ನನ್ನ ಗೆಳೆಯರೂ ಸಾಮಾಜಿಕ ಕಾರ್ಯಕರ್ತರೂ ಆದ ಕೆ.ಪಿ ಶ್ರೀನಿವಾಸ್ ಮತ್ತು ರವಿಕುಮಾರ್ ಅವರೊಂದಿಗೆ ನಾನು, ಹಿರಿಯೂರು ಪಟ್ಟಣದ ಹೊರವಲಯದ ಹರಿಶ್ಚಂದ್ರ ಘಾಟ್ ಹತ್ತಿರದ ಮಾರುತಜ್ಜನ ಕಾಲೋನಿಯಲ್ಲಿರುವ ಅಲೆಮಾರಿ ಕಿಳ್ಳೇಕ್ಯಾತ ಸಮುದಾಯದ ಜನರನ್ನು ಭೇಟಿಯಾಗಲು ಹೋದಾಗ ಇಳಿಸಂಜೆಯಾಗಿತ್ತು. ನಾವು ಭೇಟಿ ನೀಡುವುದಾಗಿ ಈ ಮೊದಲೇ ಅಲ್ಲಿನ ಕೆಲವು ಮುಖಂಡರಿಗೆ ವರ್ತಮಾನ ತಿಳಿಸಿದ್ದರಿಂದ ನಮ್ಮ ಬರುವಿಕೆಗಾಗಿಯೇ ಎದುರು ನೋಡುತ್ತಿದ್ದರು.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ಗೌರಸಂದ್ರ ಮಾರಿಗುಡಿ ಮುಂದೆ ಶಿಳ್ಳೇಕ್ಯಾತರ ಮುಖಂಡರಾದ ಕೃಷ್ಣಮೂರ್ತಿ ಐವಾಟರ (63), ಶಿವಾಜಿ (48), ಮಾರಕ್ಕ , ಸರಸ್ವತಿ (28), ವಿಜಯಮ್ಮ (51), ರಮೇಶ್ (38) ಮುಂತಾದವರೊಂದಿಗೆ ಮಾತುಕತೆಗೆ ತೊಡಗಿದೆವು. ಮಾರುತಜ್ಜನ ಕಾಲೋನಿಯಲ್ಲಿ ಶಿಳ್ಳೇಕ್ಯಾತರ ಸುಮಾರು 50 ಕುಟುಂಬಗಳಿವೆ. ಸುಮಾರು ಇನ್ನೂರು ವರ್ಷಗಳಿಂದ ತೆಂಗಿನ ಗರಿ- ಅಡಕೆ ಗರಿ- ಈಚಲು ಗರಿ- ಆಪು ಹುಲ್ಲಿನ ಗುಡಿಸಲುಗಳಲ್ಲಿ ನೆಲೆಸಿರುವ ಇಲ್ಲಿನ ಯಾರೊಬ್ಬರಿಗೂ ಸ್ವಂತ ಹೆಸರಿನಲ್ಲಿ ನಿವೇಶನಗಳಿರುವುದಿಲ್ಲ. ಇಲ್ಲಿ ಶಿಳ್ಳೇಕ್ಯಾತರ ಹಿರಿಯ ಮುಖಂಡನಾಗಿ ಕಾಲವಶವಾಗಿ ಹೋಗಿರುವ ಮಾರುತಜ್ಜನ ಜಮೀನಿನಲ್ಲಿ ಈ ಕಾಲೋನಿಯನ್ನು ನಿರ್ಮಿಸಲಾಗಿದೆ ಎಂದು ಹೇಳುವರೇ ಹೊರತು ಸದರಿ ಜಮೀನಿಗೆ ಸಂಬಂಧಿಸಿದ ಯಾವುದೇ ಭೂ-ದಾಖಲಾತಿಗಳು ಇವರ ಬಳಿ ಇರುವುದಿಲ್ಲ. ಸ್ಥಳೀಯ ತಾಲ್ಲೂಕು ಆಡಳಿತದ ಪುರಸಭೆಯವರಾಗಲೀ, ತಾಲ್ಲೂಕು ಪಂಚಾಯತಿಯವರಾಗಲೀ, ತಾಲೂಕಿನ ದಂಡಾಧಿಕಾರಿಗಳಾಗಲೀ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 77 ವರ್ಷಗಳ ಇಲ್ಲಿಯವರೆಗೆ ಈ ಅಲೆಮಾರಿಗಳಿಗೆ ನಿವೇಶನಗಳನ್ನು ಹಂಚಿಕೆಮಾಡಿ ಹಕ್ಕುಪತ್ರ ನೀಡುವ ಪ್ರಯತ್ನಕ್ಕೆ ಕೈಹಾಕಿಲ್ಲ. ಇಲ್ಲಿ ಸ್ವಂತ ಆರ್ಥಿಕ ದುಡಿಮೆಯಿಂದ ಸುಭದ್ರವಾದ ಮನೆ ಕಟ್ಟಿಕೊಳ್ಳಲು ಅಧಿಕಾರಿಗಳು ಅನುಮತಿ ನೀಡುತ್ತಿಲ್ಲ. ಹೀಗಾಗಿ ಈ ಕಾಲೋನಿಯ ಜನರಿಗೆ ಬೇಕಾದ ಸುವ್ಯವಸ್ಥಿತ ರಸ್ತೆ, ಚರಂಡಿ, ಬೀದಿ ದೀಪ, ಕುಡಿಯುವ ನೀರಿನ ಸೌಕರ್ಯ, ಬಾಲವಾಡಿ, ಪ್ರಾಥಮಿಕ ಶಾಲೆ, ಬ್ಯಾಂಕ್ ಸಾಲ, ವೃದ್ಧಾಪ್ಯ ವೇತನ, ಕಲಾವಿದರ ಪಿಂಚಣಿ ಹೀಗೆ ಸಲ್ಲಬೇಕಾದ ಸವಲತ್ತು ಮತ್ತು ಸೌಕರ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.
ಮಾರುತಜ್ಜನ ಕಾಲೋನಿಯಲ್ಲಿ ನೆಲೆಸಿರುವ ಶಿಳ್ಳೇಕ್ಯಾತರ ಏಳೆಂಟು ಹುಡುಗರು 10 ನೇ ತರಗತಿಯವರೆಗೆ, ಮೂವರು ಪಿಯುಸಿವರೆಗೆ ವ್ಯಾಸಂಗ ಮಾಡಿ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದ್ದಾರೆ. ಹತ್ತನ್ನೆರಡು ಮಕ್ಕಳು ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಕಲಿಯುತ್ತಿದ್ದಾರೆ. 55 ವರ್ಷದ ಜಗನ್ನಾಥ್ ಎಂಬುವವರು ಮಾತ್ರ ಎರಡನೇ ವರ್ಷದ ಪದವಿ ವ್ಯಾಸಂಗವನ್ನು ಅರ್ಧಕ್ಕೆ ನಿಲ್ಲಿಸಿ ಜೀವನೋಪಾಯಕ್ಕಾಗಿ ಆಟೋ ಚಾಲಕ ವೃತ್ತಿಯಲ್ಲಿ ತೊಡಗಿದ್ದಾರೆ. ಒಬ್ಬರು ಬಿಪಿಎಡ್ ವ್ಯಾಸಂಗ ಮಾಡಿ ಅನುದಾನರಹಿತ ಖಾಸಗಿ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿದ್ದಾರೆ. ಇಲ್ಲಿ ಯಾರೊಬ್ಬರೂ ಪದವಿ ಹಂತದ ಶಿಕ್ಷಣ ಪಡೆದವರಿಲ್ಲ. ಹದಿನೈದಕ್ಕೂ ಹೆಚ್ಚು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಸರ್ಕಾರಿ ನೌಕರಿಯಲ್ಲಿ ಮತ್ತು ರಾಜಕೀಯ ಕ್ಷೇತ್ರದಲ್ಲಿ ಯಾರೂ ಇರುವುದಿಲ್ಲ. ಜಗನ್ನಾಥ್ ಅವರ ಹೆಂಡತಿಯಾದ ವಿಜಯಮ್ಮ (51) ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಸ್ವಸಹಾಯ ಸಂಘದ ಸದಸ್ಯರಾಗಿ ಮತ್ತು ಹರಿಶ್ಚಂದ್ರ ಘಾಟಿನ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಸರಸ್ವತಿ (28) ಎಂಬುವವರು ಚಿಕ್ಕದೊಂದು ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಾರೆ. ಕೃಷ್ಣಮೂರ್ತಿ ಐವಾಟರ ಮಗನಾದ ರಮೇಶ್ (38) ಸ್ವಂತ ಟ್ರಾಕ್ಟರ್ ಹೊಂದಿ ಬಾಡಿಗೆಗೆ ನಡೆಸುತ್ತಿದ್ದಾರೆ. ಕೆಲವರು ಸ್ಟೌ ಮಿಕ್ಸಿ ರಿಪೇರಿ ಕೆಲಸದಲ್ಲಿ, ಕೆಲವರು ಬುಕಾಳಿ (ಹಂದಿ) ಸಾಕಾಣಿಕೆ ಮತ್ತು ವ್ಯಾಪಾರ, ಕೆಲವರು ಗಾರೆ ಕೆಲಸ, ಕೃಷಿ ಕೂಲಿಯಾಳುಗಳ ಕೆಲಸ, ಸಣ್ಣಪುಟ್ಟ ಅಲಂಕಾರಿಕ ವಸ್ತುಗಳ ಮಾರಾಟ ಇನ್ನೂ ಮುಂತಾದ ಕೆಲಸಗಳನ್ನು ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ.
ಇಷ್ಟರ ನಡುವೆಯೂ ಇದೇ ಕಾಲೋನಿಯ ಅಲೆಮಾರಿಗಳ ಮುಖಂಡನಾದ ಕೃಷ್ಣಪ್ಪ (47) ಎಂಬುವವರು ತಮ್ಮದೇ ದುಡಿಮೆ ಮತ್ತು ಸಾರ್ವಜನಿಕರ ಸಹಾಯದಿಂದ ಅನಾಥಾಶ್ರಮ ನಡೆಸುತ್ತಿದ್ದಾರೆ.
ಇದೇ ಹಿರಿಯೂರು ಪಟ್ಟಣದ ಒಳಭಾಗದಲ್ಲಿ ಗೋಪಾಲಪುರ ಬಡಾವಣೆಯಲ್ಲಿ ಶಿಳ್ಳೇಕ್ಯಾತ ಸಮುದಾಯದ ನೂರಕ್ಕೂ ಹೆಚ್ಚು ಕುಟುಂಬಗಳಿವೆ. ಅವರೆಲ್ಲರಿಗೂ ಸ್ವಂತ ನಿವೇಶನಗಳು, ಸರ್ಕಾರದ ವೆಚ್ಚದಲ್ಲಿ ನಿರ್ಮಿಸಲಾದ ಮನೆಗಳು, ವೃದ್ಧಾಪ್ಯ ವೇತನ ಇನ್ನೂ ಮುಂತಾದ ಸೌಲಭ್ಯಗಳನ್ನು ಸರ್ಕಾರ ಒದಗಿಸಿಕೊಟ್ಟಿರುವಾಗ, ಅದೇ ಶಿಳ್ಳೇಕ್ಯಾತರ ತಮಗೇಕೆ ಇಂತಹ ಸೌಲಭ್ಯಗಳಿಲ್ಲ? ಮಾರುತಜ್ಜನ ಕಾಲೋನಿಯ ಶಿಳ್ಳೇಕ್ಯಾತರ ಮುಖ್ಯ ಪ್ರಶ್ನೆಯಾಗಿದೆ.
ಶಿಳ್ಳೇಕ್ಯಾತರು ಪಾರಂಪರಿಕವಾಗಿ ತೊಗಲು ಗೊಂಬೆಯಾಟ, ತೊಗಲುಗೊಂಬೆಗಳನ್ನು ಕುಣಿಸಿಕೊಂಡು ರಾಮಾಯಣ ಮಹಾಭಾರತ ಭಾಗವತ ಮುಂತಾದ ಕಾವ್ಯಗಳನ್ನು ಪ್ರದರ್ಶಿಸುವುದು, ದೇಶಿ ರಂಗಭೂಮಿಯಲ್ಲಿ ತೊಗಲುಗೊಂಬೆ ನಾಟಕ ಪ್ರದರ್ಶನ ಮಾಡುವುದು, ನಾಟಕದ ಮೇಷ್ಟ್ರುಗಳಾಗಿ ಯಕ್ಷಗಾನ ಬಯಲಾಟ ನಾಟಕಗಳನ್ನು ಕಲಿಸಿಕೊಡುವುದು, ಒಳನಾಡಿನ ಮೀನುಗಾರಿಕೆ, ಹಂದಿ ಸಾಕಾಣಿಕೆ ಮುಂತಾದ ಜೀವನ ಮಾರ್ಗಗಳನ್ನು ಅನುಸರಿಸುತ್ತಾ ಬಂದಿದ್ದಾರೆ. ಶಿಳ್ಳೇಕ್ಯಾತರ ಹನುಮಂತಪ್ಪ ಎಂಬ ಹಿರೀಕ ವ್ಯಕ್ತಿಯಿಂದ ಇಲ್ಲಿನ ಶಿಳ್ಳೇಕ್ಯಾತರು ತೊಗಲುಗೊಂಬೆ ನಾಟಕಗಳ ಕಲೆಯನ್ನು ಕಲಿತುಕೊಂಡರು. ಶಿವಾಜಿಯ ಅಣ್ಣನಾದ ಕೃಷ್ಣಪ್ಪ ಎಂಬುವವರು ಈಗಲೂ ನಾಟಕದ ಮೇಷ್ಟ್ರಾಗಿ ಊರೂರು ತಿರುಗುತ್ತಾ ಪೌರಾಣಿಕ ಯಕ್ಷಗಾನ ಬಯಲಾಟದ ನಾಟಕಗಳನ್ನು ಕಲಿಸುತ್ತಿದ್ದಾರೆ. ಭಾಗ್ಯಮ್ಮ, ಗೀತಾ, ಸೌಮ್ಯ ಎಂಬುವವರು ನಾಟಕದ ಕಲಾವಿದೆಯರಾಗಿ ಸ್ತ್ರೀಪಾತ್ರಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ. ಇವರು ಬೇರೆ ಬೇರೆ ಊರುಗಳ ನಾಟಕ ಕಲಾ ಸಂಘಗಳು ಪ್ರದರ್ಶಿಸುವ ನಾಟಕಗಳಲ್ಲಿ ಅಭಿನಯಿಸಲು ಆಹ್ವಾನದ ಮೇರೆಗೆ ಹೋಗುತ್ತಿದ್ದಾರೆ. ಇವರಲ್ಲಿ ಯಾರೊಬ್ಬರಿಗೂ ನಿಯತವಾಗಿ ಆರ್ಥಿಕ ಆದಾಯ ತಂದುಕೊಡುವ ನಿರ್ದಿಷ್ಟವಾದ ಉತ್ಪಾದನಾ ನೆಲೆಗಳಿಲ್ಲ.
ಅಲೆಮಾರಿ ಭಿಕ್ಷುಕರಾಗಿದ್ದ ಶಿಳ್ಳೇಕ್ಯಾತರು ಈಗ ಸ್ಥಿರ ಸಮುದಾಯವಾಗಿ ನೆಲೆ ಕಂಡುಕೊಳ್ಳುತ್ತಿದ್ದಾರೆ. ಭಿಕ್ಷಾಟನೆಯನ್ನು ಕೈಬಿಟ್ಟಿದ್ದಾರೆ. ಹಿರಿಯೂರಿನ ಶಿಳ್ಳೇಕ್ಯಾತರು ತೊಗಲುಗೊಂಬೆ ಕುಣಿಸುವ ತಮ್ಮ ಕುಲವೃತ್ತಿಯನ್ನು ಕೂಡಾ ಕೈಬಿಟ್ಟಿದ್ದಾರೆ. ಕುಲವೃತ್ತಿಯ ಪರಿಕರಗಳನ್ನು ಮಾತ್ರ ತಮ್ಮ ಮನೆಗಳಲ್ಲಿ ಪವಿತ್ರವೆಂದು ದೇವರ ಪಟಗಳ ಬಳಿಯಿಟ್ಟು ಪೂಜಿಸುತ್ತಾರೆ. ಇವರ ಮನೆಭಾಷೆ ಮರಾಠಿ. ಇವರು ಭಾರತ ದೇಶದಲ್ಲಿ ಎಲ್ಲಿಯೇ ನೆಲೆಸಿರಲಿ ಬೆಡಗು, ಆಚರಣೆ ಮತ್ತು ಸಂಪ್ರದಾಯಗಳು ಹೆಚ್ಚೂಕಮ್ಮಿ ಒಂದೇ ಆಗಿರುತ್ತವೆ. ಶಿಳ್ಳೇಕ್ಯಾತ ಸಮುದಾಯವನ್ನು ಕಿಳ್ಳೇಕ್ಯಾತ, ಬುಂಡೆಬೆಸ್ತ, ಕಟುಬು, ಕಟಬರ ಮುಂತಾದ ಬದಲಿ ಹೆಸರುಗಳಿಂದ ಕರೆಯಲಾಗುತ್ತಿದೆ. ಶಿಳ್ಳೇಕ್ಯಾತ ಮತ್ತು ಕಿಳ್ಳೇಕ್ಯಾತ ಎಂಬ ಪದಗಳು ಹಲವಾರು ಸಮಸ್ಯೆಗಳ ಸೃಷ್ಟಿಸಿಗೆ ಕಾರಣವಾಗಿವೆ. ‘ಶಿ’ ಮತ್ತು ‘ಸಿ’ ಅಕ್ಷರಗಳ ಗೊಂದಲದಿಂದಾಗಿ ಎರಡು ಪದಗಳನ್ನು ಎರಡು ಪ್ರತ್ಯೇಕವಾದ ಜಾತಿಗಳೆಂದು ತಪ್ಪಾಗಿ ಗ್ರಹಿಸಿದ ಪರಿಣಾಮವಾಗಿ ಶಿಳ್ಳೇಕ್ಯಾತ ಎಂಬ ಹೆಸರನ್ನು ಎಸ್ಸಿ ಪಟ್ಟಿಯಲ್ಲಿ ಸೇರಿಸಿದ್ದರೆ ಕಿಳ್ಳೇಕ್ಯಾತ ಎಂಬ ಹೆಸರನ್ನು ‘ಪ್ರವರ್ಗ -೧’ ಪಟ್ಟಿಯಲ್ಲಿ ಸೇರಿಸಲಾಗಿದೆ. ಹಾಗಾಗಿ ಸೂಕ್ತವಾದ ಮೀಸಲಾತಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಈ ಗೊಂದಲ ಮತ್ತು ಜಟಿಲತೆಯನ್ನು ನಿವಾರಿಸಬೇಕೆಂದು ಶಿಳ್ಳೇಕ್ಯಾತರು ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದ್ದಾರೆ.
ಭಾರತ ಕೇಂದ್ರ ಸರ್ಕಾರದ ಆದೇಶ ನಂ: ಎಸ್. ಡಬ್ಲ್ಯೂ ಎಲ್-12 ಟಿಬಿಎಸ್-77, ದಿನಾಂಕ 22/02/1977 ರಂದು ಭಾರತ ಸಂವಿಧಾನದ ಪರಿಚ್ಛೇದನ 16(4) ಅದರ ಪ್ರಕಾರ ಹೊರಡಿಸಿದ ಹಿಂದಿನ ಆದೇಶದಂತೆ ಪರಿಶಿಷ್ಟ ಜಾತಿಯ ಶಿಳ್ಳೇಕ್ಯಾತ/ ಕಿಳ್ಳೇಕ್ಯಾತ ಇದ್ದದನ್ನು ಮುಂದುವರೆಸಬೇಕೆಂದು, ಕರ್ನಾಟಕ ಸರ್ಕಾರ Sillekyathas/Killekyathtas ಬೇರೆ ಬೇರೆ ಎಂದು ಬೇರ್ಪಡಿಸದೆ ಇವೆರಡೂ ಒಂದೇ ಜಾತಿಯ ಬದಲಿ ಪದಗಳಾಗಿದ್ದು ಅವನ್ನು ಜೋಡಿಯಾಗಿ ಮುಂದುವರೆಸಲು ವಿಧಾನ ಸಭೆಯ ಅಧಿವೇಶನದಲ್ಲಿ ಚುಕ್ಕಿ ಪ್ರಶ್ನೆ ಮಾಡಿ, ಚರ್ಚಿಸಬೇಕೆಂದು ಶಿಳ್ಳೆಕ್ಯಾತ ಸಮುದಾಯದ ಮುಖಂಡರು ಸರ್ಕಾರಕ್ಕೆ ಹಲವಾರು ಬಾರಿ ಪತ್ರ ಬರೆದಿದ್ದಾರೆ. ಈ ಪತ್ರದ ಸಾರಾಂಶವೇನೆಂದರೆ, ಅಲೆಮಾರಿ ಶಿಳ್ಳೇಕ್ಯಾತ/ ಕಿಳ್ಳೇಕ್ಯಾತ ಒಂದೇ ಜಾತಿಯ ಹೆಸರಾಗಿದೆ. ಉತ್ತರ ಕರ್ನಾಟಕದಲ್ಲಿ ಕಿಳ್ಳೇಕ್ಯಾತರೆಂದು, ದಕ್ಷಿಣ ಕರ್ನಾಟಕದಲ್ಲಿ “ಶಿಳ್ಳೇಕ್ಯಾತ” ಎಂದು ಜನ ಗುರುತಿಸುತ್ತಿದ್ದದ್ದನ್ನು ಸರ್ಕಾರಿ ಅಧಿಕಾರಿಗಳು ಬೇರೆ ಬೇರೆ ಜಾತಿಗಳೆಂದು ತಪ್ಪಾಗಿ ಗ್ರಹಿಸಿ ಶಿಳ್ಳೆಕ್ಯಾತ ಎಂಬುದನ್ನು ಎಸ್ಸಿ ಪಟ್ಟಿಯಲ್ಲಿ ಮತ್ತು ಕಿಳ್ಳೇಕ್ಯಾತ ಎಂಬುದನ್ನು ಹಿಂದುಳಿದ ‘ಪ್ರವರ್ಗ -೧’ ಪಟ್ಟಿಯಲ್ಲಿ ಸೇರಿಸಿ ಎಸ್ಸಿ ಮೀಸಲಾತಿ ಸೌಲಭ್ಯದಿಂದ ವಂಚಿತರಾಗುವಂತೆ ಮಾಡಲಾಗಿದೆ. ‘ಕಿಳ್ಳೇಕ್ಯಾತ’ ಬೇರೆ ‘ಶಿಳ್ಳೇಕ್ಯಾತ’ ಬೇರೆ ಎಂಬ ವಿಭಜನೆಯನ್ನು ತೆಗೆದು ಎಸ್ಸಿ ಪಟ್ಟಿಯಲ್ಲಿ ಎರಡೂ ಪದಗಳನ್ನು ಸೇರಿಸುವ ಅಗತ್ಯವಿದೆ. ಜಾತಿಯ “ಕಿಳ್ಳೇಕ್ಯಾತ” ಪದವನ್ನು ಹಿಂದುಳಿದ ವರ್ಗ ಪಟ್ಟಿಯಲ್ಲಿ ಸೇರಿಸಿರುವುದರಿಂದ ಪರಿಶಿಷ್ಟ ಜಾತಿಗೆ ಸಂಬಂಧಿಸಿದ ಸೌಲಭ್ಯಗಳು ದೊರೆಯದೆ ಅನ್ಯಾಯವಾಗಿರುತ್ತದೆ. ಕೆಲವು ಕಡೆಗಳಲ್ಲಿ ‘ಶಿಳ್ಳೇಕ್ಯಾತ’ ಎಂದು ಜಾತಿ ಕಾಲಂನಲ್ಲಿ ನಮೂದಿಸಲು ಶಾಲೆಗಳಲ್ಲಿ ಒಪ್ಪುತ್ತಿಲ್ಲ. ಜಾತಿಪತ್ರ ವಿತರಿಸುವ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳು ಕೂಡಾ ಶಿಳ್ಳೇಕ್ಯಾತ ಎಂಬ ಹೆಸರಿನಲ್ಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡದೆ ಕಿಳ್ಳೇಕ್ಯಾತ ಎಂದೇ ‘ಪ್ರವರ್ಗ -೧’ ಎಂದು ನೀಡಲಾಗುತ್ತಿದೆ. ಹಾಸನ, ತುಮಕೂರು, ರಾಮನಗರ, ಬೆಂಗಳೂರು ದಕ್ಷಿಣ ಮುಂತಾದ ಜಿಲ್ಲೆಗಳಲ್ಲಿ ಶಿಳ್ಳೆಕ್ಯಾತರನ್ನು ಬುಡುಬುಡಿಕೆ ಜನಾಂಗ ಎಂದು ತಪ್ಪಾಗಿ ಜಾತಿಪತ್ರ ನೀಡಲಾಗುತ್ತಿದೆ. ಶಿಳ್ಳೆಕ್ಯಾತರು ತಹಶೀಲ್ದಾರರ ಕಚೇರಿಗಳಲ್ಲಿ ತಮಗೆ ಬುಡುಬುಡಿಕೆ ಜಾತಿಯ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರ ನೀಡಬಾರದೆಂದು ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ. ಶಿಳ್ಳೇಕ್ಯಾತ ಎಂಬ ಹೆಸರಿನಲ್ಲಿ ಜಾತಿಪತ್ರ ನೀಡಬೇಕೆಂದು ಅರ್ಜಿ ನೀಡಿದಾಗಲೂ ಒಪ್ಪದಿರುವ ಕೆಲವು ತಹಶಿಲ್ದಾರರು, ‘ನೀವು ಕಿಳ್ಳೇಕ್ಯಾತ ಸಮುದಾಯದವರು. ನೀವು ನಿಮ್ಮ ಜಾತಿಯ ಹೆಸರನ್ನು ಸುಳ್ಳು ಹೇಳುತ್ತೀರಿ, ನಿಮಗೆ ಪರಿಶಿಷ್ಟ ಜಾತಿಯ “ಶಿಳ್ಳೇಕ್ಯಾತ” ಜಾತಿ ಪ್ರಮಾಣ ಪತ್ರ ಕೊಟ್ಟರೆ ನಾವು ಸರ್ಕಾರಿ ಕೆಲಸ ಕಳೆದುಕೊಂಡು ಮನೆಗೆ ಹೋಗಬೇಕಾಗುತ್ತದೆ. ನಿಮಗೆ ಶಿಳ್ಳೇಕ್ಯಾತ ಎಂಬ ಹೆಸರಿನಲ್ಲಿ ಜಾತಿಪತ್ರ ಕೊಡಲು ಬರುವುದಿಲ್ಲ” ಎಂದು ಗದರಿಸಿ ಕಳಿಸುತ್ತಾರೆ. ಈ ಜಾತಿಗೆ “ಶಿಳ್ಳೇಕ್ಯಾತ” / “ಕಿಳ್ಳೇಕ್ಯಾತ” ಎಂಬ ಯಾವುದೇ ಹೆಸರಿರಲಿ ಒಂದೇ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಂತಾಗಬೇಕು. ಇಲ್ಲದಿದ್ದರೆ ಈ ಅಮಾಯಕ ಅಲೆಮಾರಿಗಳು ನಿರಂತರವಾಗಿ ಕಷ್ಟಕೋಟಲೆ, ಗೊಂದಲ ಗೋಜಲು, ದೂಷಣೆ ಅವಮಾನ ಎದುರಿಸಬೇಕಾಗುತ್ತದೆ. ಅಲೆಮಾರಿ ಪರಿಶಿಷ್ಟ ಜಾತಿಗೆ ಸೇರಿದ “ಶಿಳ್ಳೇಕ್ಯಾತ/ ಕಿಳ್ಳೇಕ್ಯಾತ” ಇವರಿಗೆ ಸರ್ಕಾರದಿಂದ ಅನ್ಯಾಯವಾಗಬಾರದು.
ಕರ್ನಾಟಕದಲ್ಕಿರುವ ಶಿಳ್ಳೇಕ್ಯಾತರ ತೊಗಲುಗೊಂಬೆ ಆಟದ ಕೆಲವು ಕಲಾವಿದರು ಅಳಿದು ಹೋಗುತ್ತಿರುವ ಅಪರೂಪದ ತೊಗಲು ಗೊಂಬೆಯಾಟದ ಜಾನಪದ ಕಲೆಯನ್ನು ಈಗಲೂ ಜೀವಂತವಾಗಿ ಉಳಿಸಿಕೊಂಡು ಬಂದಿದ್ದಾರೆ. ಈಗಿನಂತೆ ಸಿನಿಮಾ, ದೂರದರ್ಶನ, ಯೂಟ್ಯೂಬ್, ಇನ್‌ಸ್ಟಾಗ್ರಾಂ ಇಂತಹ ಮಾಧ್ಯಮಗಳಿರದಿದ್ದ ಆಗಿನ ಕಾಲದಲ್ಲಿ ಕಿಳ್ಳೇಕ್ಯಾತ ಜಾನಪದ ಕಲಾವಿದರ ತೊಗಲುಗೊಂಬೆ ನಾಟಕಗಳೇ ಪ್ರೇಕ್ಷಕರ ಮನರಂಜನೆಗೆ ಆಧಾರಗಳಾಗಿದ್ದವು. ಇವರ ತೊಗಲುಗೊಂಬೆ ನಾಟಕ ಕಲೆ ಜನರಿಗೆ ಮನರಂಜನೆ ನೀಡುವ ಮೂಲಕ ಅಪಾರ ಮೆಚ್ಚುಗೆ ಗಳಿಸಿದ್ದವು. ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಶಿಳ್ಳೇಕ್ಯಾತ ಸಮುದಾಯದ ಸಂಜೀವಪ್ಪ ಮತ್ತು ಕುಟಂಬ ಸದಸ್ಯರು ನಾಡಿನಾದ್ಯಂತ ಸಂಚರಿಸುತ್ತಾ ತೊಗಲುಗೊಂಬೆ ನಾಟಕ ಪ್ರದರ್ಶನ ನೀಡುತ್ತಾ ಬಂದಿದ್ದಾರೆ.
ಅಲೆಮಾರಿ ಶಿಳ್ಳೇಕ್ಯಾತ ಸಮುದಾಯದ ಬೆಳಗಲ್ ವೀರಣ್ಣ ತೊಗಲುಗೊಂಬೆಯಾಟದ ಕಲೆಗೆ ಹೊಸ ಆಯಾಮವನ್ನು ನೀಡುವ ಮೂಲಕ ಹಂಪಿ ಕನ್ನಡ ವಿವಿಯಿಂದ ನಾಡೋಜ (ಗೌರವ ಡಾಕ್ಟರೇಟ್) ಪದವಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಅಕಾಡೆಮಿ ಪ್ರಶಸ್ತಿ ಮುಂತಾದವುಗಳಿಂದ ಪುರಸ್ಕೃತರಾಗಿದ್ದಾರೆ.
ಕೊಪ್ಪಳ ಜಿಲ್ಲೆಯ ಮೋರನಹಳ್ಳಿ ಕೇಶಪ್ಪ ದೊಡ್ಡಬಾಳಪ್ಪ ಎಂಬ ತೊಗಲು ಗೊಂಬೆಯಾಟದ ಹಿರಿಯ ಕಲಾವಿದನಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಪಂಡಿತ ವೆಂಕಟೇಶ್ ಕುಮಾರ್ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಬಹುದೊಡ್ಡ ಹೆಸರು.
ಬೆಳಗಲ್ಲು ವೀರಣ್ಣನವರ ಅಳಿಯನಾದ ಪದ್ಮಶ್ರೀ ಪಂಡಿತ್ ವೆಂಕಟೇಶ್ ಕುಮಾರ್ ಅವರ ತಂದೆತಾಯಿಗಳು ಕೂಡಾ ಗೊಂಬೆಯಾಟ ಆಡಿಸುವ ಕಲಾವಿದರಾಗಿದ್ದರು. ತೊಗಲುಗೊಂಬೆ ಕಲೆಯಲ್ಲಿ ರಂಗ ನಿರ್ದೇಶಕಿಯಾಗಿರುವ ಧಾರವಾಡದ ಶ್ರೀಮತಿ ರಜನಿ ಗರುಡ ಅವರು, ಕರ್ನಾಟಕ ರಾಜ್ಯವೂ ಸೇರಿದಂತೆ ಅಖಿಲ ಭಾರತದ ಮಟ್ಟದಲ್ಲಿ ರಾಮಾಯಣ ಮಹಾಭಾರತ ಕಾವ್ಯಗಳ puppet show ನಡೆಸುತ್ತಾ ದೇಶ ವಿದೇಶಗಳಿಗೂ ತೊಗಲುಗೊಂಬೆ ಕಲೆಯನ್ನು ತೆಗೆದುಕೊಂಡು ಹೋಗಿದ್ದಾರೆ. ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ತೊಗಲುಗೊಂಬೆ ಕಲಾವಿದ ಸಂಜೀವಪ್ಪ ಮತ್ತು ಅವರ ಕುಟುಂಬದವರು ಈ ಕಲೆಯನ್ನು ಕರ್ನಾಟಕಾದ್ಯಂತ ಪ್ರದರ್ಶನ ಮಾಡುತ್ತಾ ಜನಪ್ರಿಯರಾಗಿದ್ದಾರೆ. ಬೆಳಗಲ್ಲು ವೀರಣ್ಣನವರ ಅಳಿಯನಾದ ಪದ್ಮಶ್ರೀ ಪಂಡಿತ್ ವೆಂಕಟೇಶ್ ಕುಮಾರ್ ಅವರ ತಂದೆತಾಯಿಗಳು ಕೂಡಾ ಗೊಂಬೆಯಾಟ ಆಡಿಸುವ ಕಲಾವಿದರಾಗಿದ್ದರು. ತೊಗಲುಗೊಂಬೆ ಕಲೆಯಲ್ಲಿ ರಂಗ ನಿರ್ದೇಶಕಿಯಾಗಿರುವ ಧಾರವಾಡದ ಶ್ರೀಮತಿ ರಜನಿ ಗರುಡ Rajani Garud Kerekai ಅವರು, ಕರ್ನಾಟಕ ರಾಜ್ಯವೂ ಸೇರಿದಂತೆ ಅಖಿಲ ಭಾರತದ ಮಟ್ಟದಲ್ಲಿ ರಾಮಾಯಣ ಮಹಾಭಾರತ ಕಾವ್ಯಗಳ puppet show ನಡೆಸುತ್ತಾ ದೇಶ ವಿದೇಶಗಳಿಗೂ ತೊಗಲುಗೊಂಬೆ ಕಲೆಯನ್ನು ತೆಗೆದುಕೊಂಡು ಹೋಗಿದ್ದಾರೆ. ಶಿರಾ ತಾಲ್ಲೂಕಿನ ತೊಗಲುಗೊಂಬೆ ಕಲಾವಿದ ಸಂಜೀವಪ್ಪ ಮತ್ತು ಅವರ ಕುಟುಂಬದವರು ಈ ಕಲೆಯನ್ನು ಕರ್ನಾಟಕಾದ್ಯಂತ ಪ್ರದರ್ಶನ ಮಾಡುತ್ತಾ ಜನಪ್ರಿಯರಾಗಿದ್ದಾರೆ. ನನ್ನ ಆತ್ಮೀಯ ಗೆಳೆಯ, ಶಿಳ್ಳೇಕ್ಯಾತ ಸಮುದಾಯದ ಪ್ರೊ.ಸಣ್ಣವೀರಣ್ಣ ದೊಡ್ಡಮನಿ Sannaveeranna Doddamani ಶಿಳ್ಳೇಕ್ಯಾತ ಸಮುದಾಯದವರ ಕಲಾನೆಲೆಗಳು ಮತ್ತು ಸಂಸ್ಕೃತಿಯನ್ನು ಕುರಿತು ಪಿಎಚ್.ಡಿ ಮಾಡಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ನನ್ನ ಮತ್ತೊಬ್ಬ ಆತ್ಮೀಯ ಗೆಳೆಯನಾದ ಡಾ.ಎನ್.ಡಿ.ತಿಪ್ಪೇಸ್ವಾಮಿ Nd Thippeswamy ಅವರು ಕರ್ನಾಟಕ ಸರ್ಕಾರದ ಡಾ.ಅಂಬೇಡ್ಕರ್ ಸಂಶೋಧನಾ ಸಂಸ್ಥೆಯಲ್ಲಿ ಶಿಳ್ಳೇಕ್ಯಾತ/ ಕಿಳ್ಳೇಕ್ಯಾತ ಸಮುದಾಯವನ್ನು ಕುರಿತು ಕುಲಶಾಸ್ತ್ರೀಯ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಮಂಡಿಸಿರುತ್ತಾರೆ. ಇಂತಹ ಸಮುದಾಯದ ಕಲೆಗಳನ್ನು ಪೋಷಿಸುವ ಮತ್ತು ಇವರಿಗೆ ಕನಿಷ್ಠ ಮಾನವ ಘನತೆಯ ಸುಭದ್ರ ಬದುಕನ್ನು ಕಟ್ಟಿಕೊಡುವುದು ಸರ್ಕಾರದ ಮತ್ತು ಪ್ರಜ್ಞಾವಂತರ ಜವಾಬ್ದಾರಿಯಾಗಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದ ಹೊರವಲಯದಲ್ಲಿ ಹರಿಶ್ಚಂದ್ರ ಘಾಟ್ ಹತ್ತಿರದ ಮಾರುತಜ್ಜನ ಕಾಲೋನಿಯ ಅಲೆಮಾರಿ ಶಿಳ್ಳೇಕ್ಯಾತರ ಕುಟುಂಬಗಳಿಗೆ ಅದೇ ಸ್ಥಳದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲು ಸ್ಥಳೀಯ ಆಡಳಿತ ಮತ್ತು ಜನಪ್ರತಿನಿಧಿಗಳು ಕಾರ್ಯೋನ್ಮುಖರಾಗಲೆಂದು ಆಶಿಸುತ್ತೇನೆ.
– ವಡ್ಡಗೆರೆ ನಾಗರಾಜಯ್ಯ, ಹಿರಿಯ ಸಾಹಿತಿ



