ದೆಹಲಿ: ಐಪಿಎಲ್ ಕಪ್ ಗೆದ್ದ ಆರ್‌ಸಿಬಿ ತಂಡಕ್ಕೆ ಅಭಿನಂದನೆ ಸಲ್ಲಿಸುವ ವಿಚಾರದಲ್ಲಿ ಉಂಟಾಗಿರುವ ಗೊಂದಲ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕಾಂಗ್ರೆಸ್ ಹೈಕಮಾಂಡ್ ಇನ್ನು ಮುಂದೆ ರಾಜ್ಯದಲ್ಲಿ ಇಂತಹ ಯಾವುದೇ ಘಟನೆ ನಡೆಯದಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಪಕ್ಷದ ಕಚೇರಿಯಲ್ಲಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಜೊತೆ ಈ ವಿಚಾರವಾಗಿ ಸುಧೀರ್ಘ ಸಮಾಲೋಚನೆ ನಡೆಸಿದರು. ಈ ವೇಳೆ ರಾಜ್ಯದಲ್ಲಿ ಅತ್ಯುತ್ತಮ ಆಡಳಿತ ನಡೆಸುತ್ತಿರುವ ಸರ್ಕಾರಕ್ಕೆ ಈ ಘಟನೆ ಒಂದು ಕಪ್ಪು ಚುಕ್ಕೆಯಾಗಿ ಪರಿಣಮಿಸಿತು. ಸಂಪೂರ್ಣ ಖಾಸಗಿಯಾಗಿ ವಾಣಿಜ್ಯ ಉದ್ದೇಶಕ್ಕೆ ನಡೆಯುವ ಐಪಿಎಲ್ ಪಂದ್ಯ ಕ್ರೀಡೆಯೇ ಅಲ್ಲ. ಇಂತಹ ಟೂರ್ನಿಯ ಕಪ್ ಗೆದ್ದ ತಂಡಕ್ಕೆ ರಾಜ್ಯ ಸರ್ಕಾರ ಅಭಿನಂದನೆ ಸಲ್ಲಿಸಲು ನಿರ್ಧರಿಸಿದ ವಿಚಾರ ಸರಿಯಲ್ಲ ಎಂದು ಹೇಳಿದರು ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಹಲವು ಬಾರಿ ಚಾಂಪಿಯನ್ ಆಗಿದೆ. ಆ ತಂಡಕ್ಕೆ ಎಂದಿಗೂ ತಮಿಳುನಾಡು ಸರ್ಕಾರ ಅಭಿನಂದನೆ ಸಲ್ಲಿಸಿಲ್ಲ. ಆರ್ ಸಿ ಬಿ ತಂಡ ಚಾಂಪಿಯನ್ ಆದ ತಕ್ಷಣ ಸರ್ಕಾರ ಅಭಿನಂದನೆ ಸಲ್ಲಿಸಬೇಕು ಎಂಬ ವಿಚಾರ ಹೇಗೆ ಬಂತು? ಇಂತಹ ಪ್ರಸ್ತಾಪವನ್ನು ಯಾರು ಮಂಡಿಸಿದರು ಎಂದು ಕೇಳಿದ ರಾಹುಲ್ ಗಾಂಧಿ, ಮುಂದೆ ಯಾವುದೇ ಕಾರಣಕ್ಕೂ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿರುವುದಾಗಿ ಗೊತ್ತಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದಿರುವ ಕಾಲ್ತುಳಿತ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಇದರಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಯಾವುದೇ ಒತ್ತಡಗಳಿಗೂ ಸರ್ಕಾರ ಮಣಿಯಬಾರದು ಎಂದು ತಾಕೀತು ಮಾಡಿರುವುದಾಗಿ ಗೊತ್ತಾಗಿದೆ.
ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಐಸಿಸಿ ಸಂಘಟನಾ ಕಾರ್ಯದರ್ಶಿ ವೇಣುಗೋಪಾಲ್, ಕಾಲ್ತುಳಿತ ಪ್ರಕರಣಕ್ಕೆ ಕಾಂಗ್ರೆಸ್ ಹೈಕಮಾಂಡ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಘಟನೆಯಿಂದ ಬಾಧಿತರಾದವರಿಗೆ ರಾಜ್ಯ ಸರ್ಕಾರ ಎಲ್ಲ ನೆರವು ಕಲ್ಪಿಸಬೇಕು ಎಂಬ ಸೂಚನೆ ನೀಡಿದೆ ಎಂದರು.
ಘಟನೆ ಬಗ್ಗೆ ನಿಷ್ಪಕ್ಷ ಹಾಗೂ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರು ಯಾರೇ ಆಗಿದ್ದರು ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಈ ವಿಚಾರದಲ್ಲಿ ಸರ್ಕಾರ ಕೈಗೊಳ್ಳುವ ಕ್ರಮಕ್ಕೆ ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.




