ಬೆಂಗಳೂರಿನಲ್ಲಿ ನಾಟಿಕೋಳಿ ಸಾರು ಮುದ್ದೆ ಉಣ್ಣುವ ಸ್ಪರ್ಧೆ

1 year ago

ರಾಗಿ ಮಹತ್ವದ ಕುರಿತು ಉಪನ್ಯಾಸ

ಪಿಜ್ಜಾ, ಬರ್ಗರ್ ನೂಡಲ್ಸ್ ಬಿಡಿ, ರಾಗಿ ಗಂಜಿ, ರಾಗಿ ಮುದ್ದೆ ತಿಂದು ಆರೋಗ್ಯವಾಗಿರಿ

ಬೆಂಗಳೂರು: ಬಿಳೇಕಹಳ್ಳಿ, ಮುಲ್ಕಿ ಸುಂದರಾಮ್ ಮೆಮೊರಿಯಲ್ ಸಭಾಂಗಣದಲ್ಲಿ  ದಶಮುಖ ಸಾಮಾಜಿಕ ಸೇವಾ ಟ್ರಸ್ಟ್ 8ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ನಾಟಿ ಕೋಳಿ ಸಾರುನಲ್ಲಿ ರಾಗಿ ಮುದ್ದೆ ಉಣ್ಣುವ ಸ್ಪರ್ಧೆ ಮತ್ತು ರಾಗಿ ಮಹತ್ವ ಸಾರುವ ಉಪನ್ಯಾಸ ಕಾರ್ಯಕ್ರಮ.

ಉದ್ಘಾಟನೆಯನ್ನು ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ನಿಚ್ಚಲಾನಂದನಾಥ ಸ್ವಾಮೀಜಿ,  ಶಾಸಕ ಸತೀಶ್ ರೆಡ್ಡಿ, ಪಾಲಿಕೆ ಮಾಜಿ ಸದಸ್ಯರಾದ ಭಾಗ್ಯಲಕ್ಷ್ಮಿ ಮುರುಳಿ, ಮುನಿರಾಮ್, ವಿಶ್ವ ಒಕ್ಕಲಿಗರ ಮಹಾ ವೇದಿಕೆ ಅಧ್ಯಕ್ಷ ವೈ.ಡಿ.ರವಿಶಂಕರ್, ದಶಮುಖ ಸಾಮಾಜಿಕ ಸೇವಾ ಟ್ರಸ್ಟ್ ಅಧ್ಯಕ್ಷ ಹೆಚ್.ಬೊಮ್ಮೇಗೌಡ ಉದ್ಘಾಟನೆ ಮಾಡಿದರು. ಸತೀಶ್ ರೆಡ್ಡಿ ರಾಗಿ ಮುದ್ದೆ ನಾಟಿಕೋಳಿ ಸಾರು ಸವಿಯುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು.

ಶ್ರೀ ನಿಚ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ರಾಗಿಯ ಮಹತ್ವ ಮತ್ತು ರಾಗಿ ಮುದ್ದೆ ಸೇವನೆ, ಪ್ರಗತಿಪರ ಚಿಂತನೆ ಮತ್ತು ಆರೋಗ್ಯಕಾಳಜಿ, ಬದಲಾವಣೆಗಾಗಿ  ಸಮಾಜಮುಖಿ ಕಾರ್ಯಕ್ರಮವಾಗಿದೆ ಎಂದರು.

ನಾವು ಸಸ್ಯಹಾರಿಗಳಾದರು, ಮಾಂಸಹಾರ ಸೇವನೆಯನ್ನ ವಿರೋಧಿಸಬಾರದು. ಶಾಂತಿ ಪ್ರಿಯರಾದ ಭಾರತೀಯರು ಶಕ್ತಿಯುತವಾಗಿ ಇರಲು ರಾಗಿ ಮುದ್ದೆ  ತಿನ್ನಬೇಕು. ರಾಗಿ, ಜೋಳ ಬಳಸುವವರು ಹೆಚ್ಚು ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ರಾಮಧಾನ್ಯ ಚರಿತ್ರೆಯಲ್ಲಿ ರಾಗಿಗೆ ರಾಮಧ್ಯಾನ ಎಂದು ಕರೆಯುತ್ತಾರೆ. ಸಿದ್ದಗಂಗಾ ಶಿವಕುಮಾರ ಸ್ವಾಮೀಜಿರವರ ಮಠದಲ್ಲಿ ರಾಗಿ ಮುದ್ದೆ ಊಟದಿಂದ ಮಕ್ಕಳು ವಿದ್ಯಾವಂತರಾಗಿ, ಶಕ್ತಿಯುತರಾಗಿ ಬೆಳೆಯುತ್ತಿದ್ದಾರೆ ಎಂದರು.

ರಾಗಿಮುದ್ದೆಗೆ ದೇಹದ ಶಕ್ತಿ ಹಿಡಿಯುವ ಶಕ್ತಿ ಇದೆ. ಆದ್ದರಿಂದ ಹಸಿವು ಕಡಿಮೆ ಆಗುತ್ತದೆ. ಅನ್ನ ತಿನ್ನಬೇಡಿ ಎಂದು ವೈದ್ಯರು ಹೇಳುತ್ತಾರೆ, ರಾಗಿ ತಿನ್ನಬೇಡಿ ಎಂದು ಯಾರು ಹೇಳುವುದಿಲ್ಲ ರಾಗಿ ಎಲ್ಲರ ಜೀವನಾಡಿಯಾಗಿದೆ ಎಂದರು.

ಸರ್ಕಾರ ನ್ಯಾಯ ಬೆಲೆ ಅಂಗಡಿ ಮೂಲಕ ಸಾರ್ವಜನಿಕರಿಗೆ ರಾಗಿ ವಿತರಣೆ ಕಾರ್ಯಕ್ರಮ ಯೋಜನೆ ಜಾರಿಗೆ ಮಾಡಬೇಕು ಮತ್ತು ಉತ್ತರ ಕರ್ನಾಟಕ್ಕಕ್ಕೆ ಜೋಳ ನೀಡಬೇಕು. ನಗರ ಪ್ರದೇಶದ ಜನರು ರಾಗಿ ಹಿಟ್ಟಿನಿಂದ ಮುದ್ದೆ, ದೋಸೆ, ಗಂಜಿ, ಉಪ್ಪಿಟ್ಟು ಖಾದ್ಯಗಳನ್ನು ಮಾಡಿ. ರಾಗಿ ಬೆಳಯುವ ಪ್ರದೇಶ ಕಡಿಮೆಯಾಗುತ್ತಿದೆ. ಅತಿಹೆಚ್ಚು ರಾಗಿ ಬೆಳಯುವ ರೈತರನ್ನು ಗುರುತಿಸಿ, ಪ್ರೋತ್ಸಾಹ ನೀಡಬೇಕು ಎಂದರು.

ಸತೀಶ್ ರೆಡ್ಡಿ ಮಾತನಾಡಿ ಗ್ರಾಮೀಣ ಸೊಗಡಿನ ಶೈಲಿಯ ಊಟ ಮಾಡುವುದು ಎಂದರೆ ತುಂಬಾ ಇಷ್ಟ. ಪಿಜ್ಜಾ, ಬರ್ಗರ್ ತಿಂದರೆ ರೋಗ ಬರುತ್ತದೆ. ಮುದ್ದೆ ತಿಂದವ ನಿರೋಗಿಯಾಗಿ ಬಾಳುತ್ತಾನೆ ಎಂದರು.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮುದ್ದೆಯ ಮಹತ್ವ ಮತ್ತು ಅದರ ಆರೋಗ್ಯ ಮೇಲೆ ಬೀರುವ ಉತ್ತಮ ಪರಿಣಾಮದ ಕುರಿತು ಬೆಳಕು ಚಲ್ಲಿದರು. ಮುದ್ದೆ ಆಹಾರ ಬಗ್ಗೆ ಬ್ರಾಂಡ್ ಅಂಬಾಸಿಡರ್ ಎಂದರೆ ಹೆಚ್.ಡಿ.ದೇವೇಗೌಡರು. ಇಂದಿನ ಯುವ ಸಮುದಾಯ ಆಧುನಿಕ ಆಹಾರ ತಿನ್ನುವ ಪದ್ಧತಿ ಬಿಡಬೇಕು, ರಾಗಿ ಮುದ್ದೆ, ಬಸ್ಸಾರು, ಮೊಳಕೆ ಕಾಳುಗಳನ್ನು ತಿಂದರೆ ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯವಂತರಾಗಿ ಬಾಳಬಹುದು ಎಂದರು.

ನಗರ ಪ್ರದೇಶದ ಜನರಿಗೆ ರಾಗಿಯ ಮಹತ್ವ, ಮುದ್ದೆ ಆರೋಗ್ಯಕರ ಅಂಶಗಳ ತಿಳಿಸಲು, ಅರಿವು ಮೂಡಿಸಲು ಮುದ್ದೆ ತಿನ್ನುವ ಸ್ಪರ್ಧೆ ಏರ್ಪಡಿಸಿವುದು ಸಂತೋಷದಾಯಕವಾದ ವಿಷಯವಾಗಿದೆ. ವಿದೇಶಿ ಆಹಾರ ಪದ್ಧತಿ ತ್ಯಜಿಸಿ, ದೇಶೀಯ ಆಹಾರ ಪದ್ಧತಿಯ ಮುದ್ದೆ ತಿನ್ನಿ ಎಂದು ಹೇಳಿದರು.

ಪೋಷಕಾಂಶ ತಜ್ಞರಾದ ಡಾ.ಸುರೇಶ್ ಕೆ.ಟಿ. ಮತ್ತು ಕೃಷಿ ತಜ್ಞರಾದ ವಸಂತಕುಮಾರ್ ತಿಮ್ಮಾಪುರರವರಿಂದ ರಾಗಿ ಆಹಾರದ ಮಹತ್ವದ ಕುರಿತು ಉಪನ್ಯಾಸ ಏರ್ಪಡಿಸಲಾಗಿತ್ತು.

ಅತಿ ಹೆಚ್ಚು ಮುದ್ದೆ ತಿಂದದವರಿಗೆ ಪ್ರಥಮ ಬಹುಮಾನ 25 ಸಾವಿರ, ದ್ವೀತೀಯ ಬಹುಮಾನ 15 ಸಾವಿರ, ತೃತೀಯ ಬಹುಮಾನ 7500 ನೀಡಲಾಯಿತು.

ಮಂಡ್ಯದ ಈರೇಗೌಡ ಪ್ರಥಮ ಬಹುಮಾನ, ದ್ವೀತಿಯ ಬಹುಮಾನ ಪ್ರೇಮ್ ಮತ್ತು ತೃತೀಯ ಬಹುಮಾನ ರವಿ ಪಡೆದರು.

ಸಂಘಟನೆಯ ಪದಾಧಿಕಾರಿಗಳಾದ ಬೆಟ್ಟೆಗೌಡ, ಹೆಚ್.ಟಿ. ನಂದಕುಮಾರ್, ಎಂ.ಶಿವೇಗೌಡ, ಪ್ರಶಾಂತ್ ಗೌಡ, ಹೆಚ್.ಎ.ರವಿಶಂಕರ್, ಹೆಚ್.ಸಿ.ಕುಮಾರ್, ಹನುಮಂತ್, ಜಿ.ಟಿ.ರಮೇಶ್ ಗೌಡ ಮೊದಲಾದವರು ಹಾಜರಿದ್ದರು.

Leave a Reply