ಪತ್ರಕರ್ತ ಸ್ನೇಹಿತರೊಂದಿಗೆ ಮಾತಿಗಿಳಿದು ‘ಈ ವಿಷಭಟ್ಟ ಮತ್ತೆ ಮತ್ತೆ ಲಿಂಗಾಯತರಿಗೆ ತಗಲ್ಹಾಕಿಕೊಳ್ಳುತ್ತಿದ್ದಾನಲ್ಲ? ಎಂದು ಕೇಳುತ್ತ, ಅವನ ತಗಡು ಪತ್ರಿಕೆಯಲ್ಲಿ ಬರೆದುಕೊಂಡ ‘ಸಾಣೇಹಳ್ಳಿ ಶ್ರೀಗಳೇ, ಸಾಕು ಮಾಡಿ ನಿಮ್ಮ ಗೊಡ್ಡು ಪುರಾಣ’ ಎಂಬ ಲೇಖನ ಉದಾಹರಿಸಿದೆ. ಆಗ ಅವರು ನಕ್ಕು ಹೇಳಿದ್ದಿಷ್ಟು “ಈ ಭಟ್ಟನಿಗೆ ಬೇರೆಯವರಿಂದ ಬೈಸಿಕೊಂಡಾಗ ಆನಂದ ಸಿಗುತ್ತೆ ಕಣ್ರೀ”… “ವಿಕೃತ ಕಾಮಿಗಳಂತೆ ಇವನಿಗೂ ಒಂದು ವಿಚಿತ್ರ ಕಾಯಿಲೆ ಇದೆ. ಬೇರೆಯವರಿಂದ ಉಗಿಸಿಕೊಂಡಾಗ ಮಾತ್ರ ಅವನಿಗೆ ಆನಂದ ಸಿಗುತ್ತೆ…. ಈ ಕಾಯಿಲೆ ಅನೇಕ ವರ್ಷಗಳಿಂದಲೂ ಇದೆ. ಬಿಟ್ಹಾಕಿ ಅವನನ್ನು” ಎಂದರು. ಕುತೂಹಲದಿಂದ ಮರುಪ್ರಶ್ನೆ ಮಾಡಿದೆ “ಬೈಸಿಕೊಂಡರೆ ಆನಂದ ಸಿಗುತ್ತಾ? ಇದೊಂದು ಕಾಯಿಲೆಯೆ?”. “ಹೌದು. ಕೊಲೆಗಡುಕರು ಯಾಕೆ ಕೊಲೆ ಮಾಡುತ್ತಾರೆ ಹೇಳಿ? ಅವರಿಗೆ ಕೊಲೆ ಮಾಡಿದರೆ ಜೈಲಿಗೆ ಹೋಗುತ್ತೇನೆ ಎಂದು ತಿಳಿಯದಾ? ಹ್ಯಾಬಿಚುಯಲ್ ರೇಪಿಸ್ಟ್ ಪದೆ ಪದೆ ಅದೆ ಕೆಲಸ ಮಾಡುತ್ತಾನೆ ಏಕ್ಹೇಳಿ?” ಎಂದರು. ಮುಂದುವರಿಯುತ್ತ ‘ಕಳ್ಳರಕಳ್ಳ ಚಾರ್ಲ್ಸ್ ಶೋಭರಾಜ್ ಗೊತ್ತಿದ್ದು ಗೊತ್ತಿದ್ದು ಮತ್ತೆ ಮತ್ತೆ ಕಳ್ಳತನ ಮಾಡುತ್ತಿರಲಿಲ್ಲವೆ?” ಇಂತಹದೆ ರೋಗ ವಿಷ ಭಟ್ಟನಿಗೂ ಅಂಟಿಕೊಂಡಿದೆ” ಎಂದು ಮಾತು ಬದಲಿಸಿದರು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಭಟ್ಟರ ವಿಷದ ಬಾಣಗಳು ನನ್ನನ್ನು ಪದೆ ಪದೆ ಚುಚ್ಚುತ್ತಿದ್ದವು, ಘಾಸಿಗೊಳಿಸುತ್ತಿದ್ದವು. ಒಬ್ಬ ಪತ್ರಿಕೆಯ ಸಂಪಾದಕನ ನುಡಿಮುತ್ತುಗಳಿವು. ಇವುಗಳನ್ನು ಬಳಸಿರುವುದು ಜಂಗಮರಿಗೆ, ಹಿರಿಯ ನಾಗರಿಕರಿಗೆ, ಅನೇಕ ಗ್ರಂಥ ರಚಿಸಿದ ಪ್ರಾಜ್ಞರಿಗೆ, ಪೂಜ್ಯರಾದ ಸಾಣೇಹಳ್ಳಿ ಶ್ರೀಗಳಿಗೆ. ಅವುಗಳಲ್ಲಿ ಕೆಲವೊಂದು ಇಲ್ಲಿವೆ. ‘ಅಸಂಬದ್ಧ’, ‘ತೋಳಸಂಬಟ್ಟೆ’, ‘ಅಪಹಾಸ್ಯ’, ‘ಅರೆಬೆಂದ’, ‘ಬುದ್ಧಿಮಟ್ಟದ’, ‘ಅರಳು ಮರಳು’, ‘ಉದ್ಧಟತನ’, ‘ಬಾಲಿಶ’, ‘ಬೇಜವಾಬ್ದಾರಿ’, ‘ಎಡಬಿಡಂಗಿ’, ‘ಉಪದ್ವಾಪಿತನ’, ‘ಸಮಾಜಘಾತಕ’, ‘ಉಸಾಬರಿ, ‘ತಿರಸಟ್ಟು’, ‘ಅವಿವೇಕ’, ‘ಅಪಕ್ವ’ ಮೇಲಾಗಿ ‘ನಕ್ಸಲ್ವಾದಿ’ ಎಂಬಂತಹ ಕೀಳು ಶಬ್ದಗಳನ್ನು ಬಳಕೆ ಮಾಡಿ ಪ್ರಾಜ್ಞರ ತೇಜೋವಧೆ ಮಾಡಿದ್ದಾನೆ. ಇಂತಹ ಶಬ್ದಗಳನ್ನು ಪ್ರಾಜ್ಞರಾದ ಕನ್ನಡಿಗರು ಅರಗಿಸಿಕೊಳ್ಳಬಲ್ಲರೆ?
ನಾನೊಬ್ಬ ಸಾಮಾನ್ಯನಾಗಿ ಇಂತಹ ಕನಿಷ್ಠ ಮಾತುಗಳನ್ನು ಆ ವಿಷಭಟ್ಟರಿಗೆ ಬಳಸಲಾರೆ. ಕಾರಣ ಲಿಂಗಾಯತರು ಸುಸಂಸ್ಕೃತರು. ಹೀನ ಚಾಳಿಯ ಜನರು ಬಳಸುವ ಪದವು ನಮಗೆ ಬರದು. ಇವರಿಗೆ ಏಕವಚನದಲ್ಲಿ ಬರೆಯಲು ಸಹ ನನಗೆ ಮುಜಗುರವಾಗುತ್ತಿದೆ. ಆದರೂ ಪ್ರಜ್ಞಾಪೂರ್ವಕವಾಗಿ ಇವರನ್ನು ನಾನು ‘ಇವನೇ’ ಎಂದು
ಸಂಬೋಧಿಸಬಯಸುತ್ತೇನೆ. ಆದರೆ ನನ್ನ ಹಿರಿತನ ನನಗೆ ಅಡ್ಡಬರುತ್ತಿದೆ.
‘ಗಣೇಶನ ಪೂಜೆ ಬೇಡ’ ಎಂಬ ಸ್ವಾಮೀಜಿಗಳ ಹೇಳಿಕೆಯಿಂದ ಬಹುಜನರ ನಂಬಿಕೆಗೆ ಧಕ್ಕೆಯಾಗುತ್ತದೆ ಎಂದು ಅವನು ಬರೆಯುತ್ತಾನೆ. ನಿಮಗೆ ಶತಶತಮಾನಗಳಿಂದ ಆಚರಿಸುತ್ತ ಬಂದಿರುವ ಆಚರಣೆ ಮತ್ತು ನಂಬಿಕೆಗಳಿಗೆ ಸ್ವಾಮೀಜಿಯವರ ಹೇಳಿಕೆಯಿಂದ ಧಕ್ಕೆಯಾದರೆ, ಅತ್ತ “ಒಬ್ಬನೆ ದೇವರು” ಎನ್ನುವ ಸಿದ್ಧಾಂತದ ಭಕ್ತರಿಗೆ ಧಕ್ಕೆ ಬರದೆ?
ಬಹುಸಂಖ್ಯಾತ ಲಿಂಗಾಯತರು ಗಣೇಶನ ಪೂಜಿಸುವ ಬಗ್ಗೆ ಬರೆದಿದ್ದಾನೆ. ಹೌದು. ಕೆಲ ಲಿಂಗಾಯತರು ಗಣೇಶನನ್ನು ಪೂಜಿಸುತ್ತಾರೆ. ಬಹುತ್ವ ಭಾರತದ ಬಾಹ್ಯಧರ್ಮ ಸಂಸ್ಕ್ರತಿ ನಮ್ಮ ಅರಿವಿಗೆ ಬಾರದೆ ಅನೇಕ ಬಾರಿ ನಮ್ಮನ್ನು ಆವರಿಸಿಕೊಂಡುಬಿಡುತ್ತದೆ. ಭಾರತೀಯ ಮುಸ್ಲಿಂನೂ ಹಿಂದೂ ದೇವಸ್ಥಾನಗಳಿಗೂ ಹೋಗುತ್ತಾನೆ. ಭಾರತೀಯ ಹಿಂದೂ, ಕ್ರೈಸ್ತ ದೇವಾಲಯಗಳಿಗೂ ಹೋಗುತ್ತಾನೆ. ಲಿಂಗಾಯತನೂ ಇದಕ್ಕೆ ಹೊರತಲ್ಲ. ಭಾರತ ಒಂದು ‘ಧರ್ಮನಿರಪೇಕ್ಷ’ ದೇಶವೆಂದು ನಮ್ಮ ಸಂವಿಧಾನ ಹೇಳುತ್ತದೆ. ಧರ್ಮನಿರಪೇಕ್ಷತೆಯನ್ನು ಜಸ್ಟೀಸ್ ನಾಗಮೋಹನದಾಸ ವಿವರಿಸುತ್ತ “ಧರ್ಮವನ್ನು ರಾಜಕಾರಣದಿಂದ ಬೇರ್ಪಡಿಸುವುದು. ಸರಕಾರಕ್ಕೆ ತನ್ನದೆ ಆದ ಧರ್ಮವಿರಕೂಡದು. ಸರಕಾರ ಬೇರೆ ಬೇರೆ ಧರ್ಮಗಳ ಮಧ್ಯ ತಾರತಮ್ಯ ತೋರಬಾರದು ಮತ್ತು ಸರಕಾರದ ನೀತಿಗಳು ಯಾವುದೇ ಧರ್ಮದ ಪ್ರೇರೇಪಿತವಾಗಿರಕೂಡದು. ಇಂತಹ ರಾಜಕೀಯ ವ್ಯವಸ್ಥೆ ಧರ್ಮನಿರಪೇಕ್ಷ ವ್ಯವಸ್ಥೆ ಎಂದು ಕರೆಯಲ್ಪಡುತ್ತದೆ” ಎಂದು ದಾಖಲಿಸುತ್ತಾರೆ. ಹಾಗಿದ್ದರೆ ಇಂದಿನ ಭಾರತದ ಕೇಂದ್ರ ಸರಕಾರ ಧರ್ಮನಿರಪೇಕ್ಷ ಸರಕಾರವೆ? ‘ಧರ್ಮನಿರಪೇಕ್ಷ’ ದೇಶದ ಪ್ರಧಾನಿ ಗುಡಿಗುಂಡಾರಗಳನ್ನು ಸುತ್ತುತ್ತಲಿದ್ದರೆ ಅದು ಅನ್ನ ಧರ್ಮದವರ ಸುರಕ್ಷಿತ ಭಾವನೆಗೆ ಧಕ್ಕೆ ತರದಾ?
ಕಾನೂನಿನ ಬಗ್ಗೆ ಮಾತಾಡುವುದಾದರೆ ಸಾಣೇಹಳ್ಳಿ ಶ್ರೀಗಳು ಯಾವ ಕಾನೂನು ಮುರಿದಿದ್ದಾರೆ? ನಮ್ಮ ಸಂವಿಧಾನದದಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ‘ಮೂಲಭೂತ ಹಕ್ಕ’ನ್ನಾಗಿ ನೀಡಿದ್ದನ್ನು ಭಟ್ಟನಿಗೆ ನೆನಪಿಸಬೇಕೆ? “ತಮ್ಮ ಅತ್ಮಸಾಕ್ಷಿಯಂತೆ ಯಾವುದೇ ಧರ್ಮವನ್ನು ಅವಲಂಬಿಸಿ, ಆಚರಿಸಿ, ಪ್ರಚಾರ ಮಾಡುವ ಸ್ವಾತಂತ್ರ್ಯ” ವನ್ನು ನೀಡುತ್ತದೆ ನಮ್ಮ ಸಂವಿಧಾನ. ಸಾಣೇಹಳ್ಳಿ ಶ್ರೀಗಳು ಅವರ ಆತ್ಮಸಾಕ್ಷಿಯಂತೆ ಲಿಂಗಾಯತ ಸಿದ್ಧಾಂತವನ್ನು ಅವಲಂಬಿಸಿ, ಆಚರಿಸುತ್ತ ಪ್ರಚಾರ ಮಾಡುವ ಮೂಲಭೂತ ಹಕ್ಕನ್ನು ಅವರು ಚಲಾಯಿಸಿದ್ದಾರೆ.
ನಮ್ಮ ಸಂವಿಧಾನ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನು ಪಾಲಿಸಲು ಹೇಳುತ್ತದೆ. ಪ್ರಾಜ್ಞರಾದ ಸ್ವಾಮೀಜಿಯವರು ಕೇವಲ ಹಕ್ಕನ್ನು ಮಾತ್ರ ಚಲಾಯಿಸದೆ ಸಂವಿಧಾನ ಕೇಳಿದ ಮೂಲಭೂತ ಕರ್ತವ್ಯವನ್ನು ಪಾಲಿಸಿದ್ದಾರೆ.
೧) ಸಂವಿಧಾನದ ಐದನೆಯ ಅಂಶ “ಧರ್ಮ, ಭಾಷೆ, ಪ್ರಾದೇಶಿಕತೆ, ಜಾತಿ ಮತ್ತು ಪಂಗಡಗಳ ಎಲ್ಲೆ ಮೀರಿ ಸಮಸ್ತ ಭಾರತೀಯರಲ್ಲಿ ಸಹೋದರರ ಭಾವನೆಗಳನ್ನು ಬೆಳಸುವುದು ಹಾಗೂ ಮಹಿಳೆಯರ ಗೌರವಕ್ಕೆ ಚ್ಯುತಿ ತರುವ ಆಚರಣೆಗಳನ್ನು ತ್ಯಜಿಸುವುದು”
೨) ೬ನೆಯ ಅಂಶದಲ್ಲಿ ” ಬಹುತ್ವದ ಸಂಸ್ಕ್ರತಿಯನ್ನು ಪರಂಪರೆಯನ್ನು ಗೌರವಿಸುವುದು ಮತ್ತು ರಕ್ಷಿಸುವುದು” ಇದರೊಂದಿಗೆ ಇನ್ನೊಂದು ಮಹತ್ವದ ಕರ್ತವ್ಯವನ್ನು ಪಾಲಿಸಲು ಹೇಳುತ್ತದೆ ಅದು ಹೀಗಿದೆ,
೩) ” ವೈಜ್ಞಾನಿಕ ಮನೋಭಾವನೆ, ಮಾನವೀಯತೆ, ಜಿಜ್ಞಾಸೆಯ ಮತ್ತು ಸುಧಾರಣೆಯ ಪ್ರವೃತ್ತಿಯನ್ನು ಬೆಳಸಿಕೊಳ್ಳುವುದು ಮತ್ತು ಇತರರಲ್ಲಿ ಬೆಳೆಸುವುದು”.
ಇದನ್ನೇ ಸಾಣೆಹಳ್ಳಿ ಗುರುಗಳು ಅಕ್ಷರಃ ಪಾಲಿಸಿದ್ದು. ಮೌಢ್ಯಾಚರಣೆ ಬೇಡವೆಂದಿದ್ದು. ಜಗತ್ತನ್ನೇ ಸೃಷ್ಟಿಸಿದ ಪರಮಾತ್ಮನು ತನ್ನ ಹೆಂಡತಿಯ ಮೈ ಕೊಳೆಯಿಂದ ಮಾಡಲಾದ ಬೊಂಬೆಗೆ ಜೀವ ನೀಡಲಾರದಷ್ಟು ಅಸಮರ್ಥನೆ? ಮೌಢ್ಯದ ಪ್ರತೀಕವಾಗಿರುವ ಪುರಾಣದ ಈ ಕಥೆಯನ್ನು ಅವರು ಪಾಲಿಸಬೇಡಿ ಎಂದುದರಲ್ಲಿ ಏನು ತಪ್ಪಿದೆ?
ಸಾಣೇಹಳ್ಳಿ ಶ್ರೀಗಳು ತಮ್ಮ ಹಕ್ಕನ್ನು ಬಳಸಿಕೊಂಡು ಕರ್ತವ್ಯಗಳನ್ನು ಚಾಚು ತಪ್ಪದೆ ಪಾಲಿಸಿದ್ದಾರಲ್ಲವೆ?
ಹಾಗಿದ್ದರೆ ಈ ಭಟ್ಟನ ಪ್ರಾಬ್ಲಿಂ ಏನು? ಗಣೇಶನ ಪೂಜೆಯನ್ನು ಬೇಡವೆಂದಿದ್ದಕ್ಕೆ ಈ ಭಟ್ಟರಿಗೆ ಇಷ್ಟೊಂದು ಕೋಪ ಬಂತೆ?
ಇಲ್ಲ, ಭಟ್ಟರಿಗೆ ತಮ್ಮ ಕುಟುಂಬ ವರ್ಗದವರ (ಪುರೋಹಿತರ) ಭವಿಷ್ಯ ಕತ್ತಲಾಗುವ ಭಯ ಕಾಡಿದೆ. ಅದಕ್ಕಾಗಿ ‘ತಿಕ್ಕಲ’ ನಂತೆ ವರ್ತಿಸಿ, ಆಕಾಶಕ್ಕೆ ಉಗುಳುತ್ತಿದ್ದಾರೆ. ಕಾರಣ ಅಪ್ರಬುದ್ಧ, ಅಸಂಬದ್ಧ ಲೇಖನ ಬರೆದಿದ್ದಾರೆ. ಇಲ್ಲಿ ಭಟ್ಟರ ತಿಕ್ಕಲತನ ಮತ್ತು ತೋಳಸಂಬಟ್ಟೆ ಮಾತ್ರ ಬಹಿರಂಗವಾಗುತ್ತದೆ.
ಭಟ್ಟರೇ! ಶ್ರೀಗಳು ಲಿಂಗಾಯತ ಸಿದ್ಧಾಂತ ಸಾರುವ ಜಂಗಮರೆಂದು ನಿಮಗೆ ನೆನಪಿಸಬೇಕಾ? ಮೇಲಾಗಿ ಅವರು ವೈಜ್ಞಾನಿಕ ಯುಗದಲ್ಲಿ ಜನಿಸಿದವರು. ಶರಣರಂತೆ ಮೌಢ್ಯವನ್ನು ತೊರೆದವರು. ಮೌಡ್ಯದ ವಿರುದ್ಧವಾಗಿ ಹೋರಾಡಲು ಕಂಕಣಬದ್ಧರಾದವರು. ಲಿಂಗಾಯತಧರ್ಮದ ನಿಜಪ್ರಚಾರಕರು (ಜಂಗಮರು).
ಪುರಾಣದ ಗಣೇಶನನ್ನು ಸಾರ್ವಜನಿಕಗೊಳಿಸಿದವರು ಲೋಕಮಾನ್ಯ ಟಿಳಕರೆಂದು ಎಲ್ಲರಿಗೂ ತಿಳಿದ ವಿಷಯ. ಭಟ್ಟರಂತೆ ಟಿಳಕರೂ ವಿಪ್ರರು. “ಏನಯ್ಯಾ, ವಿಪ್ರರು ನುಡಿದಂತೆ ನಡೆಯರು, ಇದೆಂತಯ್ಯಾ? ತಮಗೊಂದು ಬಟ್ಟೆ, ಶಾಸ್ತ್ರಕ್ಕೊಂದು ಬಟ್ಟೆ!…. ಬಸವಣ್ಣನವರ ಈ ನುಡಿಯಂತೆ ವಿಪ್ರರಾದ ಟಿಳಕರು ಎರಡು ಮುಖಗಳ ಅನಾವರಣವೆ ಗಣೇಶನ ಪೂಜೆ ಎನ್ನಬಹುದು. ಗಣೇಶನ ಪೂಜೆಯನ್ನು ಸಾರ್ವತ್ರೀಕರಣಗೊಳಿಸಿದ ಗುಟ್ಟು ಪುರೋಹಿತಶಾಹಿಯ ಇನ್ನೊಂದು ಮುಖ.
ಅಂದಿನ ದಿನಗಳಲ್ಲಿ ‘ದೇವರು’ ಹಾಗೂ ‘ದೇವಸ್ಥಾನ’ ಗಳೆಂಬ ‘ಶೋಷಣೆ’ ಯ ಕೇಂದ್ರಗಳು ಬಡತನದ ಕಾರಣ ಸುಪ್ತಾವಸ್ಥೆಗೆ ಜಾರಿದ್ದವು. ‘ಪುರೋಹಿತಶಾಹಿ’ ಅರ್ಥ ಕಳೆದುಕೊಳ್ಳತೊಡಗಿತ್ತು. ಇವುಗಳಿಗೆ ಮರು ಜೀವನೀಡಿ ಪುರೋಹಿತರಿಗೆ ಜೀವನಾಧಾರ ಕಲ್ಪಿಸುವ ಒಳಉದ್ದೇಶ ಟಿಳಕರದಾಗಿತ್ತು. ತಮ್ಮ ‘ಹಿಡನ್ ಅಜೆಂಡಾ’ ಕ್ಕೆ ‘ಸಂಸ್ಕ್ರತಿ’ ಮತ್ತು ‘ದೇಶಪ್ರೇಮ’ ಎಂಬ ಭಾವನಾತ್ಮಕ ಶಬ್ದಗಳನ್ನು ಜೋಡಿಸಿದ್ದರು. ಅಂದು ನಾಟಿದ ಭಾವನಾತ್ಮಕ ಸಸಿ ಇಂದು ದೈತ್ಯಮರವಾಗಿ ಬೆಳೆದು ವಿಶ್ವದಲ್ಲೆಲ್ಲ ಚಿಗುರಿ ಮಂದಿರಗಳ ಸ್ಥಾಪನೆಗೆ ಕಾರಣವಾಗಿದೆ. ಶಿಕ್ಷಣ ನೀಡುವ ಶಾಲೆಗಳ ಬದಲಾಗಿ ಮಂದಿರಗಳು ತಲೆಎತ್ತುತ್ತಲಿವೆ. ಜೀವನ ರೂಪಿಸುವ ಶಾಲೆಗಳು ನಲುಗುತ್ತಿವೆ. ಇಂದು ಭಾರತೀಯ ತನ್ನ ೨೫% ವರಮಾನವನ್ನು ಧಾರ್ಮಿಕ ಕಾರ್ಯಗಳಿಗೆ ವಿನಿಯೋಗಿಸಿ ಮೌಢ್ಯಕ್ಕೆ ಬಲಿಯಾಗುತ್ತಿದ್ದಾನೆ.
ಲಿಂಗಾಯತ ಧರ್ಮದ ಹೋರಾಟದ ಬಗ್ಗೆ ಬರೆಯುತ್ತ “ಕಾಲಕಾಲಕ್ಕೆ ಈ ವಿಚಾರ ಪ್ರಸ್ತಾಪವಾಗಿ ಅಲ್ಲಿಯೇ ಸತ್ತು, ಮತ್ತೆ ಯಾವಾಗಲೋ ಮರುಹುಟ್ಟು ಪಡೆದು, ಪುನಃ ಸಾವಿಗೀಡಾಗುವುದು” ಎಂಬ ಅತೀ ಬೇಜವಾಬ್ದಾರಿಯುತ ಶಬ್ದಗಳನ್ನು ಬರೆಯುತ್ತ ಲಿಂಗಾಯತ ಹೋರಾಟವನ್ನು, ಲಿಂಗಾಯತ ಧರ್ಮೀಯರನ್ನು ಕೆಣಕಿ ಅವಮಾನಿಸಿದ್ದಾನೆ. ಲಿಂಗಾಯತ ಹೋರಾಟಗಾರರ ಬೆನ್ನುಮೂಳೆ ಮುರಿಯುವ ದುರಾಲೋಚನೆಗೆ ಕೈ ಹಾಕಿದ್ದಾನೆ. ಲಿಂಗಾಯತ ಸಿದ್ಧಾಂತ ಜನಮನದಲ್ಲಿ ಬೇರೂರಿದರೆ ಪುರೋಹಿಶಾಹಿಗೆ ಉಳಿಗಾಲವಿಲ್ಲ. ಮುಂದೆ ಬರಬಹುದಾದ ಕರಾಳದಿನಗಳನ್ನು ನಿವಾರಿಸುವ ನಿಟ್ಟಿನಲ್ಲಿ ಲಿಂಗಾಯತರನ್ನು ಚಿವುಟಿ ಹಾಕುವ ಕೆಲಸಕ್ಕೆ ಕೈ ಹಾಕಿದ್ದಾರೆ.
ಲಿಂಗಾಯತರಲ್ಲಿಯೇ ಒಡೆದಾಳುವ ನೀತಿಯನ್ನು ಅನುಸರಿಸಿ ‘ಅಪಕ್ವ’ ಜನರನ್ನು ಬೆಂಬಲಿಸುವ ನಾಟಕಮಾಡಿ ತನ್ನ ಬೇಳೆ ಬೇಯಿಸಿಕೊಳ್ಳುವ ಮುಂದಾಲೋಚನೆ ಈ ಪತ್ರಕರ್ತನದು.
‘ಲಿಂಗಾಯತರು ಹಿಂದೂಗಳಲ್ಲ’ ಹೌದು. ಲಿಂಗಾತರು ಹಿಂದುಗಳಲ್ಲ. ಅವರು ‘ಭೌಗೋಳಿಕವಾಗಿ ಹಿಂದುಗಳೇ’ ಆದರೆ ಸೈದ್ಧಾಂತಿಕವಾಗಿ ಅವರು ವೈದಿಕೇತರರು. ಲಿಂಗಾಯತರೂ ಶೈವರಂತೆ ಶಿವಪೂಜಕರು. ಅದರೆ ‘ಶೈವರಶಿವ’ ಹಾಗೂ ‘ಲಿಂಗಾಯತಶಿವ’ ನ ಮಧ್ಯೆ ಅಘಾದವಾದ ವ್ಯತ್ಯಾಸವಿದೆ. ‘ಲಿಂಗಾಯತರಶಿವ’ ‘ಜಗದಗಲ ಮಿಗೆಯಗಲ….. ಲಿಂಗಾಯತರ ಶಿವನಿಗೆ ಹೆಂಡಿರು ಮಕ್ಕಳಿಲ್ಲ. ಆದರೆ ವೈದಿಕರು ಒಪ್ಪುವ, ಶೈವರು ಪೂಜಿಸುವ ಶಿವನು ಸಂಸಾರಸ್ತ. ಅವನಿಗೆ ಪಾರ್ವತಿ ಎಂಬ ಹೆಂಡತಿ, ಷಣ್ಮುಖ ಮತ್ತು ಗಣೇಶರೆಂಬ ಮಕ್ಕಳ ಕುಟುಂಬವಿದೆ.
ಲಿಂಗವನ್ನು ಪೂಜಿಸುವ ಲಿಂಗಾಯತರ ‘ಲಿಂಗ’ವು ಅವರ ‘ಪ್ರಜ್ಞೆ’ ಯ ಪ್ರತೀಕ. ‘ಲಿಂಗಾಯತರದೇವ’ ಹೃದಯದಲ್ಲಿದ್ದಾನೆ, ಉಸಿರಾಡುವ ಉಸಿರಿನಲ್ಲಿದ್ದಾನೆ.
‘ನಾ ನಿನ್ನರಿಯದ ಮುನ್ನ ನೀನೇನಾಗಿದ್ದೆ’ ಎಂದು ದೇವರಿಗೆನೇ ಸೆಡ್ಡು ಹೋಡೆದ ಲಿಂಗಾಯತ ಧರ್ಮದ ಆಳ ಅಗಲ ನಿಮಗೇನು ಗೊತ್ತು ಭಟ್ಟರೆ? ಮಾಹಿತಿಯ ಕೊರೆತೆಯಿಂದ ಬಳಲುವ ಕೆಲ ‘ಅಪ್ರಬುದ್ಧ ಸ್ವಾಮೀಜಿ’ ಗಳ ಮತ್ತು ‘ಗ್ಯಾಲರಿಗಾಗಿ ಮಾತಾಡುವ’ ರಾಜಕೀಯ ನಾಯಕರುಗಳನ್ನು ನಿಮ್ಮ ಸಮರ್ಥನೆಗೆ ಬಳಸಿಕೊಳ್ಳುತ್ತೀರಿ. ನಿಮ್ಮ ಸಮರ್ಥನೆ ‘ಓತಿಕ್ಯಾತಕ್ಕೆ ಬೇಲಿ ಸಾಕ್ಷಿ’ ಎಂಬಂತಿದೆ.
‘ಬಹುಧರ್ಮ’- ‘ಬಹುಸಂಸ್ಕ್ರತಿ’ ಇರುವ ದೇಶಗಳಲ್ಲಿ ಕೊಡುಕೊಳ್ಳುವಿಕೆ ಸಾಮಾನ್ಯ. ಲಿಂಗಾಯತರು, ಜೈನರು, ಬೌದ್ಧರು, ಸಿಕ್ಕರು, ವೈದಿಕರು, ಪಾರ್ಸಿಗಳು ಕೆಲಬಾರಿ ಮಸೀದಿಗೆ ಹೋಗುತ್ತಾರೆ ಚರ್ಚ್ ಗೂ ಹೋಗುತ್ತಾರೆ. ಅಂದರೆ ಅವರು ಮುಸ್ಲಿಂ ಅಥವಾ ಕ್ರಿಶ್ಚಿಯನ್ ಧರ್ಮ ಪಾಲನೆ ಮಾಡಿದಂತೆಯಾ? “Be Roman in Rom” ಎಂಬ ಪ್ರಾಜ್ಞರ ಮಾತು ಕೇಳಿಲ್ಲವೆ? “narrow mind narrow thinking” ಇರುವ ನೀವು ಪತ್ರಕರ್ತರೆಂದು ಕರೆದುಕೊಂಡದ್ದು ಸೋಜಿಗವೆ.
ಸೌಹಾರ್ದ ಜೀವನವೇ ಗೊತ್ತಿರದ, ಧರ್ಮಗಳಲ್ಲಿ ಜಾತಿಗಳನ್ನು ಸೃಷ್ಟಿಸಿ ಅವುಗಳಲ್ಲಿ ವಿಷಬೀಜ ಬಿತ್ತುವ ನಿಮಗೆ ‘ಇಂವ ನಮ್ಮವ’ ಎಂದು ಕೂಡಿ ಬಾಳುವ ಲಿಂಗಾಯತ ಸಿದ್ಧಾಂತವು ನಿಮಗೆ ಸ್ವಾಭಾವಿಕವಾಗಿ ವಿರೋಧಿಯೆ. ಧರ್ಮದಳ್ಳುರಿಗೆ ಎಣ್ಣೆಸುರಿಯುವ ನಿಮ್ಮ ‘ಅರೆಬೆಂದ’ ‘ಬಾಲಿಶ’ ಯೋಚನೆಯ ನೀವು ‘ಕೂಡಿ ಬಾಳಿ’ ಎನ್ನುವ ಲಿಂಗಾಯತರ ಸಿದ್ಧಾಂತ ಹೇಗೆ ಅರ್ಥವಾದೀತು?
ನೀವೊಬ್ಬ ನಿಷ್ಠಾವಂತ ಪತ್ರಕರ್ತನಾಗಿದ್ದರೆ ನಾಡಿನ ಎಲ್ಲ ಧರ್ಮಗಳ ಮಠಮಾನ್ಯಗಳಲ್ಲಿ ನಡೆಯುವ ಅನೈತಿಕತೆಯನ್ನು ಜಾಹೀರಗೊಳಿಸಿ. ನೀವು ಪೂಜಿಸುವ ಅಷ್ಟಮಠಗಳಲ್ಲಿರುವ ಕರ್ಮಟತನವನ್ನು ಬಯಲುಗೊಳಿಸಿ. ಅದೇ ರೀತಿ ಲಿಂಗಾಯತ ಮಠಗಳಲ್ಲಿರುವ ಕರ್ಮಟತೆಯನ್ನೂ ಟೀಕಿಸಿ. ನಾಡಿನ ಒಂದು ಮಠದ ಪೂಜ್ಯರೊಬ್ಬರು ರೇಪಿಸ್ಟ್ ಎಂಬ ಆರೋಪಕ್ಕೆ ಒಳಗಾದಾಗ ನೀವು ತಳೆದ ಅಂದಿನ ನಿಲುವು ಏನಾಗಿತ್ತು? ಜಗತ್ತಿಗೆ ತಿಳಿಯದಾ? ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಜಗತ್ತಿಗೆ ಕಾಣಿಸದಾ?
– ಜಿ ಬಿ ಪಾಟೀಲ್, ಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ




