ಬಡತನದ ಬೇಗುದಿಯಲ್ಲಿ ಬೆಂದು ಬಂಗಾರವಾಗಿದ್ದ ಡಾ. ಸಿದ್ದಲಿಂಗಯ್ಯ

2 years ago

#Siddalingaiah #Award #Kasapa

ಬೆಂಗಳೂರು: ಬಡತನದ ಬೇಗುದಿಯಲ್ಲಿ ಬೆಂದು ಬಂಗಾರವಾಗಿ, ಸಮಾಜದಲ್ಲಿಯ ಮೌಢ್ಯವನ್ನು ದೂರಮಾಡುವುದರ ಜೊತೆಗೆ ಜೀವನದ ವಾಸ್ತವಿಕತೆಯನ್ನು ಮಾರ್ಮಿಕವಾಗಿ ತಿಳಿಸಿಕೊಟ್ಟವರು ಡಾ. ಸಿದ್ದಲಿಂಗಯ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ಹೇಳಿದರು. 

ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ಡಾ. ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತಾಡಿದ ಅವರು, ಕವಿಗಳನ್ನು, ಸಾಹಿತಿಗಳನ್ನು ಜಾತಿ ಧರ್ಮಕ್ಕೆ ಸೀಮಿತಗೊಳಿಸಬಾರದು. ಬದಲಿಗೆ ಸಾಹಿತ್ಯದಿಂದಲೇ ಅವರು ಜಗತ್ತಿನಲ್ಲಿ ಗುರುತಿಸಿಕೊಳ್ಳುವಂತಾಗಬೇಕು. ಕನ್ನಡ ಸಾಹಿತ್ಯ ಪರಿಷತ್ತು ಎಲ್ಲರನ್ನು ಗೌರವಿಸುವ ಮೂಲಕ ಸಾಹಿತ್ಯಕ್ಕೆ ಸಾಹಿತ್ಯವೇ ಸಾಟಿ ಎನ್ನುವ ತತ್ವವನ್ನು ಹೊಂದಿದೆ ಎಂದರು.

ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರಾದ ಡಾ. ಸಿದ್ದಲಿಂಗಯ್ಯ ಅವರನ್ನು ದಲಿತ ಕವಿ ಎಂದೇ ಗುರುತಿಸಿದ್ದರು. ಅದರ ಜೊತೆಯಲ್ಲಿ ಬಹುಮುಖ ಪ್ರತಿಭೆಯ ಸಿದ್ದಲಿಂಗಯ್ಯನವರು ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಸಾಹಿತ್ಯವನ್ನು ರಚಿಸಿದವರು. ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದರು. ಎರಡು ಬಾರಿ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. ಅಧ್ಯಾಪನ ಹಾಗೂ ಬರವಣಿಗೆ ಅವರ ಅತ್ಯಂತ ಆಸಕ್ತಿಯ ಕೆಲಸವಾಗಿತ್ತು ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರೂ ಆಗಿದ್ದ ಅವರು, ಶ್ರವಣಬೆಳಗೊಳದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಸಾರಸ್ವತ ಲೋಕಕ್ಕೆ ಅಪಾರ ಕೀರ್ತಿತಂದು ಕೊಟ್ಟವರು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಖ್ಯಾತ ಸಾಹಿತಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಮಾತನಾಡಿ, ಸಾಹಿತಿಗಳ ಹೆಸರಿನ ಸಾಹಿತ್ಯ ದತ್ತಿ ಪ್ರಶಸ್ತಿಗಳು ಎನ್ನುವುದು ಸಾಹಿತಿಗಳಿಗೆ ಗೌರವ ತರುವಂತಹದ್ದು. ಸಿದ್ದಲಿಂಗಯ್ಯನವರು ಕನ್ನಡ ಸಾಹಿತ್ಯದ ಮೂಲಕ ದಲಿತ ದಮನಿತರ ಧ್ವನಿಯಾದವರು.  ಸಾಹಿತ್ಯ, ಸಂಗೀತ, ಹೋರಾಟ ಎಲ್ಲದರಲ್ಲಿಯೂ ತಮ್ಮನ್ನು ತಾವು ತೊಡಗಿದಿಕೊಂಡ ಪ್ರಯೋಗಶಾಲಿ ಕವಿಯಾಗಿದ್ದರು. ಸರಳತೆ ಅವರ ಶಕ್ತಿಯಾಗಿತ್ತು. ಈ ಕಾರಣದಿಂದಲೇ ಅವರು ಜನಪ್ರಿಯರಾಗಿದ್ದರು. ಜಾತಿ ಎನ್ನುವುದು ನಮ್ಮಲ್ಲಿ ಸಾಂಸ್ಕೃತಿಕ ಅಸ್ಮಿತೆಯಾಗಿದೆ. ಇದು ಅಳಿಯುವರೆಗೂ ಸಾಹಿತ್ಯದಲ್ಲಿ ಕೂಡ ಪ್ರತ್ಯೇಕತೆ ಅನಿವಾರ್ಯವಾಗುತ್ತದೆ. ಜಾತಿ ಪದ್ಧತಿ ಎನ್ನುವುದು ಬರಿ ಭೂತವಲ್ಲ ಬದಲಿಗೆ ವಿಷದ ಬಟ್ಟಲು ಎಂದರು. 

೨೦೧೯ ನೆಯ ಸಾಲಿನ ಡಾ. ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿಯನ್ನು ಕಲಬುರಗಿಯ ಡಾ. ಎಚ್.ಟಿ. ಪೋತೆಯವರಿಗೆ, ೨೦೨೦ ನೆಯ ಸಾಲಿನ ಪ್ರಶಸ್ತಿಯನ್ನು  ವಿಜಯಪುರದ ಇಂದುಮತಿ ಲಮಾಣಿ ಅವರಿಗೆ, ೨೦೨೧ನೆಯ ಸಾಲಿನ ಪ್ರಶಸ್ತಿಯನ್ನು  ಕೋಲಾರ  ಡಾ. ಕಾ.ವೆಂ. ಶ್ರೀನಿವಾಸಮೂರ್ತಿ ಅವರಿಗೆ, ೨೦೨೨ನೆಯ ಸಾಲಿನ ಪ್ರಶಸ್ತಿಯನ್ನು ಗದಗ ಡಾ. ಅರ್ಜುನ ಗೊಳಸಂಗಿ ಅವರಿಗೆ ಹಾಗೂ ೨೦೨೩ನೆಯ ಸಾಲಿನ ಡಾ. ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿಯನ್ನು ಹಾಸನ ನಾಗರಾಜ್ ಹೆತ್ತೂರು ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಡಾ. ಸಿದ್ದಲಿಂಗಯ್ಯ ಪುತ್ರಿ ಡಾ. ಮಾನಸಾ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಡಾ. ಸಿದ್ದಲಿಂಗಯ್ಯನವರ ಹೆಸರಿನಲ್ಲಿ ಇಟ್ಟಿರುವ ಸಾಹಿತ್ಯ ದತ್ತಿ ಪ್ರಶಸ್ತಿಯನ್ನು ನಾವು ಸೇರಿದಂತೆ ಎಲ್ಲರೂ ಮರೆತೇ ಬಿಟ್ಟಿದ್ದೆವು. ಆದರೆ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಅವರು ಮೂಲೆಗುಂಪಾಗಿದ್ದ ಈ ಪ್ರಶಸ್ತಿಗೆ ಮರು ಜೀವ ನೀಡಿದ್ದು ಅವರ ಕಾರ್ಯದಕ್ಷತೆಗೆ ಹಿಡಿದ ಕನ್ನಡಿ. ಕಂಡಿದ್ದು ಕಂಡಹಾಗೆ ಹೇಳಬೇಕು ಎನ್ನುವ ಮಾತನ್ನು ನಮ್ಮ ತಂದೆ ಹೇಳಿಕೊಟ್ಟಿದ್ದಾರೆ ಎಂದರು.

ಮುಖ್ಯ ಅತಿಥಿಯಾಗಿ ಭಾವಹಿಸಿ ಪ್ರಶಸ್ತಿ ಪ್ರದಾನ ಮಾಡಿದ ರಮಾಕುಮಾರಿ ಸಿದ್ದಲಿಂಗಯ್ಯ ಮಾತನಾಡಿ, ಎಲ್ಲರನ್ನು ಪ್ರೀತಿಯಿಂದ ಕಾಣುವ ಸಿದ್ದಲಿಂಗಯ್ಯನವರು ಅಂಬೇಡ್ಕರ್, ಲೋಹಿಯಾ ಮುಂತಾದವರ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದರು. `ಗ್ರಾಮ ದೇವತೆಗಳು’ ಪಿಎಚ್.ಡಿ. ಮಹಾಪ್ರಬಂಧ ಬರೆದರು. `ಊರು-ಕೇರಿ’ ಅವರ ಆತ್ಮಕತೆ ರಚಿಸಿದರು. ತಮ್ಮ ಆತ್ಮಕಥೆಯ ಇನ್ನೂ ಕೆಲವು ಮಹತ್ವದ ಅಂಶಗಳನ್ನು ದಾಖಲಿಸಿದ್ದಾರೆ, ಅವುಗಳನ್ನು ಮುಂದಿನ ದಿನಗಳಲ್ಲಿ ಜನರ ಮಡಿಲಿಗೆ ಹಾಕಬೇಕು ಎನ್ನುವ ಪ್ರಯತ್ನ ನಡೆಯುತ್ತಿದೆ ಎಂದರು.

ಪ್ರಶಸ್ತಿ ಸ್ವೀಕರಿಸಿದ ಡಾ. ಎಚ್.ಟಿ. ಪೋತೆ ಮಾತನಾಡಿ, ಸಿದ್ದಲಿಂಗಯ್ಯನವರ  ಹೆಸರಿನ ಈ  ಪ್ರಶಸ್ತಿ ಪಡೆದುಕೊಳ್ಳುತ್ತಿರುವುದು ನನ್ನ ಜೀವನದ ಹೆಮ್ಮೆಯ ಸಂಗತಿ. ಅವರು ಕೇವಲ  ದಲಿತ ಸಾಹಿತ್ಯಕ್ಕೆ ಮಾತ್ರ ಮೀಸಲಾಗಿರದೆ ಸಮಾಜದ ಕುರಿತು ಕಳಕಳಿ ತೋರುವ ಮಾತೃಸ್ವರೂಪಿಯಾಗಿದ್ದರು. ಅವರು ಈಗ ನಮ್ಮ ಮಧ್ಯ ಇಲ್ಲ ಎನ್ನುವ ಭ್ರಾಂತಿ ಯಾರಿಗೂ ಇಲ್ಲ. ಅವರು ಸದಾ ನಮ್ಮ ಮಧ್ಯದಲ್ಲೇ ಇದ್ದಾರೆ ಎನ್ನುವ ಭಾವನೆ ಎಲ್ಲರಿಗೂ ಇದೆ. ಭಾರತದಲ್ಲಿ ಎಲ್ಲಾ ವರ್ಗಗಳ ನಡುವೆ ಮೇಲು ಕೀಳು ಎನ್ನುವ ಭಾವನೆ ಹೋಗಬೇಕು ಎನ್ನುವ ಅವರ ಮಾತು ಸತ್ಯವಾಗಿದೆ. ಅದಕ್ಕೆ ದೇಶದ ಮೇಲ್ವರ್ಗದವರು ಜಾತಿಯನ್ನು ಪದ್ಧತಿಯಿಂದ ಹೊರಗೆ ಬರುವ ಪ್ರಯತ್ನ ಮಾಡಲೇ ಬೇಕು ಎಂದರು.

ಪ್ರಶಸ್ತಿ ಪುರಸ್ಕೃತ ಇಂದುಮತಿ ಲಮಾಣಿ ಮಾತನಾಡಿ, ಡಾ. ಸಿದ್ದಲಿಂಗಯ್ಯನವರ ಬದುಕು ಬವಣೆಗಳೆಲ್ಲವನ್ನು ಕರ್ತವ್ಯದ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಸರಳ ಬದುಕನ್ನು ಬದುಕುವ ಮೂಲಕ ಸಾಹಿತಿಯೊಬ್ಬ ಜನಸಾಮಾನ್ಯರ ಜೊತೆಗೆ ಇರಬೇಕಾದ ಆಪ್ತತೆಯನ್ನು ಮೇರೆದಿದ್ದಾರೆ. ನನ್ನಂತಹ ತಾಂಡಾದ ಹುಡುಗಿಯೊಬ್ಬಳು ಸಾಹಿತ್ಯ ಕೃಷಿಗೆ ತೊಗಿಸಿಕೊಳ್ಳುವುದಕ್ಕೆ ಕಾರಣರಾದವೇ ಸಿದ್ದಲಿಂಗಯ್ಯ ಮೇಷ್ಟ್ರು ಎಂದರು. ಪ್ರಶಸ್ತಿ ಸ್ವಿಕರಿಸಿದ  ನಾಗರಾಜ್ ಹೆತ್ತೂರು  ತಮ್ಮ ಡಾ. ಸಿದ್ದಲಿಂಗಯ್ಯನವರ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿ ಕೊಂಡರು. 

ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದಶಿ ನೇ.ಭ.ರಾಮಲಿಂಗ ಶೆಟ್ಟಿ, ಪರಿಷತ್ತಿನ ಪ್ರಕಟಣಾ ವಿಭಾಗದ ಮುಖ್ಯಸ್ಥ ಪ್ರೊ. ಎನ್.ಎಸ್.ಶ್ರೀಧರ ಮೂರ್ತಿ, ಡಾ. ಪದ್ಮಿನಿ ನಾಗರಾಜು, ಪರಿಷತ್ತಿನ ಗೌರವ ಕೋಶಾಧ್ಯಕ್ಷ ಡಾ. ಬಿ.ಎಂ. ಪಟೇಲ್ ಪಾಂಡು ಮೊದಲಾದವರು ಹಾಜರಿದ್ದರು.

Leave a Reply