ಸಮಾನತೆಯ ಪ್ರತಿಪಾದಕರು ಧಾರ್ಮಿಕ ಆಚರಣೆಯನ್ನು ಬಿಡಬೇಕಾಗಿಲ್ಲ

1 year ago

ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಪ್ರತಿಪಾದಕರು ದೇವರ ವಿರೋಧಿಗಳು ಆಗಿರಬೇಕಾಗಿಲ್ಲ. ಧರ್ಮದ ಆಚರಣೆಯನ್ನು ಬಿಡಬೇಕಾಗಿಲ್ಲ.

ಕರ್ನಾಟಕ ರಾಜ್ಯದಲ್ಲಿ ದಿವಂಗತ ದೇವರಾಜ್ ಅರಸು ರವರು ದೇವಾಲಯಗಳಿಗೂ ಹೋಗುತ್ತಿದ್ದರು, ಧರ್ಮದಲ್ಲಿನ ಅನೇಕ ಆಚರಣೆಗಳಲ್ಲಿ ಶ್ರದ್ಧೆಯನ್ನು ಹೊಂದಿದ್ದರು. ಜೊತೆ ಜೊತೆಗೆ ಸಾಮಾಜಿಕ ನ್ಯಾಯದ ರೂವಾರಿಗಳು ಆದರೂ ಪ್ರಗತಿಪರವಾದಂತಹ ಕಾರ್ಯಕ್ರಮಗಳನ್ನು ಜಾರಿಗೊಳಿಸಿದರು. ಈ ವಿಚಾರವನ್ನು ಗಮನಿಸಿದಾಗ ಸಾಮಾಜಿಕ ನ್ಯಾಯದ ಪ್ರತಿಪಾದಕರು ಸಮಾನತೆಯ ಅನುಷ್ಠಾನದ ಹಾದಿಯಲ್ಲಿ ಇರುವವರು ತಾವು ಬಂದಿರುವಂತಹ ಧರ್ಮದ ವಿಚಾರಗಳನ್ನು ಮತ್ತು ದೇವರ ನಂಬಿಕೆಗಳನ್ನ ಬಿಟ್ಟು ಕೊಡಬೇಕಾಗಿಲ್ಲ ಎಂಬುದನ್ನ ಸ್ಪಷ್ಟವಾಗಿ ಕಾಣಬಹುದಾಗಿದೆ.

ಇತ್ತೀಚಿನ ದಿನಗಳಲ್ಲಿ ದೇವರ ಬಗ್ಗೆ ನಂಬಿಕೆಯ ಮಾತುಗಳನ್ನ ಮತ್ತು ತಮ್ಮ ಧರ್ಮದಲ್ಲಿನ ಆಚರಣೆಗಳ ಬಗ್ಗೆ ಶ್ರದ್ಧೆಯನ್ನ ತೋರಿಸಿದರೆ ಅವರ ಸಾಮಾಜಿಕ ಬದ್ಧತೆ ಮತ್ತು ಸಮಾನತೆ ಇವುಗಳನ್ನು ಪ್ರಶ್ನೆ ಮಾಡುವಂತಹ ಮಾತುಗಳು ಹೆಚ್ಚಾಗುತ್ತಿದೆ.

ದೇವರಾಜ್ ಅರಸುರವರಿಗಿಂತ ಅತಿ ಹಿಂದುಳಿದ ಮತ್ತು ಕಡೆಗಣಿಸಲ್ಪಟ್ಟ ಸಮಾಜದ ಪ್ರತಿಭೆಗಳನ್ನು ಗುರುತಿಸಿ, ರಾಜಕೀಯ ಸ್ಥಾನಮಾನವನ್ನು ಕೊಟ್ಟವರು ಬೇರೆ ಯಾರು ಇಲ್ಲ. ಅದೇ ರೀತಿಯಲ್ಲಿ ಎಲ್ಲ ಧರ್ಮದಲ್ಲಿನ ಎಲ್ಲ ಜಾತಿಯಲ್ಲಿನ ಕಡುಬಡವರಿಗಾಗಿ ಯೋಜನೆಯನ್ನ ರೂಪಿಸಿದವರು ಮತ್ತೊಬ್ಬರಿಲ್ಲ. ತಾವು ಮಠಗಳನ್ನು ಗೌರವದಿಂದ ಕಾಣುತ್ತಲೇ ಉಳುವವನಿಗೆ ಭೂಮಿ ಎಂಬ ಕಾನೂನನ್ನ ಜಾರಿಗೊಳಿಸಿದವರು ಇವರೇ. ಈ ನೆಲೆಯಲ್ಲಿ ಇವರ ನಂಬಿಕೆಗಳು ಮತ್ತು ಇವರ ಬದ್ಧತೆಗಳು ಪ್ರಶ್ನೆ ಮಾಡುವಂಥದ್ದಾಗಿರಲಿಲ್ಲ.

ಕುವೆಂಪುರವರ ವಿಚಾರಧಾರೆಯನ್ನು ಒಪ್ಪಿಕೊಂಡು ವೈಜ್ಞಾನಿಕ ಚಿಂತನೆಯ ಜೊತೆಗೆ ಪ್ರಗತಿಪರವಾದಂತಹ ಆಲೋಚನೆಗಳನ್ನು ಮಾಡುತ್ತಾ ಬಡವರಿಗಾಗಿ ಶೋಷಿತರಿಗಾಗಿ ಕಾರ್ಯಕ್ರಮವನ್ನು ಕೊಟ್ಟ ಕಾರಣಕ್ಕಾಗಿ ಇವರನ್ನು ಇಂದಿಗೂ ಅದೆಷ್ಟೋ ವರ್ಗದ ಜನ ಪೂಜ್ಯ ಭಾವನೆಯಿಂದ ನೋಡುತ್ತಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಬದುಕಿನಲ್ಲಿರುವ ವ್ಯಕ್ತಿಗಳು ತಾವು ನಂಬಿದಂತಹ ನಂಬಿಕೆಗಳು ಮತ್ತು ಆಚರಣೆಗಳನ್ನು ಅನುಸರಿಸಿದ ಮಾತ್ರಕ್ಕೆ ಅವರ ಸಾಮಾಜಿಕ ಬದ್ಧತೆ ಮತ್ತು ಸಮಾನತೆಯ ವಿಚಾರದಲ್ಲಿ ಅನುಮಾನ ಪಡುವುದು ಸರಿಯಲ್ಲ.

ಅನೇಕ ಧರ್ಮದಲ್ಲಿನ ನಾಯಕರುಗಳು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಬಗ್ಗೆ ಮಾತನಾಡುತ್ತಲೇ ತಮ್ಮ ಧರ್ಮದ ಆಚರಣೆಯನ್ನ ಶ್ರದ್ಧೆಯಿಂದ ಆಚರಿಸುತ್ತಾರೆ. ಮಸೀದಿಗಳಿಗೂ ಹೋಗುತ್ತಾರೆ ಪ್ರಾರ್ಥನೆ ಸಲ್ಲಿಸುತ್ತಾರೆ. ಚರ್ಚ್ ಗಳಿಗೆ ಹೋಗುತ್ತಾರೆ ಅಲ್ಲಿಯೂ ಸಹ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ತಮ್ಮ ಹಬ್ಬ ಆಚರಣೆಗಳನ್ನು ಮಾಡುತ್ತಾರೆ. ತಮ್ಮ ಪವಿತ್ರವಾದಂತಹ ಯಾತ್ರಾಸ್ಥಳಿಗಳಿಗೂ ಭೇಟಿ ಕೊಡುತ್ತಾರೆ. ಇಂತಹ ಅನೇಕರ ಬದ್ಧತೆಯ ಬಗ್ಗೆ ಯಾರೂ ಪ್ರಶ್ನಿಸುವುದಿಲ್ಲ. ಆದರೆ ಹಿಂದೂ ಧರ್ಮದಲ್ಲಿನ ನಾಯಕರುಗಳು ತಮ್ಮ ಧರ್ಮದ ನಂಬಿಕೆ ಮತ್ತು ದೇವರುಗಳ ಬಗ್ಗೆ ಆಚರಣೆಯನ್ನು ಅನುಸರಿಸಿದಾಗ ಅವರ ಬಗ್ಗೆ ಟೀಕಿಸುವುದು ಒಂದು ರೀತಿಯಲ್ಲಿ ಹವ್ಯಾಸವಾಗಿದೆ.

ಮಹಾತ್ಮ ಗಾಂಧೀಜಿರವರಿಗಿಂತ ಜಾತ್ಯತೀತ ವ್ಯಕ್ತಿ ಮತ್ತೊಬ್ಬರಿಲ್ಲ. ಹಿಂದೂ ಧರ್ಮವನ್ನ ಪ್ರೀತಿಸುತ್ತಲೇ ಅನ್ಯ ಧರ್ಮದ ಬಗ್ಗೆಯೂ ಅಷ್ಟೇ ಗೌರವದಿಂದ ನಡೆದುಕೊಳ್ಳುತ್ತಾ ಸಮಾಜದಲ್ಲಿ ಸಾಮರಸ್ಯದ ಬದುಕಿಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದಂತಹ ಮಹಾನ್ ವ್ಯಕ್ತಿ. ಕಾಂಗ್ರೆಸ್ ಪಕ್ಷ ಗಾಂಧಿ ಪ್ರೇರಿತ ಜಾತ್ಯತೀತ ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ನಂಬಿಕೆ ಇಟ್ಟು ನಡೆದುಕೊಂಡರೆ ಅದುವೇ ದೊಡ್ಡ ಸಾಧನೆಯಾಗುತ್ತದೆ.

ಬೆಂಗಳೂರು ನಗರದಲ್ಲಿ ಲೋಕಸಭಾ ಸದಸ್ಯರಾಗಿದ್ದ ಹಿರಿಯ ಗಾಂಧಿವಾದಿ ವಿ ಎಸ್ ಕೃಷ್ಣ ಅಯ್ಯರ್ ಇವರು ಸಹ ಸಾಮಾಜಿಕ ನ್ಯಾಯವನ್ನು ಮಾತಿನಲ್ಲಿ ಹೇಳದೆ ಜೀವನದಲ್ಲಿ ಅದನ್ನು ಅನುಸರಿಸುತ್ತಿದ್ದರು. ಅವರ ಮನೆಯಲ್ಲಿ ಯಾವ ದಲಿತರು ಯಾವ ಸಮಾಜದವರು ಬೇಕಾದರೂ ಮುಕ್ತವಾಗಿ ಓಡಾಡಿಕೊಂಡು ಅಡುಗೆ ಮನೆಯಲ್ಲೂ ಹೋಗಿ ತಿಂಡಿಯನ್ನ ತಿನ್ನಬಹುದಾಗಿತ್ತು. ಅದೇ ರೀತಿಯಲ್ಲಿ ಅವರು ಎಲ್ಲರ ಮನೆಯಲ್ಲೂ ಹೋಗಿ ಊಟವನ್ನು ಮಾಡುತ್ತಿದ್ದರು. ತಿಂಡಿ ತಿನ್ನುತ್ತಿದ್ದರು. ಯಾವುದೇ ರೀತಿಯ ಭೇದವನ್ನ ಎಂದೂ ಮಾಡಿರಲಿಲ್ಲ. ವಿಶೇಷವಾಗಿ ದಲಿತ ಸಮುದಾಯದ ಅನೇಕ ವರ್ಗಗಳಿಗೆ ಅವರು ನಗರಾಭಿವೃದ್ಧಿ ಸಚಿವರಾಗಿದ್ದಾಗ ಮನೆಗಳನ್ನ ನಿರ್ಮಿಸಿ ಕೊಟ್ಟರು ಮತ್ತು ಆ ಸಂಸ್ಥೆಗಳಿಗೆ ನಿವೇಶನಗಳನ್ನು ಒದಗಿಸಿ ಕೊಟ್ಟರು. ಬದುಕಿನಲ್ಲಿ ದೇವಾಲಯಕ್ಕೆ ಹೋಗುತ್ತಿದ್ದರೆ ಹೊರತು ಎಂದು ಹೋಮ ಜಪ ಮಾಡಿಸಿದವರಲ್ಲ. ತಾಸುಗಟ್ಟಲೆ ಪೂಜೆ ಮಾಡಿದವರಲ್ಲ. ಯಂತ್ರ ಮಂತ್ರ ತಂತ್ರಗಳನ್ನು ನಂಬಿದವರಲ್ಲ. ಜ್ಯೋತಿಷ್ಯವನ್ನ ಕೇಳಲು ಯಾರ ಬಳಿಗೂ ಹೋದವರಲ್ಲ.

ಇದೇ ರೀತಿಯಲ್ಲಿ ರಾಮಕೃಷ್ಣ ಹೆಗಡೆಯವರು ಸಹ ಬದುಕಿನಲ್ಲಿ ನಡೆದುಕೊಂಡಿದ್ದರು. ತಮ್ಮ ಮನೆಯ ಮೂಲೆಯಲ್ಲಿ ಇದ್ದಂತಹ ಮರದ ಗಣೇಶನಿಗೆ ಒಂದು ನಮಸ್ಕಾರವನ್ನು ಹಾಕಿ ಮನೆಯಿಂದ ಹೊರಡುತ್ತಿದ್ದರು. ಜೊತೆಗೆ ತಾಯಿಗೆ ಪ್ರತಿದಿನವೂ ನಮಸ್ಕಾರ ಮಾಡಿ ತಾವು ಹೋಗಿಬರುವುದಾಗ ತಪ್ಪದೇ ಹೇಳಿ ತಮ್ಮ ಕಾರ್ಯಕ್ರಮವನ್ನು ಆರಂಭಿಸುತ್ತಿದ್ದರು. ಇಂದಿಗೂ ಸಹ ಅನೇಕ ರಾಜಕಾರಣಿಗಳು ಮತ್ತು ಸಮಾಜ ಸೇವಕರು ಸಮಾಜದ ಎಲ್ಲ ವರ್ಗದ ಜನರ ವಿಚಾರದಲ್ಲಿ ಶುದ್ಧವಾದ  ಪ್ರೀತಿಯನ್ನ ಮತ್ತು ಕಾಳಜಿಯನ್ನು ಹೊಂದಿದವರಾಗಿದ್ದಾರೆ ಜೊತೆಗೆ ದೇವರನ್ನು ನಂಬುತ್ತಾರೆ ತಮ್ಮ ಆಚರಣೆಗಳನ್ನು ಮುಂದುವರಿಸಿದ್ದಾರೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply