ಚಂದ್ರಯಾನ-೩ಕ್ಕೆ ಸಂಬಂಧಿಸಿದಂತೆ ‘ವಿಜ್ಞಾನ ಬುದ್ಧಿ’ಗೆ ವಿರುದ್ಧವಾಗಿ ಕೆಲವು ವಿಜ್ಞಾನಿಗಳು ವರ‍್ತಿಸಿದ್ದು ತಿಳಿದ ಸಂಗತಿ. ಈ ನಡವಳಿಕೆಯನ್ನು ಟೀಕಿಸಿ ಸಾಮಾಜಿಕ ಚಿಂತಕ ಮತ್ತು ಕನ್ನಡ ಅಧ್ಯಾಪಕರಾದ ಹುಲಿಕುಂಟೆಮರ‍್ತಿಯವರು ಮಾಡಿದ ಕಾಮಿಂಟನ್ನು ದೊಡ್ಡ ಅಪರಾಧದಂತೆ ಬಿಂಬಿಸಿ ಅವರ ವಿರುದ್ಧ ಕ್ರಮಕೈಗೊಳ್ಳಲು ಸರ್ಕಾರಕ್ಕೆ ಪತ್ರಬರೆಯಲಾಗಿದೆ. ಹೀಗೆ ಪತ್ರ ಬರೆದವರಿಗೆ ಕನ್ನಡ ಅಧ್ಯಾಪಕರ ಹೊಣೆಯ ಬಗೆಗೇ ತಿಳುವಳಿಕೆ ಇಲ್ಲ ಎನ್ನಿಸುತ್ತದೆ. ಯಾಕೆಂದರೆ ಕನ್ನಡ ಪಠ್ಯಪುಸ್ತಕಗಳೇ ವೈಚಾರಿಕತೆಯನ್ನು ಆದರಿಸಿರುತ್ತವೆ. ಅಲ್ಲಿರುವ ವಿಚಾರಗಳನ್ನು ವಿದ್ಯರ‍್ತಿಗಳಿಗೆ ವಿವರಿಸಿ ಪಾಟ ಹೇಳಬೇಕಿರುತ್ತದೆ. ಹಾಗೆ ಪಾಟ ಹೇಳುವ ಹೊತ್ತಿನಲ್ಲಿ ರ‍್ತಮಾನದಲ್ಲಿ ಆಚರಿಸಲಾಗುವ ಮೌಡ್ಯಾಚರಣೆಗಳನ್ನು ಉದಾಹರಿಸಿ ಪಾಟ ಮಾಡಬೇಕಿರುತ್ತದೆ. ಹಾಗೆ ಪಾಟ ಮಾಡಿದಾಗಲೇ ವಿದ್ಯರ‍್ತಿಗಳನ್ನು ರ‍್ತಮಾನದ ಜೊತೆಗೆ ಕನೆಕ್ಟ್ ಮಾಡಲು ಸಾದ್ಯ. ಅವರಲ್ಲಿ ವೈಚಾರಿಕ ಮನೋಬಾವನೆಯನ್ನು ಬೆಳೆಸಲು ಸಾದ್ಯ. ಆ ಮೂಲಕ ವಿದ್ಯರ‍್ತಿಗಳನ್ನು ರ‍್ತಮಾನದ ಜೊತೆಗೆ ಬೆಸೆಯಲು ಸಾದ್ಯ. ಅದಿಲ್ಲದೆ ಹೋದರೆ ವಿದ್ಯರ‍್ತಿಗಳು ಪಾಟದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಅವರು ಅಪ್ಡೇಟ್ ಕೂಡ ಆಗುವುದಿಲ್ಲ. ಈ ಕೆಲಸವನ್ನು ಹೊಣೆಯುಳ್ಳ ಕ್ರಿಯಾಶೀಲ ಯಾವುದೇ ಅದ್ಯಾಪಕ ಮಾಡಬೇಕಿರುವ ಕೆಲಸ. ಇದು ನಿತ್ಯದ ಕೆಲಸ ಕೂಡ. ವೈಚಾರಿಕತೆಯ ಬೋದನೆಯೇ ಕನ್ನಡ ಅದ್ಯಾಪಕರ ಕೆಲಸ. ಇದು ನಿತ್ಯ ತರಗತಿಗಳಲ್ಲಿ ನಡೆಯುತ್ತಲೇ ಇರುತ್ತದೆ.
ಹೀಗೆ ಕೆಲಸ ಮಾಡುವುದನ್ನೇ ಅಪರಾದ ಎನ್ನಲು ಸಾದ್ಯವೇ? ತರಗತಿಯಲ್ಲಿ ಪಾಟ ಹೇಳುವ ಮಾದರಿಯಲ್ಲಿಯೇ ಸಾಮಾಜಿಕವಾಗಿ ನಡೆಯುವ ಮೌಡ್ಯಗಳನ್ನು ವಿಮರ್ಶೆ ಮಾಡುವ ಕೆಲಸ ಅದ್ಯಾಪಕರದಾಗಿರುತ್ತದೆ. ಇದು ಹೊಣೆಗಾರಿಕೆಯೂ ಆಗಿರುತ್ತದೆ. ಹಾಗೆ ಮಾಡದೆ ತರಗತಿಗಳಿಗೆ ಮಾತ್ರ ಸೀಮಿತವಾಗಿ ಗೊಡ್ಡು ವಿಚಾರಗಳನ್ನು ಬೋದಿಸುವುದು ಸಮಾಜ ವಿರೋದಿ ಮತ್ತು ವಿಚಾರ ವಿರೋದಿ ಕೆಲಸ ಆಗಿರುತ್ತದೆ.
ಚಂದ್ರಯಾನದ ದಿನವೇ ತರಗತಿಯಲ್ಲಿ ಕುವೆಂಪು ಅವರ ‘ವಿಚಾರಕ್ರಾಂತಿಗೆ ಆಹ್ವಾನ’ ಲೇಕನವನ್ನು ಕುರಿತು ಪಾಟ ಮಾಡಬೇಕಿತ್ತು. ಅಂದಿನ ಪತ್ರಿಕೆಗಳಲ್ಲಿ ವರದಿಯಾಗಿದ್ದ ವಿಜ್ಞಾನಿಗಳ ವೈಜ್ಞಾನಿಕ ದೃಶ್ಟಿಕೋನ ವಿರೋದಿ ನಡವಳಿಕೆ ಕುರಿತು ವಿದ್ಯರ‍್ತಿಗಳಿಗೆ ಉದಾಹರಣೆ ಸಮೇತ ಪಾಟ ಹೇಳಿದ್ದೆ. ಎಚ್. ನರಸಿಂಹಯ್ಯ ಸಾಯಿಬಾಬ ಅವರಿಗೆ ಎಸೆದಿದ್ದ ಸವಾಲನ್ನು ಪ್ರಸ್ತಾಪಿಸಿದ್ದೆ. ಆ ಮೂಲಕ ವಿಜ್ಞಾನ, ವೈಜ್ಞಾನಿಕ ದೃಶ್ಟಿಕೋನಗಳ ಮಹತ್ವ ಕುರಿತು ಚರ್ಚಿಸಿದ್ದೆ. ನಮ್ಮ ವಿಶ್ವವಿದ್ಯಾಲಯದ ಒಂದು ಪಟ್ಯಪುಸ್ತಕದ ಹೆಸರೇ ‘ಸಂಶೋಧನೆ ಮತ್ತು ವೈಚಾರಿಕ ಸಾಹಿತ್ಯ ‘
ಈ ಪಟ್ಯವನ್ನು ಒಂದಿಡೀ ಸೆಮೆಸ್ಟರ್ ನಲ್ಲಿ ಕಲಿಸಬೇಕಿದೆ. ಕನ್ನಡ ಸಾಹಿತ್ಯ ಪರಂಪರೆ ಹೇಗೆ ವೈಚಾರಕ ದೃಶ್ಟಿಕೋನವನ್ನು ಕಾಲದಿಂದ ಕಾಲಕ್ಕೆ ಬೆಳೆಸಿಕೊಂಡು ಬಂದಿದೆ ಎಂಬುದನ್ನು ಪಾಟ ಹೇಳಬೇಕಿದೆ. ಇದು ಕನ್ನಡ ಅದ್ಯಾಪಕರಾದ ನಮ್ಮ ನಿತ್ಯದ ಕೆಲಸ. ಈ ಕೆಲಸವನ್ನು ತರಗತಿಯ ಗೋಡೆಗಳ ಆಚೆಗೂ ನರ‍್ವಹಿಸುವಂತೆ ಸಾಹಿತ್ಯದ ಓದು ನಮ್ಮನ್ನು ಪ್ರೇರೇಪಿಸುತ್ತದೆ. ಹಾಗಾದರೆ ಇಡೀ ಕನ್ನಡ ಸಾಹಿತ್ಯಕ್ಕೆ ಬೆಂಕಿಕೊಡಲಾಗುವುದೇ? ವೈಚಾರಿಕ ಚಿಂತನೆಗಳ ಪ್ರೇರೇಪಣೆಯಿಂದ ವಿಜ್ಞಾನಿಗಳ ವಿಜ್ಞಾನ ವಿರೋದಿ ದೃಶ್ಟಿಕೋನವನ್ನು ಟೀಕಿಸಲಾಗಿದ್ದೇ ಹೊರತು ದೇಶದ ವಿಜ್ಞಾನಿಗಳ, ವಿಜ್ಞಾನದ ಸಾದನೆಯನ್ನು ವಿರೋದಿಸುವುದಿಲ್ಲ. ಮತ್ತು ದೇಶ ವಿರೋದಿ ಕೆಲಸವನ್ನು ಮಾಡುವುದಿಲ್ಲ. ಹುಲಿಕುಂಟೆ ಮರ‍್ತಿ ಅದ್ಯಾಪಕರಾಗಿ ತಮ್ಮ ಹೊಣೆಗಾರಿಕೆಯನ್ನು ನರ‍್ವಹಿಸಿದ್ದಾರೆ. ಅವರ ವಿರುದ್ದ ಶಿಸ್ತುಕ್ರಮ ಕೈಗೊಳ್ಳುವಂತಹದೇನಿದೆ?
– ರಂಗನಾಥ ಕಂಟನಕುಂಟೆ, ಅಧ್ಯಾಪಕರು




