ಅಪ್ಪನಿಗೆ ಔಷಧಿ ತರಲು ಹೋದ ಮಗ ಮರಳಲೇ ಇಲ್ಲ

5 hours ago

ಬೆಂಗಳೂರು: ಅಪ್ಪನಿಗೆ ಆರೋಗ್ಯ ಸರಿಯಿಲ್ಲವೆಂದು ಔಷಧಿ ತರಲು ಮನೆಯಿಂದ ಹೊರಟಿದ್ದ 15 ವರ್ಷದ ಬಾಲಕ ವರುಣ್ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಹೆಣ್ಣೂರು-ಬಾಗಲೂರು ಮುಖ್ಯ ರಸ್ತೆಯಲ್ಲಿ ನಡೆದಿದೆ. ಖಾಸಗಿ ಬಸ್ ಬಾಲಕನ ಮೇಲೆ ಹರಿದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಘಟನೆ ನೋಡಿದವರ ಮನಕಲಕುವಂತಾಗಿದೆ.

ಮಾಹಿತಿಯ ಪ್ರಕಾರ, ರಸ್ತೆ ದಾಟಲು ಯತ್ನಿಸುತ್ತಿದ್ದ ವೇಳೆ ವರುಣ್ ಬಹಳ ಹೊತ್ತು ಬಿಸಿಲಿನಲ್ಲಿ ನಿಂತಿದ್ದಾನೆ. ಈ ವೇಳೆ ತಲೆ ಸುತ್ತು ಬಂದು ರಸ್ತೆಯಲ್ಲೇ ಬಿದ್ದಿದ್ದಾನೆ ಎನ್ನಲಾಗಿದೆ. ಅದೇ ಸಮಯದಲ್ಲಿ ಬಂದ ಖಾಸಗಿ ಬಸ್ ಬಾಲಕನ ಮೇಲೆ ಹರಿದಿದ್ದು, ಸ್ಥಳದಲ್ಲೇ ಆತ ಮೃತಪಟ್ಟಿದ್ದಾನೆ.

ಇನ್ನು ಈ ದುರ್ಘಟನೆಗೆ ಹೆಣ್ಣೂರು-ಬಾಗಲೂರು ರಸ್ತೆಯಲ್ಲಿ ನಡೆಯುತ್ತಿರುವ ವೈಟ್ ಟ್ಯಾಪಿಂಗ್ ಕಾಮಗಾರಿಯೇ ಕಾರಣ ಎಂದು ಮೃತ ಬಾಲಕನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಮಗಾರಿಯಿಂದ ರಸ್ತೆ ದಾಟುವುದು ತುಂಬಾ ಕಷ್ಟವಾಗಿತ್ತು. ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ನನ್ನ ಮಗ ಜೀವ ಕಳೆದುಕೊಂಡಿದ್ದಾನೆ ಎಂದು ಪೋಷಕರು ಕಣ್ಣೀರಿಟ್ಟಿದ್ದಾರೆ.

ಅಪ್ಪನಿಗಾಗಿ ಔಷಧಿ ತರಲು ಹೋದ ಮಗ ಮನೆಗೆ ವಾಪಸ್ ಬರಲೇ ಇಲ್ಲ. ರಸ್ತೆ ಕಾಮಗಾರಿಯ ಅವ್ಯವಸ್ಥೆಯೇ ನಮ್ಮ ಮಗನ ಜೀವ ತೆಗೆದುಕೊಂಡಿತು ಎಂದು ಕುಟುಂಬಸ್ಥರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಘಟನೆ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Leave a Reply