ಉತ್ಪ್ರೇಕ್ಷಿತ ಮೆಚ್ಚುಗೆ, ಅವಿಮರ್ಶಾತ್ಮಕ ಅಭಿಮಾನಗಳಿಗೆ ಇಂಬು ಕೊಟ್ಟ ಶಿವಸುಂದರ್ ಅವರನ್ನು ಖಂಡಿಸುತ್ತೇನೆ!

3 years ago

#I #condemn #ShivaSundar #giving #impetus #exaggerated #appreciation #uncritical #admiration

ಸಂತೋಷ ಒಕ್ಕಾಲು , ಗಾಬರಿ- ಕಸಿವಿಸಿ ಮುಕ್ಕಾಲು

ಆತ್ಮೀಯರೇ,

ವಾರ್ತಾಭಾರತಿ ಡಿಜಿಟಲ್ ಚಾನೆಲ್ ನಲ್ಲಿ ” ಸಮಕಾಲೀನ” ವಿಶ್ಲೇಷಣೆ ಕಾರ್ಯಕ್ರಮ 300 ಕಂತುಗಳನ್ನು ಮುಗಿಸಿರುವುದರ ಬಗ್ಗೆ ಮೊನ್ನೆ ಅಲ್ಲಿನ ಸಿಬ್ಬಂದಿ ಸಂಗಾತಿಗಳು ಆಚರಿಸಿದ ಸಂಭ್ರಮವನ್ನು ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದೆ. ಅದಕ್ಕೆ ಬಂದ ಪ್ರತಿಕ್ರಿಯೆಗಳ ಪ್ರವಾಹ , ಮೆಚ್ಚುಗೆ ಗಳು “ಸಮಕಾಲೀನ” ಸಮಕಾಲೀನವಾಗಿದೆ ಎಂಬ ಸಂತೋಷವನ್ನು ಹೆಚ್ಚಿಸಿತು. ಪ್ರಕ್ತಿಕ್ರಿಯಿಸಿದ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು. ಈ ಪ್ರತಿಕ್ರಿಯೆಗಳು ನನಗೆ “ಸಮಕಾಲೀನ”ವನ್ನು ಮುಂದುವರೆಸಲು ಪ್ರೋತ್ಸಾಹ ನೀಡಿದೆ. ಮಾತ್ರವಲ್ಲ ಇಂದಿನ ಕಾಲ ಮತ್ತು ಸಂದರ್ಭದಲ್ಲಿ ಇಂಥ ಕಾರ್ಯಕ್ರಮಗಳಿಗೆ ಕೇಳುಗರು ಇರುವುದನ್ನು ಸೂಚಿಸಿದೆ. ಆದ್ದರಿಂದ ಈ ನಾಡಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಇರುವ ನನಗಿಂತ ಹೆಚ್ಚು ಸಮರ್ಥರು ಮತ್ತು ಉತ್ಸಾಹಿಗಳೂ ಇಂಥ ಜನಪರ ವಿಶ್ಲೇಷಣಾ ಕಾರ್ಯಕ್ರಮಗಳನ್ನು ತಾವೂ ಕೂಡ ಪ್ರಾರಂಭಿಸಲು ಹಾಗೂ ಹೆಚ್ಚು ಹೆಚ್ಚು ಮಾಡಲು ಸ್ಫೂರ್ತಿ ನೀಡಿದೆ. ಆ ಕಾರಣಕ್ಕಾಗಿ ಮತ್ತೊಮ್ಮೆ ನಿಮಗೆಲ್ಲರಿಗೂ ವಂದನೆಗಳು.

ಇದೇ ಸಂದರ್ಭದಲ್ಲಿ ವೈಯಕ್ತಿಕವಾಗಿ ನನ್ನ ಬಗ್ಗೆ ನಾಡಿನ ಹಲವಾರು ಸ್ನೇಹಿತರು ಒಳ್ಳೆಯ ಮಾತುಗಳನ್ನಾಡಿದ್ದಾರೆ. ಹೆಚ್ಚು ಕಡಿಮೆ ಪ್ರೀತಿಯ ಮತ್ತು ಮೆಚ್ಚುಗೆಯ ಮಾತುಗಳಲ್ಲಿ ಮುಳುಗಿಸಿಬಿಟ್ಟಿದ್ದಾರೆ. ಅವರೆಲ್ಲರ ಪ್ರೀತಿ-ವಿಶ್ವಾಸಗಳಿಗೂ ನಾನು ಕೃತಜ್ಞ. ಸಾಧನೆಯ ಸಂದರ್ಭ ಎಂದು ಭಾವಿಸಿದಾಗ ವಿಮರ್ಶೆ ಗಿಂತ ಮೆಚ್ಚುಗೆ ಹೆಚ್ಚಿರುವುದು ಸೌಜನ್ಯ . ಆ ಸೌಜನ್ಯವನ್ನು ಮೀರಿ ‘ಸಮಕಾಲೀನ’ ದಲ್ಲಿ ಮುಂದಿಡುತ್ತಿರುವ ವಿಚಾರಗಳ ತಮ್ಮೆಲ್ಲರ ವಿಮರ್ಶಾತ್ಮಕ ಟಿಪ್ಪಣಿಗಳನ್ನು ನಿರೀಕ್ಷಿಸುತ್ತೇನೆ. ಆದರೆ ಮತ್ತೊಂದು ಕಾರಣಕ್ಕಾಗಿ ನಿನ್ನೆಯ ‘ಹಲವು’ ಉತ್ಪ್ರೇಕ್ಷಿತ ಮೆಚ್ಚುಗೆಗಳು ನನ್ನಲ್ಲಿ ಗಾಬರಿಯನ್ನು ಹುಟ್ಟಿಸಿಬಿಟ್ಟಿದೆ.

ಇಂದಿನ ಕಾಲ ಮತ್ತು ಸಂದರ್ಭವು ಹುಟ್ಟಿಸಿರುವ ಅಸಾಹಾಯಕತೆಯು ನಾವು ಮೆಚ್ಚಿಕೊಂಡವರಲ್ಲಿ ಒಳ್ಳೆಯದನ್ನು ಬಿಟ್ಟು ಆಕ್ಷೇಪಾರ್ಹವಾದದ್ದನ್ನು ಕಾಣಲು ನಿರಾಕರಿಸುವ ಪ್ರವೃತ್ತಿಯನ್ನು ಸೃಷ್ಟಿಸಿಬಿಟ್ಟಿದೆ. ಕೆಲವೊಮ್ಮೆ ಆ ಅಸಹಾಯಕತೆಯು ಮೆಚ್ಚಿಕೊಳ್ಳುವರ ಧೋರಣೆ, ನೆಲೆ, ನಿಲುವುಗಳ ಬಗ್ಗೆ ಅವಿಮರ್ಶಾತ್ಮಕ ಸಮ್ಮತಿಯನ್ನು, ಉತ್ಪ್ರೇಕ್ಷಿತ ಅಭಿಮಾನವನ್ನು ಹುಟ್ಟಿಸಿಬಿಡುತ್ತದೆ. ಅದು ಮೆಚ್ಚಿಕೊಂಡವರಿಗಾಗಲೀ ಮತ್ತು ಮೆಚ್ಚುಗೆ ಪಡೆವರಿಗಾಗಲೀ ಹಾಗೂ ಒಟ್ಟಾರೆ ಸಮಾಜಕ್ಕೆ ಒಳ್ಳೆಯದನ್ನೇನೂ ಮಾಡುವುದಿಲ್ಲ. ನನ್ನ ಬಗ್ಗೆ ನಿನ್ನೆ ಹರಿದ ಮೆಚ್ಚುಗೆಗಳ ಮಹಾಪೂರದಲ್ಲೂ ಅಂಥಾ ಹಲವು ಉತ್ಪ್ರೇಕ್ಷೆ ಹಾಗೂ ಅವಿಮರ್ಶಾತ್ಮಕ ಮೆಚ್ಚುಗಳಿದ್ದವು. (ಅದನ್ನು ನಾನು ಗುರುತಿಸುವ ಮೂಲಕ ಮೆಚ್ಚುಗೆಯ ಪ್ರವಾಹದಲ್ಲಿ ಮುಳುಗಿಹೋಗದೆ ತೇಲುವ ಸ್ವಾರ್ಥ ಪ್ರಯತ್ನವನ್ನು ಮಾಡುತ್ತಿದ್ದೇನೆ.)

ಹೀಗಾಗಿ ಆ ಉತ್ಪ್ರೇಕ್ಷಿತ ಮೆಚ್ಚುಗೆಗಳನ್ನು ನಾವು ಮೆಚ್ಚಿಕೊಳ್ಳುವವರು ಹೇಗಿರಬೇಕು ಎಂಬ ಬಗ್ಗೆ ಸಂದರ್ಭದ ಆಗ್ರಹವನ್ನಾಗಿ ಮಾತ್ರ ಪರಿಗಣಿಸಿದ್ದೇನೆ. ಸಂದರ್ಭದ ಈ ಆಗ್ರಹಕ್ಕೆ ತಕ್ಕಂತೆ ಬದುಕುತ್ತಿರುವವರಲ್ಲಿ ಹಲವಾರು ನನಗಿಂತ ಮುಂದಿದ್ದಾರೆ. ಗೌರಿ ಲಂಕೇಶರಂತೂ ನಮಗೆ ಎಟುಕದಷ್ಟು ಮುಂದೆ ಹೋಗಿಬಿಟ್ಟಿದ್ದಾರೆ. ಇದು ಈ ಸಂದರ್ಭದ ಆಗ್ರಹವನ್ನು ಗಮನಿಸಿ ನಾವು ಎಲ್ಲರೂ ಸೇರಿ ನಮ್ಮ ನಮ್ಮ ನೆಲೆ-ನಿಲುವುಗಳಿಂದ ಮುಂದಡಿಯಿಡಬೇಕಾದ ಕೂಡು ಪಯಣವೂ ಆಗಿದೆ.

ಅದೇನೇ ಇರಲಿ .. ನಿಮ್ಮ ಅತಿಶಯವಾದ ಅಭಿಮಾನಕ್ಕೆ ಕೃತಜ್ಞತೆಗಳು. ಆದರೆ ವ್ಯಕ್ತಿ ಹಿಂದೆ ಸರಿಯಲಿ. ವಿಚಾರ ಮುಂದಕ್ಕೆ ಬರಲಿ. ಸಮಕಾಲೀನದಲ್ಲಿ ಮುಂದಿಡುತ್ತಿರುವ ವಿಚಾರಗಳ ಬಗ್ಗೆ ನಿಮ್ಮೆಲ್ಲರ ವಿಮರ್ಶಾತ್ಮಕ ಟಿಪ್ಪಣಿಗಳನ್ನು ಮತ್ತು ಸಂವಾದವನ್ನು ನಿರೀಕ್ಷಿಸುತ್ತೇನೆ. ನನ್ನನ್ನು ಮತ್ತು ಮತ್ತು ನಾನು ಮುಂದಿಡುತ್ತಿರುವ ವಿಚಾರಗಳನ್ನು ಅನುಮಾನಿಸಿ, ಪ್ರಶ್ನಿಸಿದ ನಂತರವೇ ಸಮ್ಮತಿಸಬೇಕೆಂದು ಆಗ್ರಹಿಸುತ್ತೇನೆ. ಸಮ್ಮತಿಸಿದ ವಿಚಾರಗಳ ಬಗ್ಗೆ ಕೂಡುಕ್ರಿಯೆಗಳಿಗೆ ಮುಂದಾಗುತ್ತೇವೆಂದು ಆಶಿಸುತ್ತೇನೆ.

ಕೊನೆಯದಾಗಿ, ನಿನ್ನೆ ಸಮಕಾಲೀನ -300 ರ ಬಗ್ಗೆ ಫೇಸ್ಬುಕ್ ಪೋಸ್ಟ್ ಹಾಕಿ, ಉತ್ಪ್ರೇಕ್ಷಿತ ಮೆಚ್ಚುಗೆ ಹಾಗೂ ಅವಿಮರ್ಶಾತ್ಮಕ ಅಭಿಮಾನಗಳಿಗೆ ಇನ್ನಷ್ಟು ಇಂಬು ಕೊಟ್ಟ ಶಿವಸುಂದರ್ ಅವರನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಮತ್ತು ನೀವುಗಳು ಕೂಡ ಈ ಖಂಡನೆಯಲ್ಲಿ ಧ್ವನಿಗೂಡಿಸುತ್ತೀರೆಂದು ನಿರೀಕ್ಷಿಸುತ್ತೇನೆ.

ನಿಮ್ಮ

  • ಶಿವಸುಂದರ್, ಚಿಂತಕರು

Leave a Reply