ಮಾಜಿ ಸಚಿವರೂ, ಹಾಲಿ ಶಾಸಕರೂ ಆಗಿರುವ ಎಸ್.ಸುರೇಶ್ ಕುಮಾರ್ ಅವರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ, ಕನಸವಾಡಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಿರುವ ಪ್ರಗತಿಪರ ಚಿಂತಕ ಹುಲಿಕುಂಟೆ ಮೂರ್ತಿಯವರ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ. ಹುಲಿಕುಂಟೆ ಮೂರ್ತಿ ತಮ್ಮ ಫೇಸ್ಬುಕ್ನಲ್ಲಿ “ಚಂದ್ರಯಾನ ಈ ಸಲ ತಿರುಪತಿ ನಾಮವೇ ಗತಿ ಅನ್ಸುತ್ತೆ” ಎಂದು ಬರೆದುಕೊಂಡಿರುವುದನ್ನು ನೆಪ ಮಾಡಿಕೊಂಡು ಸುರೇಶ್ ಕುಮಾರ್ ಅವರು, ಹುಲಿಕುಂಟೆ ಮೂರ್ತಿ ವಿರುದ್ಧ ಕ್ರಮ ಜರುಗಿಸುವಂತೆ ಶಿಕ್ಷಣ ಸಚಿವರಿಗೆ ಪತ್ರ ಬರೆಯುವುದರ ಮೂಲಕ, ಶಿಕ್ಷಕರ ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉದ್ದೇಶಪೂರ್ವಕವಾಗಿ ಹರಣ ಮಾಡಲು ಮುಂದಾಗಿದ್ದಾರೆ.
ವೈಜ್ಞಾನಿಕ ಮನೋಧರ್ಮ ಮತ್ತು ವೈಚಾರಿಕ ಚಿಂತನೆ ಅಳವಡಿಸಿಕೊಂಡಿರುವ ಯಾರೇ ಆಗಲಿ, ಚಂದ್ರಯಾನ 3 ಉಡಾವಣೆಗೂ ಮೊದಲು ವಿಜ್ಞಾನಿಗಳು ತಿರುಪತಿಗೆ ಹೋಗಿ ಪೂಜೆ ಸಲ್ಲಿಸಿರುವುದನ್ನು ಒಪ್ಪಲಾರರು. ಎಲ್ಲರಂತೆಯೇ ಜಾತ್ಯತೀತ ದೇಶದ ಪ್ರಜೆಗಳಾದ ವಿಜ್ಞಾನಿಗಳು ತಮ್ಮ ಧಾರ್ಮಿಕ ನಂಬಿಕೆಗಳನ್ನು ವ್ಯಕ್ತಿನೆಲೆಯಲ್ಲಿ ಆಚರಿಸಲು ಸ್ವತಂತ್ರರಾಗಿರುವರೇ ಹೊರತು ಸಾರ್ವಜನಿಕರೆಲ್ಲರ ತೆರಿಗೆಯ ದುಡ್ಡಿನಿಂದ ನಡೆಯುವ ಇಸ್ರೋದಂತಹ ಸಂಸ್ಥೆಯ ಚಟುವಟಿಕೆಗಳನ್ನು ಧಾರ್ಮಿಕ ನಂಬಿಕೆಯ ಏಕಾಧಿಪತ್ಯದ ಆಚರಣೆಗಳಿಗೆ ಒಳಪಡಿಸಬಾರದು. ಇದನ್ನು ಹುಲಿಕುಂಟೆ ಮೂರ್ತಿ ಸಹಜವಾಗಿಯೇ ಪ್ರಶ್ನಿಸಿದ್ದಾರೆ. “ಚಂದ್ರಯಾನ 3 ಈ ಸಲ ತಿರುಪತಿ ನಾಮವೇ ಗತಿ ಅನ್ಸುತ್ತೆ’ ಎಂಬ ವಾಕ್ಯದಲ್ಲಿ, ಭಾರತೀಯರ ಹೆಮ್ಮೆಯ ಚಂದ್ರಯಾನವನ್ನಾಗಲೀ ಅಥವಾ ವಿಜ್ಞಾನಿಗಳನ್ನಾಗಲೀ ಅವಮಾನಿಸುವ ಯಾವುದೇ ಅಂಶ ನನಗೆ ಕಾಣಿಸುತ್ತಿಲ್ಲ. ಬದಲಾಗಿ ಸಂವಿಧಾನದ ಶ್ರೇಷ್ಠ ಆಶಯಗಳಾದ ವೈಜ್ಞಾನಿಕ ಮನೋಧರ್ಮ ಮತ್ತು ಜಾತ್ಯತೀತತೆಯನ್ನು ಅಳವಡಿಸಿಕೊಳ್ಳದಿರುವ ವಿಜ್ಞಾನಿಗಳ ಅವೈಜ್ಞಾನಿಕ ನಡೆಗೆ ಈ ವಾಕ್ಯ ಕನ್ನಡಿ ಹಿಡಿಯುತ್ತದೆ.
ಹುಲಿಕುಂಟೆ ಮೂರ್ತಿಯವರಂತಹ ವಿಚಾರಮತಿತ್ವ ಮತ್ತು ಬೌದ್ಧಿಕತೆಯುಳ್ಳ ಅಧ್ಯಾಪಕರೇ ನಮ್ಮ ಶಿಕ್ಷಣ ಕ್ಷೇತ್ರದ ದೊಡ್ಡ ಆಸ್ತಿ. ಇಂತಹ ಅಧ್ಯಾಪಕರು ಸಿಗುವುದು ಬಲು ಅಪರೂಪವಾಗಿರುವಾಗ, ‘ಭಜ ಗೋವಿಂದಂ ಭಜ ಗೋವಿಂದಂ ಗೋವಿಂದಂ ಭಜ ಮೂಢಮತೇ’ ಎಂದು ಧಾರ್ಮಿಕ ಭಜನೆ ಮಾಡುವ ಮೂಢಮತಿ ಅಧ್ಯಾಪಕರನ್ನು ಸುರೇಶ್ ಕುಮಾರ್ ಮೆಚ್ಚಬಹುದೇನೋ ಅನ್ನಿಸ್ತಿದೆ. ಪ್ರಗತಿಪರ ಕಾಳಜಿಗಳಿಗಾಗಿ ಸದಾ ತುಡಿಯುವ ಹುಲಿಕುಂಟೆ ಮೂರ್ತಿಯಂತಹ ಪ್ರಜ್ಞಾವಂತ ಶಿಕ್ಷಕರಿಂದ ಮಾತ್ರ ಪ್ರಜ್ಞಾವಂತ ವಿದ್ಯಾರ್ಥಿಗಳು ರೂಪುಗೊಳ್ಳಲು ಸಾಧ್ಯ. ವೈಜ್ಞಾನಿಕ ಮನೋಧರ್ಮ ಮತ್ತು ವೈಚಾರಿಕ ಚಿಂತನೆ ಅಳವಡಿಸಿಕೊಂಡಿರುವ ಶಿಕ್ಷಕರು ವಿಜ್ಞಾನದ ಬೆಳಕಿನಲ್ಲಿ ವಿದ್ಯಾರ್ಥಿಗಳನ್ನು ಮುನ್ನಡೆಸಬಲ್ಲರು. ವಿಜ್ಞಾನವೇ ಬೇರೆ ವೈಜ್ಞಾನಿಕ ಮನೋಧರ್ಮವೇ ಬೇರೆ. ಚಂದ್ರಯಾನ 3 ಉಡ್ಡಯನದ ಮೊದಲು ತಿರುಪತಿ ತಿಮ್ಮಪ್ಪನಿಗೆ ಪೂಜೆ ಸಲ್ಲಿಸಿರುವವರು ವಿಜ್ಞಾನಿಗಳೇ ಹೊರತು ವೈಜ್ಞಾನಿಕ ಮನೋಧರ್ಮದವರಲ್ಲ. ಹುಲಿಕುಂಟೆ ಮೂರ್ತಿಯವರ ಫೇಸ್ಬುಕ್ ಬರೆಹದ ಆಶಯವೂ ಇದೇ ಆಗಿರುತ್ತದೆ.
ಶಿಕ್ಷಕರಾದವರು ವೈಜ್ಞಾನಿಕ ಆಲೋಚನೆಗಳನ್ನು ಒಂದು ಚಿಂತನಾ ಕ್ರಮವನ್ನಾಗಿಯೇ ರೂಢಿಸಿಕೊಳ್ಳುವುದು ಅತ್ಯಗತ್ಯವಾಗಿ ಬೇಕಿದೆ. ಕುವೆಂಪು ವಿಚಾರ ಕ್ರಾಂತಿಗೆ ಕೊಟ್ಟಿರುವ ಕರೆಯ ಸಾಕಾರ ಸುಮ್ಮನೇ ದುತ್ತನೆ ಸಂಭವಿಸಿಬಿಡುವುದಿಲ್ಲ. ಶಿಕ್ಷಕರಾದವರು ಸರಿಯಾದ ವೈಜ್ಞಾನಿಕ ಚಿಂತನೆಗಳನ್ನು ಮಕ್ಕಳಿಗೆ ಬೋಧಿಸಬೇಕು. ಆದಾಗ್ಯೂ ನನ್ನಂತಹ ಮತ್ತು ಹುಲಿಕುಂಟೆ ಮೂರ್ತಿಯಂತಹ ಕವಿ ಸಾಹಿತಿಯಾದವರಿಗೆ ಮೌನ ಪ್ರೇಕ್ಷಕರಂತೆ ತುಟಿ ಹೊಲಿದುಕೊಂಡು ಕುಳಿತುಕೊಳ್ಳಲಾಗುವುದಿಲ್ಲ. ಬುದ್ಧ ಬಸವಣ್ಣ ಅಂಬೇಡ್ಕರ್ ಕುವೆಂಪು ಮುಂತಾದ ದಾರ್ಶನಿಕರ ಬೆಳಕಿನ ದಾರಿಯಲ್ಲಿ ವಿದ್ಯಾರ್ಥಿಗಳನ್ನು ಮತ್ತು ಒಟ್ಟಾರೆ ಸಮಾಜವನ್ನು ಜಾಗೃತವಾಗಿ ಮುನ್ನಡೆಸುವುದು ನಮ್ಮ ಪವಿತ್ರವಾದ ಕರ್ತವ್ಯವೆಂದೇ ತಿಳಿದಿದ್ದೇವೆ.
– ಡಾ.ವಡ್ಡಗೆರೆ ನಾಗರಾಜಯ್ಯ, ಹಿರಿಯ ಸಾಹಿತಿ




