ನನ್ನ ತೆರಿಗೆ ನಮ್ಮ ಹಕ್ಕು ಹೆಸರಿನಲ್ಲಿ ಧರಣಿ ನಡೆಸುತ್ತಿರುವುದು ಉತ್ತಮ, ಗಟ್ಟಿ ನಿರ್ಧಾರ

2 years ago

ನನ್ನ ತೆರಿಗೆ ನಮ್ಮ ಹಕ್ಕು ಈ ಒಂದು ಶೀರ್ಷಿಕೆ ಅಡಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯ ವಿರುದ್ಧ ದಿನಾಂಕ 7-2-2024 ರಂದು ನವದೆಹಲಿಯ ಜಂತರ್ ಮಂತರ್ ನಲ್ಲಿ ಧರಣಿ ನಡೆಸುತ್ತಿರುವುದು ಉತ್ತಮವಾದ ಗಟ್ಟಿಯಾದ ನಿರ್ಧಾರವಾಗಿರುತ್ತದೆ.

ಪಿ ಮಹಮದ್ ಅವರ ಕಾರ್ಟೂನ್

ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರವೂ ಹೌದು ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡಿರುವಂತಹ ಸಂವಿಧಾನವು ಹೌದು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದೇಶದಲ್ಲಿರುವ ಎಲ್ಲಾ ರಾಜ್ಯಗಳನ್ನು ಸಮಾನ ದೃಷ್ಟಿಯಿಂದ ಯಾವುದೇ ರೀತಿಯ ತಾರತಮ್ಯವನ್ನು ಮಾಡದೆ ಕಾಲಕಾಲಕ್ಕೆ ಗಮನವನ್ನು ಹರಿಸಬೇಕಾದದ್ದು ಅದರ ಕರ್ತವ್ಯವಾಗಿರುತ್ತದೆ.

ಕಳೆದ ಹತ್ತು ವರ್ಷದ ಅವಧಿಯಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರದಿಂದ ಹಲವಾರು ರಾಜ್ಯಗಳ ಮೇಲೆ ಮಲತಾಯಿ ಧೋರಣೆಯ ಸಂಸ್ಕೃತಿಯನ್ನು ಬೀರುತ್ತಿದ್ದಾರೆ. ಇದಕ್ಕೆ ದೊಡ್ಡ ಉದಾಹರಣೆ ಎಂದರೆ ಕರ್ನಾಟಕ ರಾಜ್ಯವೇ ಆಗಿದೆ.

ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡುವ ಅನುದಾನ ಮತ್ತು ಅವರ ತೆರಿಗೆಯ ಪಾಲು ಭಿಕ್ಷೆ ಅಲ್ಲ; ಅದು ರಾಜ್ಯಗಳ ಹಕ್ಕಿನ ವಿಚಾರವಾಗಿದೆ. ದೇಶದ ಪ್ರತಿಯೊಬ್ಬ ನಾಗರಿಕರು ಕಟ್ಟುವ ತೆರಿಗೆ ಹಣದಿಂದ ಕೇಂದ್ರ ಸರ್ಕಾರ ನಡೆಯುತ್ತಿದೆಯೇ ಹೊರತು ಅದಕ್ಕೆ ತನ್ನದೇ ಆದಂತಹ ಯಾವುದೇ ರೀತಿಯ ಸಂಪನ್ಮೂಲಗಳಿಲ್ಲ. ಕೇವಲ ಆದಾಯ ತೆರಿಗೆ ಮೂಲವನ್ನೇ ಅದು ಹೆಚ್ಚಾಗಿ ಅವಲಂಬಿಸಿದೆ.

ರಾಜ್ಯ ಸರ್ಕಾರದ ಜಾಹೀರಾತು

ಇನ್ನೂ ಇತ್ತೀಚಿನ ವರ್ಷಗಳಲ್ಲಿ(2017) ಜಿಎಸ್ಟಿ ತೆರಿಗೆ ಪದ್ಧತಿ ಅನುಷ್ಠಾನಕ್ಕೆ ಬಂದಿರುವುದರಿಂದ ರಾಜ್ಯಗಳು ತಮ್ಮ ಪಾಲನ್ನು ಪಡೆದುಕೊಳ್ಳಲು ಕೇಂದ್ರದ ಕಡೆ ಮುಖ ಮಾಡಿ ನಿಲ್ಲಬೇಕಾಗಿದೆ. ನ್ಯಾಯ ಸಮ್ಮತವಾಗಿ ರಾಜ್ಯಗಳಿಗೆ ಕೊಡಬೇಕಾಗಿರುವ ಶೇಕಡವಾರು ತೆರಿಗೆಯ ಪಾಲನ್ನು ಕೇಂದ್ರ ಸರ್ಕಾರ ನೀಡದ ಕಾರಣದಿಂದ ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳು ಆರ್ಥಿಕವಾಗಿ ತೊಂದರೆಯನ್ನು ಅನುಭವಿಸಬೇಕಾಗಿದೆ.

ಕಳೆದ ಹತ್ತು ವರ್ಷದ ಅವಧಿಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಹೆಚ್ಚಿನ ಅನುದಾನವನ್ನು ಮತ್ತು ತೆರಿಗೆಯ ಪಾಲನ್ನು ನೀಡಿರುತ್ತಾರೆ ಎಂದು ಬಿಜೆಪಿಯ ನಾಯಕರು ವಾದದಲ್ಲಿ ಯಾವುದೇ ಸತ್ಯವಿಲ್ಲ. ಕಾರಣ 10 ವರ್ಷಗಳ ಹಿಂದೆ ಯುಪಿಎ ಸರ್ಕಾರ ಇದ್ದಾಗ ಜಿಎಸ್ಟಿ ವ್ಯವಸ್ಥೆ ಇರಲಿಲ್ಲ. ಜೊತೆಗೆ 2004 ರಿಂದ 2014ರವರೆಗಿನ ಕೇಂದ್ರ ಸರ್ಕಾರದ ಮುಂಗಡಪತ್ರದ ಗಾತ್ರ ಈ ಪ್ರಮಾಣದಲ್ಲಿ ಇರಲಿಲ್ಲ. ಅಂದು ಕೆಲವು ಮೂಲಗಳಿಂದ ಸಂಗ್ರಹವಾಗುತ್ತಿದ್ದ ತೆರಿಗೆಯ ಪಾಲು ಮತ್ತು ಆ ಸಂದರ್ಭದಲ್ಲಿ ಕೇಂದ್ರ ಸರ್ಕಾರದಲ್ಲಿನ ಮುಂಗಡಪತ್ರದ ಪ್ರಮಾಣಕ್ಕೆ ಅನುಗುಣವಾಗಿ ಅಂದಿನ ಪ್ರಧಾನಿಗಳಾಗಿದ್ದ ಡಾ.ಮನಮೋಹನ್ ಸಿಂಗ್ ಅವರ ಸರ್ಕಾರ ಕರ್ನಾಟಕಕ್ಕೆ ಅಂದು ಸಲ್ಲಬೇಕಾದ ಪಾಲಿನ ಹಣವನ್ನು ನೀಡಿದೆ.

ಈ ಹಿನ್ನೆಲೆಯಲ್ಲಿ 2004 ರಿಂದ 2014ರ ಕೇಂದ್ರ ಸರ್ಕಾರದ ನಿಮ್ಮ ಮುಂಗಡಪತ್ರದ ಗಾತ್ರ ತದನಂತರ 2014ರಿಂದ 2024 ರ ಅವಧಿಯ ಕೇಂದ್ರ ಸರ್ಕಾರದ ಮುಂಗಡಪತ್ರದ ಗಾತ್ರ ಮತ್ತು ಕರ್ನಾಟಕ ರಾಜ್ಯ ಕೇಂದ್ರಕ್ಕೆ ಸಂದಾಯ ಮಾಡುತ್ತಿರುವ ಜಿ ಎಸ್ ಟಿ ಮೊತ್ತವನ್ನು ಗಮನಿಸಿದಾಗ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಅನ್ಯಾಯವನ್ನು ಮಾಡಿದೆ ಎಂಬುದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲ.

1991ರಲ್ಲಿ ಅಂದು ಹಣಕಾಸು ಸಚಿವರಾಗಿದ್ದ ಮನಮೋಹನ್ ಸಿಂಗ್ ಅವರು ಮಂಡಿಸಿದ ಶ್ರೇಷ್ಠವಾದ ಮುಂಗಡಪತ್ರ ಮತ್ತು ತದನಂತರ ಪ್ರಧಾನಮಂತ್ರಿಯಾಗಿ ಅವರು ಜಾರಿಗೆ ತಂದ ಆರ್ಥಿಕ ಸುಧಾರಣೆಗಳು ಈ ದೇಶದಲ್ಲಿ ಆರ್ಥಿಕತೆಯ ಬೆಳವಣಿಗೆಗೆ ಕಾರಣವಾಗಿವೆ. ಈ ಮಾತನ್ನು ಯಾರು ಒಪ್ಪಲಿ ಬಿಡಲಿ ಇದಂತೂ ಸತ್ಯವಾದ ಸಂಗತಿ. ಅಂದು ಮನಮೋನ್ ಸಿಂಗ್ ರವರು globalization, privatization. liberalization ಎಂಬ ಮಂತ್ರದೊಂದಿಗೆ ಲೈಸೆನ್ಸ್ ಪದ್ಧತಿಯನ್ನು ರದ್ದು ಮಾಡುವಂತಹ ಕ್ರಮಗಳನ್ನು ಅನುಸರಿಸಿದ ಕಾರಣದಿಂದ ದೇಶದಲ್ಲಿ ಕಳೆದ ಮೂರು ದಶಕದ ಅವಧಿಯಲ್ಲಿ ವಿದೇಶಿ ಬಂಡವಾಳ ನೇರವಾಗಿ ಹರಿದು ಬಂದಿರುತ್ತದೆ. ಇದರಿಂದಾಗಿ ಲಕ್ಷಾಂತರ ಉದ್ಯೋಗಗಳು, ಲೆಕ್ಕವಿಲ್ಲದಷ್ಟು ಉದ್ಯಮಗಳು ಸ್ಥಾಪನೆಯಾಗಲು ಸಾಧ್ಯವಾಗಿರುತ್ತದೆ.

ಪ್ರಧಾನ ಮಂತ್ರಿಗಳು ತಮ್ಮ 10 ವರ್ಷದ ಲೋಕಸಭೆಯ ಪ್ರತಿಯೊಂದು ಭಾಷಣದಲ್ಲೂ ನೆಹರುರವರ ಮತ್ತು ಇಂದಿರಾ ಗಾಂಧಿಯವರ ಹೆಸರನ್ನು ಉಲ್ಲೇಖಿಸದಿದ್ದರೆ ಸಮಾಧಾನವೇ ಆಗುವುದಿಲ್ಲ ಎನ್ನುವ ರೀತಿಯಲ್ಲಿ ಹೇಳಿದ ವಿಚಾರಗಳನ್ನು ಮತ್ತೆ ಮತ್ತೆ ಹೇಳುತ್ತಾರೆ. 1948ರ ದೇಶದ ಪರಿಸ್ಥಿತಿಯನ್ನು 2024ರಲ್ಲಿ ಮಾಡಿ ತಪ್ಪುಗಳನ್ನು ಹೇಳುವುದು ನಿಜಕ್ಕೂ ಪ್ರಬುದ್ಧತೆಯ ಮಾತುಗಳಲ್ಲ.

ನೆಹರುರವರು ಕೈಗಾರಿಕೆಗಳನ್ನ ಸ್ಥಾಪಿಸಿದ್ದು, ಅಣೆಕಟ್ಟುಗಳನ್ನು ನಿರ್ಮಿಸಿದ್ದು, ಸಂಶೋಧನಾ ಸಂಸ್ಥೆಗಳನ್ನ ಸ್ಥಾಪಿಸಿದ್ದು, ಆಸ್ಪತ್ರೆಗಳನ್ನ ಕಟ್ಟಿದ್ದು, ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದು, ಪಂಚ ವಾರ್ಷಿಕ ಯೋಜನೆಯನ್ನು ಜಾರಿಗೆ ತಂದದ್ದು ಮತ್ತು ಇದರಿಂದ ದೇಶದ ಆರ್ಥಿಕ ಸಾಮಾಜಿಕ ಪ್ರಗತಿಗೆ ಆದಂತಹ ಪ್ರೋತ್ಸಾಹಗಳನ್ನು ಯಾರು ಸಹ ಮರೆಯುವುದಿಲ್ಲ.

ಅದೇ ರೀತಿಯಲ್ಲಿ ಇಂದಿರಾ ಗಾಂಧಿಯವರು ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡದಿದ್ದರೆ ಇಂದು ನೀವು ಬಡವರು ಬ್ಯಾಂಕುಗಳ ಕಡೆ ತಿರುಗಿ ನೋಡುವ ಹಾಗಿರಲಿಲ್ಲ. ಅದೇ ರೀತಿಯಲ್ಲಿ ರಾಜೀವ್ ಗಾಂಧಿ ಅವರ ಕಾಲದಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಸಂಪರ್ಕ ಕ್ಷೇತ್ರದಲ್ಲಿ ವಿಶೇಷವಾಗಿ ಟೆಲಿಫೋನ್ ಕ್ಷೇತ್ರದಲ್ಲಿ ಕ್ರಾಂತಿಕಾರಿಯಾದ ನಿರ್ಧಾರಗಳು ಜಾರಿಯಾಗದಿದ್ದರೆ ಇಂದು ನೀವು ಹೇಳುವ ಅನೇಕ ಕಾರ್ಯಕ್ರಮಗಳು ನಡೆಯುತ್ತಲೇ ಇರಲಿಲ್ಲ.

ಹಿಂದಿನವರು ಏನೂ ಮಾಡಿಲ್ಲವೆಂದು ಪದೇ ಪದೇ ಸುಳ್ಳು ಹೇಳುವುದನ್ನ ಬಿಟ್ಟು ನೀವು ಎಷ್ಟು ಕೈಗಾರಿಕೆಗಳನ್ನು ಸ್ಥಾಪಿಸಿದ್ದೀರಿ? ಎಷ್ಟು ಕೋಟಿ ಜನರಿಗೆ ಉದ್ಯೋಗವನ್ನು ನೀಡಿದ್ದೀರಿ ಎಂಬಂತಹ ಸತ್ಯವನ್ನು ಜನರಿಗೆ ತಿಳಿಸುತ್ತಾ ಕಳೆದ ಹತ್ತು ವರ್ಷದ ಅವಧಿಯಲ್ಲಿ ನೀವು ಮಾಡಿರುವ ಸಾಲವನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವಂತಹ ದೊಡ್ಡ ಮನಸ್ಸು ಮಾಡಿ.

  • ಕೆ.ಎಸ್.ನಾಗರಾಜ್, ಬೆಂಗಳೂರು

Leave a Reply