ನನ್ನ ಜೀವನದ ಗಂಡಸರು: ಜಯಂತಿ

3 years ago

ಗೆಳೆಯರು ಕೇಳಿದ್ದರಿಂದ ಲಂಕೇಶ್ ಪತ್ರಿಕೆಗಾಗಿ ನಾನು ಸಂಗ್ರಹಿಸಿ ನೀಡಿದ್ದ ಅಭಿನಯ ಶಾರದೆ ಜಯಂತಿಯವರ ಆತ್ಮಕಥನದ ತುಣುಕನ್ನು ಇಲ್ಲಿ ಮತ್ತೆ ಹಂಚಿಕೊಳ್ಳುತ್ತಿರುವೆ: ಎನ್.ಎಸ್.ಶಂಕರ್

ದಶಕಗಳ ಕಾಲ ಕನ್ನಡದ ಬೆಳ್ಳಿತೆರೆಯನ್ನು ಅಳಿದ ಜಯಂತಿ, ತಮ್ಮ ಪ್ರತಿಭೆ ಮತ್ತು ಮಾದಕ ಚೆಲುವಿನಿಂದ ಇಡೀ ಒಂದು ಪೀಳಿಗೆಯ ತಲೆ ಕೆಡಿಸಿದ ಸುಂದರಿ. ಆದರೆ ವೈಯಕ್ತಿಕ ಬದುಕಿನಲ್ಲಿ ಸ್ವರ್ಗ, ನರಕಗಳ ವ್ಯತ್ಯಾಸ ತಿಳಿಯದೆ ದುಡುಕುತ್ತ, ಎಡವುತ್ತ ನೋಯುತ್ತ ಜೀವನ ಎದುರಿಸುವುದನ್ನು ಕಲಿತ ದಿಟ್ಟೆ ಈಕೆ.
‘ಸ್ಯಾವಿ’ ಇಂಗ್ಲಿಷ್ ಪತ್ರಿಕೆಯಲ್ಲಿ ಮೊದಲ ಬಾರಿ ಮನ ಬಿಚ್ಚಿ ತನ್ನ ಜೀವನದ ಬಗ್ಗೆ, ತನ್ನ ಬಾಳಿಗೆ ಕಾಲಿಟ್ಟು ತುಳಿದುಹೋದ ಗಂಡಸರ ಬಗ್ಗೆ ಮಾತಾಡಿರುವ ಈ ಅಪರೂಪದ ‘ನಿವೇದನೆ’ಯನ್ನು ‘ಪತ್ರಿಕೆ’ಗಾಗಿ ಸಂಗ್ರಹಿಸಿ ನೀಡುತ್ತಿದ್ದೇವೆ. ಆಕೆಯ ಮಾತುಗಳಲ್ಲೇ ಓದಿ:
———————————————————
ನಾನು ಯಾವಾಗಲೂ ಒಬ್ಬ ಯುವರಾಜನನ್ನು ಮದುವೆಯಾಗಲು ಹಂಬಲಿಸಿದ್ದೆ. ನನಗಾಗಿ ನನಗಿದ್ದ ಕನಸು ಅದೊಂದೇ. ನನ್ನ ತಂದೆ ತಾಯಿ ಹುಡುಕಿದ ಗಂಡನ್ನೇ ಮದುವೆಯಾಗುವುದು ನನ್ನ ಆಸೆ. ನನ್ನ ಸಹಕಲಾವಿದರನ್ನು ಆ ದೃಷ್ಟಿಯಲ್ಲಿ ನಾನು ಎಂದೂ ಕಾಣದಿದ್ದುದರಿಂದ, ಅವರೊಂದಿಗೆ ಭಾವನಾತ್ಮಕವಾಗಿ ತೊಡಗಲೇ ಇಲ್ಲ. ನನ್ನ ಮದುವೆ ಹತ್ತು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಬೇಕೆಂದೂ ಬಯಸಿದ್ದೆ ಆದರೆ ವಿಧಿ! ನಾನು ತಾಳಿಯೂ ಇಲ್ಲದೆ ತಾಯಿಯಾದೆ. ನನಗಾಗ ಹದಿನೆಂಟರ ಪ್ರಾಯ. ಆಗಲೇ ಅತ್ಯಂತ ಯಶಸ್ವಿ ತಾರೆಯಾಗಿ ಉಜ್ವಲ ಭವಿಷ್ಯದ ಹೊಸ್ತಿಲಲ್ಲಿದ್ದೆ. ಆದರೆ ಆ ಸಂದರ್ಭದಲ್ಲೇ ನಾನು ನನ್ನ ಮೇಲೆ ಅತ್ಯಾಚಾರ ಮಾಡಿದವನ ಗರ್ಭ ಹೊತ್ತೆ! ನನ್ನ ತಂದೆಗಿಂತಲೂ ವಯಸ್ಸಾದ, ನಾನು ‘ಅಪ್ಪ’ ಎಂದೇ ಸಂಬೋಧಿಸುತ್ತಿದ್ದ ಗಂಡಸು!
ಪೇಕೇಟಿ ಶಿವರಾಂ ಚಿತ್ರ ನಿರ್ಮಾಣದಲ್ಲಿ ತೊಡಗಿದ್ದ ವ್ಯಕ್ತಿ. ಆತನಿಗೆ ಎಂಟು ಮಕ್ಕಳು. ನಾಲ್ಕು ಗಂಡು, ನಾಲ್ಕು ಹೆಣ್ಣು. ನನಗೆ ಆತನ ಪರಿಚಯವಾಗಿದ್ದು ಚಿತ್ರರಂಗದ ಮಿತ್ರರೊಬ್ಬರ ಮೂಲಕ. ಅನತಿ ಕಾಲದಲ್ಲೇ ಆತ ನನ್ನ ಸನ್ಮಿತ್ರನೂ, ಪೋಷಕನೂ ಆಗಿಹೋದ. ನಂನಮ್ಮ ಕುಟುಂಬಗಳ ಮೈತ್ರಿಯೂ ಚೆನ್ನಾಗಿತ್ತು. ಆತನ ಹೆಂಡತಿಯನ್ನು ನಾನು ಅಮ್ಮ ಎಂದೇ ಕರೆಯುತ್ತಿದ್ದೆ. ಆಕೆ ನನ್ನ ಬಗ್ಗೆ ಮೃದುವಾಗಿದ್ದಳು. ಇವರ ಇಬ್ಬರ ಗಂಡು ಮಕ್ಕಳನ್ನು ನಾನು ಅಣ್ಣ ಅನ್ನುತ್ತಿದ್ದೆ. ನನ್ನ ವಯಸ್ಸಿನ ಮಗಳಂತೂ ನನ್ನ ಆಪ್ತ ಗೆಳತಿಯಾಗಿದ್ದಳು. ಅವರ ಮನೆಯಲ್ಲಿ ನನ್ನ ಕಷ್ಟ ಸುಖ ಕೇಳಬಲ್ಲ ನನ್ನ ವಯಸ್ಸಿನ ಹುಡುಗಿಯರಿದ್ದುದರಿಂದ, ಅಲ್ಲಿಗೆ ನಾನು ಹೆಚ್ಚು ಹೆಚ್ಚು ಹೋಗುತ್ತಿದ್ದೆ.
ಒಂದು ಸಲ ಮೈಸೂರಿಗೆ ಶೂಟಿಂಗಿಗೆ ಹೋಗಿದ್ದೆ. ಆ ಸಲ ನನ್ನ ತಾಯಿ ನನ್ನ ಜೊತೆ ಬರದಿದ್ದುದರಿಂದ, ಶಿವರಾಂ ನನ್ನ ಜೊತೆಯಲ್ಲಿ ಬೆಂಗಾವಲಾಗಿ ಬಂದ. ಜೊತೆಗೆ ಆ ಚಿತ್ರದ ನಿರ್ಮಾಣದ ಕೆಲಸದಲ್ಲಿ ಆತನ ಪಾತ್ರವೂ ಇತ್ತು.
ನಾನು ರಾತ್ರಿ ಮಲಗುವ ಮುನ್ನ, ಶಿವರಾಂ ನನ್ನ ಹೋಟೆಲ್ ರೂಮಿಗೆ ಬಂದು ಬಾಗಿಲ ಚಿಲಕ ಹಾಕಿದಾಗಲೂ ನನಗೆ ಶಂಕೆಯುಂಟಾಗಲಿಲ್ಲ. ಏನೋ ಖಾಸಗಿಯಾಗಿ ಮಾತಾಡಲು ಬಂದಿರಬಹುದು ಅಂದುಕೊಂಡೆ. ಅತ್ಯಾಚಾರ ನಡೆಯಬಹುದೆಂಬ ಕಲ್ಪನೆಯೂ ನನ್ನ ತಲೆಯಲ್ಲಿರಲಿಲ್ಲ. ಆದರೆ ಮುಂದೆ ನಡೆದಿದ್ದು, ನಾನೇ ಸಿನಿಮಾಗಳಲ್ಲಿ ಅನೇಕ ಬಾರಿ ಅಭಿನಯಿಸಿದ ದೃಶ್ಯಗಳಂತಿದ್ದವು. ಆದರೆ ಈ ಬಾರಿ ಅದು ನಿಜವಾಗಿತ್ತು ಅಷ್ಟೇ… ರೂಮಿನೊಳಗೇ ದಿಕ್ಕಾಪಾಲಾಗಿ ಓಡಿದೆ, ಅತ್ತೆ, ಕರೆದೆ, ಕೂಗಿದೆ. ಆದರೆ ಆತ ನನಗಿಂತ ಎಷ್ಟೋ ಪಟ್ಟು ಬಲಶಾಲಿಯಾಗಿದ್ದ. ಕೆಲವೇ ನಿಮಿಷಗಳಲ್ಲಿ ಎಲ್ಲ ಮುಗಿದುಹೋಯಿತು. ನನ್ನನ್ನು ಗಾಯಗೊಳಿಸಿ, ಅವಮಾನಗೊಳಿಸಿ ಆತ ಹೊರಟುಹೋದ. ಇದೂ ಒಂದು ಸಿನಿಮಾ ದೃಶ್ಯವಾಗಿರಬಾರದೇ ಎಂದು ನಾನು ಸಾವಿರ ಬಾರಿ ಹರಸಿದೆ. ಮೊರೆಯಿಟ್ಟೆ. ಆದರೆ ಅದು ಹಾಗಿರಲಿಲ್ಲ.
ಆ ದಿನ ಶಿವರಾಂ ನನ್ನಿಂದ ಏನೋ ಕಸಿದುಕೊಂಡುಹೋದ. ಆದರೆ ಅದಕ್ಕೇನು ಹೆಸರು ಕೊಡುವುದೋ ನನಗೆ ಗೊತ್ತಿಲ್ಲ. ನಾನು ವಿವರಿಸಲಾಗದ ಭಾವನೆಯಿದು. ನನ್ನನ್ನೆಲ್ಲೋ ಆಳದ ಕತ್ತಲಕೂಪಕ್ಕೆ ತಳ್ಳಿದಂತಿತ್ತು.
ಬಲತ್ಕಾರವಾದ ಮೇಲೆ ಹೇಗೆ ನಡೆದುಕೊಳ್ಳುತ್ತಾರೆ, ನನಗೆ ಗೊತ್ತಿಲ್ಲ. ಏನೂ ತೋಚದೆ ಬಟ್ಟೆ ಹಾಕಿಕೊಂಡು ಮಲಗಿ ನಿದ್ರಿಸಿದೆ. ಮಾರನೇ ಬೆಳಗ್ಗೆ ಎದ್ದು ಕೆಲಸಕ್ಕೂ ಹಾಜರಾದೆ. ಪ್ರತಿಯೊಬ್ಬರೂ, ಪ್ರತಿ ದಿನ ಮಾಡುವ ಕೆಲಸಗಳನ್ನೇ ನಾನೂ ಮಾಡಿದೆ. ಆದರೆ ಯಾವುದೂ ಮೊದಲಿದ್ದ ಹಾಗಿರಲಿಲ್ಲ. ಆ ಬಗ್ಗೆ ಯೋಚಿಸುವುದೇ ಇನ್ನೊಮ್ಮೆ ಅತ್ಯಾಚಾರಕ್ಕೆ ಒಳಗಾದಂತೆ ಅನ್ನಿಸಿದ್ದರಿಂದ ನಾನು ಯಾರಿಗೂ, ನನ್ನ ತಾಯಿಗೂ ನಡೆದ ವಿಷಯ ಹೇಳಲಿಲ್ಲ. ಯಾರಿಗೂ ಯಾವ ಅನುಮಾನವೂ ಬರಲಿಲ್ಲ.
ಒಳಗೇ ಸ್ಫೋಟಕ್ಕೆ ಅಣಿಯಾದ ಜ್ವಾಲಾಮುಖಿ ಕುದಿಯುತ್ತಿದ್ದರೂ, ಹೊರನೋಟಕ್ಕೆ ನಾನು ಮಾಮೂಲಾಗಿಯೇ ಕಂಡಿರಬೇಕು. ಆದರೆ ಆ ಘಟನೆಯ ನಂತರ ನಡೆದ ಎಷ್ಟೋ ಸಂಗತಿಗಳನ್ನು ನಾನು ಮನಸ್ಸಿನಲ್ಲಿ ಶಾಶ್ವತವಾಗಿ ಹೂತುಹಾಕಿದ್ದೇನೆ. ಒಂದು ಹೆಣ್ಣಿನ ವಿರುದ್ಧ ನಡೆಯಬಹುದಾದ ಅತಿ ದೊಡ್ಡ ಅಪರಾಧವೆಂದರೆ ಅತ್ಯಾಚಾರವೇ. ದೈಹಿಕ, ಮಾನಸಿಕ ಮತ್ತು ಭಾವನಾತ್ಮಕವಾಗಿ ಹೆಣ್ಣಿನ ಆತ್ಮದ ಮೇಲೆ ನಡೆಯುವ ಅಂತಿಮ ದಾಳಿಯದು.
ಎರಡನೇ ತಿಂಗಳು ನಾನು ಮುಟ್ಟಾಗದೆ ಹೋದಾಗ ಅನುಮಾನವಾಯಿತು. ಗೊಂದಲ, ಆಘಾತ. ಈ ನಡುವೆ, ಸದಾ ಲವಲವಿಕೆಯಿಂದಿರುತ್ತಿದ್ದ ನನ್ನ ಸ್ವಭಾವ ಬದಲಾಗಿದ್ದನ್ನೂ ಅಮ್ಮ ಗುರುತಿಸಿದ್ದಳು. ಅವಳೇ ಕೇಳಿದಾಗ ಭಾವನೆಗಳ ಕಟ್ಟೊಡೆದು ಎಲ್ಲವನ್ನೂ ಕೇಳಿಕೊಂಡೆ. ಎಲ್ಲ ಹೇಳಿದ ಮೇಲೆ, ಏನೋ ನಡೆಯಬಹುದೆಂದು ಕಾದೆ. ಆದರೆ ರೂಮಿನ ತುಂಬ ಮೌನ. ಅಮ್ಮ ಒಂದು ಮಾತೂ ಹೇಳಿರಲಿಲ್ಲ. ನಿಧಾನಕ್ಕೆ ನೆಲದಿಂದ ದೃಷ್ಟಿ ತೆಗೆದು ನಮ್ಮಮ್ಮನ ಮುಖ ನೋಡಿದೆ. ನಾನು ಹಾಗೆ ನೋಡಬಾರದಿತ್ತೆಂದು ಇಂದಿನವರೆಗೂ ಮರುಗುತ್ತಿದ್ದೇನೆ! ಅಮ್ಮನ ಕಣ್ಣಿನಲ್ಲಿ ಆಗ ಕಂಡ ಆಘಾತ, ನೋವು ಮತ್ತು ವೇದನೆ ನನ್ನನ್ನು ಯಾವಾಗಲೂ ಕಾಡುವುದು. ತನ್ನ ತಪ್ಪಿಲ್ಲದೆ ಶಿಕ್ಷೆ ಪಡೆದ ಮಗಳಿಗಾಗಿ ಒಬ್ಬ ತಾಯಿ ಮಾತ್ರ ಅಷ್ಟು ನೋಯಬಲ್ಲಳು.
ಅಮ್ಮ ಮೊದಲ ಆಘಾತದಿಂದ ಸುಧಾರಿಸಿಕೊಂಡ ಮೇಲೆ ನನ್ನನ್ನು ಶಿವರಾಂ ಮನೆಗೆ ಕರೆದೊಯ್ದಳು. ತಾಯಿಯ ವೇದನೆ, ಯಾತನೆಗೆ ಸಮಾನವಾದದ್ದು ಈ ಜಗತ್ತಿನಲ್ಲೇ ಇನ್ನೇನೂ ಇಲ್ಲ. ಅಲ್ಲಿ ಶಿವರಾಂ ಸೇರಿದಂತೆ ಇಡೀ ಕುಟುಂಬದವರನ್ನು ಸೇರಿಸಿ ತನ್ನ ಭಾವನೆ ತೋಡಿಕೊಂಡಳು. ಕೇಳಿ ಆ ಕುಟುಂಬ ದಿಗ್ಭ್ರಾಂತವಾಯಿತು… ಘಟನೆ ನಡೆದ ನಂತರ ಮೊದಲ ಬಾರಿ ಶಿವರಾಂನನ್ನು ಕಂಡಾಗ ನನ್ನ ಇಡೀ ಚೇತನ, ಜೀವ ಉಡುಗಿಹೋಯಿತು. ನಾನು ಮರಗಟ್ಟಿ ಕೂತಿದ್ದೆ. ನಮ್ಮಮ್ಮನ ಪ್ರಶ್ನೆ ಕಿವಿಗೆ ಬಿತ್ತು “ನನ್ನ ಮಗಳಿಗೆ ನಿನ್ನ ಉತ್ತರವೇನು?”
“ನಾನು ಅವಳನ್ನು ಸ್ವೀಕರಿಸುತ್ತೇನೆ” ಆತ ಉದಾರವಾಗಿ ಮುಂದಾದ. ಸ್ವೀಕರಿಸುವುದು ಏನಾಗಿ? ಹೆಂಡತಿ? ಉಪಪತ್ನಿ?… ನಾನು ಅಣ್ಣ ಎಂದು ಕರೆಯುತ್ತಿದ್ದ ಆತನ ಮಕ್ಕಳನ್ನು ನಾನು ಹೇಗೆ ಎದುರಿಸಲಿ? ನನ್ನ ವಯಸ್ಸಿನ ಗೆಳತಿಗೆ ನಾನು ಹೇಗೆ ಮಲತಾಯಿ ಎನಿಸಲಿ? ಆತ ನನ್ನನ್ನು ಸ್ವೀಕರಿಸಬಹುದು, ಆದರೆ ನಾನು ಆತನನ್ನು ಒಪ್ಪಿಕೊಳ್ಳಲಿಲ್ಲ. ಆತನಿಗೆ ನನ್ನ ಜೀವನ ಹಾಳು ಮಾಡುವ ಹಕ್ಕಿರಲಿಲ್ಲ. ಆದರೆ ಆತ ನನ್ನ ಮಗುವಿನ ತಂದೆ. ನನ್ನನ್ನು ಮುಟ್ಟಿದ ಮೊದಲ ಪುರುಷ. ನಾನು ತಾರೆಯಾದಾಗಲೂ ಈ ರೂಢಿಗತ ಭಾರತೀಯ ಮೌಲ್ಯಗಳನ್ನು ನಾನು ತೊರೆದಿರಲಿಲ್ಲ. ಶಿವರಾಂ ನನ್ನ ಗಂಡನಾದದ್ದು ಹೀಗೆ. ತಪ್ಪಿನ ಮೂಲಕ.
ನಾನು ಗರ್ಭಪಾತಕ್ಕೆ ಸಿದ್ಧವಾಗಿದ್ದರೆ, ಆ ಸಮಸ್ಯೆ ನಾಲ್ಕು ಗೋಡೆಗಳ ನಡುವೆ ಬಗೆಹರಿಯುತ್ತಿತ್ತು. ಹಾಗೆ ನೋಡಿದರೆ, ಶಿವರಾಂ ಮತ್ತು ಅವನ ಕುಟುಂಬಕ್ಕೆ ಅದೇ ಬೇಕಾಗಿತ್ತು. ಜೊತೆಗೆ ನನ್ನ ಕಡೆ ಯಾರೂ ಬೆರಳು ತೋರಿಸುವಂತಿರಲಿಲ್ಲ. ಆದರೆ ನಾನು ನನ್ನೊಳಗೆ ಬೆಳೆಯಲು ಬಿಟ್ಟಿದ್ದು ದುರ್ಮಾಂಸವಲ್ಲ, ಅದು ನನ್ನ ರಕ್ತ ಹಂಚಿಕೊಂಡ ನನ್ನ ಮಗು. ನನ್ನ ಜೀವನಶೈಲಿಗಾಗಿ ನಾನು ನನ್ನ ಮಗುವಿನ ಬಲಿ ಕೊಡಲು ತಯಾರಿರಲಿಲ್ಲ. ನನ್ನ ಮಗುವನ್ನು ಉಳಿಸಿಕೊಂಡ ನಿರ್ಧಾರದ ಬಗ್ಗೆ ನನಗೆ ಇಂದು ಸಂತೋಷವಿದೆ. ನನ್ನ ಜೀವಮಾನವಿಡೀ ಗಂಡಸರು ನನ್ನನ್ನು ತೊರೆದುಹೋಗಿದ್ದಾರೆ. ಸುತ್ತಲ ಜಗತ್ತು ನನಗಾಗಿ ಸಮಯ ಕೊಡಲಾರದು. ಆದರೆ ನನಗಾಗಿ ಸದಾ ನನ್ನ ಮಗ ಇದ್ದಾನೆ. ಇಂದು ಅವನೇ ನನ್ನ ತಂದೆ, ನನ್ನ ಗೆಳೆಯ ಮತ್ತು ಜೊತೆಗಾರ. ನಾನು ಅಂದು ಜಗತ್ತಿನ ಮಾತು ಕೇಳಿದ್ದರೆ, ಇಂದು ಒಂಟಿಯಾಗಿರುತ್ತಿದ್ದೆ.
ನಾನು ನನಗೆ ಸರಿ ತೋರಿದಂತೆ ನಡೆದುಕೊಂಡೆ. ನಾನು ಶಿವರಾಂನನ್ನು ಯಾಕೆ ಒಪ್ಪಿಕೊಂಡೆ? ಮದುವೆಯಿಲ್ಲದೆ ತಾಯಿಯಾದವಳ ಬಗ್ಗೆ ಈ ಲೋಕ ಏನು ಹೇಳೀತೆಂದು ಅಂಜಿದೆನೇ? ಹಾಗಿದ್ದರೆ, ಗರ್ಭಪಾತ ಮಾಡಿಸಿಕೊಳ್ಳುತ್ತಿದ್ದೆ. ಮತ್ತೇಕೆ? ಯಾಕೆಂದರೆ, ನನ್ನ ಮಗುವಿಗೆ ತಂದೆಯನ್ನು ನಿರಾಕರಿಸುವ ಹಕ್ಕು ನನಗಿರಲಿಲ್ಲ.
ಮುಂದಿನ ಏಳು ವರ್ಷ ಈ ಮನುಷ್ಯನನ್ನು ನನ್ನ ಬಾಳಿನಲ್ಲಿ ಹೊಂದಿಸಲು ಹೆಣಗಿದೆ. ನನ್ನ ಸರ್ವಸ್ವವನ್ನೂ ಕಸಿದುಕೊಂಡವನು ಅವನು. ಆದರೂ ಪ್ರತಿದಿನ ಅವನ ಮುಖ ನೋಡಬೇಕಿತ್ತು. ಅವನ ಮೊದಲ ಹೆಂಡತಿಯೂ ಸೇರಿದಂತೆ ನಾವೆಲ್ಲರೂ ಒಂದೇ ಮನೆಯಲ್ಲಿ ವಾಸವಾಗಿದ್ದೆವು. ಮತ್ತು ಆ ಕುಟುಂಬ ನನ್ನನ್ನು ಸುಖವಾಗಿಡಲು ಇನ್ನಿಲ್ಲದ ಪ್ರಯತ್ನ ಮಾಡಿತು. ಎಷ್ಟೆಂದರೂ ನಾನು ಚಿನ್ನದ ಮೊಟ್ಟೆ ಇಡುವ ಕೋಳಿಯಲ್ಲವೇ?
ನನ್ನ ವೃತ್ತಿ, ಹಣಕಾಸು ವ್ಯವಹಾರಗಳೆಲ್ಲವನ್ನೂ ಆತನೇ ನೋಡಿಕೊಳ್ಳುತ್ತಿದ್ದ. ಮತ್ತು ನಾನು ಎಲ್ಲರಿಗೂ ಅವನನ್ನು ನನ್ನ ಪತಿ ಎಂದೇ ಪರಿಚಯಿಸುತ್ತಿದ್ದೆ. ನನಗೆ ಏಳು ತಿಂಗಳು ತುಂಬುವವರೆಗೂ ಕೆಲಸ ಮಾಡುತ್ತಿದ್ದೆ. ಹೆರಿಗೆ ನಂತರ, ಮಗನಿಗೆ ಮೂರು ತಿಂಗಳಾಗುವ ಹೊತ್ತಿಗೆ ಅಭಿನಯಕ್ಕೆ ಮರಳಿ ಬಂದೆ. ದೇವರ ದಯೆ, ನನ್ನ ವೃತ್ತಿಗೆಂದೂ ತೊಂದರೆಯಾಗಲಿಲ್ಲ. ನನ್ನ ಹೆಸರು ಕೆಡಿಸಲು ವದಂತಿಕೋರರು ಎಷ್ಟೇ ಯತ್ನಿಸಿದರೂ, ಹಲವಾರು ನಿರ್ಮಾಪಕರು, ವಿತರಕರು ನನ್ನ ಸ್ನೇಹಿತರಾಗಿ ನೆರವು ನೀಡಿದರು. ವಿತರಕ ರತ್ನಂ ಅಯ್ಯರ್ (ಮಣಿರತ್ನಂ ತಂದೆ) ಮತ್ತು ಅವರ ಹೆಂಡತಿ ಉದ್ದಕ್ಕೂ ನನಗೆ ಬೆಂಬಲವಾಗಿದ್ದರು.
ಏಳು ವರ್ಷ ಕಾಲ ನನ್ನ ಮಗು ಮತ್ತು ನನ್ನ ವೃತ್ತಿಗಳೇ ನನ್ನ ಜೀವನದ ಕೇಂದ್ರವಾಗಿದ್ದವು. ಈ ಏಳು ವರ್ಷದಲ್ಲಿ ನಾನು ಶಿವರಾಂ ಹೆಚ್ಚೆಂದರೆ ಮೂರು ನಾಲ್ಕು ಬಾರಿ ‘ದಾಂಪತ್ಯದ ಸಂಬಂಧ’ ಹೊಂದಿರಬಹುದು… ಏಳು ವರ್ಷಗಳ ನಂತರ ನಾನು ಹೊರನಡೆದೆ.
ನಾನು ಹೊರ ಹೋಗಿದ್ದಾದರೂ, ನನ್ನ ಹಣವನ್ನು ಆತ ಸೂಳೆಯರಿಗಾಗಿ ಖರ್ಚು ಮಾಡಿದನೆಂದು ಪ್ರತಿಭಟಿಸಿದಾಗ, ಆತ ನನಗೆ ಹೊಡೆಯುವಂಥ ದಾರ್ಷ್ಟ್ಯ ತೋರಿದ ಎಂಬ ಕಾರಣಕ್ಕೆ! ಆ ಏಳು ವರ್ಷದಲ್ಲಿ, ನಾನೇ ಆತನ ಮೂರು ಮಕ್ಕಳ ಮದುವೆ ನಡೆಸಿಕೊಟ್ಟೆ. ಅವರು ನನ್ನ ಹಣದಲ್ಲಿ ಮೂರು ಮನೆ ಕಟ್ಟಿಕೊಂಡು ಸೊಂಪಾದರು. ನಾನು ಆತನಿಗೆ ಸಭ್ಯ ಗಂಡನಾಗುವ, ಸಭ್ಯ ತಂದೆಯಾಗುವ ಅವಕಾಶ ಕೊಟ್ಟೆ. ಆದರೆ ಆತ ಸಭ್ಯನಾಗಿರಲಿಲ್ಲ.
ಅಷ್ಟಾದರೂ, ನನ್ನ ಮಗನನ್ನು ಪಡೆಯಲು ನಾನು ಹಲವಾರು ವರ್ಷ ಹೊಡೆದಾಡಬೇಕಾಯಿತು. ಅವರಿಗೆ ನನ್ನ ದುಡ್ಡು ಬೇಕಿತ್ತು. ನನಗೆ ನನ್ನ ಮಗು ಬೇಕಿತ್ತು. ಕೋರ್ಟಿನಲ್ಲಿ ವಿಚಾರಣೆಗೆ ಬಂದಾಗ ನಾನು “ನನ್ನ ಮಗ ಅವರಿಗೆ ಬೇಕಿದ್ದರೆ, ನನ್ನೆಲ್ಲ ಒಡವೆ, ಮನೆ, ಹಣ ನನಗೆ ಹಿಂತಿರುಗಿಸಲಿ. ಅಥವಾ ನನ್ನ ಮಗನನ್ನು ನನಗೇ ಕೊಟ್ಟರೆ, ನಾನು ಅದಾವುದನ್ನೂ ಕೇಳುವುದಿಲ್ಲ” ಅಂದೆ. ಮೊದಲಿನಿಂದಲೂ ಅವರಿಗಿದ್ದಿದ್ದು ದುಡ್ಡಿನ ಆಸೆ. ಹಾಗಾಗಿ ಕೊನೆಗೂ ನನಗೆ ನನ್ನ ಮಗ ಸಿಕ್ಕಿದ.
ಈಗ ನನ್ನ ಬಳಿ ಎಲ್ಲ ಇತ್ತು. ಯಶಸ್ಸು, ರೂಪು, ಸುಂದರ ಮಗುವಿನ ತಾಯ್ತನ, ಅದಕ್ಕಿಂತ ಹೆಚ್ಚಾಗಿ ಸ್ವಾತಂತ್ರ್ಯ. ಅಷ್ಟಾದರೂ ನಾನು ಏಕಾಕಿಯಾಗಿದ್ದೆ. ಅತ್ಯಾಚಾರ ಮತ್ತು ಮುಂದಿನ ಮದುವೆ ಇವು ನನ್ನ ಎಲ್ಲ ಆಪ್ತರನ್ನೂ ಘಾಸಿಗೊಳಿಸಿತ್ತು. ನನ್ನ ಹಾಗೂ ನನ್ನ ತಂದೆ ತಾಯಂದಿರ ಜೊತೆಗಿನ ಸಂಬಂಧದಲ್ಲೂ ಮಾನಸಿಕ ಅಡ್ಡಗೋಡೆ ಎದ್ದು ನಿಂತಿತ್ತು… ಆ ಸಂದರ್ಭದಲ್ಲಿ ನನಗೆ ಬೇಕಿದ್ದುದು ರಕ್ಷಣೆ. ಪ್ರೇಮವಲ್ಲ, ಕಾಮವಲ್ಲ, ಹಣವಲ್ಲ. ನನಗೆ ಒಂದು ಮಾನವ ಆಸರೆ ಬೇಕಿತ್ತು.
ನಾನು ಶಿವರಾಂ ಮನೆ ತೊರೆದು ಹೋದಾಗ, ಗಿರಿಬಾಬು ನಿರ್ಮಾಣದ ಚಿತ್ರದಲ್ಲಿ ಅಭಿನಯಿಸುತ್ತಿದ್ದೆ. ಈಗ ಎಲ್ಲಕ್ಕಿಂತ ಮೊದಲು ನನ್ನ ವಾಸಕ್ಕೊಂದು ಜಾಗ ಬೇಕಿತ್ತು. ನಾನೆಂದೂ ಮನೆ ಕಟ್ಟಿಕೊಂಡಿರಲಿಲ್ಲ. ಆಗ ನನ್ನ ನೆರವಿಗೆ ಬಂದವರು ಗಿರಿಬಾಬು. “ಮೇಡಂ, ನಿಮಗೆ ಸೂಕ್ತ ವ್ಯವಸ್ಥೆ ಆಗುವವರೆಗೆ ಬೇಕಾದರೆ ನನ್ನ ಮನೆಯಲ್ಲೇ ಇರಿ” ಎಂದು ಆಹ್ವಾನಿಸಿದರಾತ.
ಮುಂದಿನ ಕೆಲ ದಿನಗಳ ಕಾಲ ಅವರೊಬ್ಬರೇ ನನಗೆ ಆಸರೆ. ಆತ ನನ್ನ ಕೆಲಸವನ್ನೂ ಉತ್ತೇಜಿಸಿದರು. ಮಗನಿಗಾಗಿ ನಡೆಸಿದ್ದ ಹೋರಾಟದಲ್ಲಿ ಜೊತೆ ನೀಡಿದರು. ಕಠೋರ ಪತ್ರಿಕೆಗಳ ವಿರುದ್ಧ ರಕ್ಷಣೆ ಕೊಟ್ಟರು. ಆದರೆ ನಾನು ಆಗ ತಪ್ಪು ಬಾಗಿಲು ತಟ್ಟಿದೆನೆಂದು ಈಗ ಅನಿಸುತ್ತಿದೆ.
ದುಃಖದಲ್ಲಿರುವ ಹೆಣ್ಣಿಗೆ ಗಂಡು ಆಸರೆಯಿತ್ತಾಗ, ಅಥವಾ ಗಂಡಿಗೆ ಹೆಣ್ಣು ಆಸರೆ ಕೊಟ್ಟಾಗ, ಎಲ್ಲೋ ಒಂದು ಕಡೆ ಭಾವನೆಗಳು ಬೆಸೆದು, ದೈಹಿಕ ಸಂಬಂಧ ಅನಿವಾರ್ಯವಾಗಿಬಿಡುತ್ತದೆ. ಅದಾದ ಕೂಡಲೇ ಆ ಸಂಬಂಧದ ಸ್ವರೂಪವೇ ಬದಲಾಗಿಹೋಗುತ್ತದೆ.
ಒಂದು ದಿನ ನಾನು ಬಿಕ್ಕಿ ಬಿಕ್ಕಿ ಅಳುತ್ತಿದ್ದೆ. ಆಗ ಗಿರಿಬಾಬು ನನ್ನನ್ನು ಸಂತೈಸತೊಡಗಿದರು. ನನ್ನನ್ನು ತಬ್ಬಿ, ಬೆನ್ನು ತಟ್ಟಿ, ಕಿವಿಯಲ್ಲಿ ಸಾಂತ್ವನದ ನುಡಿಗಳನ್ನು ಉಸುರಿದರು. ಒಮ್ಮೆಲೇ ಎಲ್ಲೋ ಕಿಡಿ ಹೊತ್ತಿಕೊಂಡಿತು. ದೇಹದ ಸೆಳೆತ ತಂತಾನೇ ಸಕ್ರಿಯವಾಯಿತು. ನಮಗೆ ಅರಿವಾಗುವ ಮೊದಲೇ ನಮ್ಮ ಸಂಬಂಧದಲ್ಲಿ ಲೈಂಗಿಕ ಸೆಳಕು ಸೇರಿಕೊಂಡಿತು. ಮುಂದೊಮ್ಮೆ ಕಷ್ಟದಲ್ಲಿ ಸಿಲುಕಬಹುದೆಂದು ಗೊತ್ತಿದ್ದರೂ, ನಾವು ಕಂಡುಕೊಂಡಿದ್ದನ್ನು ನಾವಿಬ್ಬರೂ ಬಿಟ್ಟುಕೊಡಲಿಲ್ಲ. ಸತ್ಯ ಎದುರಿಸಲು ಇಬ್ಬರೂ ತಯಾರಿರಲಿಲ್ಲ.
ನಾನು ಗಿರಿಬಾಬು ಸಹಬಾಳ್ವೆ ಆರಂಭಿಸಿದೆವು. ಈ ಬಾರಿ ನಾನಾಗಿಯೇ “ಇಟ್ಟುಕೊಂಡವಳ” ಪಾತ್ರ ಆರಿಸಿಕೊಂಡೆ. ಒಂದು ಹೆಣ್ಣಿಗೆ ‘ಉಪಪತ್ನಿ’ ಪಾತ್ರ ಆರಿಸಿಕೊಳ್ಳಲು ಅನೇಕ ಕಾರಣಗಳಿರಬಹುದು. ಆದರೆ ಮೂಲಕಾರಣ ಆ ಸಂಬಂಧ ನೀಡಬಹುದಾದ ಭದ್ರತೆಯೇ. ಆತನ ಕುಟುಂಬ ಹಾಳಾಗುವುದು ನನಗಿಷ್ಟವಿರಲಿಲ್ಲ. ಅದಕ್ಕೇ ನಾನೇ ಆತನ ಹೆಂಡಿರು ಮಕ್ಕಳನ್ನು ರಾಜಮಂದ್ರಿಯಿಂದ ಕರೆಸಿದೆ. ಎಲ್ಲರೂ ಒಟ್ಟಿಗೆ ಒಂದು ದೊಡ್ಡ ಮನೆಯಲ್ಲಿ ಬಾಳತೊಡಗಿದೆವು. ಗಿರಿ ನನ್ನ ಬಗ್ಗೆ ಆಗಲೇ ಹೆಂಡತಿಗೆ ಹೇಳಿದ್ದರು. ಅಲ್ಲೂ ನನ್ನ ಹಣವೇ ಪ್ರಮುಖ ಪಾತ್ರ ವಹಿಸಿದ್ದರಿಂದ, ನಾವೆಲ್ಲರೂ “ಸುಖ”ವಾಗಿದ್ದೆವು. ಈಗ ಯೋಚಿಸಿದರೆ, ನಾನೂ, ಅವರ ಹೆಂಡತಿ ಅದು ಹೇಗೆ ಒಟ್ಟಿಗಿದ್ದು ಸುಖವಾಗಿರಲು ಸಾಧ್ಯ ಎಂದು ಪ್ರಶ್ನೆ ಏಳುತ್ತದೆ!
ಐದು ವರ್ಷಗಳ ನಂತರ 1977ರಲ್ಲಿ, ಅದಾಗಲೇ ನನ್ನ ತಂದೆಯಿಂದ ಬೇರ್ಪಟ್ಟಿದ್ದ ನನ್ನ ತಾಯಿ ಕಾಯಿಲೆ ಬಿದ್ದಳು. ಅವಳನ್ನು ನೋಡಿಕೊಳ್ಳಲೆಂದು ನಾನು ಬೇರೆ ಮನೆ ಮಾಡಿ ಹೋಗಿದ್ದೇ ತಡ, ಎಲ್ಲಾ ಸಮಸ್ಯೆಗಳೂ ಆರಂಭವಾದವು. ಈಗ ನಿಜವಾಗಲೂ ನಾನು ಎಲ್ಲಾ ಅರ್ಥದಲ್ಲೂ ಇಟ್ಟುಕೊಂಡವಳೇ ಆಗಿಹೋದೆ. ಗಿರಿಬಾಬು ಪ್ರತಿ ರಾತ್ರಿ ನಮ್ಮ ಮನೆಗೆ ಬರುವುದು, ಬೆಳಕು ಹರಿಯುವ ಮೊದಲೇ ಹೋಗಿಬಿಡುವುದು. ಎಂಥ ಹೀನಾಯದ ಸ್ಥಿತಿ! ನಾನೆಂದೂ ಕತ್ತಲಲ್ಲಿ ಬದುಕಿದವಳಲ್ಲ. ಈಗ ಬಲವಂತವಾಗಿ ಅಂಥ ಬದುಕಿಗೆ ಬಿದ್ದೆ. ಅದಕ್ಕೆ ಪ್ರತಿಭಟಿಸತೊಡಗಿದೆ.
ಆತ ಕದ್ದು ಮುಚ್ಚಿ ಬಂದು ಹೋಗಲು ನಾನೇನು ಸೂಳೆಯಲ್ಲ. ನಮ್ಮ ಮನೆಯಲ್ಲೊಂದು ದಿನ ಅವರ ಮನೆಯಲ್ಲೊಂದು ದಿನ; ಅಥವಾ ಇಲ್ಲಿ ಒಂದು ವಾರ, ಅಲ್ಲಿ ಒಂದು ವಾರ ಹೀಗಿರುವಂತೆ ಒತ್ತಾಯಿಸಿದೆ. ಆತ ಒಪ್ಪಲಿಲ್ಲ. ಅಷ್ಟು ಹೊತ್ತಿಗಾಗಲೇ ಆತ ನನ್ನ ಹಣದಿಂದ ಎಲ್ಲವನ್ನೂ ಪಡೆದಾಗಿತ್ತು. ಮೂರು ಸಿನಿಮಾ ನಿರ್ಮಾಣ, ಒಂದು ಚಿತ್ರಮಂದಿರ, ಒಂದು ಮನೆ, ಒಂದು ಕಾರು… ಈಗ ನಾನು ಇಲ್ಲವೆಂದಾದರೂ ಏನೂ ವ್ಯತ್ಯಾಸವಾಗುತ್ತಿರಲಿಲ್ಲ. ಜೊತೆಗೆ ಇಟ್ಟುಕೊಂಡವಳನ್ನು ಬಿಟ್ಟು ಬಿಡುವುದೂ ಸುಲಭ. ಗಿರಿಬಾಬು ನಮ್ಮ ಮನೆಗೆ ಬರುವುದನ್ನೇ ನಿಲ್ಲಿಸಿದರು…!
ಆತ್ಮಮರುಕ ಹೆಣ್ಣಿನ ಅತಿ ದೊಡ್ಡ ಶತ್ರು.
ಗಿರಿಬಾಬು ನನ್ನನ್ನು ತೊರೆದು, ನಾನು ಮತ್ತೆ ಒಂಟಿಯಾದ ಮೇಲೆ ಆತ್ಮಮರುಕದ ಸಿಹಿ ಮೂರ್ಖತನದಲ್ಲಿ ಮುಳುಗಿಹೋದೆ. ನನಗೆ ಅರಿವಾಗುವ ಮೊದಲೇ, ಈ ಜೀವನವನ್ನು ಅಂತ್ಯಗೊಳಿಸುವ ಬಗೆಬಗೆಯ ಉಪಾಯ ಯೋಚಿಸತೊಡಗಿದೆ. ಒಂದು ರಾತ್ರಿ ಸುಮಾರು ಎರಡು ಗಂಟೆ ವೇಳೆಗೆ, ಕಾರು ಹತ್ತಿ ಸಮೀಪದ ಕೊಳದ ಬಳಿ ಹೋದೆ. ಆ ಕೊಳದ ಮೆಟ್ಟಿಲ ಮೇಲೆ ಸುಮಾರು ಹೊತ್ತು ಸುಮ್ಮನೆ ಕೂತಿದ್ದೆ. ಅಂದು ನಾನು ಕೊಳದೊಳಗೆ ಹಾರಿಕೊಳ್ಳದಿದ್ದರೆ ಅದಕ್ಕೆ ನನ್ನ ಮಗುವಿನ ಜವಾಬ್ದಾರಿಯೊಂದೇ ಕಾರಣ. ನಾನು ಇಡೀ ಜಗತ್ತನ್ನೇ ಎದುರು ಹಾಕಿಕೊಂಡು ಮಗು ಹೆತ್ತು ಬೆಳೆಸಿದ್ದು ಇದಕ್ಕಾಗಿಯೇ ಎಂಬ ಪ್ರಶ್ನೆ ಬಂತು. ಇಲ್ಲ, ಮರಳಿ ಹೊಸ ಬದುಕು ಆರಂಭಿಸಬೇಕು. ನಿರ್ಧಾರ ಮಾಡಿಕೊಂಡು ಎದ್ದು ವಾಪಸಾದೆ.
ಬದುಕಿನ ಸೋಲು ಗೆಲುವಿಗೆ, ನಮ್ಮ ಜೀವನ ಧೋರಣೆಯೇ ಮುಖ್ಯ. ನನಗೆ ಬಿಕ್ಕಟ್ಟುಗಳು ಎದುರಾದಾಗಲೆಲ್ಲ, ಈ ನೀತಿ ನನಗೆ ಮನವರಿಕೆಯಾಗಿದೆ. ನನ್ನ ವೃತ್ತಿಯಲ್ಲಿ ನಾನು ಯಾವಾಗಲೂ ಯಶಸ್ಸನ್ನೇ ಕಂಡಿದ್ದೇನೆ. ನಾನು ನಾಯಕಿಯಾಗಿಯೇ ಸುದೀರ್ಘ ಕಾಲ ಅಭಿನಯಿಸಿ ಒಂಭತ್ತು ವರ್ಷಗಳಿಂದೀಚೆಗೆ ಕ್ರಮೇಣ ಚರಿತ್ರನಟಿಯಾಗಿ ಮಾರ್ಪಟ್ಟಿದ್ದೇನೆ.
ನಾನು ‘ಮಿಸ್ ಲೀಲಾವತಿ’ಯಲ್ಲಿ ಈಜುಡುಗೆ ತೊಟ್ಟಾಗ, ದಕ್ಷಿಣದಲ್ಲೇ ನಾಯಕಿಯೊಬ್ಬಳು ಅಂಥ ಉಡುಪಿನಲ್ಲಿ ಕಾಣಿಸಿಕೊಂಡಿದ್ದು ಅದೇ ಮೊದಲು. ನನಗೇನೂ ಅದು ಅಸಮಂಜಸ ಅನಿಸಲಿಲ್ಲ. ಎಷ್ಟೋ ಜನ ಹುಬ್ಬೇರಿಸಿದ್ದು ನಿಜ. ಆದರೆ ನಮ್ಮ ಎಲ್ಲ ಗಂಡಸು ಹೆಂಗಸರೂ ಆಷಾಢಭೂತಿಗಳಲ್ಲವೇ?
ಅಷ್ಟಾದರೂ, ನಾನು ಹೆಣ್ಣನ್ನು “ಮಿದುಳಿಲ್ಲ, ಮೊಲೆ ಮಾತ್ರ” ಎಂದು ತೋರಿಸುವ ಪಾತ್ರ ವಹಿಸಲು ಯಾವಾಗಲೂ ನಿರಾಕರಿಸಿದ್ದೇನೆ.
ಒಂದು ಸಲ ಐ.ವಿ. ಶಶಿಯವರ (ಮಲಯಾಳಂ ನಿರ್ದೇಶಕ) ಸಹಾಯಕ ನಿರ್ದೇಶಕ ನನ್ನ ಬಳಿ ಬಂದು ಒಂದು ಚಿತ್ರಕ್ಕೆ ಕೇಳಿದ. ಆತ ಆ ಚಿತ್ರದ ಮುಖ್ಯ ಭಾಗ ಎಂದು ಒಂದು ದೃಶ್ಯ ವಿವರಿಸಿದ.
ನಾಯಕಿ ಬಾತ್ಟಬ್ನಲ್ಲಿ ಸ್ನಾನ ಮಾಡುತ್ತಿರುವಾಗ, ಹಠಾತ್ತಾಗಿ ನಾಯಕ ಬರುತ್ತಾನೆ. ದಿಗ್ಭ್ರಮೆಗೊಂಡ ನಾಯಕಿ ದಿಢೀರ್ ಮೇಲೆದ್ದು ನಿಂತು ನಾಯಕನ ವಿರುದ್ಧ ಕೂಗಾಡತೊಡಗುತ್ತಾಳೆ. ನಾನು ಹೇಳಿದ್ದಿಷ್ಟೇ: ಸ್ನಾನದ ಮನೆಯಲ್ಲಿ ಗಂಡಸು ಕಂಡಾಗ ಒಬ್ಬ ನಗ್ನ ಹೆಣ್ಣು ಇನ್ನೂ ಆಳದಲ್ಲಿ ಹುದುಗಿ ಮೈ ಮುಚ್ಚಿಕೊಳ್ಳುತ್ತಾಳೆಯೇ ಹೊರತು, ನೆಗೆದು ತನ್ನ ದಿಗ್ಭ್ರಮೆ ತೋರುವುದಿಲ್ಲ. ಹಾಗೇಕೆ ಅವಳು ನೆಗೆದು ನಿಲ್ಲುತ್ತಾಳೆಂದು ನನಗೆ ಮನವರಿಕೆ ಮಾಡಿಕೊಟ್ಟರೆ ಮಾತ್ರ ಆ ಸಿನಿಮಾ ಮಾಡುವೆ ಎಂದು ಹೇಳಿ ಕಳಿಸಿದೆ. ಅಂಥ ದಿಟ್ಟ ದೃಶ್ಯದಲ್ಲಿ ಪಾಲ್ಗೊಂಡರೆ ಜನ ಏನೆಂದಾರು ಎಂದು ನಾನು ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ಅವರೇನೂ ಮತ್ತೆ ಬರಲಿಲ್ಲ ಬಿಡಿ. ಆ ದೃಶ್ಯ ನನ್ನ ಪ್ರತಿಭೆಯನ್ನಲ್ಲ, ನನ್ನ ದೇಹಸಂಪತ್ತನ್ನು ಬಳಸುವ ಉಪಾಯ ಅಷ್ಟೇ…
ಹೆಣ್ಣಿಗೆ ಗೌರವ ಸಿಗಬೇಕಾದರೆ, ಮೊದಲು ಆಕೆ ಆತ್ಮಗೌರವ ಕಲಿಯಬೇಕು. ಅನೇಕ ಗಂಡಸರಿಗೆ ನನ್ನ ಜೊತೆ ಮಲಗುವುದು ಬೇಕಿತ್ತು. ಆದರೆ ಯಾರಿಗೂ “ನಿನ್ನನ್ನು ಪ್ರೀತಿಸುತ್ತೇನೆ. ನೀನು ನನಗೆ ಬೇಕು” ಎಂದು ಹೇಳುವ ಧೈರ್ಯವಿರಲಿಲ್ಲ. ಎಷ್ಟೋ ಸ್ಟಾರ್ಗಳ ಇಂಥ ಆಸೆ ಪೂರೈಸಲಿಲ್ಲವೆಂದು ನನಗೆ ಪಾತ್ರಗಳು ತಪ್ಪಿಹೋಗಿವೆ, ಆದರೂ ಚಿಂತೆಯಿಲ್ಲ.
ಒಬ್ಬನೇ ಒಬ್ಬ ಒಮ್ಮೆ ಇಂಥ ಧೈರ್ಯ ತೋರಿದ. ಮತ್ತು ಆತ ಸಿನಿಮಾದವನಲ್ಲ, ನನ್ನ ಸೋದರ ಮತ್ತು ಮಗನ ಗೆಳೆಯನಾತ.
ಶೇಖರ್ಗೆ ಆಗ 21, ನನಗೆ 34. ನಾನು ಗಿರಿಬಾಬು ಜೊತೆ ಇದ್ದ ಮನೆಯ ಪಕ್ಕದಲ್ಲಿ ಅವರ ಮನೆ. ಆತ ನಮ್ಮ ಮನೆಗೆ ಬಂದು ನನ್ನ ತಮ್ಮ ಮತ್ತು ಮಗನೊಂದಿಗೆ ಕ್ರಿಕೆಟ್ ಆಡುತ್ತಿದ್ದ. ಗಿರಿಬಾಬು ನನ್ನನ್ನು ಬಿಟ್ಟ ಮೇಲೊಂದು ದಿನ ಶೇಖರ್ ನಮ್ಮ ಮನೆಗೆ ಬಂದು ನನ್ನನ್ನು ಮದುವೆಯಾಗಲು ಕೇಳಿದ. ಆ ಮಾತು ಕೇಳಿ ನಾನು, ಎಷ್ಟೋ ವರ್ಷಗಳ ನಂತರ, ಮನಸೋ ಇಚ್ಛೆ ನಕ್ಕೂ ನಕ್ಕೂ ಇಟ್ಟೆ. ಆದರೆ ಆತ ಗಂಭೀರವಾಗಿ ಹೇಳುತ್ತಿದ್ದಾನೆಂದು ಗೊತ್ತಾದಾಗ ಅವನ ಕೆನ್ನೆಗೆ ಬಾರಿಸಿ, ಮನೆಯಿಂದ ಹೊರಗೆ ಹಾಕಿದೆ.
ಆದರೆ ಆತ ಪಟ್ಟು ಬಿಡದೆ, ಮುಂದಿನ ಎರಡು ವಾರ ಬಂದೂ ಬಂದೂ ಅದೇ ಮನವಿ ಮುಂದಿಟ್ಟ. ಕೊನೆಗೊಂದು ದಿನ ಅವನನ್ನು ಕೂರಿಸಿ, ನಾನು ಅವನಿಗಿಂತ ತೀರಾ ವಯಸ್ಸಾದವಳೆಂದೂ, ಅವನು ನನ್ನ ಮಗನ ಸ್ನೇಹಿತನೆಂದೂ ವಿವರಿಸಿ ಹೇಳಿದೆ. ಜೊತೆಗೆ ಅವನ ಈ ಆಸೆಗಳು ಕ್ಷಣಿಕವೆಂದೂ, ಕೆಲ ವರ್ಷಗಳ ನಂತರ ಅವನು ಸಮವಯಸ್ಕ ಹುಡುಗಿಯರಿಗಾಗಿ ಹಾತೊರೆಯತೊಡಗುವನೆಂದೂ ತಿಳಿಸಿ ಹೇಳಿದ. ಆದರೆ ಆತ ಅಚಲನಾಗಿದ್ದ.
ಒಂದು ದಿನ ವಿಷ ತಂದು, ನಾನು ಒಪ್ಪದಿದ್ದರೆ ಕುಡಿದುಬಿಡುವೆನೆಂದು ಘೋಷಿಸಿದ. ಅವನ ಪ್ರಾಮಾಣಿಕತೆಗೆ ನಾನು ಅಲ್ಲಾಡಿದೆ. ಮೊಟ್ಟ ಮೊದಲ ಬಾರಿ, ಯಾರೋ ಒಬ್ಬರು ನನ್ನ ಮುಂದೆ ತನ್ನ ಪ್ರೀತಿ ಮತ್ತು ನಿಜ ಮದುವೆಯ ಪ್ರಸ್ತಾಪ ತಂದಿದ್ದರು ಬೇರೆ.
ಈ ವಿಷಯವನ್ನು ನಾನು ನನ್ನ ಸೋದರರು ಮತ್ತು ಮಗನೊಂದಿಗೆ ಚರ್ಚಿಸಿದೆ. ನಾನು ನನ್ನ ಮಗನೊಂದಿಗೆ ಯಾವಾಗಲೂ ನೇರವಾಗಿರುತ್ತೇನೆ. ನನ್ನ ಮಗ ಅಸಾಧಾರಣ ಪ್ರೌಢಿಮೆ ಮತ್ತು ಬುದ್ಧಿವಂತಿಕೆಗಳ ಹುಡುಗ. ಅವನೇ ನನ್ನ ಜೀವನ… ಅವರೆಲ್ಲ ಮದುವೆಯ ಪರ ವಾದಿಸಿದರು. ವಯಸ್ಸಿನ ಅಂತರ ದೊಡ್ಡದೆಂದು ಅವರು ಯಾರಿಗೂ ಅನಿಸಲಿಲ್ಲ. ನಾನು ಶ್ರೀಮತಿ ಜಯಂತಿ ಶೇಖರ್ ಆದದ್ದು ಹೀಗೆ. ಮದುವೆಯಾಗಿ ಒಂದು ವಾರದ ನಂತರವೂ ಶೇಖರ್ ತಂದೆ ತಾಯಂದಿರಿಗೆ ವಿಷಯ ಗೊತ್ತಿರಲಿಲ್ಲ. ಗೊತ್ತಾದಾಗ ಅವರಂತೂ ಉರಿದು ಬಿದ್ದರು. ನನ್ನನ್ನೇ ಬಾಯಿಗೆ ಬಂದ ಹಾಗೆ ಬೈದರು. ಆದರೆ ಶೇಖರ್ ಅವರಿಗೇ ಸವಾಲು ಹಾಕಿ “ಈಕೆ ನನ್ನ ಹೆಂಡತಿ, ಎಲ್ಲರೂ ಇವಳಿಗೆ ಮರ್ಯಾದೆ ಕೊಡಲೇಬೇಕು” ಎಂದ. ಇದು ನಿಜವಾಗಲೂ ನನ್ನನ್ನು ಅಲ್ಲಾಡಿಸಿತು. ಒಬ್ಬ ಯುವಕ ನನ್ನಲ್ಲಿ ಇಷ್ಟು ನಿಜ ಪ್ರೀತಿ ಇರಿಸಿಕೊಂಡಿದ್ದರಿಂದ ನಾನು ಅವರನ್ನು ನಂಬಿದೆ.
ಈತನೊಂದಿಗೆ ನಾನು ಆನಂದದ ಮೂರು ವರ್ಷ ಕಳೆದೆ. ಆ ಅವಧಿಯ ಬಗ್ಗೆ ನನಗೀಗಲೂ ಯಾವ ಪಶ್ಚಾತ್ತಾಪವೂ ಇಲ್ಲ. ಆತ ಅಭಿನಯಿಸುವ ಆಸೆ ತೋರಿದಾಗ, ಅವನನ್ನೇ ನಾಯಕನಾಗಿ ಮಾಡಿ ಎರಡು ಸಿನಿಮಾ ನಿರ್ಮಿಸಿದೆ. ಅವನೇ ನನ್ನ ಹಣಕಾಸು ನೋಡಿಕೊಳ್ಳತೊಡಗಿದಾಗ, ಈ ಬಾರಿಯೇನೂ ನಾನು ಎಚ್ಚರ ವಹಿಸಲಿಲ್ಲ. ಎಷ್ಟೆಂದರೂ ಆತನನ್ನು ಗಂಡನಾಗಿ ಸ್ವೀಕರಿಸಿದ್ದೆ.
ಎರಡೂವರೆ ವರ್ಷಗಳ ನಂತರ ಶೇಖರ್ ತಂದೆಗೆ ಹೃದಯಾಘಾತವಾಯಿತು. ಈಗ ಅವನ ಸಿಟ್ಟು ಭಿನ್ನಾಭಿಪ್ರಾಯ ಎಲ್ಲ ಮರೆತು ತಂದೆ ಬಳಿ ಹೋಗಿ, ಅವರ ಕೆಲಸದಲ್ಲಿ ಸಹಾಯ ಮಾಡುವಂತೆ ನಾನೇ ಮನವೊಲಿಸಿ ಕಳಿಸಿದೆ. ಆ ಮೂಲಕ ನನ್ನ ಗೋರಿ ನಾನೇ ತೋಡಿಕೊಳ್ಳುತ್ತಿದ್ದೇನೆಂದು ನನಗಾಗ ಅರಿವಾಗಲಿಲ್ಲ. ನಿಧಾನವಾಗಿ ಸಮಸ್ಯೆಗಳು ತಲೆಯೆತ್ತತೊಡಗಿದವು. ಶೇಖರ್ ವಿಪರೀತ ಕುಡಿಯತೊಡಗಿದ. ಇದ್ದಕ್ಕಿದ್ದಂತೆ ಅವನಿಗೆ ನನ್ನ ವಯಸ್ಸು ಕಾಣತೊಡಗಿತು. ಆತ ತನಗೆ ಹೊಂದದ ಮದುವೆಯ ಪಂಜರದಲ್ಲಿ ಸಿಕ್ಕಿಹಾಕಿಕೊಂಡಂತೆ ವರ್ತಿಸತೊಡಗಿದ.
ಅವನ ತಂದೆ ತಾಯಂದಿರಂತೂ, ಈ ಮದುವೆಯೊಂದು ಪಾಪ ಎಂಬುದನ್ನೇ ಅವನ ತಲೆಗೆ ತುಂಬಿದರು. ಶೇಖರ್ ಕೊನೆಗೆ ಅವರ ಮಾತಿಗೇ ಬಲಿಬಿದ್ದ… ನನ್ನ ಈ ಮದುವೆಯೂ ಮುರಿದು ಬಿದ್ದ ಮೇಲೆ, ನಾನೀಗ ಗಂಡಸರೊಂದಿಗೆ ತೀರಾ ಹುಷಾರಾಗಿರುತ್ತೇನೆ. ನನಗೀಗ ಗಂಡಸರನ್ನು ನಂಬುವುದೇ ಕಷ್ಟ.
ನಮ್ಮ ಗತಕಾಲವನ್ನು ಮರೆತು ಬಿಡಬೇಕೆಂದು ಹೇಳುವುದು ಸುಲಭ. ಆದರೆ ಮರೆಯುವುದು ಹೇಗೆ? ನಾವೇನೂ ನಿರ್ಜೀವ ವಸ್ತುಗಳಲ್ಲ, ಮನುಷ್ಯರು. ಆದರೆ ಗತಕಾಲವನ್ನು ಅಳಿಸಿಹಾಕದಿದ್ದರೂ ಅದರೊಂದಿಗೇ ಬದುಕಲು ಕಲಿಯಬಹುದು ಎಂಬುದೇ ನನ್ನ ಭರವಸೆ. ಕ್ಷಮಿಸುವುದು ಸುಲಭ, ಆದರೆ ಮರೆಯುವುದು ಕಠಿಣ. ನನಗೆ ಅನ್ಯಾಯ ಮಾಡಿದ ಎಲ್ಲ ಗಂಡಸರನ್ನೂ ನಾನು ಕ್ಷಮಿಸಿದ್ದೇನೆ. ಆದರೆ ಅವರ ಕೃತ್ಯಗಳನ್ನು ನಾನು ಮರೆಯಲಾರೆ. ಒಂದು ದಿನ ಅದೂ ಸಾಧ್ಯವಾದೀತೇನೋ!

– ಎನ್.ಎಸ್.ಶಂಕರ್, ನಿರ್ದೇಶಕರು
(ಸೆಪ್ಟೆಂಬರ್ 1995ರ ಲೇಖನ)

Leave a Reply