ದಾವಣಗೆರೆ: ನಗರದ ವರ್ತುಲ ರಸ್ತೆಯಲ್ಲಿರುವ ಬಿಸಿಎಂ ಇಲಾಖೆ ಸರ್ಕಾರಿ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಕ್ಕೆ ಮಂಗಳವಾರ ಅನಿರೀಕ್ಷಿತ ಭೇಟಿ ನೀಡಿದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮಾ.ಕರೆಣ್ಣನವರ ಹಾಸ್ಟೆಲ್ ಸ್ವಚ್ಚತೆ ಕಾಪಾಡಿಕೊಂಡು ವಿದ್ಯಾರ್ಥಿಗಳ ಕುಂದುಕೊರತೆಗಳ ನಿವಾರಣೆ ಮಾಡುವಂತೆ ಸೂಚನೆ ನೀಡಿದರು.
ಈ ವೇಳೆ ವಿದ್ಯಾರ್ಥಿಗಳು ಮಾತನಾಡಿ, ಊಟದಲ್ಲಿ ಕಲ್ಲು ಬರುತ್ತವೆ, ರುಚಿ ಇರುವುದಿಲ್ಲ, ತರಕಾರಿ ಸರಿಯಾಗಿ ಹಾಕುವುದಿಲ್ಲ, ವಾರದಲ್ಲಿ ನಾಲ್ಕು ಬಾರಿ ಪಲಾವ್ನ್ನು ಮಾಡಿ ಅದನ್ನೆ ಬೇರೆ ಹೆಸರು ಹೇಳಿ ಕೊಡುತ್ತಾರೆ. ದಿನನಿತ್ಯ ಮೆನು ಬದಲಾಯಿಸಬೇಕು ಎಂದು ಸಮಸ್ಯೆಗಳನ್ನು ಹೇಳಿಕೊಂಡರು.
ಗ್ರಂಥಾಲಯ ಸೌಲಭ್ಯ ಇಲ್ಲ, ಶೌಚಲಯ ಸ್ವಚ್ಛತೆ ಇಲ್ಲ, ಕೆಲವು ವಿದ್ಯಾರ್ಥಿಗಳಿಗೆ ಮಂಚದ ಸೌಲಭ್ಯ ಇಲ್ಲದೆ ನೆಲದ ಮೇಲೆ ಮಲಗುತ್ತಾರೆ. ನಿಲಯಕ್ಕೆ ವೈದ್ಯರು ಭೇಟಿ ನೀಡುವುದಿಲ್ಲ, ಕೊಠಡಿಯಲ್ಲಿ 10 ರಿಂದ 20 ವಿದ್ಯಾರ್ಥಿಗಳು ಇರುತ್ತಾರೆ, ಸೋಲಾರ್ ಇದ್ದರು ಸಹ ಸ್ನಾನಕ್ಕೆ ಬಿಸಿನೀರು ದೊರೆಯುವುದಿಲ್ಲ ಎಂದು ಕುಂದುಕೊರತೆಗಳನ್ನು ವಿವರಿಸಿದರು.
ವಿದ್ಯಾರ್ಥಿಗಳ ಕುಂದುಕೊರತೆಗಳನ್ನು ನಿವಾರಣೆ ಮಾಡುವ ಕೆಲಸವನ್ನು ವಾರ್ಡನ್ ಮಾಡಬೇಕು. ಮತ್ತು ಇದಕ್ಕೆ ಬೇಕಾದ ವ್ಯವಸ್ಥೆಯನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುತ್ತದೆ ಎಂದ ಮಹಾವೀರ ಮಾ.ಕರೆಣ್ಣನವರ, ಹಾಸ್ಟೆಲ್ನಲ್ಲಿರುವ ಸಮಸ್ಯೆಗಳು ಗಂಭೀರವಾಗಿದ್ದು ಪರಿಹರಿಸಿ ವಿದ್ಯಾರ್ಥಿಗಳಿಗೆ ಉತ್ತಮ ಸೌಕರ್ಯಗಳನ್ನು ಸಿಗುವಂತೆ ಮಾಡುವಂತೆ ಸೂಚಿಸಿದರು. ಜೊತೆಗೆ, ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲು ಕ್ರಮ ಜರುಗಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಾನೂನು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಹಾಜರಿದ್ದರು.




