ಸಮಕಾಲೀನ: 500
ನಮ್ಮ ಕಾಲದಲ್ಲಿ ಅಪ್- ಟು -ಡೇಟ್ “ಚಿಂತಕ” ಎಂದು ಕನ್ನಡದಲ್ಲಿ ಯಾರಾದರೊಬ್ಬರನ್ನು ಗುರುತಿಸಲು ಹೇಳಿದರೆ ನಾನು ಯಾವುದೇ ವಿಳಂಬ ಇಲ್ಲದೇ, ಹೆಮ್ಮೆಯಿಂದ ಬೊಟ್ಟುಮಾಡಿ ತೋರಿಸಬಲ್ಲ ಏಕೈಕ ಹೆಸರು ಶಿವಸುಂದರ್.
- ಭಾರತ ಕಲ್ಯಾಣ ರಾಷ್ಟ್ರವಾಗಲು ಅಂಬೇಡ್ಕರರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು: ಕೆ.ವೈ.ನಾರಾಯಣಸ್ವಾಮಿ
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
ಯಾವಾಗ ಫೋನ್ ಮಾಡಿದರೂ ಕರ್ನಾಟಕದ ಯಾವುದಾದರೊಂದು ಮೂಲೆಯಿಂದ ಫೋನ್ ಎತ್ತುವ, ತಾನು ಆಡಲೇಬೇಕಾದ ಮಾತಿಗಾಗಿ ರಾಜ್ಯದ ಮೂಲೆಮೂಲೆಗಳಿಗೆ ಮೈಪುಡಿಯಾಗುವಷ್ಟು ಪ್ರಯಾಣ ಮಾಡುವ, ಆ ಪ್ರಯಾಣದ ನಡುವೆಯೇ (ನನಗಂತೂ) ಹೊಟ್ಟೆಕಿಚ್ಚಾಗುವಷ್ಟು ಓದಿಕೊಳ್ಳುವ ಮತ್ತು ಅಷ್ಟೇಗಾತ್ರದಲ್ಲಿ ಹೊಟ್ಟೆಕಿಚ್ಚಾಗುವಷ್ಟು ಸ್ಮರಣಶಕ್ತಿ ಹೊಂದಿರುವ ಶಿವಸುಂದರ್ ನನಗೆ ಇತ್ತೀಚೆಗೆ ಆರೇಳು ವರ್ಷಗಳಿಂದಷ್ಟೇ ಪರಿಚಿತರಾದರೂ, ಅವರ ಮಾತು-ಬರೆಹಗಳನ್ನು ನಾನು ಸಾಮಾನ್ಯವಾಗಿ ತಪ್ಪಿಸಿಕೊಳ್ಳುವುದಿಲ್ಲ. ಮೇಲಾಗಿ ಕನ್ನಡದಲ್ಲಿ “ಅತ್ಯಂತ ಸಮಕಾಲೀನ” ಸ್ಪಂದನ ಇರುವ ಏಕೈಕ ಕವಿ ಕೂಡ ಅವರೇ. ಪ್ರತಿದಿನ ವಾಟ್ಸಾಪ್ ಮೂಲಕ ಅವರು ಕಳುಹಿಸುವ ಕೆಲವೇ ಸಾಲುಗಳ ಗದ್ಯಗವಿತೆಗಳು-ಹೋರಾಟದ ಕಿಡಿಗವಿತೆಗಳು ಹೊರಹೊಮ್ಮಿಸುವ ಹೊಳಹುಗಳು ಅಪ್ರತಿಮ.
ಖಾಸಗಿಯಾಗಿ ಮೌನದಲ್ಲೂ ಮಾತನಾಡಬಲ್ಲ ಅವರು, ವೇದಿಕೆಯ ಮೇಲೆ ಪರಮವಾಚಾಳಿ. ಹಾಗೆಂದು, ಅಲ್ಲಿ ಮಾತನಾಡುವ ಪದಗಳೆಲ್ಲವೂ ಚೌಕಾಸಿ ಮಾಡಿಯೇ ಹೊರಬರುವಂತಹವು, ನಾಡಿನ ಈವತ್ತಿನ ದಿನಗಳಿಗೆ ಮೌಲಿಕವಾದಂತಹವು. ನನಗಾಗಿ ಒಂದೆರಡು ಬಾರಿ ಕುಂದಾಪುರಕ್ಕೆ ಬಂದು ಇಲ್ಲಿನ ರೈತಸಮುದಾಯಕ್ಕೆ ಪ್ರೇರಣೆ ನೀಡಿ ಹೋಗಿದ್ದಾರೆ… ರೈತಸಂಘದ ಗೆಳೆಯರೂ ಮತ್ತೆ ಶಿವಸುಂದರ್ ಯಾವಾಗ ಬರುತ್ತಾರೆ? ಎಂದು ಕುತೂಹಲದಿಂದ ಕೇಳುವಷ್ಟು ಸರಳ-ಪ್ರಖರ ಮಾತುಗಳು.
ತನ್ನ ಚೌಕಟ್ಟು, ಮಿತಿ, ಗುರಿ.. ಎಲ್ಲದರಲ್ಲೂ ಸ್ಪಷ್ಟತೆ, ಕೇಂದ್ರೀಕೃತ ಗಮನ ಹೊಂದಿರುವ ಶಿವಸುಂದರ್ ಅವರು ವಾರ್ತಾಭಾರತಿಯಲ್ಲಿ ತಮ್ಮ 500ನೇ ವೀಡಿಯೊಕಾಲಂ ಅನ್ನು ನಾಳೆಗೆ ಪೂರೈಸುತ್ತಿದ್ದಾರೆ; ಇದೇನೂ ಸಣ್ಣ ಶ್ರಮ ಅಲ್ಲ. ಅವರು ತಮ್ಮ ಕಾಲಂಗಳಿಗೆ ಆಯ್ದುಕೊಳ್ಳುವ 99% ಸಂಗತಿಗಳೆಲ್ಲವೂ ಬಹುಶಿಸ್ತುಗಳ ಅಧ್ಯಯನ, ಗೊಂದಲವಿಲ್ಲದ ಮುನ್ನೋಟ, ಅವ್ಯಾಜ ಜನಪ್ರೀತಿ ಮತ್ತು ಅಪಾರ ಧೈರ್ಯ ಬಯಸುವಂತಹವು. ಇಂತಹ ನಿರ್ಭಿಡೆಯ ಚಿಂತಕ ಶಿವಸುಂದರ್, ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ನಾಳೆ ಲೈವ್ ಆಗಿ, ಎ. ನಾರಾಯಣ್ ಅವರ ಜೊತೆ ಸಂವಾದ ನಡೆಸಲಿದ್ದಾರೆ. ನನಗೆ ಹೋಗಲಾಗುತ್ತಿಲ್ಲ.
ಶಿವಸುಂದರ್ ಅವರಿಗೆ ಅಭಿನಂದನೆಗಳು ಮತ್ತು ಈ ಜನಹಿತದ ಕೆಲಸ ಮತ್ತಷ್ಟು ಸಶಕ್ತವಾಗಿ ಮುಂದುವರಿಯಲೆಂಬ ಹಾರೈಕೆಗಳು.
– ರಾಜಾರಾಮ್ ತಲ್ಲೂರು, ಹಿರಿಯ ಪತ್ರಕರ್ತರು




