ ಧರ್ಮ ಮತ್ತು ಆರ್‌ಎಸ್‌ಎಸ್ ಎರಡನ್ನೂ ಒಂದೇ ತಕ್ಕಡಿಯಲ್ಲಿ ತೂಗುವ ಈ ಹೇಳಿಕೆ ಒಂದು ರೀತಿಯಲ್ಲಿ ಹಿಂದೂ ಧರ್ಮಕ್ಕೇ ಮಾಡಿದ ಅಪಮಾನ. ಹಿಂದೂ ಧರ್ಮದಲ್ಲಿ ನಾಥ, ತಂತ್ರ, ಶೈವ, ಸಿದ್ಧಾಂತ ಮತ್ತು ಭಕ್ತಿಯಂತಹ ಹಲವು ಸಂಪ್ರದಾಯಗಳಿವೆ. ಆದರೆ ಆರ್‌ಎಸ್‌ಎಸ್ ಪ್ರಚಾರ ಮಾಡುವ ಹಿಂದುತ್ವವೆಂದರೆ ಅದು ಜಾತಿ ಮತ್ತು ಲಿಂಗ ಅಸಮಾನತೆಯ ಮೇಲೆ ಆಧಾರಿತವಾದ ಬ್ರಾಹ್ಮಣ್ಯ. ಒಟ್ಟಾರೆ ಈ ವಾದ ಯಾವುದೇ ತಾರ್ಕಿಕ ಪರೀಕ್ಷೆಗೆ ನಿಲ್ಲುವುದಿಲ್ಲ ಎನ್ನಬಹುದು.

ಆರ್‌ಎಸ್‌ಎಸ್ ನೋಂದಣಿಯಾಗಬೇಕು ಎಂಬ ಬೇಡಿಕೆ ಕೇಳಿಬರುತ್ತಿರುವುದು ಆಶ್ಚರ್ಯವೇನಲ್ಲ. ಆಶ್ಚರ್ಯದ ಸಂಗತಿಯೆಂದರೆ ಈ ಬೇಡಿಕೆ ಇಷ್ಟು ದಿನ ಯಾಕೆ ಎದ್ದಿರಲಿಲ್ಲ ಎಂಬುದು. ಆರ್‌ಎಸ್‌ಎಸ್ ಸಿದ್ಧಾಂತಗಳ ಪರವಾಗಿ ಒಲವುಳ್ಳ ಹಲವು ಸರ್ಕಾರಿ ಅಧಿಕಾರಿಗಳು ಅದರ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ನಿರತರಾಗಿದ್ದಾರೆ. ದೇಣಿಗೆ ಮತ್ತು ಖರ್ಚುವೆಚ್ಚಗಳಿಗೆ ಸಂಬಂಧಿಸಿದ ನಿಯಮಗಳೇ ನೋಂದಣಿಯನ್ನು ಕಡ್ಡಾಯಗೊಳಿಸಲು ಪ್ರಮುಖ ಕಾರಣವಾಗಬೇಕು. ಅದೇ ರೀತಿ, ತಾವು ಒಂದು ಸಾಂಸ್ಕೃತಿಕ ಸಂಘಟನೆ ಎಂದು ಹೇಳಿಕೊಳ್ಳುತ್ತಾ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಆರ್‌ಎಸ್‌ಎಸ್‌ನ ನಡವಳಿಕೆಯ ಕಡೆಗೂ ಗಮನ ಹರಿಸಬೇಕು. ನಿಷೇಧ ಹಿಂಪಡೆಯುವ ಮುನ್ನ ನೀಡಿದ್ದ ಭರವಸೆಗಳನ್ನು ಪಾಲಿಸದಿರುವ ವಿಷಯವನ್ನೂ ಗಮನದಲ್ಲಿಟ್ಟುಕೊಳ್ಳಬೇಕು. ಭಾರತೀಯ ಸಂವಿಧಾನ ಮತ್ತು ಭಾರತೀಯ ರಾಷ್ಟ್ರೀಯತೆಗೆ ಬೆಲೆ ನೀಡುವ ಕಾಲ ಬಂದಿದ್ದು, ಆರ್‌ಎಸ್‌ಎಸ್ ಮಾತ್ರವಲ್ಲದೆ ನೋಂದಣಿ ಮಾಡಿಸಿಕೊಳ್ಳಲು ಅರ್ಹವಿರುವ ಇಂತಹ ಎಲ್ಲಾ ಸಂಘಟನೆಗಳು ನೋಂದಣಿ ಮಾಡಿಕೊಳ್ಳುವಂತೆ ಸೂಚಿಸಬೇಕು.

Leave a Reply