ಅಂಧಭಕ್ತನ ಸ್ವಗತ – 17
ನೋಡಿದ್ರಾ ನಮ್ಮ ಪ್ರಧಾನಿಗಳು ಅಂದ್ರೆ ಹೆಂಗೆ.. ಇಟಲಿಗೆ ಹಾರಿ ಹೋದ್ರು. ಅಲ್ಲಿಯ ಲೇಡಿ ಪ್ರಧಾನಿ ಮೆಲೋನಿ ಗೆ ಭಾರತದ ಮೆಲೋಡಿ ಚಾಕಲೇಟ್ ಉಡುಗೊರೆಯಾಗಿ ಕೊಟ್ಟು ರೀಲ್ಸ್, ಪೊಟೋ ಶೂಟ್ ಮಾಡಿ ಇಡೀ ಜಗತ್ತಿಗೆ ತೋರಿಸಿದ್ರು. ಇದಪ್ಪಾ ಪ್ರಾಸಬದ್ದ ಹಾಸ್ಯಪ್ರಜ್ಞೆ ಅಂದ್ರೆ. ‘ಮೆಲೋನಿಗೆ ಮೆಲೋಡಿ’ ಆಹಾ ಕೇಳೋದಕ್ಕೆ ಎಷ್ಟೊಂದು ಇಂಪಾಗಿದೆ, ಇನ್ನು ಈ ಚಾಕ್ಲೆಟ್ ತಿಂದ ಆ ಮೆಲೋಡಿಯಮ್ಮನಿಗೆ ಅದೆಷ್ಟು ಆನಂದ ಆಗಿರಬಾರದು. ಹೆಂಗೆ ನಮ್ಮ ದೇವರು, 50 ರೂಪಾಯಿ ಟಾಫಿ ಚಾಕಲೇಟ್ ಕೊಟ್ಟು ಇಟಲಿ ಪ್ರಧಾನಿಯ ಮನಸನ್ನೇ ಗೆದ್ದರು. ಇದಿಷ್ಟೇ ಅಲ್ಲಾರೀ ಪಾರ್ಲೆ ಕಂಪನಿಯ ಮೆಲೋಡಿ ಚಾಕ್ಲೇಟ್ ಅನ್ಕೊಂಡ ನನ್ನ ಅಂಧಭಕ್ತ ಹೂಡಿಕೆದಾರರು ಪಾರ್ಲೆ ಇಂಡಸ್ಟ್ರೀಸ್ ಷೇರ್ ಗಳನ್ನ ಕೊಂಡು ದೇಶದ ಎಕಾನಮಿ ಹೆಚ್ಚಿಸಿದ್ರು. ಇದ್ದಕ್ಕಿದ್ದಂತೆ ಮೆಲೋಡಿ ಚಾಕ್ಲೇಟ್ ಬೇಡಿಕೆ ದುಪ್ಪಟ್ಟಾಯ್ತು. ಇದಪ್ಪಾ ಮೋದಿಯವರ ‘ಫುಡ್ ಡಿಪ್ಲೋಮಸಿ’ ಅಂದ್ರೆ. ಅವ್ರು ಏನೇ ಮಾಡಿದ್ರೂ ಅದರಲ್ಲಿ ಏನೋ ಒಂದು ಅರ್ಥ ಇದ್ದೇ ಇರುತ್ತೆ. ಏನೂ ಮಾಡದಿದ್ರೂ ಇನ್ನೊಂದೇನೋ ಅರ್ಥ ಇರುತ್ತೆ. ಹುಲು ಮಾನವರು ಅರ್ಥ ಮಾಡ್ಕೋಬೇಕಷ್ಟೇ.
- ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣವೇ ಪದಚ್ಯುತಗೊಳಿಸಿ: ಸಿದ್ದರಾಮಯ್ಯ
- ಸತತ 5 ದಿನ ಬ್ಯಾಂಕ್ಗಳಿಗೆ ಬೀಗ!: ಏನಿರುತ್ತದೆ, ಏನಿಲ್ಲ? ಕಂಪ್ಲೀಟ್ ಡೀಟೈಲ್ಸ್!
- 814 ಉಪನ್ಯಾಸಕರ ನೇಮಕಾತಿಯಲ್ಲಿ ಉರ್ದುಗೆ ಸ್ಥಾನ ಎಲ್ಲಿದೆ?
- ಸಾಲ ಮನ್ನಾ ಮಾಡಿ ರೈತರ ಹಿತ ಕಾಪಾಡಿದ್ದ ಡಾ.ಮನಮೋಹನ್ ಸಿಂಗ್
- ರಾಜ್ಯದ ಅಭಿವೃದ್ಧಿಗೆ ಆರ್.ಅಶೋಕ್ ಅಡ್ಡಗಾಲು: ಕೆಪಿಸಿಸಿ
ಹೀಗೆ ಕಾಲಕಾಲಕ್ಕೆ ಏನೇನೋ ಮಿಠಾಯಿ ಕೊಟ್ಟೋ, ಇಲ್ಲಾ ಮೀಠಿ ಮೀಠಿ ಆಶ್ವಾಸನೆ ಕೊಟ್ಟೋ ವಿರೋಧಿಗಳ ಅಟ್ಟಹಾಸವನ್ನ ಅಳಿಸಿ ಹಾಕುವ ಕಲೆ ಪ್ರಧಾನಿಗಳಿಗೆ ಸಿದ್ದಿಸಿದೆ. ಭಾರತೀಯರಿಗೆ ವಿಶ್ವಗುರುಗಳು ಕೊಟ್ಟ ಘೋಷಣೆಗಳು ನೋಡ್ರೀ ಎಷ್ಟು ಚೆಂದ ಇವೆ.
* ಸರ್ವರ ಖಾತೆಗೂ 15 ಲಕ್ಷ ರೂಪಾಯಿ
* ವರ್ಷಕ್ಕೆರಡು ಕೋಟಿ ಉದ್ಯೋಗ
* ರೈತರ ಆದಾಯ ಡಬಲ್
* ಅಚ್ಚೇದಿನ್
* ಗುಜರಾತ್ ಮಾಡಲ್
* ಮೇಕ್ ಇನ್ ಇಂಡಿಯಾ
* ಖೇಲೋ ಇಂಡಿಯಾ
* ಸ್ಟಾರ್ಟಪ್ ಇಂಡಿಯಾ
* ಸ್ಕಿಲ್ ಇಂಡಿಯಾ
* ಆತ್ಮ ನಿರ್ಬರ್ ಭಾರತ್
* ಅಮೃತ್ ಕಾಲ
* ವಿಕಸಿತ್ ಭಾರತ
* ಸಬ್ ಕಾ ಸಾತ್ ಸಬ್ ಕಾ ವಿಕಾಸ್
* 100 ಸ್ಮಾರ್ಟ್ ಸಿಟಿ
* ಬೇಟಿ ಬಚಾವೋ, ಬೇಟಿ ಪಡಾವೋ

ಆಹಾ.. ಕೇಳೋಕೆ ಎಷ್ಟೊಂದು ಮಧುರವಾಗಿವೆ. ಮೆಲೋನಿ ನೆನಪಿನಲ್ಲಿ ಮೆಲೋಡಿ ತಿಂದಷ್ಟೇ ಸ್ವಾದಿಷ್ಟವಾಗಿವೆ. ಆದರೆ ‘ಇವು ಯಾವವೂ ಯಶಸ್ವಿಯಾಗಿಲ್ಲಾ, ಕೊಟ್ಟ ಭರವಸೆ ಈಡೇರಿಸಿಲ್ಲಾ, ಪೆಲ್ಯೂರ್ ಪ್ರೈಮಿನಿಸ್ಟರ್’ ಅಂತಾ ದೇಶದ್ರೋಹಿಗಳು ಹೇಳ್ತಾನೇ ಇರ್ತಾರೆ. ಹೇಳೋರು ಹೇಳ್ತಾನೇ ಇರ್ಲಿ ಬಿಡ್ರಿ. ಮೋದಿ ಸಾಹೇಬರು ಮಾಡೋದು ಮಾಡ್ತಾನೇ ಇರ್ತಾರೆ..ಅವರು ಮಾಡಿದ್ದರೆಲ್ಲಾ ಮಾಸ್ಟರ್ ಸ್ಟ್ರೋಕ್. ಏನೀಗ?
ನಮ್ಮ ವಿಶ್ವಗುರುಗಳು ಎಲ್ಲೂ ಓಡಿ ಹೋಗೋದಿಲ್ಲ. ಅವರನ್ನ ಅಧಿಕಾರದಿಂದ ಕೆಳಗಿಳಿಯೋಕೆ ನಾವು ಅಖಿಲ ಭಾರತ ಅಂಧಭಕ್ತರು ಬಿಡೋದು ಇಲ್ಲಾ. ಇನ್ನು ಬೇಕಾದಷ್ಟು ವರ್ಷ ಸಮಯ ಇದೆ. ವಿಶ್ವ ಪರ್ಯಟನೆ ಹಾಗೂ ದೇಸಿ ಚುನಾವಣೆಗಳಿಂದ ಬಿಡುವು ಸಿಕ್ಕಾಗ ಕೊಟ್ಟ ಭರವಸೆಗಳನ್ನ ಒಂದೊಂದಾಗಿ ಈಡೇರಿಸ್ತಾರೆ ಬಿಡಿ. ಮೊದಲು ಅಖಂಡ ನಂಬಿಕೆ ಇರಬೇಕು. ಮನುಷ್ಯ ಆಶಾವಾದಿಯಾಗಿರಬೇಕು. ಅದಕ್ಕೆ ನಾವು ಅಂಧಭಕ್ತರೇ ಉದಾಹರಣೆ. ನಮ್ಮ ದೇವರು ಗಂಟೆ ಜಾಗಟೆ ಬಾರಿಸು ಅಂದ್ರೂ ಬಾರಿಸ್ತೀವಿ, ದೀಪ ಹಚ್ಚಿ ಕರೋನಾ ಓಡ್ಸಿ ಅಂದ್ರೂ ಹಚ್ಚತೀವಿ. ಕೇಳೋಕೆ ರಾಷ್ಟ್ರದ್ರೋಹಿಗಳಿಗೇನು ಹಕ್ಕಿದೆ?
ಪೆಟ್ರೋಲ್ ಬೆಲೆ ಲೀಟರಿಗೆ 500 ರೂಪಾಯಿ ಆದ್ರೂ ನಾನು ಮೋದೀಜಿಗೆ ಜೈ ಅಂತೀವಿ. ನೌಕರಿ ಸಿಗದೇ ಪಕೋಡಾ ಮಾರಿದ್ರೂ ನಾವು ಚೌಕೀದಾರರಿಗೆ ಉಘೆ ಉಘೇ ಅಂತೀವಿ. ಇಡೀ ದೇಶವನ್ನ ಆದಾನಿ ಅಂಬಾನಿಗೆ ಕೊಟ್ರು, ದೇಶದ ಸ್ವಾಭಿಮಾನವನ್ನ ಅಮೇರಿಕದ ಟ್ರಂಪ್ ಗೆ ಅಡವಿಟ್ರು ನಾವು ವಿಶ್ವಗುರುವಿಗೆ ಜೈಕಾರ ಹಾಕ್ತೀವಿ. ನಿಷ್ಟೆ ಅಂದ್ರೆ ಇದು, ಬದ್ದತೆ ಅಂದ್ರೆ ಇದು. ನಮ್ಮಂತಾ ಅಂಧಭಕ್ತರ ಅಂಧಭಕ್ತಿಯೇ ವಿಶ್ವಗುರುಗಳನ್ನು ಕಾಪಾಡುವ ಶಕ್ತಿ ಅನ್ನೋದು ನೆನಪಿರಲಿ. ಎಲ್ಲರಿಗೂ ಮೆಲೋಡಿ ಚಾಕ್ಲೇಟ್ ಗ್ಯಾರಂಟಿಯನ್ನು ಪ್ರಧಾನಿಗಳು ಆದಷ್ಟು ಬೇಗ ಘೋಷಿಸಲಿ.
ಮೆಲೋನಿಯವರಿಗೆ ಮೆಲೋಡಿ ಕೊಟ್ಟ ಮೋದಿಯವರಿಗೆ ಜೈ
ದೇಶವಾಸಿಗಳಿಗೆ ಘೋಷಣೆಗಳನ್ನು ಕೊಡುತ್ತಾ ಬಂದಿರುವ ಪ್ರಧಾನಿಗಳಿಗೆ ಜೈ
– ಶಶಿಕಾಂತ ಯಡಹಳ್ಳಿ, ಹಿರಿಯ ರಂಗಕರ್ಮಿ




