ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ನೀಡುವ ಗುರಿಯ ಬಜೆಟ್: ಸತೀಶ್ ಜಾರಕಿಹೊಳಿ

2 years ago

ಬೆಂಗಳೂರು: ಭಾರತದ ಇತಿಹಾಸದಲ್ಲೇ ದಾಖಲೆಯ 15ನೇ ಬಜೆಟ್ ಮಂಡಿಸಿರುವ ಸನ್ಮಾನ್ಯ ಸಿಎಂ ಸಿದ್ದರಾಮಯ್ಯ ಅವರು, ಜನಪರ 5 ಗ್ಯಾರಂಟಿ ಯೋಜನೆಗಳಿಗೆ ಹಣವನ್ನು ಹೊಂದಿಸುವುದರ ಜೊತೆಗೆ, ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ನೀಡುವ ಗುರಿಯನ್ನು ಹೊಂದಿರುವ ಹೊಸ ಯೋಜನೆಗಳನ್ನು ನೀಡಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಇಂದಿನ ಬಜೆಟ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಶಿಕ್ಷಣ ಕ್ಷೇತ್ರಕ್ಕೆ ಹಿಂದಿನ ಅವಧಿಗಿಂತ ದುಪ್ಪಟ್ಟು ಹಣ ನೀಡಿರುವ ಕ್ರಮ ಅಭೂತಪೂರ್ವ ನಿರ್ಧಾರವಾಗಿದೆ. ಸಮಾಜ ಕಲ್ಯಾಣ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಮೀಸಲಿಟ್ಟಿರುವುದು ಅಭಿನಂದನಾರ್ಹ ಎಂದಿದ್ದಾರೆ.

ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ, ಬಸವಣ್ಣ ಜನಿಸಿದ ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮತ್ತು ವಚನ ಪ್ರಚಾರ ಕಾರ್ಯ ಸರ್ಕಾರದ ಬಸವಣ್ಣನ ವಿಚಾರಗಳೆಡೆಗೆ ಇರುವ ಬದ್ಧತೆಯನ್ನು ಪ್ರದರ್ಶಿಸಿದೆ. ಜೊತೆಗೆ ಇ-ಆಡಳಿತ, ಆಡಳಿತ ಸುಧಾರಣೆ, ವೇತನ ಪರಿಷ್ಕರಣೆ, ಕಲೆ, ಸಾಹಿತ್ಯ, ಸಂಸ್ಕೃತಿ, ಕ್ರೀಡಾ ಕ್ಷೇತ್ರಗಳ ಹೆಚ್ಚಿನ ಉತ್ತೇಜನಕ್ಕೆ ನೀಡಲಾಗಿದೆ ಎಂದಿದ್ದಾರೆ.

ನಾರಾಯಣ ಗುರು, ಪೆರಿಯಾರ್ ರಾಮಸ್ವಾಮಿ, ರಾಮಮನೋಹರ ಲೋಹಿಯಾ, ಬಾಬು ಜಗಜೀವನ್ ರಾಮ್ ಅವರ ಕೃತಿಗಳ ಕನ್ನಡ ಅನುವಾದಗಳನ್ನು ಮಾಡಲು ಉದ್ದೇಶಿಸಿರುವುದು ಕನ್ನಡಿಗರನ್ನು ಸೈದ್ಧಾಂತಿಕವಾಗಿ ಗಟ್ಟಿಗೊಳಿಸುವ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ.

ನಾಮಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಬಳಕೆಯನ್ನು ಕಡ್ಡಾಯಗೊಳಿಸಲು ಸರ್ಕಾರ ಮುಂದಾಗಿದ್ದು, ಬಜೆಟ್ ನಲ್ಲಿ ಇದನ್ನು ಉಲ್ಲೇಖಿಸಿ, ಅಗತ್ಯ ಕ್ರಮಕೈಗೊಂಡಿರುವುದು ಕನ್ನಡದ ಅಭಿವೃದ್ಧಿಯೆಡೆಗೆ ಕಾಂಗ್ರೆಸ್ ಸರ್ಕಾರದ ಬದ್ಧತೆಯ ಪ್ರತೀಕವಾಗಿದೆ ಎಂದಿದ್ದಾರೆ.

ಗ್ರಾಮೀಣ ಪತ್ರಕರ್ತರಿಗೆ ಉಚಿತ ಪಾಸ್ ಸೇರಿದಂತೆ ವಿವಿಧ ಯೋಜನೆಗಳನ್ನು ನೀಡುವ ಮೂಲಕ ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ಸರ್ಕಾರ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ವಿಶೇಷವಾಗಿ ಬೆಳಗಾವಿ ನಗರಕ್ಕೆ 450 ಕೋಟಿ ವೆಚ್ಚದ 4.5 ಕಿ.ಮೀ. ಉದ್ದದ ಮೇಲ್ಸೇತುವೆ, ಜವಳಿ ಪಾರ್ಕ್ ಸೇರಿದಂತೆ ವಿವಿಧ ಯೋಜನೆಗಳನ್ನು ನೀಡಿರುವ ಸನ್ಮಾನ್ಯ ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನೆಗಳು ಎಂದಿದ್ದಾರೆ.

Leave a Reply