ಬಳ್ಳಾರಿ: ಬಳ್ಳಾರಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಗೆ ಮುನ್ನವೇ ಸಚಿವ ಕೃಷ್ಣ ಬೈರೇಗೌಡ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿದರು.
ಆದರೆ, ಸಚಿವರು ಕಚೇರಿಗೆ ಆಗಮಿಸುವ ವಿಚಾರ ತಿಳಿಯದ ಅಧಿಕಾರಿಗಳು ಎಂದಿನಂತೆ 10.45 ಆದರೂ ಕಚೇರಿಗೆ ಹಾಜರಾಗಿರಲಿಲ್ಲ. ಸ್ವತಃ ತಹಶೀಲ್ದಾರ್ ಸಹ ಕಚೇರಿಗೆ ಆಗಮಿಸಿರಲಿಲ್ಲ. ಹೀಗಾಗಿ ಸಚಿವ ಕೃಷ್ಣ ಬೈರೇಗೌಡ ಅವರು ಹಾಜರಾತಿ ಪುಸ್ತಕ ಪರಿಶೀಲಿಸಿ ಎಲ್ಲಾ ಅಧಿಕಾರಿಗಳನ್ನೂ ತರಾಟೆಗೆ ತೆಗೆದುಕೊಂಡರು.
ಈ ವೇಳೆ ದಡಬಡಿಸಿ ಕಚೇರಿಗೆ ದೌಡಾಯಿಸಿದ ತಹಶೀಲ್ದಾರರನ್ನೂ ಸಹ ಸಚಿವರು ತರಾಟೆಗೆ ತೆಗೆದುಕೊಂಡರು. ಒಂದು ಸರ್ಕಾರಿ ಕಚೇರಿಯನ್ನು ನಡೆಸುವುದು ಹೀಗಾ? ಬಡವರ ಕೆಲಸ ಅಂದ್ರೆ ಏಕಿಷ್ಟು ತಾತ್ಸಾರ? ಎಂದು ಕಿಡಿಕಾರಿದರು.
ಸಭೆಯಲ್ಲಿ ಕಂಪ್ಲಿ ಶಾಸಕ ಗಣೇಶ್, ಕಂದಾಯ ಆಯುಕ್ತ ಸುನೀಲ್ ಕುಮಾರ್, ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಉಪಸ್ಥಿತರಿದ್ದರು.




