ಸಂಪತ್ತಿನ ಸಾರ್ವಭೌಮತೆ

1 year ago

ಹಿಂದೆ ಮದುವೆಗಳ ಸಂಬಂಧಕ್ಕೆ ಮನಸ್ಸುಗಳು, ಸಂಸ್ಕಾರವಂತಿಕೆ ಮಾನದಂಡವಾಗಿತ್ತು. ಈಗ ಬಹಳಷ್ಟು ಸಂದರ್ಭದಲ್ಲಿ ಆಸ್ತಿ, ಸಂಪಾದನೆ, ಜವಾಬ್ದಾರಿ, ಸ್ವತಂತ್ರ ಇವುಗಳು ಮಾನದಂಡವಾಗಿದೆ.

ಹಿಂದೆ ಸ್ನೇಹಕ್ಕೆ ಪ್ರೀತಿ ಮತ್ತು ನಿರ್ಮಲವಾದಂತಹ ಮನಸ್ಸು ಸ್ನೇಹದ ಆದ್ಯತೆಗಳಾಗಿತ್ತು, ಈಗ ಲಾಭ ನಷ್ಟ, ಅನುಕೂಲತೆಗಳು, ಪ್ರಭಾವ ಪ್ರಚಾರ ಇವುಗಳು ಸ್ನೇಹದ ಮಾನದಂಡಗಳಾಗಿವೆ.

ಹಿಂದೆ ಸಂಸಾರಗಳ ಸಾಗಿಸಲು ವಿಶ್ವಾಸ ಪರಸ್ಪರ ನಂಬಿಕೆ, ಸತ್ವಗಳಾಗಿತ್ತು, ಈಗ ಮನೆ, ಕಾರು, ಆಭರಣಗಳು, ವೈಭವಯುತ ಸಾಮಗ್ರಿಗಳು ಸಂತೋಷದ ಸಂಸಾರದ ಸಾಧನೆಗಳೆಂಬ ಮಾತುಗಳು.

ಅಂದು ತಂದೆ ತಾಯಿ ದೇವರೆಂದು ಭಕ್ತಿಯಿಂದ ನಡೆದುಕೊಳ್ಳುತ್ತಿದ್ದರು ಇಂದು ಕೆಲವಷ್ಟು ಮಂದಿ ಹೆತ್ತವರ ಆಶ್ರಮಗಳಲ್ಲಿಟ್ಟು ಕಾಣದ ದೇವರ ಹುಡುಕುತ್ತಾ ಊರೂರು ಅಲೆಯುತ್ತಿದ್ದಾರೆ.

ಅಂದು ಸಹ ಧರ್ಮವಿತ್ತು, ಅದರ ಆಚರಣೆ ನಾಲ್ಕು ಗೋಡೆಗಳ ನಡುವೆ ಇತ್ತು, ಪ್ರೀತಿ ವಿಶ್ವಾಸಗಳಿಗೆ ಧರ್ಮದ ಭೇದವಿರಲಿಲ್ಲ, ಇಂದು ಧರ್ಮವಿದೆ ಧರ್ಮ ನಾಲ್ಕು ಗೋಡೆಗಳ ಮೀರಿ ಬಯಲಿಗೆ ಬಂದಿದೆ ಪ್ರೀತಿ ವಿಶ್ವಾಸಕ್ಕೆ ಧರ್ಮದ ಭೇದಗಳಿದೆ, ಭ್ರಾತೃತ್ವ ಮಾಯವಾಗಿ ಶತ್ರುತ್ವ ಮೆರೆಯುತ್ತಿದೆ.

ಅಂದು ಸಹ ಮಾಧ್ಯಮಗಳಿತ್ತು. ತಪ್ಪು ಮಾಡಿದವರ ಮುಲಾಜಿಲ್ಲದೆ ನಿಷ್ಪಕ್ಷಪಾತವಾಗಿ ಟೀಕಿಸುತ್ತಿದ್ದರು. ಒಳ್ಳೆಯ ಕೆಲಸಗಳನ್ನು ಮನ ತುಂಬಿ ಬರೆಯುತ್ತಿದ್ದರು. ಇಂದು ಮಾಧ್ಯಮಗಳು ಬಹಳಷ್ಟು ಮಾರಾಟವಾಗಿವೆ. ಪೂರ್ವಗ್ರಹ ಪೀಡಿತ ಚರ್ಚೆಗಳು ಎಲ್ಲವ ಆಕ್ರಮಿಸಿಕೊಂಡಿವೆ. ಖಳನಾಯಕರ ನಾಯಕರನ್ನಾಗಿಸುತ್ತಾರೆ, ನಿಜ ನಾಯಕರ ಅಯೋಗ್ಯರೆಂದು ಬಿಂಬಿಸುತ್ತಾರೆ. ಸುಳ್ಳನ್ನು ಸತ್ಯವೆಂದು ಹೇಳುತ್ತಾರೆ. ಸತ್ಯವನ್ನು ಬೇಡವೆಂದಾಗ ಸಾಯಿಸುತ್ತಾರೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply