
ಬೆಂಗಳೂರು: ಕಾರಿನೊಳಗೆ ಎಸಿ ಆನ್ ಮಾಡಿಕೊಂಡು ಮಲಗಿದ್ದ ಖಾಸಗಿ ಕಂಪನಿಯ ಕ್ಯಾಬ್ ಚಾಲಕ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ನೆಲಗೆದರಹಳ್ಳಿ ಬಳಿ ಈ ದುರ್ಘಟನೆ ನಡೆದಿದ್ದು, ಮೃತರನ್ನು ಟಿ. ದಾಸರಹಳ್ಳಿ ನಿವಾಸಿ ಸುನಿತ್ ಹೆಚ್.ಬಿ. (38) ಎಂದು ಗುರುತಿಸಲಾಗಿದೆ.
ಸುನಿತ್ ಅವರು ಕಾರಿನ ಗ್ಲಾಸ್‌ಗಳನ್ನು ಸಂಪೂರ್ಣವಾಗಿ ಏರಿಸಿ, ಎಸಿ ಆನ್ ಮಾಡಿಕೊಂಡು ವಾಹನದೊಳಗೆ ಮಲಗಿದ್ದರು ಎನ್ನಲಾಗಿದೆ. ದೀರ್ಘ ಸಮಯದಿಂದ ವಾಹನ ಒಂದೇ ಸ್ಥಳದಲ್ಲಿ ನಿಂತಿರುವುದನ್ನು ಗಮನಿಸಿದ ಸ್ಥಳೀಯರು ಅನುಮಾನಗೊಂಡು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೀಣ್ಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸಾವಿನ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ಉಸಿರಾಟದ ತೊಂದರೆ ಅಥವಾ ಎಸಿ ಬಳಕೆಯಿಂದ ಉಂಟಾದ ಅನಾಹುತವೇ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಈ ಕುರಿತು ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.




