ಸಮಕಾಲೀನ ಕರ್ನಾಟಕ ಕಂಡ ಅತ್ಯಂತ ಶ್ರೇಷ್ಠ ಪಬ್ಲಿಕ್ ಇಂಟಲೆಕ್ಚುವಲ್ ಶಿವಸುಂದರ್

3 years ago

#Shivsundar #greatest #publicintellectual #contemporary #Karnataka #ismathpajeer

ಶಿವಸುಂದರ್ ಎಂಬ ಆಧುನಿಕ ಅಲ್ಲಮ!

ಶಿವಸುಂದರ್ ಸರಳತೆ ಗೊತ್ತಿದ್ದವರಿಗೆಲ್ಲಾ ಅವರು ಬೆಂಗಳೂರಿನಲ್ಲಿ ಹೇಗೆ ತಿರುಗಾಡುತ್ತಾರೆಂದು ಗೊತ್ತು. ಅವರು ಮೂಲತಃ ಒಬ್ಬ ಕ್ವಾಲಿಫೈಡ್ ಇಂಜಿನಿಯರ್. ಅವರು ಇಂಜಿನಿಯರಿಂಗ್ ಓದಿದ ಕಾಲಕ್ಕೆ ಯಾವುದಾದರೂ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿರುತ್ತಿದ್ದರೆ ಈಗ ಬಹುಕೋಟಿಗೆ ತೂಗುತ್ತಿದ್ದರು. ಮನಸ್ಸು ಮಾಡಿದ್ದರೆ ಅವರಿಂದು ಬೆಂಗಳೂರು ನಗರದ ಫಾಶ್ ಏರಿಯಾದಲ್ಲಿ ಬಂಗಲೆ, ಒಂದಷ್ಟು ಬಾಡಿಗೆ ಬರುವ ಮನೆಗಳು, ಐಷಾರಾಮಿ ಕಾರು ಇಟ್ಕೊಂಡು ಆರಾಮಾಗಿ ಬದುಕಬಹುದಿತ್ತು. ಬದುಕಿನ ನೆಮ್ಮದಿ ಮತ್ತು ಖುಷಿಗೆ ನಮ್ಮಂತವರ ವ್ಯಾಖ್ಯಾನ ಕಾರು ಬಂಗಲೆ ಡ್ರೈವರ್ ಬ್ಯಾಂಕ್ ಬ್ಯಾಲೆನ್ಸ್ ಎಂದಿರಬಹುದು.‌ ಆದರೆ ಶಿವಸುಂದರ್ ಪ್ರಕಾರ ತನ್ನ ಸಹಮಾನವರ ಬದುಕನ್ನು ಸಹ್ಯಗೊಳಿಸುವ ನಿಟ್ಟಿನಲ್ಲಿ ಶ್ರಮಿಸುವುದು, ಸಮಾಜದ ಅವಕಾಶ ವಂಚಿತರ ಅವಕಾಶಗಳನ್ನು ಕೊಡಿಸಲು ದುಡಿತುವುದು, ಧ್ವನಿಯಿಲ್ಲದವರ ಧ್ವನಿಯಾಗುವುದೇ ನಿಜವಾದ ನೆಮ್ಮದಿ, ನಿಜವಾದ ಐಷಾರಾಮದ ಬದುಕು.

ಶಿವಸುಂದರ್ ಕ್ವಾಲಿಫೈಡ್ ಇಂಜಿನಿಯರ್ ಆದರೂ ಹೊಟ್ಟೆಪಾಡಿಗಾಗಿ ಒಂದೊಮ್ಮೆ ಆಟೋ ರಿಕ್ಷಾ ಓಡಿಸುತ್ತಿದ್ದರು. ಅವರು ಗೌರಿ ಲಂಕೇಶ್ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾಗ ಸೈಕಲಲ್ಲೇ ಓಡಾಡುವುದನ್ನು ಕಂಡು ಬೇಸರಗೊಂಡ ಗೌರಿಯಕ್ಕ ಅವರಿಗೊಂದು ಬೈಕ್ ಕೊಡಿಸಿದರು. ಅಂದು ಬೈಕ್ ಹಿಡ್ಕೊಂಡು ಹೋದರು. ಮರುದಿನ ಪುನಃ ಸೈಕಲಲ್ಲೇ ಬಂದುದನ್ನು ಕಂಡ ಗೌರಿಯಕ್ಕ ಬೈಕ್ ಎಲ್ಲಿ ಎಂದು ಕೇಳಿದರು. ಅದು ನನಗಿಂತ ಇನ್ನೊಬ್ಬರಿಗೆ ಹೆಚ್ಚು ಅಗತ್ಯವಿತ್ತು. ಅವರಿಗೆ ಕೊಟ್ಟು ಬಿಟ್ಟೆ. ನನಗೆ ಸೈಕಲ್ಲೇ ಸಾಕು ಎಂದರಂತೆ. ಇದನ್ನು ಗೌರಿಯಕ್ಕನೇ ಒಮ್ಮೆ ಬರೆದಿದ್ದರು.

ಶಿವಸುಂದರ್ ಅವರ ಬದ್ಧತೆಗೆ ಒಂದು ಉದಾಹರಣೆ ಕೊಡುತ್ತೇನೆ. ನಾವು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯಿಂದ ಅದ್ಯಾವುದೋ ಹೋರಾಟವೊಂದನ್ನು ಮಂಗಳೂರಿನಲ್ಲಿ ಹಮ್ಮಿಕೊಂಡಿದ್ದೆವು. ನಾನಾಗ ವೇದಿಕೆಯ ಸೆಕ್ರೆಟರಿ ಆಗಿದ್ದೆ. ಸುರೇಶ್ ಭಟ್ರು ಅಧ್ಯಕ್ಷರಾಗಿದ್ದರು. ಶಿವಸುಂದರ್ ಮುಖ್ಯ ಭಾಷಣಕಾರರಾಗಿ ಬೆಂಗಳೂರಿಂದ ಬಂದಿದ್ದರು. ಸಂಜೆ ಪ್ರತಿಭಟನೆ ಮುಗಿಸಿದ ಕೂಡಲೇ ಹೊರಟು ನಿಂತರು. ಏನ್ಸಾರ್ ಇಷ್ಟು ಗಡಿಬಿಡಿ? ಏನಿಲ್ಲ ನಾಳೆ ಬೇರೆ ಕೆಲಸ ಇದೆ. ತಡವಾದ್ರೆ ಟ್ರೈನ್ ತಪ್ಪುತ್ತೆ ಎಂದರು. ಸರ್ ರಿಸರ್ವೇಶನ್ ಮಾಡಿಸಿದ್ದೀರಾ ಎಂದು ಕೇಳಿದೆ. ರಿಸರ್ವೇಶನ್ ಯಾಕೆ? ಎಂದು ಮರು ಪ್ರಶ್ನಿಸಿದರು.

ಅವರು ಲೋಕಲ್ ಟ್ರೈನಿನಲ್ಲೇ ಹೋಗಿ ಬರುವುದು ಮಾಮೂಲಿಯಾಗಿತ್ತು. ಸೀಟು ಸಿಕ್ಕರೆ ಸಿಕ್ಕಿತು. ಇಲ್ಲಾಂದ್ರೆ ನಿಂತುಕೊಂಡೇ ಪ್ರಯಾಣಿಸುತ್ತಿದ್ದುದೂ ಇತ್ತು. ಕೆಲವು ಅತಿಥಿಗಳಂತೂ ಫ್ಲೈಟ್ ಟಿಕೆಟ್, ದೊಡ್ಡ ದೊಡ್ಡ ಹೋಟೆಲ್ ಕೊಠಡಿಗಳನ್ನು ಅರೇಂಜ್ ಮಾಡಿಸದೇ ಬಿಲ್‌ಕುಲ್ ಬರುತ್ತಿರಲಿಲ್ಲ. ಶಿವಸುಂದರ್ ಇಂದೂ ಹಾಗೆಯೇ ಇದ್ದಾರೆ. ಇನಿತೂ ಬದಲಾಗಲಿಲ್ಲ.

ಶಿವಸುಂದರ್ ಅವರು ಆಟೋ ಓಡಿಸುವಾಗಲೂ Economic and political weekly ಯಂತಹ ಪ್ರತಿಷ್ಟಿತ ಪತ್ರಿಕೆಗೆ, ಗೌರಿ ಲಂಕೇಶ್‌ಗೆ, ವಾರ್ತಾಭಾರತಿಗೆ, ದಿ ಹಿಂದೂಗೆ ಬರೆಯುತ್ತಿದ್ದರು. ಆದರೆ ಅವರ ಸಹ ಆಟೋ ಚಾಲಕರಿಗೆ ತಮ್ಮ ಜೊತೆಗೆ ಆಟೋ ಓಡಿಸುವ ಈ ಮನುಷ್ಯ ಒಬ್ಬ ದೊಡ್ಡ ಮೇಧಾವಿ ಎಂದೂ ಗೊತ್ತೇ ಇರುತ್ತಿರಲಿಲ್ಲ. ಈಗ ದಿ ವೈರ್‌ನಂತಹ ಪ್ರತಿಷ್ಟಿತ ಅಂತರ್ಜಾಲ ಪತ್ರಿಕೆಗೆ ಬರೆಯುತ್ತಾರೆ. ವಾರ್ತಾಭಾರತಿ ಯೂ ಟ್ಯೂಬ್ ಚಾನೆಲ್ ನಲ್ಲಿ ಅವರು ನಮ್ಮ ಅರಿವಿನ ಹರವನ್ನು ವಿಸ್ತರಿಸಲು ಮಾಡುತ್ತಾ ಬಂದ ಸಮಕಾಲೀನ ಎಂಬ ಕಾರ್ಯಕ್ರಮಕ್ಕೆ ಇದೀಗ ಮುನ್ನೂರನೇ ಕಂತಿನ ಸಂಭ್ರಮ. ‌ನನ್ನ ಪ್ರಕಾರ ಸಮಕಾಲೀನ ಕರ್ನಾಟಕ ಕಂಡ ಅತ್ಯಂತ ಶ್ರೇಷ್ಠ ಪಬ್ಲಿಕ್ ಇಂಟಲೆಕ್ಚುವಲ್ ಈ ಶಿವಸುಂದರ್. ನಾನಿವರನ್ನು ಈಗಲ್ಲ, ಸುಮಾರು ಹತ್ತು ವರ್ಷಗಳ ಹಿಂದೆಯೇ ನಡೆದಾಡುವ ವಿಶ್ವಕೋಶ ಎನ್ನುತ್ತಿದ್ದೆ. ಅವರ ಅರಿವಿನ ಹರವು ಅಷ್ಟು ವಿಸ್ತಾರವಾದದ್ದು. ವಿಷಯ ಎಷ್ಟೇ ಕ್ಲಿಷ್ಟವಿರಲಿ, ಅದನ್ನು ಬರೀ ಏಳನೇ ಕ್ಲಾಸು ಓದಿದವನಿಗೂ ಅತ್ಯಂತ ಸರಳವಾಗಿ ಅರ್ಥ ಮಾಡಿಸಿಕೊಳ್ಳಬಲ್ಲ ಶಿವಸುಂದರರ ಕನ್ವಿನ್ಸಿಂಗ್ ಶೈಲಿಗೆ ಸಾಟಿಯೇ ಇಲ್ಲ.

ತುಂಬಿದ ಕೊಡ ತುಳುಕುವುದಿಲ್ಲ ಎನ್ನುವುದಕ್ಕೆ ನಾನು ಕಂಡ ಶ್ರೇಷ್ಠ ಉದಾಹರಣೆ ಈ ಶಿವಸುಂದರ್. ಅವರು ನೂರ್ಕಾಲ ಆರೋಗ್ಯವಂತರಾಗಿ ಬಾಳಲಿ. ನಮ್ಮ ಅರಿವಿನ ಹರವನ್ನು ವಿಸ್ತಾರಗೊಳಿಸುವ ಅವರ ಕಾಯಕ ಬಹುಕಾಲ ಮುಂದುವರಿಯಲಿ.

  • ಇಸ್ಮತ್ ಪಜೀರ್

Leave a Reply